‘ಧೂಮಕೇತು’ ಉಲ್ಲೇಖದ ಕಾರಣದಿಂದಾಗಿ ತಾಮ್ರ ಶಾಸನವೊಂದು ಸುದ್ದಿಯಲ್ಲಿದೆ. ಆಂಧ್ರಪ್ರದೇಶದ ಶ್ರೀಶೈಲದಲ್ಲಿ ದೊರಕಿರುವ ಈ ಶಾಸನ ಖಗೋಳ ವಿಜ್ಞಾನಿಗಳಲ್ಲಿ ಉತ್ಸಾಹ ಮೂಡಿಸಿದೆ.

ಭಾರತದ ಖಗೋಳ ವಿಜ್ಞಾನದ ಅರಿವು ಇಂದು ನಿನ್ನೆಯದಲ್ಲ. ಉದ್ಗ್ರಂಥಗಳು ಸೇರಿದಂತೆ ಕನಿಷ್ಠ 2000 ವರ್ಷಗಳಿಂದ ಗುರುತಿಸಬಹುದಾದ ಇತಿಹಾಸದಲ್ಲಿ ಬಹು ಮುಖ್ಯವಾಗಿ ಕಂಡು ಬರುವ ಕೊರತೆ, ವೀಕ್ಷಣೆಗಳ ದಾಖಲೆಯದು. ಗ್ರಹಣ ಸೇರಿದಂತೆ ಕೌತುಕಮಯ ಘಟನೆಗಳ ಕುರಿತು ಲೆಕ್ಕಗಳು, ವಿಸ್ತೃತ ಚರ್ಚೆಗಳು ಇವೆ. ಆದರೆ, ಘಟನೆಯನ್ನು ವೀಕ್ಷಿಸಿ ಗುರುತು ಮಾಡಿಕೊಂಡ ದಾಖಲೆಗಳು ಇಲ್ಲವೇ ಇಲ್ಲ ಎನ್ನಬಹುದು.

3000 ವರ್ಷಗಳಿಗೂ ಹಳೆಯದಾದ ದಾಖಲೆಗಳು ಮತ್ತು ರೇಖಾಚಿತ್ರಗಳು ಇತರ ದೇಶಗಳಲ್ಲಿ ದೊರಕಿವೆ. ಇಂಥ ದಾಖಲೆಗಳನ್ನು ಚೀನಾದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಗುರುತು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ನಮ್ಮ ಹಿರಿಯರು ಗಮನ ಕೊಡದಿರುವುದು ವಿಷಾದಕರ.

ನಿಖರ ದಾಖಲೆಗಳು ಇಲ್ಲದಿರುವ ಸಂದರ್ಭದಲ್ಲಿ, ಆಕಾಶದ ಯಾವುದೇ ಘಟನೆಯ ನಮೂದು ಖಗೋಳ ಪಠ್ಯಗಳಲ್ಲದೆ ಇತರ ಮಾಧ್ಯಮಗಳಲ್ಲಿ ದೊರಕುವುದು ವಿಶೇಷ ದಾಖಲೆಯಾಗುತ್ತದೆ. ಈ ದೃಷ್ಟಿಯಿಂದ, ರಸ್ತೆ ಪಕ್ಕದಲ್ಲಿ, ಗದ್ದೆಗಳಲ್ಲಿ, ಎಲ್ಲೆಂದರಲ್ಲಿ ಕಂಡುಬರುವ ಶಿಲಾಶಾಸನಗಳು ಗ್ರಹಣಗಳ ಅತ್ಯುತ್ತಮ ದಾಖಲೆಗಳಾಗಿ ಮಹತ್ವ ಪಡೆದಿವೆ. ನಮ್ಮ ಅಧ್ಯಯನಕ್ಕೊಳಗಾಗಿರುವ ಸುಮಾರು 30 ಸಾವಿರ ಶಾಸನ
ಗಳಲ್ಲಿ, 1,500ಕ್ಕೂ ಹೆಚ್ಚು ಶಾಸನಗಳ ಗ್ರಹಣ ಉಲ್ಲೇಖಗಳನ್ನು ಪರಿಶೀಲಿಸುವುದು ಸಾಧ್ಯವಾಗಿದೆ. ಇವುಗಳಲ್ಲಿ ಬೆರಳೆಣಿಕೆಯಷ್ಟು ಶಾಸನಗಳು ಸಂಪೂರ್ಣ ಗ್ರಹಣವನ್ನು ನಮೂದಿಸಿದ್ದು, ವಿಶೇಷ ಅಧ್ಯಯನಕ್ಕೆ ದತ್ತಾಂಶಗಳನ್ನು ಒದಗಿಸಿವೆ. ಭೂಮಿಯ ಭ್ರಮಣೆಯ ವೇಗ (ಇಂದು 24 ಗಂಟೆ ಎಂದು ನಾವು ಪರಿಗಣಿಸಿರುವುದು) ನಿಧಾನವಾಗಿ ಬದಲಾಗುತ್ತಿದೆ ಎಂಬ ಮಹತ್ವದ ನಿರ್ಣಯಕ್ಕೆ ಬರಲು ಇವು ಪೂರಕವಾಗಿವೆ.

ಎಡ್ಡಂಡ್ ಹ್ಯಾಲಿ ಧೂಮಕೇತುಗಳ ಅಧ್ಯಯನವನ್ನು ಕೈಗೊಂಡಾಗ ಅವು ಆಕಾಶಕಾಯಗಳು ಹೌದೋ ಅಲ್ಲವೋ ಎಂಬ ಜಿಜ್ಞಾಸೆ ನಡೆದಿತ್ತು. ಒಂದು ಧೂಮಕೇತು ಪ್ರತಿ 76 ವರ್ಷಗಳಿಗೊಮ್ಮೆ ಬಂದು ಹೋಗುತ್ತಿದೆ ಎಂದು ಸಾಧಿಸಿ ತೋರಿಸಿದವನೇ ಆತನಾದರೂ, ಸ್ವತಃ ಧೂಮಕೇತುವನ್ನು ಹ್ಯಾಲಿ ನೋಡಲೇ ಇಲ್ಲ. ಅದು ಹಿಂದೆ ಬಂದು ಹೋದದ್ದನ್ನು ಸೂಚಿಸುವ ದಾಖಲೆಗಳೆಲ್ಲವೂ ಖಗೋಳ ವಿಜ್ಞಾನಿಗಳು ಬರೆದಿಟ್ಟಿದ್ದಲ್ಲ. ಅದನ್ನು ಕಂಡವರು ವೈವಿಧ್ಯ ರೀತಿಯಲ್ಲಿ ತಮ್ಮ ಬೆರಗನ್ನು ದಾಖಲಿಸಿದ್ದರು. ಉದಾಹರಣೆಗೆ, ಒಂದು ಭಿತ್ತಿಚಿತ್ರ, ಒಂದು ಕಸೂತಿ ವಿನ್ಯಾಸ – ಹೀಗೆ. ಇವು ಕೂಡ ಅತ್ಯುತ್ತಮ ದಾಖಲೆಗಳೇ. ಈ ಹಿನ್ನೆಲೆಯಲ್ಲಿ, ಈಗ ದೊರಕಿರುವ ಶಾಸನ ಅಮೂಲ್ಯವಾದದ್ದು.

ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯದಲ್ಲಿದ್ದ ತಾಮ್ರ ಶಾಸನವು 1378 ಶಕ ಧಾತೃ ಸಂವತ್ಸರ ಆಷಾಢ ಬಹುಳ 11 ಎಂದು ತಾರೀಖನ್ನು ನಮೂದಿಸಿದೆ. ‘ಧೂಮಕೇತು ಮಹೋತ್ಪಾತ ಶಾಂತ್ಯರ್ಥಂ’ ಎಂದು ದಾನ ಮಾಡಲು ಕಾರಣವನ್ನು ಕೊಟ್ಟಿರುವುದೇ ಧೂಮಕೇತುವನ್ನು ಕಂಡ ದಾಖಲೆಯಾಗಿದೆ. ದಾನ ಪಡೆದ ವಿದ್ವಾಂಸ ಕಡಿಯಾಲಪುರದ ಲಿಂಗಣಾರ್ಯ.

1456ರಲ್ಲಿ ಬಂದ ಈ ಧೂಮಕೇತು ಸಾಕಷ್ಟು ಪ್ರಕಾಶಮಾನವಾಗಿದ್ದು, ಜನರಿಗೆ ಭಯ ಹುಟ್ಟಿಸಿರಬೇಕು. ಕಾಶ್ಮೀರದ ಚರಿತ್ರೆಯನ್ನು ದಾಖಲಿಸಿರುವ ‘ರಾಜತರಂಗಿಣಿ’ ಗ್ರಂಥದಲ್ಲಿ ಇದೇ ಸಂದರ್ಭವನ್ನು ಅದರ ಕರ್ತೃ ಶ್ರೀವರ ಹೀಗೆ ವರ್ಣಿಸಿದ್ದಾನೆ: ‘ಮಾನವ ಕುಲಕ್ಕೇ ಕಂಟಕದ ಸೂಚಕವೋ ಎನ್ನುವಂತೆ ಒಂದು ಧೂಮಕೇತು ರಾತ್ರಿ ಕಾಣಿಸಿಕೊಂಡಿತು. ಅದಕ್ಕೆ ಉಜ್ವಲವಾದ ಧ್ವಜದ ಆಕಾರದ ಬಾಲವಿತ್ತು. ಯಮರಾಜನ ಕುಡುಗೋಲಿನ ಆಕಾರದಲ್ಲಿತ್ತು. ಶುಭ್ರವಾದ ಆಕಾಶದಲ್ಲಿ ಎರಡು ತಿಂಗಳು ಪ್ರಕಾಶಿಸಿತು’. ಈ ದಾಖಲೆಗಳಲ್ಲಿ ಧೂಮಕೇತುಗಳು ರಾಜನಿಗೆ ಕಂಟಕ ಉಂಟು ಮಾಡುತ್ತವೆ ಎಂಬ ಅಭಿಪ್ರಾಯ ಸ್ಪಷ್ಟವಾಗಿದೆ.

ಬಹಳಷ್ಟು ಶಾಸನಗಳಲ್ಲಿ ಬಳಕೆಯಾಗುವ ಪದಗಳ ಜೋಡಣೆ, ಬಳಸಿರುವ ಗುಣವಾಚಕಗಳೂ ಅರ್ಥಪೂರ್ಣವಾಗಿರುತ್ತವೆ. ಇದಕ್ಕೆ ಉದಾಹರಣೆಯಾಗಿ 1054ರ ಶಾಸನವನ್ನು ಉಲ್ಲೇಖಿಸಬಹುದು. ಅದರಲ್ಲಿ ಶಿವನಿಗೆ ನಮಿಸುವಾಗ ‘ಶುಕ್ರ ತಾರಾ ಪ್ರಭಾವಾಯ’ ಎಂಬ ಗುಣವಾಚಕ ಬಳಸಲಾಗಿದೆ. ಅದೊಂದು ಅಪೂರ್ವ ಪ್ರಯೋಗ. ‘ತಾರೆಯೊಂದು ಶುಕ್ರದಂತೆ ಪ್ರಜ್ವಲಿಸುವಂತೆ ಮಾಡಬಲ್ಲವನು’ ಎಂದು ಅರ್ಥೈಸಿದರೆ ಅದು ಆ ವರ್ಷ ಕಂಡ ಸೂಪರ್ ನೋವಾದ ವರ್ಣನೆಯೂ ಆಗುತ್ತದೆ. ಆ ಸ್ಫೋಟದಲ್ಲಿ ನಕ್ಷತ್ರವು ಶುಕ್ರಗ್ರಹದಷ್ಟು ಪ್ರಕಾಶ ಪಡೆದಿತ್ತು. ಬರಿಗಣ್ಣಿಗೇ ಸುಮಾರು ಒಂದು ವರ್ಷದವರೆಗೂ ಕಾಣುತ್ತಿತ್ತು.

ಇನ್ನೊಂದು ಕನ್ನಡ ಕಾವ್ಯದಲ್ಲಿ, ‘ಹುಣ್ಣಿಮೆಯ ಚಂದ್ರ ಬೆಳ್ಳಿಯ ತಟ್ಟೆ. ಅದರ ಮೇಲೆ ಶುಕ್ರ ದೀಪ’ ಎಂಬ ವಿವರಣೆ ಇದೆ. ಆದರೆ, ಶುಕ್ರ ಯಾವುದೇ ಸಂದರ್ಭದಲ್ಲಿಯೂ ಹುಣ್ಣಿಮೆಯ ಚಂದ್ರನ ಸಮೀಪ ಕಾಣುವುದೇ ಇಲ್ಲ. ಆದ್ದರಿಂದ ಈ ವರ್ಣನೆಯೂ ನಕ್ಷತ್ರದ ಸ್ಫೋಟವೇ ಆಗಿದ್ದಿರಬೇಕು. ಇದನ್ನು ರಚಿಸಿದ ಅಜ್ಞಾತ ಕವಿಯ ಕಾಲ ತಿಳಿದಲ್ಲಿ ಅದು ಯಾವ ಸೂಪರ್ ನೋವಾ ಎಂದು ಖಚಿತವಾಗಿ ಅರ್ಥೈಸಬಹುದು.

ಪ್ರಸ್ತುತ, ತಾಮ್ರ ಶಾಸನದಲ್ಲಿ ಧೂಮಕೇತುವಿನ ಉಲ್ಲೇಖ ಪತ್ತೆಯಾಗಿರುವುದು ಶಾಸನಗಳ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಇನ್ನೂ ಅದೆಷ್ಟು ಶಾಸನಗಳು ಇಂತಹ ರಹಸ್ಯಗಳನ್ನು ಅಡಗಿಸಿಕೊಂಡಿವೆಯೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.