ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ಅಂಕಣ | ಎಸ್ಎಸ್ಎಲ್‌ಸಿ: ಇರಲಿ ಮುನ್ನೋಟ

ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕೆ ಒಂದು ವರ್ಷದ ಯೋಜನೆಗಿಂತಲೂ ಮೂರು ವರ್ಷಗಳ ಮುನ್ನೋಟವನ್ನು ಹೊಂದಿದ ಯೋಜನೆಯನ್ನು ಸಿದ್ಧಪಡಿಸುವುದು ಹೆಚ್ಚು ಉತ್ತಮ
Published 9 ಜೂನ್ 2023, 1:24 IST
Last Updated 9 ಜೂನ್ 2023, 1:24 IST
ಅಕ್ಷರ ಗಾತ್ರ

ಎಸ್ಎಸ್ಎಲ್‌ಸಿ ಪರೀಕ್ಷೆಗೆ ಒಂದೆರಡು ತಿಂಗಳಿರುವಾಗ, ಫಲಿತಾಂಶ ಹೆಚ್ಚಿಸುವ ಕಾರ್ಯತಂತ್ರ ಮತ್ತು ಕಾರ್ಯಚಟುವಟಿಕೆ ಬಗ್ಗೆ ಎಲ್ಲಾ ಶಾಲೆಗಳಲ್ಲಿ ಗಮನ ನೀಡಲಾಗುತ್ತದೆ. ಇದು, ವಿಷಯವಾರು ತೇರ್ಗಡೆ, ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಮನೆ ಭೇಟಿಯಂತಹ ಅಂಶಗಳನ್ನು ಒಳಗೊಂಡಿರುತ್ತದೆ. ಆದರೆ ಶೈಕ್ಷಣಿಕ ವರ್ಷದ ಆರಂಭದಿಂದಲೇ ಈ ದಿಸೆಯಲ್ಲಿ ಕ್ರಮ ಕೈಗೊಳ್ಳುವುದು ಒಂದಷ್ಟು ಉತ್ತಮ ಪರಿಣಾಮ ಬೀರಬಲ್ಲದು.

ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಆಡಳಿತವು ಜಿಲ್ಲೆಯ ವ್ಯಾಪ್ತಿಯಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಪರ್ಯಾಲೋಚಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡ ಚಿಂತನಾಶೀಲ ಸಭೆಯನ್ನು ಇತ್ತೀಚೆಗೆ ಹಮ್ಮಿಕೊಂಡಿತ್ತು. ಈ ಸಭೆಯಲ್ಲಿ ಹೊರಬಂದ ಒಂದಷ್ಟು ಅಂಶಗಳು ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ದಿಕ್ಸೂಚಿಯಾಗಬಹುದು.‌

ಜಿಲ್ಲೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಶಾಲೆಗಳನ್ನು ಗಮನಿಸಿದಲ್ಲಿ, ಆಯಾ ಶಾಲೆಯ ಎಲ್ಲಾ ಶಿಕ್ಷಕರು ಒಂದು ತಂಡವಾಗಿ ಸಾಂಘಿಕ ಪ್ರಯತ್ನ ನಡೆಸಿರುವುದು, ಫಲಿತಾಂಶ ಹೆಚ್ಚಳದ ಕನಸಿಗೆ ಪೂರಕವಾಗಿ ಶಾಲಾ ಅವಧಿಯ ನಂತರವೂ ಪೋಷಕರ ಸಹಕಾರ, ಬೆಂಬಲದ ಬಲದಿಂದ ವಿದ್ಯಾರ್ಥಿಗಳನ್ನು ನಿರಂತರವಾಗಿ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿರುವುದು ಕಂಡುಬರುತ್ತದೆ. ವಿವಿಧ ವಿಷಯಗಳನ್ನು ಬೋಧಿಸುವ ಶಿಕ್ಷಕರೆಲ್ಲರೂ ಜೊತೆಗೂಡಿ ಪ್ರತಿ ವಿದ್ಯಾರ್ಥಿಯ ಬಲ, ಕೊರತೆಗಳ ಬಗ್ಗೆ ಪರಸ್ಪರ ಚರ್ಚಿಸುತ್ತಾ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ವಿಧಾನವನ್ನು ಅನುಸರಿಸಿದ ಶಾಲೆಗಳು ಫಲಿತಾಂಶ ಹೆಚ್ಚಳದಲ್ಲಿ ಯಶ ಕಂಡಿವೆ.

ಹೆಚ್ಚಿನ ಶಾಲೆಗಳು ಗುಣಮಟ್ಟದ ಶಿಕ್ಷಣ, ಫಲಿತಾಂಶ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಮಾದರಿಯಲ್ಲಿ ಶಾಲಾ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸುತ್ತವೆ. ಆದರೆ ಹೆಚ್ಚಿನ ಶಾಲೆಗಳು ವಿವಿಧ ಮಾಹಿತಿಗಳನ್ನು ಒಳಗೊಂಡ ನಮೂನೆಯನ್ನು ಭರ್ತಿ ಮಾಡಿ, ಯೋಜನೆಯನ್ನು ಸಿದ್ಧಪಡಿಸಿದ ಶಾಸ್ತ್ರ ಮಾಡುತ್ತವೆ. ಇಂತಹ ಶೈಕ್ಷಣಿಕ ಯೋಜನೆಯಿಂದ ಹೆಚ್ಚಿನ ಸಹಾಯವಾಗದು. ಯೋಜನೆಯನ್ನು ಸಿದ್ಧಪಡಿಸುವ ಮೊದಲು ಎಲ್ಲಾ ವಿಷಯ ಶಿಕ್ಷಕರು ಸಮಾಲೋಚನೆ ನಡೆಸಿ, ಶಾಲೆಯ ಪರಿಸ್ಥಿತಿ ಹಾಗೂ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ, ಯಾವ ಕಾರ್ಯಚಟುವಟಿಕೆಯನ್ನು ಯಾವಾಗ ಹಮ್ಮಿಕೊಳ್ಳಬೇಕು ಎಂಬುದರ ಚಿಂತನ ಮಂಥನ ನಡೆಸಬೇಕು. ಈ ಕುರಿತ ವಿವರಗಳನ್ನು ಪಟ್ಟಿ ಮಾಡಬೇಕು. ಪೋಷಕರ ಸಹಭಾಗಿತ್ವ ಪಡೆಯುವ ವಿಧಾನಗಳ ಕುರಿತೂ ಸಮಾಲೋಚನಾ ಸಭೆಗಳಲ್ಲಿ ಚರ್ಚೆ ನಡೆಸಬೇಕು. ಇದಕ್ಕಾಗಿ ಪೋಷಕರ ಸಭೆ ನಡೆಸಿ, ಅವರ ಸಲಹೆ, ಅಭಿಪ್ರಾಯ ಮತ್ತು ಮಾರ್ಗದರ್ಶನವನ್ನು ಪಡೆಯುವುದು ಪರಿಣಾಮಕಾರಿ ಆಗಬಲ್ಲದು.

ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕೆ ಒಂದು ವರ್ಷದ ಯೋಜನೆಗಿಂತಲೂ ಮೂರು ವರ್ಷಗಳ ಮುನ್ನೋಟವನ್ನು ಹೊಂದಿದ ಯೋಜನೆಯನ್ನು ಸಿದ್ಧಪಡಿಸುವುದು ಹೆಚ್ಚು ಉತ್ತಮ. ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಮುಂದಿನ ಎರಡು ವರ್ಷಗಳಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಭಿವೃದ್ಧಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಈ ಮುನ್ನೋಟ ಯೋಜನೆ ಹೊಂದಿರಬಹುದು.

ಪ್ರೌಢಶಾಲೆಗೆ ಪ್ರವೇಶ ಪಡೆಯುವ ಹಲವಾರು ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಸಂಬಂಧಿಸಿದಂತೆ ಅನೇಕ ಮಿತಿಗಳಿರುತ್ತವೆ. ಕೆಲವರಿಗೆ ಓದುವ, ಬರೆಯುವ, ಸರಳ ಲೆಕ್ಕಾಚಾರ ಕೌಶಲದ ಕೊರತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರೌಢಶಾಲಾ ಶಿಕ್ಷಕರು ‘ಪ್ರಾಥಮಿಕ ಶಾಲಾ ಶಿಕ್ಷಕರು ಸರಿಯಾಗಿ ಬೋಧಿಸದೇ ಇರುವ ಕಾರಣದಿಂದ ಈ ವಿದ್ಯಾರ್ಥಿಗಳಿಗೆ ಕಲಿಸುವುದು ಕಷ್ಟವಾಗುತ್ತಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಮಾತಿನಲ್ಲಿ ನಿಜಾಂಶ ಇದೆಯಾದರೂ ವಿದ್ಯಾರ್ಥಿ ತಮ್ಮ ಶಾಲೆಗೆ ಬಂದಾದ ಮೇಲೆ, ಆತನಲ್ಲಿ ಇರಬಹುದಾದ ಕಲಿಕಾ ಮಿತಿಗಳನ್ನು ಗುರುತಿಸಿ, ಅಗತ್ಯ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ. ಈ ಕಾರ್ಯವನ್ನು ವಿದ್ಯಾರ್ಥಿ 8ನೇ ತರಗತಿಯಲ್ಲಿ ಇದ್ದಾಗಲೇ ಮಾಡಿದರೆ, ಆತ 10ನೇ ತರಗತಿಗೆ ಬರುವ ವೇಳೆಗೆ ಮೂಲಭೂತ ಕೌಶಲಗಳ ಕೊರತೆ ಇಲ್ಲದೇ ವಿಷಯಗಳಲ್ಲಿನ ಪರಿಕಲ್ಪನೆಗಳನ್ನು ಕರಗತ ಮಾಡಿಕೊಳ್ಳಲು ಸಮಸ್ಯೆ ಎದುರಾಗುವುದಿಲ್ಲ.

ಹಿಂದಿನ ಎರಡು ವರ್ಷಗಳಲ್ಲಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳದಿದ್ದಾಗ್ಯೂ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಲ್ಲಿರುವ ಮೂಲಭೂತ ಕೌಶಲಗಳ ಕೊರತೆಯನ್ನು ಜೂನ್‌ ತಿಂಗಳಿನಲ್ಲಿಯೇ ಗುರುತಿಸುವುದು, ಪರಿಹಾರಕ್ಕಾಗಿ ಕ್ರಮ ತೆಗೆದುಕೊಳ್ಳುವುದು ಉತ್ತಮ ಹೆಜ್ಜೆಯಾಗುತ್ತದೆ.

ಶಾಲೆಯ ಮುನ್ನೋಟ ಯೋಜನೆಯನ್ನು ಶಾಲಾ ಫಲಕದಲ್ಲಿ ಪ್ರದರ್ಶಿಸುವ ಮೂಲಕ ಶಾಲೆಯು ಗುಣಮಟ್ಟ ಕುರಿತಾದ ತನ್ನ ಬದ್ಧತೆಯನ್ನು ಪ್ರದರ್ಶಿಸಬಹುದು. ಇದು ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಒಂದಷ್ಟು ಸೌಮ್ಯ ಒತ್ತಡ ಸೃಷ್ಟಿಗೆ ನೆರವಾಗುವುದರ ಜೊತೆಗೆ, ಸಾಧನೆಯ ಕನಸು ಎಲ್ಲರಲ್ಲಿಯೂ ಚಿಗುರೊಡೆಯಲು ನೆರವಾಗುತ್ತದೆ. ಸಾಧಿಸುವ ಕನಸಿನ ಬೀಜವು ಗಿಡವಾಗಿ ಬೆಳೆದು, ಮರವಾಗಿ ಫಲ ನೀಡಲು ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕರು ಪೋಷಕರ ಸಹಕಾರ, ಬೆಂಬಲದಿಂದ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳ ಗೈರುಹಾಜರಿಯನ್ನು ನಿಯಂತ್ರಿಸುವುದರ ಜೊತೆಗೆ ಅವರಲ್ಲಿ ಸಾಧಿಸುವ ತುಡಿತ, ಹುಮ್ಮಸ್ಸನ್ನು ಹುಟ್ಟಿಸಿ, ಕ್ರಿಯಾಶೀಲರನ್ನಾಗಿ ಮಾಡುವಲ್ಲಿ ಶಿಕ್ಷಕರು ಯಶ ಕಾಣುವುದು ಅಗತ್ಯವಾದ ಅಂಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT