ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನಿಸರ್ಗ ನಿಯಮ: ನಿಯಂತ್ರಣ ವ್ಯವಸ್ಥೆ

ಅಖಿಲೇಶ್‌ ಚಿಪ್ಪಳಿ
Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಶರಾವತಿ ಸಿಂಗಳೀಕ ಅಭಯಾರಣ್ಯದಲ್ಲಿ ನೀರಿನ ಒರತೆಯ ಕೊರತೆಯಾಗಿ ಅನೇಕ ವನ್ಯಜೀವಿಗಳು ನೀರರಸಿಕೊಂಡು ಊರಿಗೂ ಬರುತ್ತಿವೆ. ಅರಣ್ಯ ಇಲಾಖೆ ಅವುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಕಾಡಂಚಿನ ವನ್ಯಪ್ರೇಮಿಗಳಿಂದ ಕೇಳಿಬರುತ್ತಿದೆ. ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ, ಖುದ್ದು ಅರಣ್ಯ ಸಚಿವರೇ ಸಭೆ ಕರೆದು, ಅಭಯಾರಣ್ಯಗಳಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ವ್ಯವಸ್ಥೆ ಮಾಡಿ ಎಂದು ಅರಣ್ಯ ಭವನದ ಉನ್ನತಾಧಿಕಾರಿಗಳಿಗೆ ತಾಕೀತು ಮಾಡಿದ ವರದಿಯೂ ಬಂದಿದೆ.

ಬರವೆಂಬುದು ನಿಸರ್ಗ ತನಗೆ ತಾನೇ ರೂಪಿಸಿಕೊಂಡ ಒಂದು ವಿಲಕ್ಷಣ ವ್ಯವಸ್ಥೆ. ಬಿರು ಬೇಸಿಗೆಯಲ್ಲಿ ಬಾಯಾರಿದ ಬೀಡಾಡಿ ದನಗಳಿಗೆ ನೀರಿನ ತೊಟ್ಟಿ ಇಟ್ಟಿರುವುದನ್ನು ನಗರ ಪ್ರದೇಶದ ಅನೇಕ ಮನೆಗಳ ಮುಂದೆ ನಾವು ಕಾಣುತ್ತೇವೆ. ವನ್ಯಜೀವಿಗಳ ವಿಷಯದಲ್ಲಿ ಈ ಕ್ರಮ ಅಷ್ಟು ಸೂಕ್ತವಲ್ಲ. ಡಾರ್ವಿನ್ ಹೇಳಿದ ನೈಸರ್ಗಿಕ ಆಯ್ಕೆ ಹಾಗೂ ಬಲಿಷ್ಠವಾದದ್ದೇ ಬದುಕುಳಿಯುವುದು ಎಂಬ ಸಿದ್ಧಾಂತವನ್ನು ಪರಿಗಣಿಸಬೇಕಾಗುತ್ತದೆ. ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಲ್ಲಿ ಪ್ರವಾಸಿಗರನ್ನು ಸೆಳೆಯಲು ಹುಲಿಗಳ ದರ್ಶನ ಮಾಡಿಸುವುದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ಅನಿವಾರ್ಯ
ವಾಗಿದೆ. ಆದ್ದರಿಂದ ಅದು ಕಂಡುಕೊಂಡ ದಾರಿ, ಹೆಚ್ಚು ಹೆಚ್ಚು ನೀರಿನ ಹೊಂಡಗಳಿಗೆ ನೀರು ತುಂಬಿಸುವ ಯೋಜನೆ. ನೀರು ಕುಡಿಯಲು ಬರುವ ಜಿಂಕೆಗಳನ್ನು ಅರಸಿ ಹುಲಿ, ಚಿರತೆಗಳು ನೀರಿನ ಹೊಂಡದ ಹತ್ತಿರ ಬರುತ್ತವೆ. ಇಲ್ಲಿ ಬಲಿಷ್ಠವಾದುದು ಮಾತ್ರ ಬದುಕುಳಿ ಯುತ್ತದೆ ಎಂಬ ಸಿದ್ಧಾಂತವನ್ನು ಹಿಂದೆ ಸರಿಸಿ, ಕೃತಕ ನೀರಿನ ಗುಂಡಿ ನಿರ್ಮಿಸಿ, ದುರ್ಬಲ ಗೊರಸು ಪ್ರಾಣಿಗಳು ಬದುಕುಳಿಯುವಂತೆ ಹಾಗೂ ಆ ಮೂಲಕ ದುರ್ಬಲ ಪೀಳಿಗೆಯನ್ನು ಸೃಷ್ಟಿ ಮಾಡಿದಂತೆ ಆಗುತ್ತದೆ. ಉದಾಹರಣೆಗೆ, ನಾಗರಹೊಳೆಯಲ್ಲಿ ಕೃತಕವಾಗಿ ನೀರು ಲಭ್ಯವಾಗುವ ಹಾಗೆ ಮಾಡಿದ್ದರಿಂದ, ಹಿಂದಿನ ಎರಡು ದಶಕಗಳಲ್ಲಿ ಜಿಂಕೆಗಳ ಸಂಖ್ಯೆ ನೈಸರ್ಗಿಕ ಸಮತೋಲನಕ್ಕಿಂತ ವಿಪರೀತ ಹೆಚ್ಚಾಗಿದೆ. ಅಂದರೆ, ಒಂದು ಚದರ ಕಿ.ಮೀ. ವ್ಯಾಪ್ತಿಯಲ್ಲಿ ಇವುಗಳ ಸಂಖ್ಯೆ 45 ದಾಟಿದೆ. ಅದೇ ಭದ್ರಾ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಜಿಂಕೆಗಳ ಸಂಖ್ಯೆ ಪ್ರತಿ ಚದರ ಕಿ.ಮೀಗೆ ಬರೀ 8.

ಚುಕ್ಕೆ ಜಿಂಕೆಗಳಿಗೆ ನೀರು ಅತ್ಯವಶ್ಯಕ. ಸಂಖ್ಯೆ ಹೆಚ್ಚಿಸಿಕೊಂಡ ಚುಕ್ಕೆ ಜಿಂಕೆಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಲಿದೆ ಬರ. ಇಲ್ಲವಾದಲ್ಲಿ ಜಿಂಕೆಗಳ ಹಿಂಡು ಆಹಾರಕ್ಕಾಗಿ ಹುಲ್ಲಿನ ಬೇರುಗಳನ್ನು ಕಿತ್ತು ತಿಂದು, ಮಣ್ಣಿನ ರಚನೆಯನ್ನೇ ವಿರೂಪಗೊಳಿಸುವುದರ ಜೊತೆಗೆ, ನೈಸರ್ಗಿಕವಾಗಿ ಬೀಜ ಪ್ರಸರಣೆಗೊಂಡು ಹುಟ್ಟುವ ವೈವಿಧ್ಯಮಯ ಸಸ್ಯಸಂಪತ್ತನ್ನೂ ಬರಿದು ಮಾಡುತ್ತದೆ. ಆಗ ಕಾಡಿನ ಒಟ್ಟಾರೆ ಬೆಳವಣಿಗೆ ಕುಂಠಿತ ಆಗುತ್ತದೆ. ಇದರಿಂದ, ಮಳೆಗಾಲದಲ್ಲಿ ಮೇಲ್ಮಣ್ಣು ಕೊಚ್ಚಿ ಹೋಗಿ, ನೈಸರ್ಗಿಕ ನೀರಿನ ಮೂಲಗಳು ಹೂಳಿನಿಂದ ಮುಚ್ಚುತ್ತವೆ.

ಮನುಷ್ಯ ಪ್ರಪಂಚದಲ್ಲಿ ದುರ್ಬಲ ಸಂತತಿಯನ್ನು ವಿಶೇಷ ಕಾಳಜಿ ವಹಿಸಿ ಸಲಹುವ ಪರಿಪಾಟವಿದೆ. ನಾಗರಿಕ ಪ್ರಪಂಚದಲ್ಲಿ ಇದು ಸರಿ. ಆದರೆ, ವನ್ಯಲೋಕದಲ್ಲಿ ಈ ಸೂತ್ರ ಸೋಲುತ್ತದೆ. ಬಾಯಾರಿದ ಪ್ರಾಣಿಗಳಿಗೆ ನೀರುಣಿಸುವುದು ಅಂತಃಕರುಣೆಯುಳ್ಳ ಯಾರಿಗೇ ಆದರೂ ಸರಿಯಾದ ಕ್ರಮವೆಂದು ಮೇಲ್ನೋಟಕ್ಕೆ ಕಂಡುಬಂದರೂ, ದೀರ್ಘಕಾಲೀನ ಫಲಿತಾಂಶವು ನೈಸರ್ಗಿಕ ಆಯ್ಕೆ ಮತ್ತು ಬಲಿಷ್ಠವಾದುದು ಮಾತ್ರ ಉಳಿಯುವ ಡಾರ್ವಿನ್ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿದೆ.

ನೈಸರ್ಗಿಕವಾಗಿ ಆಯಾ ಭೂಪ್ರದೇಶಗಳಿಗೆ ಹೊಂದಿಕೊಂಡು ಬದುಕುತ್ತಿರುವ ವನ್ಯಜೀವಿಗಳ ನೆಲೆ ಗಳನ್ನು ಸಂರಕ್ಷಿಸಬೇಕು ಎಂಬ ಕಾರಣಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972 ಜಾರಿಯಾಯಿತು. ಈ ಕಾಯ್ದೆಯ ಸ್ಪಷ್ಟ ಆಶಯವೆಂದರೆ, ಯಾವುದೇ ಕಾರಣಕ್ಕೂ ವನ್ಯಜೀವಿಗಳಿಗೆ ಮೀಸಲಾಗಿಟ್ಟ ಪ್ರದೇಶಗ ಳನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಹಾಗೂ ಅಲ್ಲಿ ಮಾನವ ಹಸ್ತಕ್ಷೇಪ ಇರಬಾರದು. ಆದರೆ ದೇಶ ದಲ್ಲಿರುವ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳಲ್ಲಿ ಪರಿಸರ ಪ್ರವಾಸೋ
ದ್ಯಮವನ್ನು ಇನ್ನಿಲ್ಲದಂತೆ ಪ್ರೋತ್ಸಾಹಿಸಲಾಗುತ್ತಿದೆ.

ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಆಗುಂಬೆ ಮಾರ್ಗವಾಗಿ ದಕ್ಷಿಣ ಕನ್ನಡದತ್ತ ಹೋಗುವಾಗ ಕಡಿದಾದ ಘಾಟಿ ಮಾರ್ಗ ಸಿಗುತ್ತದೆ. ಈ ಪ್ರದೇಶವು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಘಾಟಿಯ ಇಕ್ಕೆಲಗಳಲ್ಲಿ ಸಿಂಗಳೀಕವೆಂಬ ಅತ್ಯಪರೂಪದ ವಾನರ ಸಂತತಿ ಕಂಡುಬರುತ್ತದೆ. ಪ್ರವಾಸಿಗರಿಗೆ ಇವುಗಳನ್ನು ನೋಡುವ, ಇವುಗಳ ಫೋಟೊ ತೆಗೆಯುವ ಹುಚ್ಚು. ಬಹಳ ನಾಚಿಕೆ ಸ್ವಭಾವದ ಹಾಗೂ ಮನುಷ್ಯರಿಂದ ಸದಾ ದೂರ ಇರಲು ಬಯಸುವ ಸಿಂಗಳೀಕಗಳನ್ನು ಆಕರ್ಷಿಸಲು ಅಲ್ಲಿ ಪೈಪೋಟಿ ನಡೆಯುತ್ತದೆ. ಪ್ರವಾಸಿಗರು ನೀಡುವ ಕುರ್ಕುರೆ, ಲೇಸ್‌ನಂತಹ ಜಂಕ್ ತಿಂಡಿಗಳು, ವಿಷಭರಿತವಾದ ತರಕಾರಿ, ಹಣ್ಣುಗಳೇ ಅವಕ್ಕೀಗ ಆಹಾರವಾಗಿದೆ. ನೈಸರ್ಗಿಕವಾದ ಆಹಾರವನ್ನು ಬಿಟ್ಟು ನಾಗರಿಕ ಪ್ರಪಂಚದ ಆಹಾರಕ್ಕೆ ಒಗ್ಗಿಕೊಂಡ ಅಲ್ಲಿನ ಸಿಂಗಳೀಕ ಸಂತತಿ ತನ್ನ ನೈಸರ್ಗಿಕ ಪ್ರಾಮುಖ್ಯತೆ ಕಳೆದು ಕೊಳ್ಳುತ್ತಿದೆ. ಇದರ ವ್ಯತಿರಿಕ್ತ ಪರಿಣಾಮ ಆಗುಂಬೆ ಮಳೆಕಾಡುಗಳು, ಸೋಮೇಶ್ವರ ಅಭಯಾರಣ್ಯದ ಮೇಲೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ವಿವೇಚನಾರಹಿತವಾದ ನಮ್ಮ ನಡೆಗಳು ಒಂದು ಸಂತತಿಯನ್ನೇ ಅಪಾಯಕ್ಕೀಡು ಮಾಡುತ್ತವೆ. ಹಸಿದ ಸಿಂಗಳೀಕಗಳಿಗೆ ಆಹಾರ ನೀಡಿದೆ ಎಂಬ ಸಮಾಧಾನ ಪ್ರವಾಸಿಗರಿಗೆ ಸಿಗಬಹುದಾದರೂ, ಇವರ ಈ ಕ್ರಿಯೆಯೇ ಸಂರಕ್ಷಣೆಯ ಕೆಲಸಕ್ಕೆ ಅತಿದೊಡ್ಡ ಅಡ್ಡಿಯಾಗುತ್ತದೆ. ಇದನ್ನು ಸರ್ಕಾರ, ಇಲಾಖೆ ಮತ್ತು ನಾಗರಿಕರು ಅರಿಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT