ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಜೀವೋತ್ಪತ್ತಿಯ ಹಬ್ಬ, ಅಲ್ಲೂ ಇಲ್ಲೂ

Published 13 ಜೂನ್ 2024, 23:37 IST
Last Updated 13 ಜೂನ್ 2024, 23:37 IST
ಅಕ್ಷರ ಗಾತ್ರ

ಜೂನ್ ಮಾಸ ಅಡಿಯಿಡುತ್ತಿದ್ದಂತೆ ಶುರುವಾಗುವುದು ಮುಂಗಾರು. ಹದಮಳೆ ಹನಿಸುತ್ತಲೇ ಋತುಮಾನಗಳ ಚಲನೆಯ ರುಜುವಾಗಿ ಪ್ರಕೃತಿಯಲ್ಲೊಂದು ಗುರುತರ ಸ್ಥಿತ್ಯಂತರ. ಅಲ್ಲಿ ಯಾವುದೋ ಜೀವಜಂತುವಿಗೆ ಬಿಲ ದೊಳಗೆ ಮೈಮುದುಡಿ ಬೆಚ್ಚಗೆ ಅವಿತುಕೊಳ್ಳಲು ಅವಸರ, ಮತ್ತ್ಯಾವುದೋ ಜೀವಕ್ಕೆ ಗೂಡಿನಿಂದ ಮೈಮುರಿದು ಹೊರಬರುವ ಕಾತರ, ವರ್ಷವಿಡೀ ಕಾಣೆ ಯಾಗಿದ್ದ ಬೇಲಿಸಾಲಿನ ಡೇಲಿಯ ಗಡ್ಡೆಗಳಿಗೆ ಮತ್ತೆ ಜೀವ ತಳೆಯುವ ಸಡಗರ, ಬಯಲಲ್ಲಿ ಅನಾಥವಾಗಿ ಬಿದ್ದಿದ್ದ ಅಸಂಖ್ಯ ತತ್ತಿಗಳಿಗೂ ಬೀಜಗಳಿಗೂ ಜೀವಾಂಕುರದ ಹಂಬಲ... ಹೀಗೆ ಮುಂಗಾರಿಗೆ ಜೀವೋತ್ಪತ್ತಿಯ ಹಬ್ಬ.

ಮಳೆ ಎಂಬ ಪ್ರಕೃತಿಯ ಜೀವಂತ ಕಾವ್ಯದ ಕಾರಣವೇ ರಮಣೀಯ. ಮೈತುಂಬಿದ ಮುಗಿಲು ಬಾಗಿ ತುಂತುರು ನೆಲ ತಾಕುವ ಹೊತ್ತಿಗೆ ರೈತಾಪಿ ಮೈಮನಸ್ಸುಗಳಲ್ಲಿ ಅಕ್ಷರಶಃ ವಿದ್ಯುತ್‌ಸಂಚಾರ. ಮಣ್ಣಿನ ಘಮಲು ಹಾಯುವ ಕನಸಿನ ಹಾದಿಯಲ್ಲಿ ಹಸಿರು-ಪೈರು ಕಂಗೊಳಿಸುವಂತೆ ಕಣ್ಣಂಚಲ್ಲಿ ತೇವ. ಹದಗೊಂಡ ನೆಲದಲ್ಲಿ ಊರುವ ಭರವಸೆಯ ಬೀಜಗಳು ಚಿಗುರೊಡೆಯಲು ತವಕಿಸುವ ಹೊತ್ತಿಗೆ ಆಗೆಲ್ಲಾ ನೇಗಿಲು, ಕಂಬಳಿಕೊಪ್ಪೆಗಳು, ಜೋಡೆತ್ತು
ಗಳೊಟ್ಟಿಗೆ ಗದ್ದೆಗಿಳಿಯುತ್ತಿದ್ದರೆ ಇದೀಗ ಯಂತ್ರಗಳ ಸರದಿ.

ಮುಂಗಾರು ಎಂದರೆ ಪ್ರಕೃತಿಗೆ ತನ್ನ ರಮಣೀಯತೆಗೆ ಮರಳುವ ಸಡಗರ ಮಾತ್ರವಲ್ಲ. ರಜೆಯ ಮೋಜಿನಲ್ಲಿ ಮಿಂದೇಳುವ ಎಳೆಯ ಮನಸುಗಳಿಗೂ ಪಾಟಿಚೀಲ ದೊಟ್ಟಿಗೆ ಶಾಲೆಯ ಕಡೆಗೆ ಹೊರಳುವ, ಮೆಲ್ಲಗೆ ಅರಳುವ ಸಂಭ್ರಮ. ವರ್ಷದ ಕಾಯುವಿಕೆಯ ಕೊನೆಗೆ ಕೂಡಿ ಬರುವ ರಜಾಕಾಲದಲ್ಲಿ ಎಳೆಯ ಮನಸುಗಳೆದುರು ತೆರೆದುಕೊಳ್ಳುವ ಲೋಕಾನುಭವಕ್ಕೆ ದೀಪದಾರಿಯ ಮೌಲ್ಯವಿದೆ. ಮಕ್ಕಳು ವರ್ಷದ ಒತ್ತಡವನ್ನೆಲ್ಲಾ ಕಳಚಿಕೊಂಡು ಮುಕ್ತರಾಗುವ, ಆಡಿಕುಣಿದು, ಹಿಗ್ಗಿ ಹಗುರಾಗುವ ಕಾಲವದು. ಹಿರಿಯರ ಅನುಭವದ ಹೆಜ್ಜೆಗಳಲ್ಲಿ ಮಗು ಹೆಕ್ಕಿಕೊಳ್ಳುವ ಒಲವು, ನಲಿವು, ಅರಿವಿನ ತುಣುಕುಗಳೇ ಅವರ ನಾಳೆಗಳ ಬದುಕಿನಾಸರೆ. ಕಂಡುಂಡ ರಜಾದಿನಗಳ ರಸಾನುಭೂತಿಯು ತರಗತಿಯೊಳಗಿನ ಔಪಚಾರಿಕ ಕಲಿಕೆಯಲ್ಲಿ ಕಲೆತು ಮಗುವು ಸರಸರನೆ ಅರಳಲು ಸಾಧ್ಯಮಾಡುತ್ತದೆ.

ಬಯಲಿನ ಬಾಲ್ಯದ ತೆರೆದ ಬೇಲಿಯೊಳಗಿನ ಆಟ-ಊಟ, ಮಾತು-ಕತೆ, ಪ್ರವಾಸ, ಹಬ್ಬ-ಜಾತ್ರೆಗಳ ಹಿತಾನುಭವದಲ್ಲಿ ಮಕ್ಕಳು ಬದುಕಿಗೆ ಬೇಕಾದ ಅಮೂಲ್ಯ ಮೌಲ್ಯಗಳನ್ನು ಹೆಕ್ಕಿಕೊಳ್ಳುತ್ತವೆ. ಪುಸ್ತಕದ ಆಚೆಗಿನ ವಾಸ್ತವ, ಸಂಬಂಧಗಳ ಮಹತ್ವ, ಹಿರಿಯರ ಹಾದಿ, ಹಸಿರಿನ ಸಾಂಗತ್ಯ, ಮಣ್ಣಿನ ಸಂಪರ್ಕ, ಹಬ್ಬ, ಜಾತ್ರೆ, ತೇರು, ಕಲೆ-ಸಂಸ್ಕೃತಿ, ಉದಾತ್ತತೆ ಹೀಗೆ ಜಗತ್ತಿನ ಯಾವ ವ್ಯಕ್ತಿ, ಶಾಲೆ, ಭಾಷೆ-ಬರವಣಿಗೆ
ಗಳಿಂದಲೂ ನೀಡಲಾಗದ ಅರಿವನ್ನು ಮಕ್ಕಳು ತಮ್ಮ ಸ್ವಾನುಭವದಲ್ಲಿ ಕಂಡುಕೊಳ್ಳುತ್ತಾ ಸಹಜವಾಗಿ ಕಲಿಯುತ್ತಾರೆ, ಬಲಿಯುತ್ತಾರೆ ಮತ್ತು ಬೆಳಗುತ್ತಾರೆ.

ಮುಂಗಾರಿನಲ್ಲಿ ಬೀಜವೂ ತನ್ನ ನಿಶ್ಚೇತನ ಕಾಲವಾಗಿರುವ ರಜಾ ಅವಧಿಯನ್ನು ಕಳೆದು ಭೂಮಿಗೆ ಬಿದ್ದು ಮೊದಲ ಮಳೆಯೊಟ್ಟಿಗೆ ಮೊಳೆಯಲು ಮೊದಲಾಗುತ್ತದೆ. ಆವರೆಗೆ ತನ್ನೆಲ್ಲ ಸತ್ವವನ್ನೂ ಸಾಮರ್ಥ್ಯವನ್ನೂ ಪುಟ್ಟ ಕೋಶಭಿತ್ತಿಯಲ್ಲಿ ಬಚ್ಚಿಟ್ಟು ಸುಪ್ತಾವಸ್ಥೆಯಲ್ಲಿ ಕಾಲನೂಕುವ ಬೀಜವು ಕಾವು ಕಟ್ಟಿಕೊಂಡು ಕಾದಿರುತ್ತದೆ. ನೆಲದೊಳಗೆ ಕೂತು, ಹದ ಮಳೆಯೊಂದಿಗೆ ಬೆರೆತು ಬೀಜವು ಹೆಮ್ಮರವಾಗುವ ತವಕದಲ್ಲಿ ಮೊದಲ ಹಂತಕ್ಕೆ ಮೊಳಕೆಯೊಡೆಯುತ್ತದೆ. ನಂತರ ಮಣ್ಣು, ನೀರಿನಲ್ಲಿನ ಅಗತ್ಯ ಪೋಷಕತ್ವ ವನ್ನು ಹೀರುತ್ತಾ ಚಿಗುರಾಗುತ್ತದೆ, ಗಾಳಿಯೊಂದಿಗೆ ಬಲಿಯುತ್ತದೆ. ವಿಶಾಲ ಜಗತ್ತಿನಲ್ಲಿ ಬೆಳೆಯುವ ಮಗುವೂ ಹಾಗೆಯೇ...

ಅತ್ತ ರೈತ ತನ್ನ ಹದಗೊಂಡ ನೆಲದಲ್ಲಿ ನೇಗಿಲೂಡುವ, ಬೀಜ ಬಿತ್ತುವ ಕಾತರದಲ್ಲಿದ್ದರೆ, ಇತ್ತ ಶಾಲೆಯೆಡೆಗೆ ಹೆಜ್ಜೆ ಹಾಕುವ ಹೊತ್ತಿನಲ್ಲಿ ಮಗುವಿನ ಮನದೊಳಗೆ ಸಣ್ಣ ತಳಮಳ. ಪೋಷಕರು ಮತ್ತು ಶಾಲಾ ವ್ಯವಸ್ಥೆಯ ನಿರೀಕ್ಷೆಗೆ ಒಡ್ಡಿಕೊಳ್ಳಬೇಕಾದ ಅನಿವಾರ್ಯ ದಲ್ಲಿ ಮಕ್ಕಳು ಅಪರಿಮಿತ ಒತ್ತಡ, ತಳಮಳದಲ್ಲಿ ಬೇಯುವುದಿದೆ. ಇವತ್ತಿನ ತೀವ್ರ ಪೈಪೋಟಿ ಯುಗದ ಕಾರಣದಿಂದ, ಪೋಷಕರು ಅತಿನಿರೀಕ್ಷೆಯ ಭಾರವನ್ನು ಹೇರದೆ, ಎಳೆಯ ಜೀವಗಳು ಮಾನಸಿಕವಾಗಿ ಕುಸಿಯದಂತೆ ಎಚ್ಚರ ವಹಿಸುವುದು ತುಂಬಾ ಅಗತ್ಯ. ಬರೀ ನೀಟ್, ಜೆಇಇ, ಸಿಇಟಿ, ಅಂಕ, ಮೆರಿಟ್ಟು, ರ್‍ಯಾಂಕು ಗಳಿಕೆಯ ಹಳಹಳಿಕೆಯಲ್ಲಿ ಅನರ್ಥಗಳನ್ನು ತುರುಕಿ ಹಸಿ ಮನಸುಗಳು ನಲುಗದಂತೆ ಎಚ್ಚರ ವಹಿಸಬೇಕಾದದ್ದು ವ್ಯವಸ್ಥೆಯ ಜವಾಬ್ದಾರಿಯೂ ಹೌದು. ಮಕ್ಕಳು ತಮಗಿರುವ ಅವಕಾಶದಲ್ಲಿ ಬುದ್ಧಿಯೊಂದಿಗೆ ಭಾವಪರಿಧಿಯನ್ನು ಹಿಗ್ಗಿಸಬಲ್ಲ ಕ್ರೀಡೆ, ಸಾಹಿತ್ಯ, ಸಂಗೀತ, ಸಹಬಾಳ್ವೆ, ಒತ್ತಡ ನಿವಾರಣಾ ಕೌಶಲ, ನಾಯಕತ್ವ ಬೆಳವಣಿಗೆಯಂತಹ ವಿಭಿನ್ನವಾದ
ಬಹುಮುಖಿ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಆಗ ಬೇಕು. ಆಗೆಲ್ಲಾ ಹೆತ್ತವರು, ಗುರುಗಳ ಮಾರ್ಗದರ್ಶನ, ಪ್ರೇರಣೆಯು ಹದಮಳೆಯ ಹಾಗೆ ಹಿತವಾಗಿ ಹನಿಯಬೇಕು.

ಯಾಂತ್ರಿಕತೆ ಮತ್ತು ಪ್ರಕೃತಿಯ ಮೇಲಿನ ಅತಿ ಯಾದ ಹಸ್ತಕ್ಷೇಪಗಳನ್ನು ನಿಯಂತ್ರಿಸಿಕೊಂಡು ಸುಸ್ಥಿರವೂ ಸರಳವೂ ನಿಸ್ವಾರ್ಥವೂ ಆದ ಜೀವನ್ಮುಖಿ ಕೃಷಿಬದುಕಿಗೆ ರೈತರು ಹಂಬಲಿಸಬೇಕು. ಹಾಗಾಗದಿ ದ್ದಲ್ಲಿ ಲಾಭದಾಸೆಗೆ ಮಿತಿಮೀರಿ ರಾಸಾಯನಿಕಗಳನ್ನು ತಂದು ಸುರಿದು ಸಮೃದ್ಧ ಮತ್ತು ಚೈತನ್ಯಯುತ ನೆಲವನ್ನು ನಿರ್ಜೀವಗೊಳಿಸುತ್ತಿರುವ ಆಧುನಿಕ ಕೃಷಿವಿಧಾನದ ಹಾಗೆಯೇ ಶಿಕ್ಷಣ ವ್ಯವಸ್ಥೆಯೂ ಇವತ್ತಿನ ಕೃತಕ ಮತ್ತು ಯಾಂತ್ರಿಕ ಜಗತ್ತಿನ ಮುಂದುವರಿಕೆಗಷ್ಟೇ ಸಾಕ್ಷಿಯಾಗಬೇಕಾಗುತ್ತದೆ.

ಹಾಗಾಗದಿರಲಿ ಅಂತ ಬಯಸುವುದಾದರೆ, ಗದ್ದೆಯ ಕೃಷಿ ಮತ್ತು ಮಕ್ಕಳ ಕಲಿಕೆಗಳೆರಡೂ ಸಾಧ್ಯ ವಾದಷ್ಟು ಮಟ್ಟಿಗೆ ಸಾವಯವಗೊಳ್ಳಲಿ ಎಂಬುದೇ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT