ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅನರ್ಹರಿಗೆ ಒರತೆ, ಅರ್ಹರಿಗೆ ಕೊರತೆ!

ನಕಲಿ ಫಲಾನುಭವಿಗಳ ಹಾವಳಿಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ ಮಾತ್ರವಲ್ಲ, ಬಡವರಿಗೆ ನೆರವಾಗಬೇಕೆನ್ನುವ ಘನವಾದ ಉದ್ದೇಶಕ್ಕೆ ಹಿನ್ನಡೆಯಾಗುತ್ತದೆ
Published 22 ಫೆಬ್ರುವರಿ 2024, 19:53 IST
Last Updated 22 ಫೆಬ್ರುವರಿ 2024, 19:53 IST
ಅಕ್ಷರ ಗಾತ್ರ

ಬಾಗಲಕೋಟೆ ಜಿಲ್ಲೆಯ ಬೆಳಗಲಿ ಗ್ರಾಮದ ಪೀರ್ ಸಾಬ್‌ಗೆ ಐವರು ಬುದ್ಧಿಮಾಂದ್ಯ ಮಕ್ಕಳಿದ್ದಾರೆ. ಅವರ ಪೋಷಣೆಗಾಗಿ ಪೀರ್ ಸಾಬ್, ಸರ್ಕಾರದಿಂದ ಯಾವ ಸಹಾಯವನ್ನೂ ಪಡೆಯುವುದಿಲ್ಲ. ಮಕ್ಕಳಿಗೆ ಸಹಾಯಧನ ಪಡೆಯಲು ಹಿತೈಷಿಗಳು ಎಷ್ಟೇ ಒತ್ತಾಯ ಮಾಡಿದರೂ ಅವರು ಅರ್ಜಿ ಸಲ್ಲಿಸಿಲ್ಲ. ‘ಸರ್ಕಾರಿ ಸಹಾಯ ಬೇಡ ಎಂಬ ಗಟ್ಟಿ ನಿಲುವು ಯಾಕೆ ನಿಮಗೆ?’ ಎಂದು ಈಚೆಗೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕೇಳಿದೆ. ಅವರು ಕೊಟ್ಟ ಉತ್ತರವು ಲೋಕದ ಕಣ್ಣು ತೆರೆಸುವಂತೆ ಇತ್ತು. ‘ನನಗೆ ಸ್ವಲ್ಪ ಭೂಮಿ ಇದೆ. ಕಬ್ಬು ಬೆಳೆಯುತ್ತೇನೆ. ಎಮ್ಮೆ, ಆಕಳು, ಕುರಿ, ಕೋಳಿ ಸಾಕಿರುವೆ. ಮಕ್ಕಳು ನನ್ನೊಂದಿಗೆ ಅಲ್ಪಸ್ವಲ್ಪ ಕೆಲಸ ಮಾಡುತ್ತಾರೆ. ಹಜ್ ಯಾತ್ರೆಗೆ ಹೋಗಿ ಬಂದಿದ್ದೇನೆ. ಹಜ್ ಯಾತ್ರೆ ಮಾಡಿದವರು ಪರರ ದುಡ್ಡಿಗೆ ಆಸೆಪಡಬಾರದು. ನನಗೆ ಹರಾಮಿ ದುಡ್ಡು ಬೇಡ’ ಎಂದು ಹೇಳಿದರು.

ಸರ್ಕಾರದ ಸೌಲಭ್ಯಗಳನ್ನು ಗಿಟ್ಟಿಸಲುಹವಣಿಸುತ್ತಿರುವವರ ನಡುವೆ ಪೀರ್ ಸಾಬ್ ಒಂದು ಬೆಳ್ಳಿ ಗೆರೆಯ ಹಾಗೆ ಕಾಣುತ್ತಾರೆ.

‘ಬಡವರಿಗಾಗಿ ಜಾರಿಯಲ್ಲಿರುವ ಬಗರ್‌ಹುಕುಂ ಯೋಜನೆಯನ್ನು ಬಲಾಢ್ಯರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. 18 ವರ್ಷ ವಯಸ್ಸಾಗದವರೂ18 ವರ್ಷ ಸಾಗುವಳಿ ಮಾಡಿರುವುದಾಗಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ಹೇಳಿರುವುದನ್ನು ಓದಿದಾಗ (ಪ್ರ.ವಾ., ಫೆ. 20) ಪೀರ್ ಸಾಬ್ ಕಣ್ಣ ಮುಂದೆ ಬಂದರು.

ಸರ್ಕಾರದ ಐದು ಗ್ಯಾರಂಟಿಗಳು ಸೇರಿದಂತೆ ವೃದ್ಧಾಪ್ಯ ವೇತನ, ಪರಿಶಿಷ್ಟ ಜಾತಿ, ಪಂಗಡದವರಿಗೆ ನೀಡುವ ಸೌಲಭ್ಯ, ಬಡ ಮಹಿಳೆಯರಿಗೆ ಕೊಡುವ ವಿಶೇಷ ನೆರವು, ಅಂಗವಿಕಲರಿಗೆ ಕೊಡುವ ಸಹಾಯಧನದಂತಹ ಸೌಲಭ್ಯಗಳನ್ನು ನಕಲಿ ದಾಖಲೆ ಸೃಷ್ಟಿಸಿ ಪಡೆದುಕೊಳ್ಳುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡುವ ಏಜೆಂಟರು ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಂಡಿದ್ದಾರೆ. ನಕಲಿ ಫಲಾನುಭವಿಗಳ ಹಾವಳಿಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ ಮಾತ್ರವಲ್ಲ, ಬಡವರಿಗೆ ನೆರವಾಗಬೇಕೆನ್ನುವ ಘನವಾದ ಉದ್ದೇಶಕ್ಕೆ ಹಿನ್ನಡೆಯಾಗುತ್ತದೆ.

‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ ನೀಡುವ ಕಾರ್ಮಿಕರ ಕಾರ್ಡುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಅತಿ ಹೆಚ್ಚು ಜನ ಪಡೆದಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 3 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಿದಾಗ, ಇದರಲ್ಲಿ 2.70 ಲಕ್ಷ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ  ಅಧಿವೇಶನದಲ್ಲಿ (ಪ್ರ.ವಾ., ಫೆ. 14) ಹೇಳಿದ್ದಾರೆ. ನಕಲಿ ಫಲಾನುಭವಿಗಳ ಪ್ರಮಾಣ ಶೇ 90ರಷ್ಟಿದೆ ಎಂಬುದು ನಿಜಕ್ಕೂ ಗಂಭೀರವಾದ ಸಮಸ್ಯೆ.

ಯೋಜನೆಗಳನ್ನು ಜಾರಿಗೆ ತರುವ ಸರ್ಕಾರಿ ಸಿಬ್ಬಂದಿ ಕೂಡ ನಕಲಿ ಫಲಾನುಭವಿಗಳಾಗಿರುವುದು ಬೇಲಿಯೇ ಎದ್ದು ಹೊಲ ಮೇಯುತ್ತಿರುವಂತೆ ಕಾಣುತ್ತಿದೆ.

ನಿವೃತ್ತ ಮುಖ್ಯ ಅಧ್ಯಾಪಕರೊಬ್ಬರು ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದರು. ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಮಗೆ ₹ 3 ಲಕ್ಷ ಕೊಡಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದರು. ‘ತುಂಬಾ ಸ್ಥಿತಿವಂತರು. ಊರ ತುಂಬಾ ಬಡ್ಡಿಗೆ ಹಣ ಹೂಡಿದ್ದೀರಿ. ಪಿಂಚಣಿ ಬರುತ್ತಿದೆ. ಮುಖ್ಯಮಂತ್ರಿ
ಯವರ ಪರಿಹಾರ ನಿಧಿ ಪಡೆಯುವುದು ಬೇಡ’ ಎಂದು ಶಾಸಕರು ಸ್ವಲ್ಪ ಖಾರವಾಗಿ ಹೇಳಿ ಕಳಿಸಿದ್ದರು. ಪಟ್ಟು ಬಿಡದ ಅವರು ತಮಗೆ ಆಪ್ತರಾಗಿರುವ ವಿಧಾನಪರಿಷತ್‌ ಸದಸ್ಯರೊಬ್ಬರನ್ನು ಹಿಡಿದು ಪರಿಹಾರ ನಿಧಿ ಪಡೆದು
ಕೊಂಡಿದ್ದಾರೆ. ಇದು ಸಾಧನೆ ಎಂದು ಅವರು ಹೇಳಿಕೊಳ್ಳುವುದನ್ನು ಕೇಳಿದರೆ ಬೇಸರವಾಗುತ್ತದೆ.

ಉಳ್ಳವರೇ ಎಲ್ಲ ಸವಲತ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ,  ಬಡವರಿಗೆ ಸೂಕ್ತ ದಾಖಲೆಗಳನ್ನು ಒದಗಿಸುವುದು ಆಗುವುದಿಲ್ಲ ಎಂದು ಹೇಳುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿಯ ದತ್ತಾಂಶ. ಬಡವರಿಗೆ ಅರ್ಜಿ ಸಲ್ಲಿಸುವು ದಕ್ಕೆ ಬೇಕಾಗುವ ಹಣ, ಮಾಹಿತಿಯ ಕೊರತೆ, ಕೀಳರಿಮೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಈ ವರದಿ ವಿಶ್ಲೇಷಣೆ ಮಾಡಿದೆ.

ಅನರ್ಹರಿಗೆ ಶಿಕ್ಷೆಯಾಗುವುದಿಲ್ಲ. ಆವರೆಗೆ ಪಡೆದ ಸೌಲಭ್ಯದ ಮೊತ್ತವನ್ನು ಅವರಿಂದ ವಾಪಸ್ ಪಡೆಯುವುದಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿ ಅನರ್ಹರಿಗೆ ಸೌಲಭ್ಯ ದೊರಕಿಸಿಕೊಟ್ಟಿರುತ್ತಾರೆ. ಹೀಗಾಗಿ, ಯಾವುದೇ ಕ್ರಮ ಜರುಗುವುದಿಲ್ಲ. ಇದರಿಂದಾಗಿ, ಅಕ್ರಮ ಬಳಕೆ ವಿಪರೀತವಾಗಿ ಬೆಳೆದಿದೆ ಎಂದು ತಜ್ಞರು ಹೇಳುತ್ತಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿಕೊಂಡು ಅನರ್ಹರಿಗೆ ಸೌಲಭ್ಯ ದೊರಕಿಸಿಕೊಡುವುದು ಸಾಂಸ್ಥಿಕ ಸ್ವರೂಪದ ಕಳ್ಳತನವೇ ಆಗಿದೆ ಎಂದು ವಕೀಲ ರವೀಂದ್ರ ಹಳಿಂಗಳಿ ಅವರು ‘ಸಂಪತ್ತಿನ ಸ್ವರೂಪ’ ಗ್ರಂಥದಲ್ಲಿ ಹೇಳಿರುವ ಸಂಗತಿ ಗಮನಾರ್ಹವಾಗಿದೆ. ನಕಲಿ ಸೌಲಭ್ಯ ಪಡೆಯುವ ಕೃತ್ಯದಲ್ಲಿ
ಶಾಮೀಲಾದವರಿಗೆಲ್ಲ ಶಿಕ್ಷೆ ಆಗಬೇಕು.

ವಿಜ್ಞಾನ, ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಆಧಾರ್‌ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಇನ್ನು ಕೆಲವು ದಾಖಲೆಗಳ ಮೂಲಕ ನಕಲಿ ಅರ್ಜಿಗಳನ್ನು ಸುಲಭವಾಗಿ ಗುರುತಿಸಿ ತಿರಸ್ಕರಿಸಬಹುದು.
ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ನಕಲಿ ಹಾವಳಿ ತಡೆಯಬಹುದು. ಇದೊಂದು ಜಾಗೃತಿ ಅಭಿಯಾನವಾಗಿ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT