ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಇನ್‌ಬಾಕ್ಸ್‌ನಲ್ಲಿ ನೀರಿಟ್ಟು ಹಕ್ಕಿಯ ಮರೆತರು!

Published 6 ಏಪ್ರಿಲ್ 2024, 0:24 IST
Last Updated 6 ಏಪ್ರಿಲ್ 2024, 0:24 IST
ಅಕ್ಷರ ಗಾತ್ರ

ಬಾಲ್ಕನಿ ಮೇಲೆ, ಕಿಟಕಿಯ ಬಳಿ ನೀರು ತುಂಬಿಟ್ಟ ಬಟ್ಟಲುಗಳ ಚಿತ್ರಗಳು ಫೇಸ್‌ಬುಕ್‌ ಪುಟಗಳಲ್ಲಿ, ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳಲ್ಲಿ ಈ ನಡುವೆ ತುಂಬಾ ಹೆಚ್ಚಾಗಿವೆ.‌ ಅಲ್ಲಿ ನೀರು ಕುಡಿಯುತ್ತಾ ಕುಳಿತ ಪಕ್ಷಿಗಳ ಕೆಳಗೆ ಒಂದು ಘೋಷಣೆ ‘ಬೇಸಿಗೆ, ತುಂಬಾ ಬಿಸಿಲು, ನೀರಿಲ್ಲ... ಹಕ್ಕಿಗಳಿಗೆ ನೀರಿಡಿ. ಇದು ನಮ್ಮ ಜವಾಬ್ದಾರಿ. ಅವುಗಳಿಗೂ ಹಕ್ಕಿದೆ’. ಹೀಗೆ ಚೆಂದದ ಐದಾರು ಸಾಲುಗಳು. ಸಮಾಜ ಎಷ್ಟೊಂದು ಸಭ್ಯವಾಗಿದೆ ಅನಿಸುತ್ತದೆ. ಅಂತೂ ನಮ್ಮ ಜನರಿಗೆ ಒಂದು ಕನಿಷ್ಠಮಟ್ಟದ ಪ್ರಜ್ಞೆಯಾದರೂ ಬಂತಲ್ಲ ಎಂಬ ಸಂತಸ.

ಹಕ್ಕಿಗಳು ನೀರು ಕುಡಿಯುವ ಸೊಬಗು ನೋಡಲು ಖುಷಿಯಿಂದ ಆಚೆ ಬಂದು ತಿರುಗಾಡಿದರೆ ನಿಜಕ್ಕೂ ಆಶ್ಚರ್ಯ. ನೀರು ತುಂಬಿದ ಬಟ್ಟಲು ದುರ್ಲಭ. ಬಾಯಾರಿದ ಹಕ್ಕಿಗಳ ಸೋತ ಮುಖ.‌ 

‘ಹಕ್ಕಿಗಳಿಗೆ ನೀರಿಡಿ’ ಎಂಬ ಒಂದು ಸಂದೇಶ ಇನ್‌ಬಾಕ್ಸಿಗೆ ಬರುತ್ತದೆ ಇಲ್ಲವೇ ಫೋಟೊ ಬರುತ್ತದೆ. ನಾವು ಅದನ್ನು ಹತ್ತಾರು ಗುಂಪುಗಳಿಗೆ ಕಳುಹಿಸಿ, ಸ್ಟೇಟಸ್‌ಗೆ ಹಾಕಿ ಒಂದು ವಿಚಿತ್ರ ಅಹಂನಲ್ಲಿ ಬೀಗುತ್ತೇವೆ. ಹಕ್ಕಿಗಳಿಗೆ ನಾವೇನೋ ತುಂಬಾ ಒಳ್ಳೆಯದು ಮಾಡಿದೆವು ಎಂಬಂತೆ ಎದೆ ಉಬ್ಬುತ್ತದೆ.‌

ಸಮಸ್ಯೆ ಇರುವುದು ಎಲ್ಲಿ? ಚಿಂತನೆಗಳಲ್ಲೇ? ಅಲ್ಲ. ಅದು ಧಾರಾಳವಾಗಿ ಸಿಗುತ್ತದೆ. ಒಳ್ಳೆಯ ವಿಚಾರಗಳು ಬೆಟ್ಟದಷ್ಟಿವೆ.‌ ಅತ್ಯುತ್ತಮ ಸಲಹೆಗಳ‌ ಮಹಾಪೂರವೇ ಹರಿಯುತ್ತದೆ. ಉತ್ತಮ ಭಾಷಣಗಳಿಂದ ಬಾಯಿ ಒಣಗುತ್ತದೆ. ಅನುಭವ, ಅನುಭಾವ ಎಲ್ಲವೂ ಇವೆ ಇಲ್ಲಿ ಯಥೇಚ್ಛವಾಗಿ.‌ 

ಮೊಬೈಲ್ ತೆರೆದು ಕೂತರೆ ರಾಶಿಗಟ್ಟಲೆ ಒಳ್ಳೆಯ ವಿಚಾರಗಳು ನಮಗೆ ಬಂದು ಬೀಳುತ್ತವೆ. ನಿಜವಾದ ಸಮಸ್ಯೆ ಇರುವುದು ಅವುಗಳ ಅನುಷ್ಠಾನದಲ್ಲಿ, ವಿಚಾರವನ್ನು ಬದುಕಾಗಿಸುವುದರಲ್ಲಿ. ಒಂದು ಸ್ಟೇಟಸ್ ಹಾಕುವ ಬದಲು ಒಂದು ಹಿಡಿ ಕಾಳು, ಒಂದು ಬೊಗಸೆ ನೀರು ಇಟ್ಟಿದ್ದರೆ ಸಾಕಿತ್ತು. ಆದರೆ ಹಕ್ಕಿಗಳು ಲೈಕ್ ಬಟನ್ ಒತ್ತುವುದಿಲ್ಲ. ಅವು ನಾವು ಕೊಟ್ಟ ನೀರು, ಆಹಾರದ ವಿಷಯವನ್ನು ಹತ್ತಾರು ಕಡೆ ಶೇರ್ ಮಾಡುವುದಿಲ್ಲ. ಆ ಹಕ್ಕಿಗಳು ಕಮೆಂಟ್ ಕೂಡ ಮಾಡುವುದಿಲ್ಲ.‌ ಅದಕ್ಕಾಗಿ ನಮ್ಮಲ್ಲಿ ಹೆಚ್ಚಿನ ಜನ ನೀರು ಇಡುವುದಿಲ್ಲ.

ನಾವು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬಾರಿ ನಮ್ಮ‌ ವಿಚಾರವನ್ನು ಹಾಕುವುದು ಸಾಮಾಜಿಕ ಬದ್ಧತೆಗಿಂತ ನಾವೆಷ್ಟು ಬುದ್ಧಿವಂತರು ಎಂಬುದನ್ನು ತೋರಿಸಿಕೊಳ್ಳುವುದಕ್ಕೇನೋ ಎಂದು ಅನಿಸುತ್ತದೆ. ನನಗೆಷ್ಟು ಲೈಕ್ ಬರಬಹುದು, ಎಷ್ಟು ಕಮೆಂಟ್ ಬರಬಹುದು, ಈ ಪೋಸ್ಟ್‌ ಎಷ್ಟು ಶೇರ್ ಆಗಬಹುದು ಎಂಬ ಕುತೂಹಲವೇ ಪ್ರಧಾನವಾಗಿರುತ್ತದೆ.‌ ಸಾಮಾಜಿಕ ಜಾಲತಾಣದಲ್ಲಿ ಮುಳುಗಿಹೋದಾಗ ಈ ಸಮಾಜ, ಈ ಜಗತ್ತು ಎಷ್ಟೊಂದು ಸಭ್ಯವಾಗಿವೆ ಅನಿಸುತ್ತದೆ.‌ ಅದರಿಂದ ಆಚೆ ಬಂದಾಗಲೇ ಅಸಭ್ಯತೆಯ
ದರ್ಶನವಾಗುವುದು. 

ಮೊಬೈಲ್, ಅದಕ್ಕೊಂದಿಷ್ಟು ಇಂಟರ್ನೆಟ್ ಇದ್ದರೆ ಸಾಕು ವಾಟ್ಸ್‌ಆ್ಯಪ್, ಫೇಸ್‌ಬುಕ್‌, ಟ್ವಿಟರ್, ಇನ್ಸ್‌ಟಾಗ್ರಾಂನಲ್ಲಿ ಒಂದು ಖಾತೆ ಕಾಯಂ. ಕ್ಷಣಮಾತ್ರದಲ್ಲಿ ಅವನೊಬ್ಬ ಜ್ಞಾನಿಯಾಗುತ್ತಾನೆ. ಅನುಭವಿ, ಸಮಾಜ ಸುಧಾರಕ, ಪರಿಸರಪ್ರೇಮಿ, ಮಾರ್ಗದರ್ಶಕ,ತತ್ವಜ್ಞಾನಿಯಾಗುತ್ತಾನೆ. ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಡಲು ಶುರು ಮಾಡುತ್ತಾನೆ. ಸ್ಟೇಟಸ್‌ಗಳು, ಟೈಮ್‌ಲೈನ್‌ಗಳು ಒಳ್ಳೆಯ ವಿಚಾರಗಳಿಂದ ತುಂಬಿ ಹೋಗುತ್ತವೆ.

‘ಜಗತ್ತಿನ ಎಲ್ಲಾ ಒಳ್ಳೆಯ ವಿಚಾರಗಳನ್ನು ಈಗಾಗಲೇ ಹೇಳಿ ಆಗಿದೆ, ಉಳಿದಿರುವುದು ಅವನ್ನು ಅನುಸರಿಸುವ ವಿಚಾರ ಮಾತ್ರ’ ಎನ್ನುತ್ತಾರೆ ದಾರ್ಶನಿಕರು. ಎಲ್ಲರೂ ಹೇಳುವವರೇ ಆದರೆ ಅದರಂತೆ ನಡೆಯುವವರು ಯಾರು? ‘ಉದಾತ್ತ ಚಿಂತನೆಗಳು ನಮಗೆ ಎಲ್ಲ ಕಡೆಯಿಂದಲೂ ಬರಲಿ’ ಎಂಬ ಮಾತಿದೆ. ಈಗ ಕಾಲಿಟ್ಟ ಕಡೆಯಲ್ಲೆಲ್ಲ ಉದಾತ್ತ ಚಿಂತನೆಗಳೇ. ಅವುಗಳಿಗೆ ಬರ ಎಂಬುದೇ‌ ಇಲ್ಲ. ಹಾಗೆ ನೋಡಿದರೆ ಕೈಗೆ, ಕಾಲಿಗೆ ಸಿಗುವ ಉದಾತ್ತ ಚಿಂತನೆಗಳಿಂದ ಸಮಾಜ ಈಗ ಹೆಚ್ಚು ಸುಧಾರಿಸಬೇಕಿತ್ತು.‌ ಆದರೆ ಮೊದಲಿಗಿಂತ ಹೆಚ್ಚು ದಾರಿತಪ್ಪಿರುವುದು ಕಣ್ಣ ಮುಂದೆ ಸ್ಪಷ್ಟವಿದೆ. ‘ಆಡದೆ ಮಾಡುವವ ರೂಢಿಯೊಳಗುತ್ತಮನು, ಆಡಿ ಮಾಡುವವ ಮಧ್ಯಮನು, ಆಡಿಯೂ ಮಾಡದವ ಅಧಮನು’ ಎನ್ನುತ್ತಾನೆ ಸರ್ವಜ್ಞ.

ಹೆಣ್ಣಿನ ಬಗ್ಗೆ ಗೌರವಪೂರ್ಣವಾಗಿ ಕವಿತೆ ಬರೆದವನು ತಾನು ಕೆಲಸಕ್ಕೆ ಹೋಗುವಾಗ ಹೆಂಡತಿಯನ್ನು ಒಳಗೆ ಬಿಟ್ಟು ಬೀಗ ಜಡಿದು ನಡೆದು ಹೋಗಿರುತ್ತಾನೆ.‌ ಗಿಡ ನೆಡುವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದವನ ಮನೆ ತುಂಬಾ ಮರದಿಂದ ಮಾಡಿದ ವಸ್ತುಗಳೇ ಇರುತ್ತವೆ. ಸರ್ಕಾರಿ ಶಾಲೆ ಬಗ್ಗೆ ಪೋಸ್ಟ್ ಬರೆಯುವವನ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಿರುತ್ತಾರೆ. ಹಣ ಮುಖ್ಯವಲ್ಲ ಅಂದವನ ಬ್ಯಾಂಕ್ ಬ್ಯಾಲೆನ್ಸ್ ತುಂಬಿ ತುಳುಕುತ್ತಿರುತ್ತದೆ. ನೋಡಿ, ಬದುಕಿನ ಈ ವಿರೋಧಾಭಾಸಗಳನ್ನು! 

ಒಂದು ನೆನಪಿರಲಿ, ಕೃತಿಯಿಂದ ಹುಟ್ಟಿದ ಮಾತಿಗೆ ಶಕ್ತಿ ಜಾಸ್ತಿ. ಹತ್ತಾರು ಬಟ್ಟಲುಗಳಲ್ಲಿ ನೀರಿಟ್ಟು ಅದನ್ನು ಹತ್ತು ಜನಕ್ಕೆ ಹೇಳಿದರೆ ಖಂಡಿತ ಅವರಲ್ಲಿ ಐದು ಜನರಾದರೂ ನೀರಿಡುತ್ತಾರೆ. ನೀವು ನೀರು ಇಡದೆ ನೂರು ಪೋಸ್ಟ್ ಹಾಕಿದರೂ ಒಬ್ಬರೂ ಬಟ್ಟಲಿನಲ್ಲಿ ನೀರು ತುಂಬಿ ಇಡುವುದಿಲ್ಲ.‌ ಅದು ಕೃತಿಯಿಂದ ಹುಟ್ಟಿದ ಮಾತಿಗಿರುವ ಶಕ್ತಿ. ವಚನಕಾರರ ವಚನಗಳು ಸಮಾಜದ ಪರಿವರ್ತನೆಗೆ ಕಾರಣವಾದದ್ದು ಇದೇ ಕಾರಣಕ್ಕೆ. ವಚನಗಳು ಕೃತಿಯಿಂದ ಹುಟ್ಟಿದವು. ಅವರು ನಡೆಯಿಂದ ನುಡಿ ಕಂಡುಕೊಂಡರು. ಅವು ಬರೀ ಮಾತುಗಳಲ್ಲ.‌

ಬದುಕು ಮಾತಾಗದೇ ಕೃತಿಯಾಗಬೇಕು. ಅದು ಎಂದು ಸಾಧ್ಯವಾಗುವುದೋ ಪ್ರವಾಹದಂತೆ ಹರಿಯುತ್ತಿರುವ ಸುಳ್ಳುಸುಳ್ಳೇ ಒಳ್ಳೆಯ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT