ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹಿಮಶಿಖರದ ಮೇಲೆ ಬಣ್ಣದ ಸೊಬಗು

ಧ್ರುವಪ್ರದೇಶದಲ್ಲಿ ಕಾಣಿಸಿಕೊಳ್ಳುವ ಬಣ್ಣದ ಓಕುಳಿ, ಸೂರ್ಯನ ಅಂತರಾಳವನ್ನು ತಿಳಿಯಲು ವಿಜ್ಞಾನಿಗಳಿಗೆ ಅಪೂರ್ವ ಅವಕಾಶವನ್ನು ಒದಗಿಸುತ್ತದೆ
ಬಿ.ಎಸ್‌.ಶೈಲಜಾ
Published 12 ಮೇ 2024, 20:08 IST
Last Updated 12 ಮೇ 2024, 20:08 IST
ಅಕ್ಷರ ಗಾತ್ರ

ಹಿಮಾಲಯ ಎಂದೊಡನೆ ನೆನಪಾಗುವುದು ಹಿಮಾ ಚ್ಛಾದಿತ ಬಿಳಿಯ ಶಿಖರಗಳು. ರಾತ್ರಿಯಲ್ಲಂತೂ ಇವು ಗಳ ಮೇಲಿನ ಶುಭ್ರ ಆಕಾಶ ಹೊಸ ದೃಶ್ಯಾವಳಿಗಳನ್ನೇ ತೆರೆದಿಡುತ್ತದೆ. ನಕ್ಷತ್ರಭರಿತ ಶುಭ್ರ ಆಕಾಶದಲ್ಲಿ ಇತ್ತೀಚೆಗೆ ಓಕುಳಿ ಚೆಲ್ಲಿದಂತೆ ಕೆಂಪು ಬಣ್ಣ ಹರಡಿತು. ಚಿಲುಮೆಯ ನೀರು ಗಾಳಿಯಲ್ಲಿ ಹೊಯ್ದಾಡುವಂತೆ ನರ್ತಿಸಿತು. ನೋಡುಗರನ್ನು ನಿಬ್ಬೆರಗಾಗಿಸಿತು. ಏನಿದು ವಿಸ್ಮಯ?

ಯುರೋಪ್‌, ಕೆನಡಾದಲ್ಲಿ ಈ ನೋಟ ಹೊಸದಲ್ಲ. ಇದಕ್ಕೆ ಅರೋರಾ ಅಥವಾ ಧ್ರುವಪ್ರಭೆ ಎಂಬ ಹೆಸರಿದೆ. ಸೂರ್ಯನ ಚಟುವಟಿಕೆ ತೀವ್ರವಾದಾಗ ಈ ಬಗೆಯ ಬೆಳಕು ಕಾಣಿಸಿಕೊಳ್ಳುತ್ತದೆ. ಈ ಅಂಶವನ್ನು ಪತ್ತೆ ಮಾಡಿದ್ದು ಸ್ವಾರಸ್ಯಕರವಾಗಿದೆ. ಸುಮಾರು 150 ವರ್ಷಗಳ ಹಿಂದೆ ತನ್ನ ಪುಟ್ಟ ದೂರದರ್ಶಕದ ಮೂಲಕ ಸೂರ್ಯನ ಅಧ್ಯಯನ ನಡೆಸುತ್ತಿದ್ದ ಇಂಗ್ಲೆಂಡ್‌ನ ವಿಜ್ಞಾನಿ ರಿಚರ್ಡ್‌ ಕ್ಯಾರಿಂಗ್‌ಟನ್‌, ಸೂರ್ಯನ ಮೇಲ್ಮೈಯಿಂದ ಜ್ವಾಲೆಯೊಂದು ಚಿಲುಮೆಯಂತೆ ಚಿಮ್ಮಿದ್ದನ್ನು ದಾಖಲಿಸಿದರು. ಮೂರು ದಿನಗಳ ನಂತರ ಭೂ ಅಯಸ್ಕಾಂತ ಕ್ಷೇತ್ರದ ಅಳತೆಯಲ್ಲಿ ಏರುಪೇರಾಯಿತು. ಧ್ರುವಪ್ರದೇಶದಲ್ಲಿ (ಆರ್ಕ್‌ಟಿಕ್‌) ಆಕಾಶವು ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸಿತು. ಆದರೆ ಈ ಎಲ್ಲ ವಿದ್ಯಮಾನಗಳು ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದು ಆಗ ತಿಳಿದಿರಲಿಲ್ಲ.

ನಮ್ಮ ಸಮೀಪದ ನಕ್ಷತ್ರವಾದ ಸೂರ್ಯ ಎಲ್ಲ ಬಗೆಯ ತರಂಗಗಳ ಅಧ್ಯಯನಕ್ಕೆ ತೆರೆದುಕೊಂಡಿದೆ. ಗಾಮಾ ಕಿರಣಗಳಿಂದ ರೇಡಿಯೊ ತರಂಗಗಳ
ವರೆಗೆ ಎಲ್ಲ ಬಗೆಯ ವೀಕ್ಷಣೆಗಳೂ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿವೆ. ಅಂತರಿಕ್ಷ ವೀಕ್ಷಣಾಲಯಗಳ ಕೊಡುಗೆಯಿಂದ ‘ಅಂತರಿಕ್ಷ ಹವಾಮಾನ’ (ಸ್ಪೇಸ್‌ ವೆದರ್‌) ಎಂಬ ಹೊಸ ಶಾಖೆಯೇ ಉದ್ಭವವಾಗಿದೆ.

ಸೌರ ಚಟುವಟಿಕೆಗಳು 11 ವರ್ಷಗಳಿಗೊಮ್ಮೆ ತೀವ್ರವಾಗುತ್ತವೆ. ಸೌರ ಕಲೆಗಳ ಸಂಖ್ಯೆ ಮಾತ್ರವಲ್ಲ ಗಾತ್ರವೂ ದೊಡ್ಡದಾಗ ತೊಡಗುತ್ತದೆ. ಅದರ ಮೇಲ್ಮೈಯಿಂದ ಪದೇಪದೇ ಬೆಂಕಿಯ ಉಂಡೆಗಳು ಚಿಮ್ಮುತ್ತವೆ. ಭಾರಿ ಶಕ್ತಿಯ ಈ ಚಿಮ್ಮುವಿಕೆಗೆ ಕರೋನಲ್‌ ಮಾಸ್‌ ಎಜೆಕ್ಷನ್‌ ಎಂಬ ಹೆಸರಿದೆ. ಆದಿತ್ಯ ಮೊದಲಾಗಿ ಅನೇಕ ಅಂತರಿಕ್ಷ ವೀಕ್ಷಣಾಲಯಗಳು ಈ ಚಟುವಟಿಕೆಗಳನ್ನು ನಿರಂತರವಾಗಿ ವೀಕ್ಷಿಸಿ ಎಚ್ಚರಿಕೆ ಕೊಡುತ್ತವೆ. ಎಚ್ಚರಿಕೆ? ಅದೇಕೆ?‌

ಆಕಾಶಕ್ಕೆ ಬಣ್ಣ ತುಂಬುವ ಕೆಲಸದ ಜೊತೆಗೆ ಈ ಚಿಲುಮೆಗಳು ಇನ್ನೂ ವೈವಿಧ್ಯಮಯ ಪರಿಣಾಮಗಳನ್ನು ಉಂಟುಮಾಡುತ್ತವೆ. ಜ್ವಾಲೆ ಉಕ್ಕಿದ್ದು ದೂರದರ್ಶಕಕ್ಕೆ
ತಿಳಿಯುತ್ತದೆ. ಶಕ್ತಿಶಾಲಿ ಕಣಗಳ ಈ ಪ್ರವಾಹ ಅದೃಷ್ಟವಶಾತ್, ಬೆಳಕಿನ ವೇಗಕ್ಕಿಂತ ಕಡಿಮೆ ವೇಗದಲ್ಲಿ ಧಾವಿಸಿ ಬರುತ್ತದೆ (ಸೆಕೆಂಡಿಗೆ ಸುಮಾರು 2000 ಕಿ.ಮೀ). ಆ ಪ್ರವಾಹದ ದಿಕ್ಕನ್ನು ಮುಂಚಿತವಾಗಿ ಲೆಕ್ಕ ಹಾಕಿ, ಅದು ಭೂಮಿಯನ್ನು ಅಪ್ಪಳಿಸಬಹುದೇ ಎಂದು ತಿಳಿಯಬಹುದು. ಅದಕ್ಕೆ ಎರಡು ಮೂರು ದಿನಗಳ ಕಾಲಾವಕಾಶ ಸಿಗುತ್ತದೆ.

ಮೇ 7- 8ರ ಅವಧಿಯಲ್ಲಿ ಸೂರ್ಯನ ಮೇಲ್ಮೈ ಯಲ್ಲಿ ಸೌರಕಲೆಗಳ ದೊಡ್ಡದೊಂದು ಗುಂಪು ಕಂಡಿತು. ಅದು ಚಿಮ್ಮಿಸಿದ ಪ್ರವಾಹ ಮೇ 9ರಂದು ಭೂಮಿಯನ್ನು ಅಪ್ಪಳಿಸಿತು. ಸಾಧಾರಣವಾಗಿ ಈ ಬಗೆಯ ಪ್ರವಾಹಗಳು ಶಕ್ತಿಶಾಲಿ ಅಯಾನುಗಳನ್ನು ಹೊತ್ತು ತರುತ್ತವೆ. ಆದರೆ ಭೂಮಿಯ ಅಯಸ್ಕಾಂತ ಕ್ಷೇತ್ರ ಅದಕ್ಕೆ ತಡೆ ಒಡ್ಡಿ ಬೇರೆ ದಿಕ್ಕಿಗೆ ತಿರುಗಿಸುತ್ತದೆ. ಧ್ರುವ ಪ್ರದೇಶಗಳಲ್ಲಿ ಈ ಅಯಾನುಗಳು ಸ್ವಲ್ಪ ಪ್ರಮಾಣದಲ್ಲಿ ನುಗ್ಗಿ ಬರುತ್ತವೆ. ಅಲ್ಲಿಯ ವಾತಾವರಣದ ಅನಿಲಗಳಿಗೆ ಅಪಾರ ಶಕ್ತಿ ಒದಗಿ, ಅವು ತಮ್ಮ ತಮ್ಮ ಪರಮಾಣು ಗುಣಗಳಿಗೆ ಅನುಗುಣವಾಗಿ ಬಣ್ಣ ಬಣ್ಣದ ಬೆಳಕನ್ನು ಉತ್ಸರ್ಜಿಸುತ್ತವೆ.

ಈ ಬಾರಿ ಈ ಪ್ರವಾಹದಲ್ಲಿ ಶಕ್ತಿಯೂ ಹೆಚ್ಚಿತ್ತು, ಅಣುಗಳ ಸಂಖ್ಯೆಯೂ ಹೆಚ್ಚಿತ್ತು. ಆದ್ದರಿಂದ ಧ್ರುವಪ್ರಭೆಗಳು ಧ್ರುವಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಧಾರೆ ಇನ್ನೂ ಆಳಕ್ಕೆ ಇಳಿಯಿತು. 35 ಡಿಗ್ರಿ ಅಕ್ಷಾಂಶವನ್ನು ತಲುಪಿತು. ಯುರೋಪ್‌, ಅಮೆರಿಕದಲ್ಲಷ್ಟೇ ಅಲ್ಲದೆ ಹಿಮಾಲಯದ ಲಡಾಕ್‌ನಲ್ಲಿಯೂ ಕಂಡಿತು.

ತನ್ನ ಶುಭ್ರ ಆಕಾಶಕ್ಕೆ ಹೆಸರಾಗಿರುವ ಲಡಾಕ್‌ನ ಹನ್ಲೆ ಎಂಬ ಗ್ರಾಮವನ್ನು ‘ಕತ್ತಲೆ ಆಕಾಶದ ಮೀಸಲು ಪ್ರದೇಶ’ ಎಂದೇ ಗುರುತಿಸಲಾಗಿದೆ. ಇಲ್ಲಿ ಪ್ರಕಾಶ
ಮಾಲಿನ್ಯದ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ. ಇಲ್ಲಿ ದೊಡ್ಡ ದೊಡ್ಡ ದೂರದರ್ಶಕಗಳ ಸಮೂಹವನ್ನೇ ಭಾರತೀಯ ಖಗೋಳವಿಜ್ಞಾನ ಸಂಸ್ಥೆ ಸ್ಥಾಪಿಸಿದೆ. ಅಲ್ಲಿ ಇರಿಸಿರುವ ಸ್ವಯಂಚಾಲಿತ ಕ್ಯಾಮೆರಾವು ರಾತ್ರಿಯ ಆಕಾಶವನ್ನು ದಾಖಲಿಸುತ್ತದೆ. ಅದು ಧ್ರುವಪ್ರಭೆಯ ಸೊಬಗಿನ ವಿಡಿಯೊವನ್ನು ಒದಗಿಸಿದೆ. ಮಧ್ಯರಾತ್ರಿಯಿಂದ ಸೂರ್ಯೋದಯದವರೆಗೂ ಕಂಡುಬಂದಿದೆ. ಸಮೀಪದ ಮೆರೆಕ್‌ ಎಂಬಲ್ಲಿ ಸೌರ ವೀಕ್ಷಣಾಲಯವನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ. ರಾತ್ರಿ ಇಡೀ ಆಕಾಶವನ್ನು ಸೆರೆಹಿಡಿಯುವ ಅಲ್ಲಿಯ ಕ್ಯಾಮೆರಾ ಕೂಡ ಧ್ರುವಪ್ರಭೆಯನ್ನು ದಾಖಲಿಸಿದೆ.

ಇಂತಹ ತೀವ್ರ ಚಟುವಟಿಕೆಯ ಪ್ರಾತ್ಯಕ್ಷಿಕೆಗಳು ಸೂರ್ಯನ ಅಂತರಾಳವನ್ನು ತಿಳಿಯಲು ವಿಜ್ಞಾನಿಗಳಿಗೆ ಅಪೂರ್ವ ಅವಕಾಶ ನೀಡುತ್ತವೆ. ಆದರೆ ಇಂತಹ ಅತೀವ ಶಕ್ತಿಯ ಚಿಲುಮೆಗಳು ಭೂಮಿಯನ್ನು ಸುತ್ತುತ್ತಿರುವ ಕೃತಕ ಉಪಗ್ರಹಗಳನ್ನು ಅಪ್ಪಳಿಸಿ ಹಾನಿ ಉಂಟುಮಾಡುತ್ತವೆ. ಇದರಿಂದ ಉಪಗ್ರಹ ಆಧಾರಿತ ಚಟುವಟಿಕೆಗಳೆಲ್ಲ ಏರುಪೇರಾಗುತ್ತವೆ. ವಿದ್ಯುತ್‌ ಜಾಲವನ್ನು ಗಾಸಿಗೊಳಿಸಿರುವ ದಾಖಲೆ ಇದೆ. ಆದ್ದರಿಂದಲೇ ಅವುಗಳ ಬಗ್ಗೆ ಮುನ್ನೆಚ್ಚರಿಕೆ ಕೊಡಬೇಕಾಗುತ್ತದೆ. ಹೀಗಾಗಿ, ‘ಅಂತರಿಕ್ಷ ಹವಾಮಾನ ಮುನ್ಸೂಚನೆ’ ಅತ್ಯಗತ್ಯ. ಆಗ ಅಂತರಿಕ್ಷ ವಿಜ್ಞಾನಿಗಳು ಸೌರ ಫಲಕಗಳನ್ನು ಮುಚ್ಚಿ ಉಪಗ್ರಹಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ.

ಹನ್ಲೆಯಲ್ಲಿ ಕಂಡುಬಂದ ಸುಂದರ ದೃಶ್ಯಗಳು ಮತ್ತು ವಿಡಿಯೊಗಳನ್ನು ಭಾರತೀಯ ಖಗೋಳವಿಜ್ಞಾನ ಸಂಸ್ಥೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT