ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಾವು ಇದೆ, ತಡೆವ ಸಾಸಿವೆ ಇಲ್ಲ!

Last Updated 8 ಡಿಸೆಂಬರ್ 2021, 19:36 IST
ಅಕ್ಷರ ಗಾತ್ರ

‘ಈಗೀಗ ಬೆಳಗ್ಗೆ ಐದಕ್ಕೆಲ್ಲಾ ಎದ್ದುಬಿಡುತ್ತೇನೆ. ಊರಿನ ಡಾಮರು ರಸ್ತೆಯಲ್ಲಿ ಕಿಲೊಮೀಟರ್‌ಗಟ್ಟಲೆ ನಡೆಯುತ್ತೇನೆ. ಜೊತೆಗೊಂದಿಷ್ಟು ವ್ಯಾಯಾಮ. ಮನೆಯೆಡೆಗೆ ನಡೆಯುವ ಹೊತ್ತಿಗೆ ಸೂರ್ಯ ಎದುರಾಗುತ್ತಾನೆ. ದೇಹ-ಮನಸ್ಸು ಹಗುರ ಹಗುರ. ಇದು ನನಗೆ ಸಿಕ್ಕಿರುವ ಕೊನೆಯ ದಿನವೇನೋ ಅನ್ನುವಂತೆ ಅಂದಿಗೊಂದು ಪ್ಲಾನ್ ಮಾಡಿಕೊಳ್ಳುತ್ತೇನೆ. ನಾಳೆ ಏನಾದರೂ ನನ್ನ ಪಾಲಿಗಿದ್ದರೆ ಅದು ಬೋನಸ್ ಅಷ್ಟೆ. ತೀವ್ರ ಮುಂಗೋಪಿಯಾಗಿದ್ದ ನಾನು ಆ ಕೋಪವನ್ನು ಬಿಟ್ಟೆ. ಜಗಳಕ್ಕಿಳಿಯುವುದು ದೂರದ ಮಾತಾಯಿತು. ತೀರಾ ಸಭ್ಯನಾಗಿಬಿಟ್ಟೆ. ಸಾವು ಬೆನ್ನ ಹಿಂದೆಯೇ ಇದೆ ಅನಿಸುತ್ತದೆ. ಪುನೀತ್ ರಾಜ್‌ಕುಮಾರ್ ಅವರ ಸಾವು ನನಗೆ ಈ ಬದಲಾವಣೆ ಕಲಿಸಿದೆ’ ಅಂತ ಗೆಳೆಯನೊಬ್ಬ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ.

ಇತ್ತೀಚಿನ ದಿನಗಳಲ್ಲಿ ತಮ್ಮ ತಮ್ಮ ಹೃದಯ ಪರೀಕ್ಷಿಸಿಕೊಳ್ಳಲು ಆಸ್ಪತ್ರೆಯಲ್ಲಿ ನಿಂತವರ ಸಾಲು, ವಾಕಿಂಗ್‌ಗೆ ಬದಲಾದ ಸ್ನೇಹಿತನ ದಿನದ ನಾಲ್ಕು ಕಿ.ಮೀ ಜಾಗಿಂಗ್, ಕೊರೊನಾ ಅಬ್ಬರದಲ್ಲಿ ಮನೆಯೊಳಗೆ ನಾವು ಬಚ್ಚಿಟ್ಟುಕೊಂಡ ರೀತಿ, ಲಸಿಕೆಗಾಗಿ ಬೆಳೆದು ನಿಲ್ಲುತ್ತಿದ್ದ ಸರದಿ, ಗೆಳೆಯರ, ಆತ್ಮೀಯರ ಅಕಾಲಮೃತ್ಯುವಿನಿಂದ ಜೋರಾಗುವ ಎದೆಬಡಿತ... ಇಲ್ಲೆಲ್ಲಾ ನಮಗೆ ಕಾಣಸಿಗುವುದು ಸಾವಿನ ಭಯ.

ತೀರಾ ಹತ್ತಿರದವರ ಹಠಾತ್‌ ಸಾವು ನಮ್ಮನ್ನು ಕಂಗೆಡಿಸುತ್ತದೆ. ನಾಳೆಯೇ ನನ್ನ ಸರದಿ ಇರಬಹುದಾ ಎಂಬ ಆತಂಕ ತಂದೊಡ್ಡುತ್ತದೆ. ಯಾಕೆಂದರೆ ಸಾವು ಎಂಬುದು ಮತ್ತೆಂದೂ ನಾವು ವಾಪಸು ಬರಲಾಗದ ಸ್ಥಿತಿ. ಅದು ಆತ್ಮದ ಸಾವಲ್ಲ, ಬರೀ ದೇಹದ ನಾಶ. ಆತ್ಮ ಮತ್ತೆಲ್ಲೋ ಅವತರಿಸುತ್ತದೆ ಎಂಬ ನಂಬಿಕೆಯ ವಿಚಾರ ಏನೇ ಇದ್ದರೂ ಅದನ್ನು ಕಂಡವರ‍್ಯಾರು? ಸಾವು ಮತ್ತು ಅದರಾಚೆಯ ಬಗ್ಗೆ ಯಾರಿಗೆ ತಾನೆ ಗೊತ್ತು?

ಅದಕ್ಕಾಗಿಯೇ ಸಾವು ಅಂದರೆ ನಮಗೆ ಇನ್ನಿಲ್ಲದ ಭಯ. ಹಾಗಂತ ನಾವೇನು ನಿತ್ಯ ಸಾವಿನ ಭಯದಲ್ಲೇ ಇರುತ್ತೇವೆ ಎಂದಲ್ಲ. ಆತ್ಮೀಯರ ಅಕಾಲಮೃತ್ಯು ಒಂದೆರಡು ವಾರ ಕಾಡಬಹುದು, ಬಳಿಕ ಸಹಜ ಸ್ಥಿತಿಗೆ ಮರಳುತ್ತೇವೆ. ಅದೇ ಈ ಬದುಕಿನ ಸೌಂದರ್ಯ ಮತ್ತು ನಿಗೂಢತೆ.

‘ದಿನದಿನವೂ ಜನ ಸಾಯುವುದನ್ನು ನೋಡಿದರೂ ತಮಗೆ ಸಾವೇ ಇಲ್ಲ ಅನ್ನುವಂತೆ ಆಡುವವರನ್ನು ನೋಡುವುದಕ್ಕಿಂತ ದೊಡ್ಡ ಆಶ್ಚರ್ಯ ಏನಿದೆ?’ ಅನ್ನುತ್ತದೆ ಗೀತೆ. ‘ನಮಗೆ ನಮ್ಮ ಸಾವಿನ ಬಗ್ಗೆ ನಂಬಿಕೆಯೇ ಇಲ್ಲ, ಅದು ನಮ್ಮದಲ್ಲದ್ದು ಎನ್ನುವಂತೆ ನೋಡುತ್ತೇವೆ’ ಅನ್ನುತ್ತಾನೆ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್.

ಹಾಗಾದರೆ ಭಯ ಅನ್ನುವುದು ಇರಬೇಕಾ? ಅದರಲ್ಲೂ ಸಾವಿನ ಬಗ್ಗೆ? ಭಯ ಒಳ್ಳೆಯದೆ, ಆದರೆ ಅದಕ್ಕೊಂದು ಮಿತಿ ಬೇಕು. ಭಯ ಅನ್ನುವುದು ಜ್ಞಾನ. ತೀರಾ ವೇಗವಾಗಿ ಗಾಡಿ ಓಡಿಸಿದರೆ ಅಪಘಾತವಾಗಿ ನಾನು ಸತ್ತೇ ಹೋಗಬಹುದು ಅನ್ನುವ ಭಯ ಇದೆಯಲ್ಲ, ಅದು ಬೇಕು. ಭಯ ನಮ್ಮನ್ನು ಹತ್ತಾರು ಅವಘಡಗಳಿಂದ ಪಾರುಮಾಡುತ್ತದೆ. ಆದರೆ ಭಯದಲ್ಲೆ ಸತ್ತವರೂ ಇದ್ದಾರೆ. ಎಂದೋ ಬರುವ ಸಾವಿಗೆ ಹೆದರಿಕೊಂಡು ನಿತ್ಯ ನರಕ ಅನುಭವಿಸುವವರೂ ಇದ್ದಾರೆ. ಒಂದು ಸಣ್ಣ ಭಯವನ್ನು ಸಾಕಿಕೊಂಡು ನಮ್ಮ ಎಚ್ಚರದಲ್ಲಿ ನಾವಿರಬೇಕು.

ತೀರಾ ಕ್ಷಣ ಕ್ಷಣಕ್ಕೂ ಕಾಡುವ ಸಾವಿನ ಭಯವನ್ನು ವೈದ್ಯಕೀಯ ಭಾಷೆ ‘ತೆನಟೊಫೋಬಿಯಾ’ ಎಂದು ಕರೆಯುತ್ತದೆ. ಅತೀ ಭಯವೂ ಒಂದು ಕಾಯಿಲೆಯೆ! ಭಯ ಜೀವಪರವೂ ಹೌದು, ಜೀವ ವಿರೋಧಿಯೂ ಹೌದು. ಅದು ಚಾಕುವಿನಂತೆ. ಹೇಗೆ ಬಳಸುತ್ತೇವೆಯೊ ಹಾಗೆ!

ಸಾವು ಬಂದು ಎದುರಿಗೆ ನಿಂತಾಗ, ಕಳೆದ ಇಡೀ ಬದುಕು ಕಣ್ಣಮುಂದೆ ಬರುತ್ತದೆ. ಗಳಿಸಿಕೊಂಡ ಪ್ರೇಮ, ಕಾಡಿದ ದೌರ್ಬಲ್ಯ, ಬದುಕಿನ ಆತುರಗೇಡಿತನ, ಒಪ್ಪಿಕೊಳ್ಳಲಾಗದ ಬದಲಾವಣೆ, ಎಚ್ಚರಹೀನ ಕಾರ್ಯ, ವರ್ತಮಾನದಲ್ಲಿ ಬದುಕದೇ ಕಳೆದುಕೊಂಡ ಕ್ಷಣ, ಮಾಡಿದ ಒಳ್ಳೆಯ ಕಾರ್ಯ... ಹೀಗೆ ಹತ್ತೆಂಟು ವಿಚಾರಗಳು ನಮ್ಮನ್ನು ಬೀಳ್ಕೊಡಲು ನಿಂತಿರುತ್ತವೆ. ಸಾವೊಂದು ಅದ್ಭುತ ಪಾಠ. ಆದರೆ ನಾವ್ಯಾರೂ ಅದರಿಂದ ಕಲಿಯುವ ಗೋಜಿಗೆ ಹೋಗುವುದಿಲ್ಲ. ಆಸೆಬುರುಕ ಬದುಕು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.

ಅವಘಡಗಳ ಬಗ್ಗೆ ಎಚ್ಚರಿಕೆ, ಆರೋಗ್ಯದ ಬಗ್ಗೆ ಕಾಳಜಿ, ಸಕಾರಾತ್ಮಕ ಚಿಂತನೆ, ಆತಂಕಗಳ ಕುರಿತು ಚರ್ಚೆ, ಸಾಮಾಜಿಕವಾಗಿ ಪರಸ್ಪರ ಬೆರೆಯುವಿಕೆ, ಎಲ್ಲವನ್ನೂ ಇದ್ದಂತೆಯೇ ಸ್ವೀಕರಿಸುವ ಮನಃಸ್ಥಿತಿ, ಆರೋಗ್ಯಕರ ಜೀವನಶೈಲಿ ಇತ್ಯಾದಿಗಳು ಸಾವನ್ನು ಸಹಜವಾಗಿ ಸ್ವೀಕರಿಸುವಂತೆ ಮಾಡಲು ನೆರವಾಗುತ್ತವೆ.

ಸಾವು ಯಾರನ್ನು ತಾನೇ ಬಿಟ್ಟಿದೆ? ಸಾವನ್ನು ಗೆದ್ದವರಾದರೂ ಎಲ್ಲಿದ್ದಾರೆ? ಕಿಸಾಗೌತಮಿಯ ಕಥೆ ನಮಗೆಲ್ಲ ಗೊತ್ತೇ ಇದೆ. ಸತ್ತ ತನ್ನ ಮಗನನ್ನು ಉಳಿಸಿಕೊಡಿ ಎಂದು ಬುದ್ಧನಲ್ಲಿಗೆ ಬರುವ ಕಿಸಾಗೌತಮಿಗೆ ಬುದ್ಧ ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಳುತ್ತಾನೆ. ಊರು ಸುತ್ತಿ ಬಂದರೂ ಸಾವಿಲ್ಲದ ಮನೆ ಒಂದೂ ಸಿಗುವುದಿಲ್ಲ. ಸಾವು ಜನನದಷ್ಟೇ ಸತ್ಯ. ಅನಿವಾರ್ಯ ಕೂಡ. ಆ ಮೂಲಕ ಬದುಕಿನ ದರ್ಶನ ಮಾಡಿಸುತ್ತಾನೆ ಬುದ್ಧ. ಹುಟ್ಟಿದವರಿಗೆಲ್ಲಾ ಸಾವಿದೆ, ಅದನ್ನು ತಡೆಯುವ ಸಾಸಿವೆ ಮಾತ್ರ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT