ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಸಭಾ ನಿರೂಪಣೆ: ಮಹತ್ವದ ಹೊಣೆ

ಇಂದಿನ ಹೆಚ್ಚಿನ ಸಭೆಗಳು ಗಾಂಭೀರ್ಯ ಕಳೆದುಕೊಂಡು ಸಹೃದಯರು ದೂರವುಳಿಯುತ್ತಿರುವ ಈ ಹೊತ್ತಿನಲ್ಲಿ, ಅವರನ್ನು ಮರಳಿ ಸೆಳೆಯಲು ನಿರೂಪಣೆಯೆಂಬ ಕಲಾಸ್ತ್ರ ಖಂಡಿತಾ ಸಹಕಾರಿ
Published 1 ಮೇ 2023, 18:33 IST
Last Updated 1 ಮೇ 2023, 18:33 IST
ಅಕ್ಷರ ಗಾತ್ರ

ಡಾ. ಮುರಳೀಧರ ಕಿರಣಕೆರೆ

ಅದು ವಿಚಾರ ಸಂಕಿರಣವೊಂದರ ಉದ್ಘಾಟನಾ ಕಾರ್ಯಕ್ರಮ. ಸ್ವಾಗತ, ಪ್ರಾಸ್ತಾವಿಕ ನುಡಿಗಳು ಮುಗಿಯುತ್ತಿದ್ದಂತೆಯೆ ನಿರೂಪಕರು ‘ಈಗ ವಿಚಾರ ಸಂಕಿರಣಕ್ಕೆ ಚಾಲನೆ ನೀಡುವ ಸಮಯ. ಸನ್ಮಾನ್ಯ... ಅವರು ಬೆಂಕಿ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಬೇಕು’ ಎಂದು ಉದ್ಘೋಷಿಸುತ್ತಿದ್ದಂತೆಯೇ ಸಭೆಯಲ್ಲಿ ದಿಗ್ಭ್ರಮೆ! ದೀಪ ಬೆಳಗುವ ಮೂಲಕ ಎನ್ನುವುದರ ಬದಲು ಬೆಂಕಿ ಹಚ್ಚಬೇಕೆಂಬ ನಿರೂಪಕರ ನುಡಿ ಆಘಾತ, ಮುಜುಗರ ತಂದಿತ್ತು.

ಹಾಗೆಂದು ಅವರೇನು ಅನನುಭವಿಯಲ್ಲ. ಸಭಾಕಂಪನದ ಕಾರಣದಿಂದಲೂ ಈ ಲೋಪವಾಗಿರಲಿಲ್ಲ. ಉದ್ದೇಶಪೂರ್ವಕ ಅಲ್ಲದಿದ್ದರೂ ಬಾಯಿತಪ್ಪಿ ಆಡಿದ ಒಂದು ಮಾತು ಸಭಾ ಮರ್ಯಾದೆಗೆ ಭಂಗ ತಂದಿತ್ತು. ಒಂದು ವೇಳೆ ಇದು ಯಾವುದಾದರೂ ರಾಜಕೀಯ ಸಭೆಯಾಗಿದ್ದರೆ, ಹಿಂದಿನಿಂದ ಯಾರದ್ದೋ ಚಿತಾವಣೆಯಿದೆ ಎಂದೆನಿಸಿ ಗಂಭೀರ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತಿತ್ತೇನೋ!

ಹೌದು, ಸಭೆಯ ನಿರೂಪಣೆಯಲ್ಲಿ ಇಂತಹ ಹತ್ತಾರು ಗೊಂದಲಗಳು ಈ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿವೆ. ಸ್ವಾಗತದ ನಂತರ ಪ್ರಾರ್ಥನೆಗೆ ಮರಳುವುದು, ಪಟ್ಟಿಯಲ್ಲಿನ ಮುಖ್ಯ ಕಾರ್ಯಕ್ರಮವನ್ನೇ ಮರೆಯುವುದು, ಉಪನ್ಯಾಸಕರ ಹೆಸರು, ಹುದ್ದೆಯನ್ನು ತಪ್ಪಾಗಿ ಹೇಳುವುದು, ಶ್ರದ್ಧಾಂಜಲಿ ಸಭೆಯಲ್ಲಿ ಚಪ್ಪಾಳೆ ಹೊಡೆಸುವುದು... ಏನೇನೋ ಆಭಾಸಗಳು! ಇವಕ್ಕೆಲ್ಲಾ ಪ್ರಮುಖ ಕಾರಣ, ನಿರೂಪಣೆಯ ಮಹತ್ವ, ಗಾಂಭೀರ್ಯವನ್ನು ನಿರೂಪಕರು ಅರಿಯದೇ ಇರುವುದು. ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳದೆ ಈ ಜವಾಬ್ದಾರಿಯನ್ನು ತುಂಬಾ ಲಘುವಾಗಿ ತೆಗೆದುಕೊಂಡು, ಲೋಪವೆಸಗಿದಾಗ ನಗೆಪಾಟಲಿಗೀಡಾಗುವ ಇಲ್ಲಾ ಸಭೆಯೇ ಮುಜುಗರಕ್ಕೆ ಒಳಗಾಗುವ ಸನ್ನಿವೇಶ ಎದುರಾಗುತ್ತದೆ.

ನಿರೂಪಣೆ ಎಂಬುದು ಪ್ರಕರಣಗಳ ಹರಿವನ್ನು ವಿವರಿಸುವ ಒಂದು ಸಾಹಿತ್ಯ ಪ್ರಕಾರ. ಇಲ್ಲಿ ಒಂದು ಕ್ರಮಬದ್ಧತೆ ಇರುತ್ತದೆ. ಓಟ ನಿರ್ದಿಷ್ಟ ಜಾಡಿನಲ್ಲಿ ಸಾಗುತ್ತದೆ. ಹಾಗೆಯೇ ಸಭಾ ನಿರೂಪಣೆಗೂ ಸ್ಪಷ್ಟ ದಿಕ್ಕಿನ ಜೊತೆಗೆ ನಿಯಮಗಳ ಚೌಕಟ್ಟಿದೆ. ಇಲ್ಲಿ ಇಡೀ ಕಾರ್ಯಕ್ರಮವನ್ನು ಪ್ರೇಕ್ಷಕರೆದುರು ಅನಾವರಣಗೊಳಿಸುವ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತದೆ. ಕಾರ್ಯಸೂಚಿಯಲ್ಲಿರುವ ಅಂಶಗಳು ಹಳಿ ತಪ್ಪದಂತೆ ಒಂದರ ನಂತರ ಮತ್ತೊಂದು ಮೈದಳೆಯಲು ಅವಕಾಶ ಮಾಡಿಕೊಡುತ್ತಾ ಮುನ್ನಡೆಸುವುದು ನಿರ್ವಾಹಕನ ಜವಾಬ್ದಾರಿ. ನಿರೂಪಣೆ ಇಡೀ ಕಾರ್ಯಕ್ರಮದ ಸಮನ್ವಯದ ಕೊಂಡಿಯಷ್ಟೇ ಅಲ್ಲ ಜೀವಾಳ ಕೂಡ.

ಬಹುತೇಕ ಸಂದರ್ಭಗಳಲ್ಲಿ ಕಾರ್ಯಕ್ರಮದ ಯಶಸ್ಸು ಅಥವಾ ವೈಫಲ್ಯ ನಿರ್ವಾಹಕನ ಕೈಯಲ್ಲಿರುತ್ತದೆ. ಹಾಗೆಂದು ಯಶಸ್ವಿ ನಿರೂಪಣೆಗೆ ಸಿದ್ಧ ಸೂತ್ರಗಳೇನೂ ಇಲ್ಲ. ಒಳ್ಳೆಯ ನಿರ್ವಹಣೆ ಎಂತಹ ನೀರಸ ಕಾರ್ಯಕ್ರಮಕ್ಕೂ ಜೀವ ತುಂಬಿದರೆ, ಕೆಟ್ಟ ನಿರ್ವಹಣೆ ಉತ್ತಮ ಕಾರ್ಯಕ್ರಮವನ್ನೂ ಕುಲಗೆಡಿಸುವುದು. ಸಂಸತ್ತು, ವಿಧಾನಮಂಡಲಗಳ ಕಲಾಪವನ್ನು ನಿರ್ವಹಿಸುವುದು ಸಭಾಧ್ಯಕ್ಷರಿಗೆ ದತ್ತವಾದ ಅಧಿಕಾರ. ವ್ಯಕ್ತಿತ್ವ ವಿಕಸನದಂತಹ ಸಂಸ್ಥೆಗಳಲ್ಲಿ ಸಭೆಯನ್ನು ಸಂಪೂರ್ಣವಾಗಿ ಅಧ್ಯಕ್ಷರೇ ನಡೆಸುತ್ತಾರೆ. ಇಲ್ಲಿ ನಿರೂಪಣೆಗೆ ಅವಕಾಶ ಇರುವುದಿಲ್ಲ. ಆದರೆ ಅಧ್ಯಕ್ಷ ಹುದ್ದೆ ಆಲಂಕಾರಿಕವಾಗಿದ್ದಾಗ, ಅನುಭವದ ಕೊರತೆಯಿದ್ದಾಗ, ಸಭೆಯನ್ನು ನಡೆಸುವ ಕಲೆಗಾರಿಕೆ ಇಲ್ಲದಿದ್ದಾಗ, ಆ ಕಾರ್ಯಕ್ರಮಕ್ಕೆ ಅಧ್ಯಕ್ಷತೆಯೇ ಇರದಾಗ ಇಲ್ಲವೇ ಕಾರ್ಯಕ್ರಮಕ್ಕೆ ರಂಗು ತುಂಬಲೆಂದು ನಿರೂಪಣೆಯ ಮೊರೆ ಹೋಗಲಾಗುತ್ತದೆ. ನಾವಿಕ ನಾವೆಯನ್ನು ನಿರ್ಧರಿತ ಸ್ಥಳಕ್ಕೆ ನಡೆಸುವಂತೆ ನಿರೂಪಕನೂ ಯೋಜನೆಯನ್ನು ಉದ್ದೇಶಿತ ಗುರಿ ತಲುಪಿಸಲು ನೆರವಾಗುತ್ತಾನೆ.

ನಿರೂಪಣೆಯಲ್ಲಿ ಪೂರ್ವಸಿದ್ಧತೆ ಎಂಬುದು ತುಂಬಾ ಮಹತ್ವದ್ದು. ಮೊದಲೇ ಚರ್ಚಿಸಿ ಯಾವ ಅಂಶ, ಯಾರ ಮಾತು ಮೊದಲಿಗೆ ಬರಬೇಕು, ನಂತರದಲ್ಲಿ ಏನು ಎಂಬುದನ್ನು ಖಚಿತಪಡಿಸಿಕೊಂಡು ಪೂರ್ಣ ವಿನ್ಯಾಸ ತಯಾರಿಸಬೇಕು. ಕಾರ್ಯಸೂಚಿಯಲ್ಲಿ ಅನಿವಾರ್ಯ ಬದಲಾವಣೆಗಳಾದಾಗ ಸೂಕ್ತವಾಗಿ ನಿರ್ವಹಣೆ ಮಾಡುವ ಮನೋಸಿದ್ಧತೆಯೂ ಮುಖ್ಯ.

ಹಸನ್ಮುಖ, ಭಾಷೆಯ ಮೇಲೆ ಹಿಡಿತ, ಸ್ಪಷ್ಟ ಉಚ್ಚಾರಣೆ, ಪ್ರೀತಿಯ ವರ್ತನೆ, ಗೌರವಾರ್ಹ ಉಡುಪು, ಆತ್ಮವಿಶ್ವಾಸ, ಆಂಗಿಕ ಭಾಷೆ, ಸಾಂದರ್ಭಿಕ ಹಾವಭಾವ, ಧ್ವನಿಯ ಏರಿಳಿತ, ಸಮಯ ನಿರ್ವಹಣೆ, ಸಭೆಯ ಶಿಷ್ಟಾಚಾರದ ಅರಿವು ನಿರೂಪಕನಿಗೆ ಇರಬೇಕಾದ ಪ್ರಾಥಮಿಕ ಅರ್ಹತೆಗಳು. ಜೊತೆಗೆ ಸಮಯ ಪ್ರಜ್ಞೆ, ಸಂದರ್ಭ ಪ್ರಜ್ಞೆ, ಸಭಾ ಪ್ರಜ್ಞೆ, ಹಾಸ್ಯ ಪ್ರಜ್ಞೆ, ಸಾಮಾನ್ಯ ಜ್ಞಾನವೂ ಅಷ್ಟೇ ಮುಖ್ಯ. ಕಾರ್ಯಕ್ರಮದ ಕುರಿತಾಗಿ ಮೊದಲೇ ಸಮಗ್ರ ಮಾಹಿತಿ ಕಲೆ ಹಾಕುವುದು ತುಂಬಾ ಅಗತ್ಯ.

ಭಾಷಣಗಳ ನಡುನಡುವೆ ಆ ಯೋಜನೆಗೆ ಸಂಬಂಧಿಸಿದಂತೆ ಪೂರಕ ಮಾಹಿತಿ, ಅಂಕಿಅಂಶಗಳು, ರೋಚಕ ಅನುಭವಗಳನ್ನು ಒಂದೆರಡು ಮಾತುಗಳಲ್ಲಿ ತೆರೆದಿಟ್ಟಾಗ, ಸಭಿಕರ ಜ್ಞಾನದ ಜೊತೆಗೆ ಕುತೂಹಲವನ್ನೂ ಕಾಪಿಡಬಹುದು. ಅತಿಥಿ ಅಥವಾ ಉಪನ್ಯಾಸಕನ ಮಾತಿನಲ್ಲಿ ಸಭಿಕರಿಗೆ ಆರ್ಥವಾಗದಂತಹ ಕ್ಲಿಷ್ಟ ವಿಚಾರಗಳಿದ್ದರೆ, ಅವನ್ನು ಸಂಕ್ಷಿಪ್ತವಾಗಿ ವಿವರಿಸುವ ಹೊಣೆಗಾರಿಕೆ ನಿರೂಪಕನದ್ದು.

ಹೌದು, ನಿರೂಪಣೆಗೆ ಹತ್ತಾರು ಆಯಾಮಗಳಿವೆ. ಒಬ್ಬರ ಮಾತು ಮುಗಿದೊಡನೆ ಧನ್ಯವಾದ ಹೇಳಿ, ಮುಂದಿನ ಕಾರ್ಯಕ್ರಮ ಇಂಥದ್ದು ಎಂದು ಘೋಷಿಸುವುದು ಖಂಡಿತಾ ನಿರೂಪಣೆಯಾಗದು, ಅದು ಬರೀ ಉದ್ಘೋಷವಷ್ಟೆ. ಹೆಚ್ಚಿನ ಸಭೆಗಳು ಗಾಂಭೀರ್ಯ ಕಳೆದುಕೊಂಡು ಸಪ್ಪೆಯೆನಿಸಿ ಸಹೃದಯರು ದೂರವುಳಿಯುತ್ತಿರುವ ಈ ಹೊತ್ತಿನಲ್ಲಿ, ಅವರನ್ನು ಮರಳಿ ಸೆಳೆಯಲು ನಿರೂಪಣೆಯೆಂಬ ಕಲಾಸ್ತ್ರ ಖಂಡಿತಾ ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT