ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಉಡುಗೊರೆ– ಅನಗತ್ಯ ಆರ್ಥಿಕ ಚಟುವಟಿಕೆ

Published 19 ಮೇ 2023, 21:18 IST
Last Updated 19 ಮೇ 2023, 21:18 IST
ಅಕ್ಷರ ಗಾತ್ರ

-ಪು.ಸೂ.ಲಕ್ಷ್ಮೀನಾರಾಯಣ ರಾವ್

‘ಉಡುಗೊರೆ ಮತ್ತು ಮೌಲ್ಯ ನಿರ್ಣಯ’ ಎಂಬ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ ಮೇ 16) ಸಮಯೋಚಿತವಾಗಿದೆ. ‘ಅತಿಥಿ ದೇವೋಭವ, ಅಭ್ಯಾಗತೊ ಸ್ವಯಂ ವಿಷ್ಣು’ ಎನ್ನುವ ಸಂಸ್ಕೃತಿ ನಮ್ಮದು ಎನ್ನುತ್ತೇವೆ. ಇತ್ತೀಚೆಗಂತೂ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅವರಲ್ಲಿ ಮೌಢ್ಯಾಚರಣೆಗಳನ್ನೇ ‘ನಮ್ಮ ಸಂಸ್ಕೃತಿ’ ಎಂದು ಭಾವಿಸಿಕೊಂಡಿರುವವರೇ ಹೆಚ್ಚು. ಅದಕ್ಕೆ ಈ ಉಡುಗೊರೆ, ಆಹೇರಿ ಅಥವಾ ಮುಯ್ಯಿ ಓದಿಸುವುದು ಎಂಬ ಪದ್ಧತಿ ಒಂದು ಒಳ್ಳೆಯ ಉದಾಹರಣೆಯಾಗಿದೆ.

ಆರ್ಥಿಕವಾಗಿ ಸುಭದ್ರವಾಗಿಲ್ಲದವರು ಸಾಲ ಸೋಲ ಮಾಡಿಕೊಂಡು ಮದುವೆ, ಗೃಹಪ್ರವೇಶದಂತಹ ಸಮಾರಂಭಗಳನ್ನು ಮಾಡಿದಾಗ, ಅವರ ಸಂಕಷ್ಟವನ್ನು ಸಮಾಜವು ಸ್ವಲ್ಪ ಮಟ್ಟಿಗೆ ಹಂಚಿಕೊಳ್ಳುವುದರ ಭಾಗವಾಗಿ ಉಡುಗೊರೆಗಳನ್ನು ನೀಡುವಂತಹ ಪದ್ಧತಿ ಮೊದಲಿನಿಂದ ಬಂದಿರುವುದು ಸ್ವಾಗತಾರ್ಹವಾದುದೇ. ಆದರೆ ಆರ್ಥಿಕವಾಗಿ ಚೆನ್ನಾಗಿದ್ದು, ಆಡಂಬರದಿಂದ ಸಮಾರಂಭಗಳನ್ನು ಮಾಡುವವರಿಗೂ ಉಡುಗೊರೆಗಳನ್ನು ನೀಡಬೇಕೆಂಬ ಅಲಿಖಿತ ನಿಯಮವು ಸರ್ವಥಾ ವರ್ಜಿಸಬೇಕಾದದ್ದೆ. ಆಹ್ವಾನವಿಲ್ಲದೆ ಬರುವವ (ಅತಿಥಿ) ದೇವರಾದರೆ, ಆಹ್ವಾನಿತನಾಗಿ ಬರುವವ (ಅಭ್ಯಾಗತ) ಸ್ವತಃ ವಿಷ್ಣು ಎಂಬುದು ಮೇಲಿನ ಸಂಸ್ಕೃತದ ಮಾತಿನ ಅರ್ಥ. ಈ ಅರ್ಥದಲ್ಲಿ, ಆಹ್ವಾನಿಸಿದವರು ಆಹ್ವಾನಿತರನ್ನು ಪ್ರೀತಿ, ಗೌರವಗಳಿಂದ ಕಾಣಬೇಕು. ಆಹ್ವಾನಿತರು ಬಂದದ್ದು ತನ್ನ ಪುಣ್ಯ ಎಂದು ಭಾವಿಸಬೇಕು. ತನ್ನ ಮೇಲೆ ಅಭಿಮಾನವಿಟ್ಟು ಬಂದಿದ್ದಾರಲ್ಲ ಎಂದು ಸಂತಸಪಡಬೇಕು. ಅದು ಬಿಟ್ಟು, ಅವರು ಉಡುಗೊರೆ ನೀಡಿದರು ಅಥವಾ ನೀಡಲಿಲ್ಲ ಎಂಬುದಾಗಿ ಯೋಚಿಸಲೇಬಾರದು. ಸ್ವಾದಿಷ್ಟವಾದ ಆದರೆ ಸರಳವಾದ ಭೋಜನದಿಂದ ಬಂದವರನ್ನು ಸಂತುಷ್ಟಗೊಳಿಸಬೇಕು.

ಎಲ್ಲೆಲ್ಲಿಂದಲೋ ಕಷ್ಟಪಟ್ಟುಕೊಂಡು ತಮ್ಮ ಅಮೂಲ್ಯ ಸಮಯವನ್ನು ನಮಗಾಗಿ ಮೀಸಲಿಟ್ಟು ಬಂದಿರುತ್ತಾರೆ. ಅದನ್ನು ಅರಿತು ಹೃತ್ಪೂರ್ವಕವಾಗಿ ಸ್ವಾಗತಿಸಿ ಸತ್ಕರಿಸಬೇಕೆ ವಿನಾ ಆಗಮಿಸಿದವರ ಅಂತಸ್ತು, ಅಧಿಕಾರದ ಆಧಾರದ ಮೇಲೆ ಸತ್ಕಾರ ಮಾಡಬಾರದು. ಕಾಣಿಕೆ, ಉಡುಗೊರೆಗಳನ್ನು ನಿರೀಕ್ಷಿಸಲೇಬಾರದು. ವಯಸ್ಸಾದವರಿಗೆ ವಿಶೇಷ ಗಮನ ನೀಡಬೇಕು. ಬಂದವರ ಏನು ಎತ್ತಗಳನ್ನು ವಿಚಾರಿಸಲು ನಮ್ಮವರೇ ಆದ ಒಂದಷ್ಟು ಹುಡುಗ, ಹುಡುಗಿಯರಿಗೆ ಮಾರ್ಗದರ್ಶನ ನೀಡಿರಬೇಕು. ಇದು ನಿಜವಾದ ಭಾರತೀಯ ಸಂಸ್ಕಾರ ಎಂದು ಭಾವಿಸಿಕೊಳ್ಳಬೇಕು. ಆಹ್ವಾನ ಪತ್ರಿಕೆಗಳಲ್ಲಿ ಉಡುಗೊರೆಗಳನ್ನು ತರಬೇಡಿರೆಂಬ ಮನವಿಯನ್ನು ಮಾಡಿಕೊಳ್ಳುವುದು ಇನ್ನೂ ಉತ್ತಮ. ನಮ್ಮ ಮೇಲಿನ ವಿಶ್ವಾಸದಿಂದ ಬರುವವರು ಕೈಬೀಸಿಕೊಂಡು ಬರಲಿ, ಉಡುಗೊರೆಗಾಗಿ ಅಲೆದಾಡುವುದು ಬೇಡ ಎಂಬ ಭಾವನೆ ಇರಬೇಕು.

ದೊಡ್ಡ ಸರ್ಕಾರಿ ಅಧಿಕಾರಿಯೊಬ್ಬರ ಮಗಳ ಮದುವೆಯಲ್ಲಿ, ಬಂದವರು ತಂದಿದ್ದ ಹೂಗುಚ್ಛಗಳನ್ನು ಸುಂದರವಾಗಿ ಜೋಡಿಸಿಡಲಾಗಿತ್ತು. ಘಮ ಘಮಿಸುತ್ತಿದ್ದ ಆ ರಾಶಿಯನ್ನು ತೆಗೆದುಕೊಂಡು ಹೋಗಲು ಮಾರನೆಯ ದಿನ ಕಾರ್ಪೊರೇಷನ್ ಕಸದ ಲಾರಿ ಬಂದಿತ್ತು. ಈ ನಾಗರಿಕತೆಯನ್ನು ಏನೆಂದು ಪ್ರಶಂಸಿಸೋಣ?!

ಉಳ್ಳವರಿಗೆ ಸಂಬಂಧಿಸಿದ ಹತ್ತು ಉತ್ಸವಗಳಿಗೆ ಹೋದಾಗ ತಲಾ ಐನೂರು ರೂಪಾಯಿಯಷ್ಟು ಖರ್ಚು ಮಾಡುವ ಬದಲು, ಆರ್ಥಿಕವಾಗಿ ದುರ್ಬಲರಾದವರಿಗೆ ಎರಡು ಮೂರು ಸಾವಿರ ರೂಪಾಯಿಯನ್ನು ಉಡುಗೊರೆಯಾಗಿ ಕೊಡುವುದು ಉಚಿತವಲ್ಲವೇ? ಆಡಂಬರದ ಕಾರ್ಯಕ್ರಮಗಳಿಗೆ ಹೋದಾಗ ಕೈ ಕುಲುಕಿ ಶುಭಾಶಯ ಹೇಳಿ ಬಂದರೆ ಸಾಕು. ಯಾರೂ ಆಕ್ಷೇಪಿಸುವುದಿಲ್ಲ. ಒಂದು ವೇಳೆ ಯಾರಾದರೂ ಏನಾದರೂ ಅಂದುಕೊಂಡರೂ ಅದಕ್ಕಾಗಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಸರ್ ಹೆನ್ರಿ ವಾಟನ್ ಎಂಬ ಕವಿ ತನ್ನ ‘ಸುಖ ಜೀವನ’ (ಇಂಗ್ಲಿಷ್ ಗೀತಗಳು- ಅನುವಾದ– ಬಿಎಂಶ್ರೀ) ಎಂಬ ಕವನದಲ್ಲಿ, ‘ಏನು ಸುಖಿಯೋ ತಾನು ಹುಟ್ಟಿನಲಿ, ಕಲಿಕೆಯಲಿ, ಇನ್ನೊಬ್ಬನಿಚ್ಛೆಯನು ದುಡಿಯದಿರುವವನು’, ‘ಎಂತು ಧಣಿಯೊಲವೆಂದು, ನೆರೆಯ ಮೆಚ್ಚೆಂತೆಂದು, ಮಿಡುಮಿಡುಕಿ ಲೋಕವನು ಕಟ್ಟಿಕೊಳದವನು’, ‘ತನ್ನಾತ್ಮಸಾಕ್ಷಿಯೇ ಕೋಟೆಯಾದವನು’ ಎಂದಿರುವುದು ಪ್ರಸ್ತುತ ಸ್ಮರಣಾರ್ಹ. ಅಂದರೆ, ಬೇರೆಯವರು ಮೆಚ್ಚಿಕೊಳ್ಳಬೇಕೆಂದು ಬಯಸದೆ, ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುವವನು ನಿಜವಾದ ಸುಖಿ. ಅಂತಹವನು ತನ್ನ ಮೇಲಿನ ಅಧಿಕಾರಿಯನ್ನು, ನೆರೆಯವರನ್ನು, ನೆಂಟರನ್ನು ಹೇಗೆ ಮೆಚ್ಚಿಸಬೇಕೆಂದು ಮಿಡುಕಾಡುವುದಿಲ್ಲ’ ಎಂದರ್ಥ. ಹೀಗಾಗಿ, ಎಲ್ಲಿ ಸಹಾಯಹಸ್ತದ ಅಗತ್ಯವಿದೆಯೋ ಅಲ್ಲಿ ಧಾರಾಳವಾಗಿ ಉಡುಗೊರೆಯನ್ನು ಸಲ್ಲಿಸುವುದು ಸೂಕ್ತ.

ಒಮ್ಮೆ ಕನ್ನಡದ ಹಿರಿಯ ನಾಟಕ ನಿರ್ದೇಶಕರಾದ ದಿ. ಗೋಪಾಲಕೃಷ್ಣ ನಾಯರಿ ಅವರ ಜೊತೆ ಮದುವೆಯೊಂದಕ್ಕೆ ಹೋಗಿದ್ದಾಗ, ನಾನು ಉಡುಗೊರೆಯ ರೂಪದಲ್ಲಿ ಹಣ ಕೊಡಲು ಪರ್ಸ್ ತೆಗೆದೆ. ಅದನ್ನು ಗಮನಿಸಿದ ನಾಯರಿ ಅವರು, ‘ಬೇಡ, ಅದು ನಾವು ಅವರಿಗೆ ಮಾಡುವ ಅವಮಾನ ಅಲ್ಲವೇ?’ ಅಂದರು. ಅಂದಿನಿಂದ ನಾನೂ ಉಡುಗೊರೆ ಕೊಡುವುದನ್ನು ನಿಲ್ಲಿಸಿದೆ. ಮೊದಮೊದಲು ಅಳುಕು ಆಗುತ್ತಿತ್ತು. ಈಗ ಹಾಗೇನೂ ಅನಿಸುವುದಿಲ್ಲ. ನನ್ನ ಹಾಗೆ ಇನ್ನೂ ಕೆಲವರು ಈ ಪದ್ಧತಿಯನ್ನು ಬಿಟ್ಟಿರುವುದು ಕಂಡುಬಂತು.

ಇತ್ತೀಚೆಗೆ ಮದುವೆ, ಮುಂಜಿಗಳಿಗೆ ಕರೆಯುವವರೇ ಆಹ್ವಾನ ಪತ್ರಿಕೆಯೊಂದಿಗೆ ಸೀರೆ, ಪಂಚೆಯನ್ನೋ ಅಥವಾ ಉಡುಗೊರೆಯ ವಸ್ತುಗಳನ್ನೋ ಕೊಟ್ಟು ‘ಖಂಡಿತ ಬರಬೇಕು’ ಎಂದು ಆಹ್ವಾನಿಸುತ್ತಾರೆ. ಇನ್ನು ಕೆಲವರು ಕಾರ್ಯಕ್ರಮ ಮುಗಿಸಿಕೊಂಡು ಹೋಗುವಾಗ, ತಾಂಬೂಲ ಅಂತ ಹೇಳಿ ಆ ರೀತಿಯಲ್ಲಿ ಏನೇನೋ ಕೊಡುತ್ತಾರೆ. ನಿರಾಕರಿಸಿದರೆ, ‘ತಾಂಬೂಲವನ್ನು ಬೇಡ ಅನ್ನಬಾರದು, ಅದು ಶ್ರೇಯಸ್ಕರವಲ್ಲ’ ಎಂದು ಒತ್ತಾಯಿಸುತ್ತಾರೆ. ಹೀಗೆ ಎರಡೂ ಕಡೆಯವರು ಕೊಟ್ಟು ತೆಗೆದುಕೊಳ್ಳುವ ಈ ಪದ್ಧತಿ ವಿಚಿತ್ರವಾಗಿ ಕಾಣಿಸುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲಿ ಬೀರು ತುಂಬ ಸೀರೆಗಳು, ಪಂಚೆಗಳು! ಎರಡೂ ಕಡೆಯವರು ಆರ್ಥಿಕವಾಗಿ ಬಲಿಷ್ಠರಾಗಿದ್ದರೂ ಈ ಕೊಡು ಕೊಳ್ಳುವಿಕೆ ಸಾಗುತ್ತಲೇ ಇರುವುದನ್ನು ಯಾವ ರೀತಿಯಲ್ಲಿ ಅರ್ಥೈಸಬೇಕೊ ತಿಳಿಯದಾಗಿದೆ. ಕೆಲವರು ಇದನ್ನು ಸಂಪ್ರದಾಯ, ಗೌರವ, ಪ್ರೀತಿ ಎಂದೆಲ್ಲ ವ್ಯಾಖ್ಯಾನಿಸುತ್ತಾರೆ.

ಈ ಅನಗತ್ಯ ಆರ್ಥಿಕ ಚಟುವಟಿಕೆಯು ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಶಾಸ್ತ್ರಜ್ಞರು ತಿಳಿಸಬೇಕು. ಇಂತಹ ವಿನಿಮಯ ಅಥವಾ ಹಂಚಿಕೆಯನ್ನು ಎಲ್ಲರೂ ಅರಿತುಕೊಂಡು ನಿಲ್ಲಿಸಿ, ಸದ್ಬಳಕೆ, ಸದ್ವಿನಿಮಯ ಮಾಡುವುದೆಂತು ಎಂದು ಯೋಚಿಸುವುದು ಅರ್ಥಪೂರ್ಣ ಬದಲಾವಣೆಗೆ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT