ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅಡಿಕೆ ಕೃಷಿ; ಅಂದು, ಇಂದು

ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ
–ಕಡಿದಾಳ್‌ ಗೋಪಾಲ್‌
Published 24 ಮಾರ್ಚ್ 2024, 23:02 IST
Last Updated 24 ಮಾರ್ಚ್ 2024, 23:02 IST
ಅಕ್ಷರ ಗಾತ್ರ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗ ಅಡಿಕೆ ಬೆಳೆ ಯುವ ಪ್ರದೇಶ ದುಪ್ಪಟ್ಟಾಗಿದೆ. ರಾಗಿ, ಜೋಳ, ಹುರುಳಿಯಂತಹ ಧಾನ್ಯಗಳನ್ನು ಬೆಳೆದು ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿ ಹತಾಶರಾಗಿರುವ ರೈತರು, ಸಾಂಪ್ರದಾಯಿಕ ಕೃಷಿ ಬೆಳೆಗಳಿಂದ ವಿಮುಖರಾಗುತ್ತಿದ್ದಾರೆ. ಸದ್ಯದಲ್ಲಿ ಉತ್ತಮ ಬೆಲೆ ಇರುವಂತಹ ಅಡಿಕೆ ತೋಟದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲೇ ಅತಿ ಹೆಚ್ಚು ಹಾಗೂ ಗುಣಮಟ್ಟದ ಅಡಿಕೆ ಬೆಳೆಯುವ ಪ್ರದೇಶ ಎನಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆ ಯನ್ನೂ ಮೀರಿಸಿ ಇತರ ಜಿಲ್ಲೆಗಳಲ್ಲೂ ಅಡಿಕೆ ವ್ಯಾಪಿಸಿದೆ. ಉದಾಹರಣೆಗೆ, ದಾವಣಗೆರೆ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಅಡಿಕೆ ತೋಟದ ವ್ಯಾಪ್ತಿ ದುಪ್ಪಟ್ಟಾಗಿದೆ. ಇದೇ ರೀತಿ ತುಮಕೂರು, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲೂ ಅಡಿಕೆ ಕೃಷಿ ಬಹಳಷ್ಟು ಹೆಚ್ಚಾಗಿದೆ.

ಇಂದು ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಪ್ರಮುಖವಾದವು, ಕೃಷಿ ಕಾರ್ಮಿಕರ ಸಮಸ್ಯೆ, ಅಡಿಕೆಗೆ ಬರುವ ರೋಗಗಳು, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ, ಕಾಡುಪ್ರಾಣಿ ಮತ್ತು ಪಕ್ಷಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ.

ಮೊದಲನೆಯದಾಗಿ, ಕೃಷಿ ಕಾರ್ಮಿಕರ ಸಮಸ್ಯೆ ಇಂದು ಗಂಭೀರವಾಗಿದೆ. ಯುವ ಕೃಷಿ ಕಾರ್ಮಿಕರು ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರಿದ್ದಾರೆ. ಆದ್ದರಿಂದ ರೈತರು ಅನಿವಾರ್ಯವಾಗಿ ಯಂತ್ರಗಳನ್ನು ಹೆಚ್ಚಾಗಿ ಅವಲಂಬಿಸುವಂತಾಗಿದೆ ಮತ್ತು ಅವರು ಕೃಷಿ ಕಾರ್ಯ ದಲ್ಲೂ ಬಹಳಷ್ಟು ಬದಲಾವಣೆ ಮಾಡಿಕೊಳ್ಳುವಂತಾಗಿದೆ. ಎರಡನೆಯದಾಗಿ, ಅಡಿಕೆ ಬೆಳೆಗೆ ಕಾಣಿಸಿಕೊಳ್ಳುವ ಪ್ರಮುಖ ರೋಗಗಳಾದ ಹಳದಿಎಲೆ ರೋಗ, ಹಿಡಿಮುಂಡಿಗೆ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಬೇಸರದ ಸಂಗತಿ ಎಂದರೆ, ಈ ಕಾಯಿಲೆಗಳಿಗೆ ಸೂಕ್ತ ಔಷಧ ಕಂಡುಹಿಡಿಯುವ ವಿಜ್ಞಾನಿಗಳ ಪ್ರಯತ್ನ ಈವರೆಗೂ ಫಲ ನೀಡದಿರುವುದು. ಮೂರನೆಯ ಸಮಸ್ಯೆ, ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಅಡಿಕೆ ತಿನ್ನುವುದರಿಂದ ಕ್ಯಾನ್ಸರ್‌ ಬರುತ್ತದೆ ಎಂಬಂತಹ ವರದಿಗಳು ಕೇಂದ್ರ ಸರ್ಕಾರದ ಬಳಿ ಇವೆ. ಅಡಿಕೆ ಆರೋಗ್ಯಕ್ಕೆ
ಹಾನಿಕಾರಕವಲ್ಲ ಎಂಬುದಕ್ಕೆ ಪೂರಕವಾದ ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಿ, ಅದನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿ ಮನವರಿಕೆ ಮಾಡಿಕೊಡಬೇಕಾದ ಹೊಣೆ ಈಗ ಕೇಂದ್ರದ ಮೇಲಿದೆ. ಈ ಕೆಲಸ ಈವರೆಗೂ ಆಗಿಲ್ಲ ಎಂಬ ವಿಷಾದ ಅಡಿಕೆ ಬೆಳೆಗಾರರಲ್ಲಿದೆ.

ನಾಲ್ಕನೆಯ ಸಮಸ್ಯೆ, ಕೆಲವೆಡೆ ಬೆಳೆದ ಫಸಲನ್ನು ಕಾಡುಪ್ರಾಣಿಗಳು ಹಾಗೂ ಪಕ್ಷಿಗಳಿಂದ ಉಳಿಸಿಕೊಳ್ಳಲು ರೈತರಿಗೆ ಆಗದಿರುವುದು. ಅಡಿಕೆ ಬೆಳೆಗಾರರು ಅಡಿಕೆ ಜೊತೆಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಕಾಡುಪ್ರಾಣಿ ಹಾಗೂ ಪಕ್ಷಿಗಳ ಕಾಟದಿಂದ ಈಚೆಗೆ ಯಾವ ಫಸಲನ್ನೂ ಉಳಿಸಿಕೊಳ್ಳಲು ಆಗುತ್ತಿಲ್ಲ. ಈ ಪ್ರಮುಖ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ, ಗಂಭೀರವಾಗಿ ಪರಿಗಣಿಸ
ಬೇಕಾಗಿದೆ.

ಇಂದು ದೇಶದಲ್ಲಿ ಉತ್ಪಾದನೆಯಾಗುವ ಕೆಂಪು ಅಡಿಕೆಯಲ್ಲಿ ಹೆಚ್ಚಿನ ಪಾಲನ್ನು ಪಾನ್‌ಮಸಾಲಕ್ಕೆ ಬಳಸಲಾಗುತ್ತದೆ. ಪಾನ್‌ಮಸಾಲಕ್ಕೆ ಬಳಸುವ ಉತ್ಪನ್ನ ಗಳಿಗೆ ಶೇ 10ರಷ್ಟು ಹೊಗೆಸೊಪ್ಪನ್ನು ಸೇರಿಸಿದರೆ ಗುಟ್ಕಾ ಆಗುತ್ತದೆ. ದೇಶದಲ್ಲಿ ಗುಟ್ಕಾ ನಿಷೇಧ ಆಗಿರುವುದರಿಂದ ಗುಟ್ಕಾ ತಿನ್ನುವವರು ಪಾನ್‌ಮಸಾಲ ಜೊತೆಗೆ ಹೊಗೆಸೊಪ್ಪನ್ನು ಸೇರಿಸಿ ತಿನ್ನುತ್ತಾರೆ. ಈ ಉತ್ಪನ್ನಗಳು ಹೊರದೇಶಗಳಿಗೆ ಹೆಚ್ಚೆಚ್ಚು ಪ್ರಮಾಣದಲ್ಲಿ ರಫ್ತಾಗುತ್ತಿವೆ. ಈ ಎಲ್ಲ ಕಾರಣಗಳಿಂದ ಅಡಿಕೆಗೆ ಉತ್ತಮವಾದ ಧಾರಣೆ ಇದೆ. ಆದರೆ ಅಡಿಕೆ ತೋಟದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿರುವುದರಿಂದ, ಇದು ಭವಿಷ್ಯದಲ್ಲಿ ಧಾರಣೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರ ಒಪ್ಪಂದದ ಪ್ರಕಾರ, ವಿದೇಶಗಳಿಂದ ಅಡಿಕೆ ಆಮದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಭೂತಾನ್‌ನಿಂದ ಸ್ವಲ್ಪ ಪ್ರಮಾಣದಲ್ಲಿ ಅಡಿಕೆ ಬಂದ ಮಾತ್ರಕ್ಕೆ ಧಾರಣೆಯೇನೂ ಕಡಿಮೆ ಆಗುವುದಿಲ್ಲ. ಆದರೆ ಮ್ಯಾನ್ಮಾರ್‌, ಇಂಡೊನೇಷ್ಯಾ, ಶ್ರೀಲಂಕಾ ಹಾಗೂ ಇತರ ದೇಶಗಳಿಂದ ಹಡಗಿನ ಮೂಲಕ ಕಳ್ಳತನ ದಲ್ಲಿ ಭಾರತಕ್ಕೆ ಬರುವ ಅಡಿಕೆಯನ್ನು ತಡೆಗಟ್ಟಬೇಕು. ಆಮದಾಗುವ ಅಡಿಕೆ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣ ಇರಬೇಕು.

ರಾಜ್ಯದಿಂದ ಸರ್ಕಾರಕ್ಕೆ ತೆರಿಗೆ ವಂಚಿಸಿ ಪ್ರತಿದಿನ ನೂರಾರು ಲಾರಿ ಲೋಡ್‌ ಅಡಿಕೆಯನ್ನು ಉತ್ತರ ಭಾರತಕ್ಕೆ ಸಾಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಇದು ಧಾರಣೆಯ ಮೇಲೆ ವ್ಯತಿರಿಕ್ತ ಪರಿ ಣಾಮ ಬೀರುತ್ತದೆ ಹಾಗೂ ಸರ್ಕಾರಕ್ಕೂ ನಷ್ಟ ಉಂಟಾಗುತ್ತದೆ. ಜೊತೆಗೆ, ಕಾನೂನಿನ ಪ್ರಕಾರ ಎಪಿಎಂಸಿ ಒಳಗೆ ವ್ಯಾಪಾರ ಮಾಡುವವರಿಗೆ ವ್ಯಾಪಾರ ಮಾಡುವುದೇ ಕಷ್ಟವಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರ ಜಾಗೃತವಾಗಬೇಕು.‌

ಈಗ ಹೊಸದಾಗಿ ಅಡಿಕೆ ಗಿಡ ಹಾಕಿದ ತೋಟ ಗಳು ಫಸಲಿಗೆ ಬರುವ ಹೊತ್ತಿಗೆ ಒಳ್ಳೆಯ ಧಾರಣೆ ಸಿಗ ಬೇಕೆಂದರೆ ಹೊಸ ಹೊಸ ಉತ್ಪನ್ನಗಳು, ಮೌಲ್ಯವರ್ಧಿತ ಪದಾರ್ಥಗಳು ಇನ್ನೂ ಹೆಚ್ಚಾಗಿ ಮಾರುಕಟ್ಟೆಗೆ ಬರಬೇಕು. ವಿದೇಶಗಳಿಗೆ ರಫ್ತಿನ ಪ್ರಮಾಣ ಹೆಚ್ಚಿಸುವು ದರ ಜೊತೆಗೆ ಆಮದು ಶುಲ್ಕ ಜಾಸ್ತಿ ಮಾಡಿದರೆ ಬೆಳೆಗಾರರ ಹಿತರಕ್ಷಣೆ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT