ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪದವಿ ಆಯ್ಕೆ– ಪೋಷಕರದೇ ಪಾರುಪತ್ಯ!

Published 9 ಅಕ್ಟೋಬರ್ 2023, 22:57 IST
Last Updated 9 ಅಕ್ಟೋಬರ್ 2023, 22:57 IST
ಅಕ್ಷರ ಗಾತ್ರ

ಎಂಜಿನಿಯರಿಂಗ್ ಪದವಿಗೆ ಸೇರಿಕೊಂಡಿರುವ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ‘ನಿಮ್ಮೆದುರು ಹಲವು ಆಯ್ಕೆಗಳಿದ್ದರೂ ನೀವೇಕೆ ಎಂಜಿನಿಯರಿಂಗ್ ಕೋರ್ಸು, ಅದರಲ್ಲೂ ಸಿವಿಲ್ ಎಂಜಿನಿಯರಿಂಗ್ ವಿಭಾಗವನ್ನೇ ಆಯ್ಕೆ ಮಾಡಿಕೊಂಡ್ರಿ’ ಎಂದು ವಿಚಾರಿಸಿದೆ. ಮೊದಲ ಸೆಮಿಸ್ಟರ್ ವಿದ್ಯಾರ್ಥಿ
ಗಳಿಗೆ ಬೋಧಿಸುವ ಅವಕಾಶ ಸಿಕ್ಕಾಗಲೆಲ್ಲ ಈ ಪ್ರಶ್ನೆ ಕೇಳಿ, ಒಟ್ಟಾರೆ ಟ್ರೆಂಡ್ ಏನಿರಬಹುದೆಂದು ತಿಳಿದು
ಕೊಳ್ಳುವುದು ರೂಢಿಗತ ಅಭ್ಯಾಸವೇ ಆಗಿದೆ.

58 ಮಂದಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿದ್ದ ತರಗತಿಯಲ್ಲಿ, ಏಳೆಂಟು ವಿದ್ಯಾರ್ಥಿಗಳು ಮಾತ್ರ ‘ನಮಗೆ ಸಿವಿಲ್ ಎಂಜಿನಿಯರಿಂಗ್ ಓದಲು ಆಸಕ್ತಿ ಇದ್ದ ಕಾರಣಕ್ಕೆ ಈ ಕೋರ್ಸಿಗೆ ಪ್ರವೇಶ ಪಡೆದಿದ್ದೇವೆ’ ಎಂದರು. ಬಹುತೇಕ ವಿದ್ಯಾರ್ಥಿಗಳು ತಮಗೆ ಎಂಜಿನಿಯರಿಂಗ್ ಓದುವ ಆಸಕ್ತಿಯೇ ಇರದಿದ್ದರೂ, ಪೋಷಕರ ಒತ್ತಾಯಕ್ಕೆ ಮಣಿದು ಸೇರಿಕೊಂಡಿರುವುದಾಗಿ ಬೇಸರ
ವ್ಯಕ್ತಪಡಿಸಿದರು. ಕೆಲವರು ಸಿವಿಲ್ ಎಂಜಿನಿಯರಿಂಗ್ ಓದಿದರೆ ಸರ್ಕಾರಿ ಕೆಲಸ ಸಿಗುವುದೆಂಬ ಕಾರಣಕ್ಕೆ ಇದನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು. ಎಂಬಿಬಿಎಸ್ ಸೀಟು ಸಿಗದ ಕಾರಣಕ್ಕೂ ಕೆಲವರು ಎಂಜಿನಿಯರಿಂಗ್‍ನತ್ತ ಮುಖ ಮಾಡಿದ್ದರು.

ತಮ್ಮ ಮಕ್ಕಳು ಏನು ಓದಬೇಕೆಂಬುದನ್ನು ನಿರ್ಧರಿಸುವಾಗ, ಅವರಿಗೆ ಯಾವುದರಲ್ಲಿ ಆಸಕ್ತಿ ಇದೆ ಎನ್ನುವುದನ್ನು ಪರಿಗಣಿಸಬೇಕೆಂದು ಬಹುತೇಕ ಪೋಷಕರಿಗೆ ಇಂದಿಗೂ ಅನ್ನಿಸುತ್ತಿಲ್ಲ ಎಂಬುದು ಪ್ರತಿ ಬಾರಿ ಈ ಪ್ರಶ್ನೆ ಕೇಳಿದಾಗ ಎದುರಾಗುವ ಪ್ರತಿಕ್ರಿಯೆಯಿಂದ ಮನದಟ್ಟಾಗುತ್ತದೆ. ‘ಇಷ್ಟ ಇಲ್ಲದಿದ್ದರೂ ಬೇರೆ ದಾರಿ ಕಾಣದೆ ಸೇರಿದ್ದೇವೆ’ ಎನ್ನುವವರ ಸಂಖ್ಯೆ ಹಿಂದಿನ ಬ್ಯಾಚುಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿತ್ತು. ಮುಂದೆ ಏನು ಓದಬೇಕು ಎಂದು ನಿರ್ಧರಿಸುವಲ್ಲಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವುದಕ್ಕೂ, ‘ಮಕ್ಕಳಿಗೆ ಏನ್ ಗೊತ್ತಾಗುತ್ತೆ’ ಅಂತ ಅವರ ಒಲವು ನಿಲುವುಗಳನ್ನು ಗಣನೆಗೆ ತೆಗೆದುಕೊಳ್ಳದೆ, ಇದನ್ನೇ ಓದಬೇಕೆಂದು ದೂಡುವುದಕ್ಕೂ ಅಜಗಜಾಂತರ ಇದೆ. ಈ ವಾಸ್ತವವನ್ನು ಹಲವು ಪೋಷಕರು ಇಂದಿಗೂ ಮನಗಂಡಂತೆ ತೋರುತ್ತಿಲ್ಲ.

ಮೊದಮೊದಲಿಗೆ ಆಸಕ್ತಿ ಇಲ್ಲವೆಂದು ಗೊಣಗಿದರೂ, ಆನಂತರ ಒಗ್ಗಿಕೊಂಡು ಓದು ಮುಂದುವರಿಸುತ್ತಾರೆ ಎನ್ನುವ ಆಶಾಭಾವ ಪೋಷಕರದ್ದು. ಆದರೆ, ಕೆಲ ವಿದ್ಯಾರ್ಥಿಗಳ ಪಾಲಿಗೆ ಈ ಆಶಾಭಾವ ತೀರಾ ಸಮಸ್ಯಾತ್ಮಕ ಆಗುವುದೂ ಇದೆ. ಉದಾಹರಣೆಗೆ, ಗಣಿತ ವಿಷಯವನ್ನು ಕಬ್ಬಿಣದ ಕಡಲೆ ಎಂದೇ ಭಾವಿಸಿರುವ ವಿದ್ಯಾರ್ಥಿಗಳನ್ನು, ಅವರು ಬೇಡವೆಂದರೂ ಕೇಳದೆ ಎಂಜಿನಿಯರಿಂಗ್‍ಗೆ ಸೇರಿಸುವುದು. ಗಣಿತದಲ್ಲಿನ ಸಂಗತಿಗಳನ್ನು ಅರ್ಥೈಸಿಕೊಳ್ಳಲು ಪರದಾಡುವ ವಿದ್ಯಾರ್ಥಿಗಳ ಪಾಲಿಗೆ ಎಂಜಿನಿಯರಿಂಗ್ ಪದವಿ ಓದು ದೊಡ್ಡ ಸವಾಲೇ ಸರಿ.

ಕೆಲ ವಿದ್ಯಾರ್ಥಿಗಳು ಇತ್ತ ಎಂಜಿನಿಯರಿಂಗ್ ಪದವಿ ಪೂರೈಸಲೂ ಆಗದೆ, ಅತ್ತ ಮಧ್ಯದಲ್ಲಿ ಬಿಟ್ಟುಹೋಗಲೂ ಆಗದೆ ಅತಂತ್ರ ಪರಿಸ್ಥಿತಿಯಲ್ಲಿ 8ರಿಂದ 10 ವರ್ಷ ಕಳೆಯುತ್ತಾರೆ. ಆನಂತರ ವಿಶ್ವ
ವಿದ್ಯಾಲಯದ ನಿಯಮದ ಪ್ರಕಾರ ಪದವಿ ಪಡೆಯಲು ಅನರ್ಹ ಎನಿಸಿಕೊಂಡು, ಓದಿಗೆ ಪೂರ್ಣವಿರಾಮ ಇಡುತ್ತಾರೆ. ಇದರ ಬದಲಿಗೆ ಗಣಿತ ವಿಷಯ ಓದುವ ಅಗತ್ಯವಿರದ ಇತರ ಪದವಿ ಕೋರ್ಸುಗಳಿಗೆ ಸೇರಿದ್ದರೆ, ಅವರ ಓದು ಪದವಿ ಶಿಕ್ಷಣದ ಹಂತ ದಾಟಿ ಮುಂದಕ್ಕೆ ಹೋಗುವ ಸಾಧ್ಯತೆ ಇರುತ್ತದೆ.

ನಾನಾ ಕಾರಣಗಳಿಗಾಗಿ ತಮಗೆ ಆಸಕ್ತಿ ಇರದ ಕೋರ್ಸಿಗೆ ಪ್ರವೇಶ ಪಡೆಯುವ ಕೆಲವರು, ಇದರಲ್ಲೇ ಮುಂದುವರಿಯಲು ತಮ್ಮಿಂದ ಸಾಧ್ಯವೇ ಇಲ್ಲ ಎಂಬುದನ್ನು ಪೋಷಕರಿಗೂ ಮನದಟ್ಟು ಮಾಡಿಸಿ, ಆ ಕೋರ್ಸು ತೊರೆದು ಇತರ ಆಸಕ್ತಿಯ ಕೋರ್ಸಿಗೆ ಪ್ರವೇಶ ಪಡೆಯುತ್ತಾರೆ. ಆದರೆ, ಇದು ಸಾಧ್ಯವಾಗುವುದು ಬೆರಳೆಣಿಕೆಯ ವಿದ್ಯಾರ್ಥಿಗಳಿಗೆ ಮಾತ್ರ.

ಹತ್ತನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿರುವ ಸ್ನೇಹಿತರೊಬ್ಬರ ಶಿಕ್ಷಣ ಪಿಯುಸಿಗೆ ಕೊನೆಗೊಂಡಿದೆ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಅವರ ಪಾಲಿಗೆ ಇಂಗ್ಲಿಷ್ ಏನೊಂದೂ ಅರ್ಥವಾಗದ ವಿಷಯವಾಗಿತ್ತು. ಹೀಗಿದ್ದರೂ ಎಸ್‍ಎಸ್‍ಎಲ್‍ಸಿಯಲ್ಲಿ ಹೇಗೋ ಜಸ್ಟ್ ಪಾಸ್ ಆಗಿದ್ದರು. ಜೊತೆಗೆ ಓದಿದವರೆಲ್ಲ ಸೇರಿಕೊಂಡಿದ್ದಾರೆ ಎಂಬ ಕಾರಣಕ್ಕೆ ಪಿಯುಸಿಯಲ್ಲಿ ಅವರೂ ಸೈನ್ಸ್ ಆರಿಸಿಕೊಂಡಿದ್ದರು. ಪಿಯುಸಿಯಲ್ಲಿ ಸೈನ್ಸ್ ಆರಿಸಿಕೊಂಡವರಿಗೆ ಬೋಧನಾ ಮಾಧ್ಯಮ ಇಂಗ್ಲಿಷ್ ಮಾತ್ರವೇ ಇದ್ದುದರಿಂದ ಅವರಿಗೆ ಪಿಯುಸಿ ಪಾಸ್ ಮಾಡಲೇ ಆಗಲಿಲ್ಲ. ಅವರ ಓದು ಅಲ್ಲಿಗೇ ನಿಂತುಬಿಟ್ಟಿತು.

‘ಪಿಯುಸಿಯಲ್ಲಿ ಆರ್ಟ್ಸ್‌ ಅಥವಾ ಕಾಮರ್ಸ್ ಆರಿಸಿ
ಕೊಂಡಿದ್ದರೆ ಕನ್ನಡದಲ್ಲಿ ಕಲಿತು ಪರೀಕ್ಷೆ ಬರೆಯ
ಬಹುದಿತ್ತು ಎಂದು ನನಗೆ ಅಂದು ಯಾರಾದರೂ ಮಾರ್ಗದರ್ಶನ ನೀಡಿದ್ದರೆ ಅನಾಯಾಸವಾಗಿ ಪದವಿ ಪೂರೈಸುತ್ತಿದ್ದೆ’ ಎಂದು 45ರ ವಯೋಮಾನದ ಅವರು ಈಗಲೂ ನೊಂದುಕೊಳ್ಳುತ್ತಾರೆ.

ಏನು ಓದಬೇಕು? ಇಂತಹದ್ದನ್ನು ಓದಿದರೆ ಮುಂದೆ ಏನೆಲ್ಲಾ ಮಾಡಬಹುದು? ಈ ಕೋರ್ಸು ಎಲ್ಲಿದೆ?... ಹೀಗೆ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ, ಸಲಹೆ-ಸೂಚನೆಗಳೆಲ್ಲವೂ ಇಂದು ಬೆರಳತುದಿಯಲ್ಲಿವೆ.
ಹಿಂದಿನವರ ಹಾಗೆ ‘ನನಗೆ ಸೂಕ್ತ ಮಾರ್ಗದರ್ಶನ ನೀಡುವವರು ಅಂದು ಯಾರೂ ಇರಲಿಲ್ಲ’ ಎಂದು ಅಲವತ್ತುಕೊಳ್ಳುವ ಅಗತ್ಯವೇ ಇಲ್ಲ. ಆದರೆ, ಇಲ್ಲಿ ಇಂದಿಗೂ ಸಮಸ್ಯೆಯಾಗಿಯೇ ಉಳಿದಿರುವುದು ಪೋಷಕರ ಪಾಲಿನ ಪ್ರತಿಷ್ಠೆ ಮತ್ತು ನಮ್ಮ ಆಯ್ಕೆ ತಪ್ಪಾಗಿರಲು ಸಾಧ್ಯವೇ ಇಲ್ಲ ಎನ್ನುವ ಅತಿಯಾದ ವಿಶ್ವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT