ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವಿಷದ ವಿಚಾರ: ಇರಲಿ ಎಚ್ಚರ

ಕಳೆನಾಶಕ, ಕೀಟನಾಶಕಗಳ ಅಸಮರ್ಪಕ ಸಂಗ್ರಹ ಹಾಗೂ ತ್ಯಾಜ್ಯ ವಿಲೇವಾರಿ ಒಮ್ಮೊಮ್ಮೆ ಆಪತ್ತು ತರುವುದಲ್ಲದೆ ಜೀವಹಾನಿಗೂ ಕಾರಣವಾಗಬಹುದು
Published 18 ಜೂನ್ 2023, 23:26 IST
Last Updated 18 ಜೂನ್ 2023, 23:26 IST
ಅಕ್ಷರ ಗಾತ್ರ

ಮಧ್ಯರಾತ್ರಿ ನಿದ್ರೆಯಲ್ಲಿದ್ದವನನ್ನು ಎಚ್ಚರಿಸಿದ್ದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಯ ಫೋನಿನ ಸದ್ದು. ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡಿದ್ದಕ್ಕೆ ಮುಜುಗರ ವ್ಯಕ್ತಪಡಿಸುತ್ತಾ, ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಹೇನು, ಉಣ್ಣೆಗೆ ಸಾಮಾನ್ಯವಾಗಿ ಕೊಡುವ ಔಷಧ ಯಾವುದೆಂದು ಕೇಳಿದಾಗ ಆಶ್ಚರ್ಯದ ಜೊತೆಗೆ ಗೊಂದಲ! ಇದನ್ನು ಈ ಅವೇಳೆಯಲ್ಲಿ ವಿಚಾರಿಸುವ ಅವಸರ ಏನಿದೆ? ಹೌದು, ನಿಜಕ್ಕೂ ಅಲ್ಲಿ ಅಂತಹದ್ದೊಂದು ತುರ್ತು ಸ್ಥಿತಿಯೇ ಇತ್ತು!

ಮಧ್ಯಾಹ್ನ ಆಸ್ಪತ್ರೆಗೆ ಬಂದ ಮಹಿಳೆಯೊಬ್ಬಳು ಜಾನುವಾರುಗಳ ವಣಗಿನ ಕಾಟಕ್ಕೆ ಉಣ್ಣೆನಾಶಕ ದ್ರಾವಣವನ್ನು ತೆಗೆದುಕೊಂಡು ಹೋಗಿದ್ದಳು. ಇಂತಹ ಔಷಧ ಕೊಡುವಾಗ ಪಶುವೈದ್ಯಕೀಯ ಸಿಬ್ಬಂದಿ, ಇದು ತುಂಬಾ ಅಪಾಯಕಾರಿ ವಿಷವಾದ್ದರಿಂದ ನೀರು ಬೆರೆಸಿ ದುರ್ಬಲಗೊಳಿಸಿ, ಜಾನುವಾರುಗಳ ಮೈಗೆ ಹೇಗೆ ಎಚ್ಚರಿಕೆಯಿಂದ ಹಚ್ಚಬೇಕು, ಯಾವಾಗ ಮೈತೊಳೆಯಬೇಕು ಎಂಬುದನ್ನು ವಿವರವಾಗಿ ಹೇಳಿಯೇ ಕಳುಹಿಸುತ್ತಾರೆ.

ತಾನು ಒಯ್ದ ಪೀಡೆನಾಶಕದ ಬಾಟಲನ್ನು ಮನೆಯ ಮಕ್ಕಳಿಗೆ ಸಿಗದಂತೆ ಕೊಟ್ಟಿಗೆಯ ಮೋಟು ಗೋಡೆಯ ಮೇಲಿಟ್ಟಿದ್ದಳು ಆಕೆ. ಗಂಡನೋ ಮದ್ಯ ವ್ಯಸನಿ. ಅದೇ ಅಮಲಿನಲ್ಲಿ ಆ ಉಣ್ಣೆನಾಶಕ ದ್ರಾವಣವನ್ನು ಬ್ರ್ಯಾಂಡಿಯೆಂದು ತಿಳಿದು ಪೂರ್ತಿ ಕುಡಿದುಬಿಟ್ಟಿದ್ದ.

ಸ್ವಲ್ಪ ಹೊತ್ತಿನಲ್ಲೇ ಹೊಟ್ಟೆಯಲ್ಲಿ ಸಂಕಟ, ಉರಿ, ವಾಂತಿ, ಭೇದಿ ಶುರುವಾಗಿ ಒದ್ದಾಡುತ್ತಿದ್ದವನನ್ನು ಆಸ್ಪತ್ರೆಗೆ ತಂದು ಸೇರಿಸಿದ್ದರು. ಅವನು ವಣಗಿನ ಔಷಧ ಕುಡಿದಿದ್ದು ಗೊತ್ತಾಗಿದ್ದರಿಂದ ಆ ಹೆಂಗಸು ವೈದ್ಯರಿಗೆ ವಿಷಯ ತಿಳಿಸಿದ್ದಳು. ವಿಷ ಯಾವುದೆಂದು ಖಚಿತವಾಗಿ ತಿಳಿದಿದ್ದರೆ ನಿರ್ದಿಷ್ಟ ಪ್ರತಿವಿಷ (ಆಂಟಿಡೋಟ್) ಕೊಡುವುದರಿಂದ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ. ಸೈಪರ್‍ಮೆಥ್ರಿನ್ ಎಂಬ ರಾಸಾಯನಿಕವದು ಎಂಬ ಮಾಹಿತಿಯಿಂದಾಗಿ, ತುರ್ತು ಉಪಶಮನಕಾರಿ ಚಿಕಿತ್ಸೆ ನೀಡಿ ಆ ರೋಗಿಯನ್ನು ಉಳಿಸಲು ಸಾಧ್ಯವಾಯಿತು.

ಸಾಧಾರಣವಾಗಿ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಉಣ್ಣೆನಾಶಕವಾಗಿ ಸೈಪರ್‍ಮೆಥ್ರಿನ್, ಫ್ಲುಮೆಥ್ರಿನ್ ರಾಸಾಯನಿಕಗಳ ಬಳಕೆ ಹೆಚ್ಚು. ಇವೆರಡೂ ತಮ್ಮ ಮೂಲ ರೂಪದಲ್ಲಿ ಅಪಾಯಕಾರಿ ವಿಷಗಳೇ ಆಗಿರುವುದರಿಂದ ಸಂಗ್ರಹ, ಬಳಕೆಯಲ್ಲಿ ತುಂಬಾ ಎಚ್ಚರ ಅಗತ್ಯ. ನಿಗದಿತ ಪ್ರಮಾಣದಲ್ಲಿ ನೀರು ಸೇರಿಸಿ ಪೂರ್ಣವಾಗಿ ದುರ್ಬಲಗೊಳಿಸಿದ ನಂತರವೇ ಜಾನುವಾರುಗಳ ಮೈಗೆ ಹಚ್ಚಬೇಕು. ಸಾಮಾನ್ಯವಾಗಿ ಒಂದು ಲೀಟರ್‌ ನೀರಿಗೆ ಬೆರೆಸಬೇಕಿರುವ ಈ ರಾಸಾಯನಿಕದ ಪ್ರಮಾಣ ಐದು ಮಿ.ಲೀ.ಗಿಂತಲೂ ಕಮ್ಮಿ. ವಿಷವಾದ್ದರಿಂದ ಮಕ್ಕಳ ಕೈಗೆ ಸಿಗದಂತೆ ಜೋಪಾನವಾಗಿ ಇಡುವುದಷ್ಟೇ ಅಲ್ಲ, ಬಾಟಲಿಯ ಒಳಗೆ ಏನಿದೆಯೆಂಬ ಮಾಹಿತಿ ಮನೆಯವರಿಗೆಲ್ಲಾ ತಿಳಿದಿರಬೇಕಾದದ್ದು ಅವಶ್ಯಕ.

ಬರಿಗೈಯಲ್ಲಿ ಮುಟ್ಟದಿರುವುದು, ಆಕಸ್ಮಿಕವಾಗಿ ತಾಗಿದರೆ ನೀರು, ಸಾಬೂನು ಬಳಸಿ ಚೆನ್ನಾಗಿ ತೊಳೆದುಕೊಳ್ಳುವುದು ಅತಿ ಮುಖ್ಯ. ಗಾಯದ ಮೇಲೆ ಬಿದ್ದರೆ, ಆಕಸ್ಮಿಕವಾಗಿ ಹೊಟ್ಟೆ ಸೇರಿದರೆ ವೈದ್ಯಕೀಯ ಸಲಹೆ, ನೆರವಿನ ಅಗತ್ಯವಿದೆ. ಹಾಗಾಗಿಯೇ ರೈತರು ಯಾವುದೇ ಕಾರಣಕ್ಕೂ ಉಣ್ಣೆನಾಶಕ ಔಷಧ ತರಲು ಮಕ್ಕಳನ್ನು ಪಶು ಚಿಕಿತ್ಸಾಲಯಕ್ಕೆ ಕಳುಹಿಸಬಾರದು. ಅವರ ಕೈಯಲ್ಲಿ ಕಳುಹಿಸುವಂತೆ ಒತ್ತಡವನ್ನೂ ತರಬಾರದು.

ಕಳೆನಾಶಕ, ಕೀಟನಾಶಕಗಳ ಅಸಮರ್ಪಕ ಸಂಗ್ರಹ, ತ್ಯಾಜ್ಯ ವಿಲೇವಾರಿಯೂ ಒಮ್ಮೊಮ್ಮೆ ಆಪತ್ತು ತರುವುದಲ್ಲದೆ ಜೀವಹಾನಿಗೂ ಕಾರಣವಾಗಬಹುದು. ಕೃಷಿಕರು ಬೆಳೆ ಸಂರಕ್ಷಣೆಗಾಗಿ ಸಾಮಾನ್ಯವಾಗಿ ಉಪಯೋಗಿಸುವ ಪೀಡೆನಾಶಕಗಳು ದನ ಕರುಗಳ ಸಾವಿಗೆ ಕಾರಣವಾಗಿರುವ ಹಲವು ಪ್ರಕರಣಗಳು ವೃತ್ತಿಜೀವನದಲ್ಲಿ ಎದುರಾಗಿವೆ. ರೈತರು ಫೋರೆಟ್‌ನಂತಹ (ತಿಮೆಟ್) ಕಳೆನಾಶಕ ಹುಡಿ, ಹರಳುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಭದ್ರವಾಗಿ ಸುತ್ತಿ ಮನೆ ಅಥವಾ ಕೊಟ್ಟಿಗೆಯ ಗೋಡೆಯ ಮೇಲೊ, ಮಾಡಿನಡಿಯಲ್ಲೊ ಸಿಕ್ಕಿಸಿಡುವುದು ಸಾಮಾನ್ಯ. ಹಾಗೆಯೆ ಮರೆತು ಬಿಡುವುದೂ ಇದೆ. ಇದರಿಂದಾಗುವ ಅನಾಹುತದ ಅರಿವು ಹಲವರಿಗಿಲ್ಲ.

ಇಲಿ, ಹೆಗ್ಗಣಗಳು ಆ ಪ್ಯಾಕೆಟ್‍ಗಳನ್ನು ಕಚ್ಚಿ ತೂತು ಮಾಡಿ ಒಳಗಿನ ಪುಡಿಯನ್ನು ಎಲ್ಲೆಡೆ ಹರಡುವುದುಂಟು. ಅದರಲ್ಲೂ ತೆರೆದಿಟ್ಟ ಮರಿಗೆ, ಡ್ರಮ್ಮುಗಳಲ್ಲಿ ಸಂಗ್ರಹಿಸಿಟ್ಟ ಬೂಸ, ಹಿಂಡಿಯಂತಹ ಪಶು ಆಹಾರ, ಹುಲ್ಲಿನ ಜೊತೆಗೆ ಈ ಕೀಟನಾಶಕಗಳು ಸೇರುವ ಸಂಭವ ಹೆಚ್ಚು. ಇದನ್ನು ತಿಂದ ಜಾನುವಾರುಗಳು ಒಮ್ಮೊಮ್ಮೆ ಚಿಕಿತ್ಸೆಗೂ ಸಮಯ ಕೊಡದೆ ದಾರುಣವಾಗಿ ಒದ್ದಾಡಿ ಸಾಯುತ್ತವೆ!

ನಮ್ಮ ರೈತರು ಮಾಡುವ ಮತ್ತೊಂದು ಮಹಾ ಪ್ರಮಾದವೆಂದರೆ, ಇಲಿ, ಹೆಗ್ಗಣಗಳಿಗೆ ಪಾಷಾಣ ಇಟ್ಟು ಆಮೇಲೆ ಮರೆತುಬಿಡುವುದು. ಹೌದು, ಆಹಾರಧಾನ್ಯಗಳನ್ನು ತಿಂದು ತೇಗುವ, ಹಾಳು ಮಾಡುವ, ತಮ್ಮ ಮಲಮೂತ್ರದಿಂದ ಕಲ್ಮಶಗೊಳಿಸುವ, ರೋಗರುಜಿನ ಹರಡುವ, ಕಂಡ ಕಂಡಲ್ಲಿ ಬಿಲ ತೋಡಿ ಗೋಡೆ, ಕಟ್ಟಡದ ಅಡಿಪಾಯವನ್ನು ದುರ್ಬಲಗೊಳಿಸುವ ದಂಶಕಗಳ ಉಪಟಳ ಹತ್ತಾರು ಬಗೆಯದ್ದು. ಇವುಗಳನ್ನು ಕೊಲ್ಲಲು ಜನರು ಕಂಡುಕೊಂಡಿರುವ ಸುಲಭ ಮಾರ್ಗ ಜಿಂಕ್ ಸಲ್ಫೈಡ್‍ನಂತಹ ಇಲಿ ಪಾಷಾಣದ ಬಳಕೆ. ತಿಂಡಿ ತಿನಿಸುಗಳಲ್ಲಿ ಕಲಸಿಟ್ಟ ವಿಷವನ್ನು ಅರಿವಿಲ್ಲದೆ ತಿನ್ನುವ ನಾಯಿ, ಬೆಕ್ಕುಗಳು ಮರಣವನ್ನಪ್ಪುತ್ತವೆ. ಮಳೆಗಾಲದಲ್ಲಿ ನೀರಿಗೆ ಸೇರುವ ಈ ಅಪಾಯಕಾರಿ ರಾಸಾಯನಿಕ ನೀರು ಕುಡಿಯುವ, ಅಲ್ಲಿಯ ಹುಲ್ಲು ಮೇಯುವ ಜಾನುವಾರುಗಳು, ಇತರ ಪಶು-ಪಕ್ಷಿಗಳ ಜೀವಕ್ಕೂ ಕಂಟಕಕಾರಿ.

ಹಳ್ಳಿಗಳಲ್ಲಿ ನಾಯಿ, ಬೆಕ್ಕುಗಳ ಸಾವಿಗೆ ಕಾಯಿಲೆಗಿಂತಲೂ ವಿಷಪ್ರಾಶನವೇ ಪ್ರಮುಖ ಕಾರಣವಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಪರಿಸರ, ಜೀವಸಂಕುಲದ ಹಿತದೃಷ್ಟಿಯಿಂದ ವಿಷದ ವಿಷಯದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದನ್ನು ನಾವು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಬೇಕಿದೆ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶುಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT