ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ ‌| ಸಂಸ್ಕೃತ: ಜ್ಞಾನದ್ರೋಹ ಸಲ್ಲದು

ಸಂಸ್ಕೃತ ತರಗತಿಗಳಲ್ಲಿ ಅದರ ಬೋಧನೆಯು ಸಂಸ್ಕೃತದಲ್ಲಿಯೇ ಆದಲ್ಲಿ ಮಕ್ಕಳಿಗೆ ಆ ಭಾಷೆಯ ಕಲಿಕೆ ಸುಲಲಿತ ಎನ್ನಿಸುತ್ತದೆ
Published 19 ಆಗಸ್ಟ್ 2024, 1:07 IST
Last Updated 19 ಆಗಸ್ಟ್ 2024, 1:07 IST
ಅಕ್ಷರ ಗಾತ್ರ

ಸಂಸ್ಕೃತ ಭಾಷೆಯಲ್ಲಿ ಪರಿಪೂರ್ಣತೆಯನ್ನು ಗ್ರಹಿಸಿದ ಪಾಶ್ಚಿಮಾತ್ಯ ವಿದ್ವಾಂಸರು, ವಿಜ್ಞಾನಿಗಳು ಅದರ ಗಂಭೀರ ಅಧ್ಯಯನಕ್ಕೆ ಮುಂದಾದರು. 17 ಮತ್ತು 18ನೇ ಶತಮಾನಗಳಲ್ಲಿ ವೈದಿಕ ಸಾಹಿತ್ಯ ಸೇರಿದಂತೆ ಹಲವಾರು ಸಂಸ್ಕೃತ ಗ್ರಂಥಗಳು ವಿವಿಧ ಭಾಷೆಗಳಿಗೆ ತರ್ಜುಮೆಗೊಂಡವು. ಆಲ್ಬರ್ಟ್‌ ಐನ್‌ಸ್ಟೀನ್‌ ಮತ್ತು ಕಾರ್ಲ್‌ ಸಗಾನ್ ಅವರು ವೇದಾಂತ, ಗಣಿತ ಹಾಗೂ ವಿಜ್ಞಾನದಿಂದ ಸಮೃದ್ಧವಾದ ಸಂಸ್ಕೃತ ಕುರಿತ ತಮ್ಮ ಶ್ರದ್ಧೆಯನ್ನು ಹಂಚಿಕೊಂಡರು. ಕಾರ್ಲ್‌ ಸಗಾನ್‌, ವೇದಗಳು ಬ್ರಹ್ಮಾಂಡದ ಬಗೆಗಿನ ಒಳನೋಟಗಳನ್ನು ತೆರೆದಿಡುತ್ತವೆ ಎಂದರು. ಸಂಸ್ಕೃತದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಬೇರುಗಳಿವೆ.

ಧ್ವನಿ ಸಂಬಂಧಿತ ಹಾಗೂ ಕಟ್ಟುನಿಟ್ಟಾದ ವ್ಯಾಕರಣವುಳ್ಳ ಭಾಷೆಯಾದ್ದರಿಂದ ಸಂಸ್ಕೃತ ತ್ರಾಸವೆನ್ನಿಸಬಹುದು. ಆದರೆ ಸಂಯಮದಿಂದ ಪದ ವಿಭಜನೆ, ಸಂದರ್ಭದ ಔಚಿತ್ಯವನ್ನು ಗ್ರಹಿಸಿದರೆ ಕಲಿಕೆ ಸರಾಗ ಎನ್ನಿಸುವುದು. ಕೃತಕ ಬುದ್ಧಿಮತ್ತೆಗೂ ಸಂಸ್ಕೃತ ಸೋಪಾನವಾಗಬಲ್ಲದು. ಯಾವುದೇ ಧರ್ಮ, ಜನಾಂಗ, ಬುಡಕಟ್ಟು, ಪಂಗಡ, ಜಾತಿ ಮೀರಿ ಅದು ಪ್ರತೀ ಭಾರತೀಯನ ಭಾಷೆ. ನಮಗೇ ಅರಿವಿರದಂತೆ ನಾವು ದೈನಂದಿನ ಬದುಕಿನಲ್ಲಿ ಸಂಸ್ಕೃತ ಪದಗಳನ್ನು, ನುಡಿಗಟ್ಟುಗಳನ್ನು ಬಳಸುತ್ತಲೇ ಇರುತ್ತೇವೆ.

ಸಂಸ್ಕೃತ ಅನುರಾಗಿಗಳಾದ ವಿದೇಶಿಯರ ಸಾಧನೆಗಳನ್ನು ಮೆಲುಕು ಹಾಕೋಣ. ಬ್ರಿಟನ್ನಿನ ಭಾಷಾವಿಜ್ಞಾನಿ ವಿಲಿಯಂ ಜೋನ್ಸ್‌ 1784ರಲ್ಲಿ ಬಂಗಾಳದಲ್ಲಿ ಏಷ್ಯಾಟಿಕ್‌ ಸೊಸೈಟಿ ಸ್ಥಾಪಿಸಿದರು. ಸಂಸ್ಕೃತಕ್ಕೂ ಯುರೋಪಿಯನ್‌ ಭಾಷೆಗಳಿಗೂ ಇರುವ ಸಂಬಂಧವನ್ನು ಗುರುತಿಸಿದರು. ಬಂಗಾಳದ ಸಂಸ್ಕೃತ ಪಂಡಿತರ ಮಾರ್ಗದರ್ಶನದಲ್ಲಿ ಅವರು ಸಂಸ್ಕೃತವೂ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಗಾಢವಾಗಿ ಅಭ್ಯಸಿಸಿದರು. 1789ರಲ್ಲಿ ಅವರು ಕಾಳಿದಾಸನ ‘ಅಭಿಜ್ಞಾನ ಶಾಕುಂತಲಂ’ ನಾಟಕವನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ಇದು ಪಾಶ್ಚಾತ್ಯ ಭಾಷೆಗೆ ಭಾಷಾಂತರಗೊಂಡ ಭಾರತೀಯ ಭಾಷೆಯ ಮೊದಲ ಸಾಹಿತ್ಯ ಕೃತಿ. ಕೃತಿಯಲ್ಲಿನ ಉಪಮಾನ-ಉಪಮೇಯಗಳಲ್ಲಿನ ಭಾರತೀಯ ಪರಂಪರೆಯ ಸಿರಿತನವನ್ನು ಜಗತ್ತಿಗೇ ಸಾರಲು ಸಂತೋಷವಾಗುತ್ತದೆ ಎಂದು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಮುನ್ನ ಕೋಲ್ಕತ್ತದಲ್ಲಿ ನೆಲೆಸಿದ್ದ ಬ್ರಿಟನ್ನಿನ ಸಿ. ವಿಕಿನ್ಸ್‌ 1785ರಲ್ಲಿ ಭಗವದ್ಗೀತೆಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಅಂತೆಯೇ ಜೋನ್ಸ್‌ 1794ರಲ್ಲಿ ‘ಮನುಸ್ಮೃತಿ’ಯನ್ನೂ ಇಂಗ್ಲಿಷ್‌ಗೆ ತಂದರು. ಆರ್ತರ್‌ ವಿಲಿಯಂ ರೈಡರ್‌ ಕ್ಯಾಲಿಫೋರ್ನಿಯಾದ ಬರ್ಕ್‌ಲಿ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದ ಪ್ರಾಧ್ಯಾಪಕರಾಗಿದ್ದರು. ಪಂಚತಂತ್ರ, ಭಗವದ್ಗೀತೆ ಸೇರಿದಂತೆ ಹಲವು ಕೃತಿಗಳನ್ನು ಇಂಗ್ಲಿಷ್‌ಗೆ ತಂದ ಹೆಗ್ಗಳಿಕೆ ಅವರದು. ಇಸವಿ 1802. ನೆಪೊಲಿಯನ್‌ ಬ್ರಿಟನ್ನಿನೊಂದಿಗಿನ ದಶಕದ ಯುದ್ಧ ಕೊನೆಗೊಳಿಸಿದ ದಿನಗಳು. ವಿಲಿಯಂ ಹ್ಯಾಮಿಲ್ಟನ್‌ ಎಂಬ ಸಂಸ್ಕೃತ ವಿದ್ವಾಂಸನನ್ನು ದೇಶದಿಂದ ಹೊರಹೋಗಲು ಬಿಡದೆ ಸೆರೆಯಲ್ಲಿಡಲಾಯಿತು. ಸರಿ, ಹ್ಯಾಮಿಲ್ಟನ್‌ ತನ್ನ ಸಹಕೈದಿಗಳಿಗೆ ಸಂಸ್ಕೃತ ಹೇಳಿಕೊಡುತ್ತ ತನ್ನ ಸಮಯವನ್ನು ಸದುಪಯೋಗಪಡಿಸಿಕೊಂಡ. 1853ರಲ್ಲಿ ವಾರಾಣಸಿಯಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದ ರಾಲ್ಫ್‌ ಗ್ರಿಫೆತ್‌ ಮೊದಲ ಬಾರಿಗೆ ರಾಮಾಯಣವನ್ನು ಇಂಗ್ಲಿಷ್‌ಗೆ ತಂದರು.

ಶೂದ್ರಕ ಕವಿಯ ‘ಮೃಚ್ಛಕಟಿಕ’ ನಾಟಕವನ್ನು ಕ್ರಮವಾಗಿ 1826 ಮತ್ತು 1905ರಲ್ಲಿ ವಿಲ್ಸನ್‌ ಹಾಗೂ ರೈಡರ್‌ ಸಂಸ್ಕೃತದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿದರು. ವಿಶೇಷವೆಂದರೆ, 1905ರಲ್ಲಿ ಈ ಅದ್ಭುತ ಕಥಾವಸ್ತುವಿನ ನಾಟಕವನ್ನು ಬರ್ಕ್‌ಲಿ ವಿಶ್ವವಿದ್ಯಾಲಯದ ರಂಗಮಂದಿರದಲ್ಲಿ ಪ್ರದರ್ಶಿಸಲಾಯಿತು. 1889ರಲ್ಲಿ ಆಕ್ಸ್‌ಫರ್ಡ್‌ನ ಪ್ರಾಧ್ಯಾಪಕರಾಗಿದ್ದ ಸರ್ ಮೊನಿಯರ್‌ ವಿಲಿಯಮ್ಸ್‌, 1.80 ಲಕ್ಷ ಪದಗಳ ಸಂಸ್ಕೃತ-ಇಂಗ್ಲಿಷ್‌ ನಿಘಂಟು ರಚಿಸಿದ್ದು ಅಚ್ಚರಿಯ ಸಂಗತಿ. ಋಗ್ವೇದದ ಜಟಿಲ ಶ್ಲೋಕವೊಂದನ್ನು ಮೊನಿಯರ್‌ ವ್ಯಾಖ್ಯಾನಿಸಿದರು. ಸಂಸ್ಕೃತದ ಸುಭಾಷಿತಗಳು ಒಂದೊಂದೂ ಅಪರಂಜಿ, ತಿಳಿಕೊಳದಷ್ಟೇ ಪಾರದರ್ಶಕ. ಜರ್ಮನಿಯ ಮ್ಯಾಕ್ಸ್‌ ಮುಲ್ಲರ್‌ ಹೆಸರು ಕೇಳದವರಿಲ್ಲ. ಸಂಸ್ಕೃತ ಕಲಿತು ವೇದಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ ಸಾಧನೆ ದೊಡ್ಡದು.

ಋಗ್ವೇದದಲ್ಲಿರುವ ಮೊದಲ ಸಂಸ್ಕೃತ ರೂಪವು ಶಾಸನಗಳಲ್ಲಿ ಪತ್ತೆಯಾದದ್ದು ಭಾರತದಲ್ಲಿ ಅಲ್ಲ, ಉತ್ತರ ಸಿರಿಯಾದಲ್ಲಿ ಎನ್ನುವುದು ಮಹತ್ವದ ಸಂಗತಿ. ಪ್ರತಿವರ್ಷ ಶ್ರಾವಣದ ಹುಣ್ಣಿಮೆಯಂದು ‘ವಿಶ್ವ ಸಂಸ್ಕೃತ ದಿನ’ ಆಚರಿಸಲಾಗುತ್ತದೆ. ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತದ ಸೌಂದರ್ಯ ಮತ್ತು ಶ್ರೀಮಂತಿಕೆಯನ್ನು ಜನಮಾನಸದಲ್ಲಿ ಮತ್ತೆ ಮತ್ತೆ ಮನಗಾಣಿಸುವುದೇ ಇದರ ಉದ್ದೇಶ. 2019ರಲ್ಲಿ ಯುನೆಸ್ಕೊ ಈ ಸಡಗರವನ್ನು ಘೋಷಿಸಿತು.

ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ದೀಪಾವಳಿಯಂದು ‘ತಮಸೋ ಮಾ ಜ್ಯೋತಿರ್ಗಮಯಾ...’ ಮಂಗಳ ಶ್ಲೋಕ ಮೊಳಗುತ್ತದೆ. ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಡ್ಯೂಕ್‌, ಸ್ಟ್ಯಾನ್‌ಫರ್ಡ್, ಆಕ್ಸ್‌ಫರ್ಡ್, ಸಿಯಾಟಲ್‌ನಂತಹ ಕಡೆ ಸಂಸ್ಕೃತದ ಅಧ್ಯಯನಾಂಗಗಳಿವೆ. ಭಾರತದಲ್ಲಿ ಅಲ್ಲೊ ಇಲ್ಲೊ ವಿರಳವಾಗಿ ಒಂದೆರಡು ಸಂಸ್ಕೃತ ಸಂಭಾಷಣೆಗಳು ಕಿವಿಗೆ ಬಿದ್ದರೆ ಅದೇ ಹೆಚ್ಚು!

ಸಂಸ್ಕೃತ ತರಗತಿಗಳಲ್ಲಿ ಸಂಸ್ಕೃತದ ಬೋಧನೆಯು ಸಂಸ್ಕೃತದ ಮೂಲಕವಾಗಿಯೇ ಆದಲ್ಲಿ ಮಕ್ಕಳಿಗೆ ಸಂಸ್ಕೃತ ಸುಲಲಿತ ಎನ್ನಿಸುತ್ತದೆ. ಮಕ್ಕಳಿಗೆ ಯಾವುದೇ ಭಾಷೆ ಹೊಸದೂ ಅಲ್ಲ, ಕಠಿಣವೂ ಅಲ್ಲ. ಶೇಕಡಾವಾರು ಅಂಕ ಅಧಿಕಗೊಳ್ಳುವುದೆಂಬ ಕಾರಣಕ್ಕೆ ಸಂಸ್ಕೃತವನ್ನು ಅಭ್ಯಾಸ ಮಾಡಿದರೆ ಅದಕ್ಕಿಂತ ಜ್ಞಾನದ್ರೋಹ ಇನ್ನೊಂದಿಲ್ಲ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT