ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಎಲ್ಲಿದೆ ಸಾರ್ವಜನಿಕ ನೈತಿಕತೆ?

ನಮ್ಮ ರಾಜಕೀಯ ಕ್ಷೇತ್ರವು ‘ಸಂವಾದರಾಹಿತ್ಯ’ ಸ್ಥಿತಿಯ ಕಡೆ ಚಲಿಸುತ್ತಿರುವುದು ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ
–ಕಿರಣ್‌ ಎಂ. ಗಾಜನೂರು
Published 18 ಜನವರಿ 2024, 22:04 IST
Last Updated 18 ಜನವರಿ 2024, 22:04 IST
ಅಕ್ಷರ ಗಾತ್ರ

ಪ್ರಕರಣ- 1: ಗಾಂಧೀಜಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತೊರೆದ ಸುಭಾಷ್‌ಚಂದ್ರ ಬೋಸ್‌ ಮುಂದೆ ತಾವು ಸ್ಥಾಪಿಸಿದ ‘ಭಾರತೀಯ ರಾಷ್ಟ್ರೀಯ ಸೇನೆ’ಯ ತುಕಡಿಗಳಿಗೆ ಗಾಂಧೀಜಿ, ಜವಾಹರಲಾಲ್‌ ನೆಹರೂ, ಮೌಲಾನಾ ಆಜಾದ್‌ ಅವರ ಹೆಸರುಗಳನ್ನು ಇಡುತ್ತಾರೆ! ಬಳಿಕ ಗಾಂಧೀಜಿಯನ್ನು ದೇಶದ ‘ಪಿತಾಮಹ’ ಎಂದು ಕರೆಯುತ್ತಾರೆ. ಜರ್ಮನಿಯಿಂದ ತಮ್ಮದೇ ಆಜಾದ್‌ ಹಿಂದ್‌ ರೇಡಿಯೊದಲ್ಲಿ, ಗಾಂಧೀಜಿ ಆರಂಭಿಸಿದ್ದ ‘ಭಾರತ ಬಿಟ್ಟು ತೊಲಗಿ’ ಚಳವಳಿಯನ್ನು ‘ಅಹಿಂಸಾತ್ಮಕ ಗೆರಿಲ್ಲಾ ಹೋರಾಟ ತಂತ್ರ’ ಎಂದು ಕರೆಯುತ್ತಾರೆ. ಸ್ವಾತಂತ್ರ್ಯ ಪಡೆಯುವ ದಿಸೆಯಲ್ಲಿ ಇದೊಂದು ‌‘ಮಹಾನ್ ಚಳವಳಿ’ ಎಂದು ವಿಶ್ಲೇಷಿಸುತ್ತಾರೆ.

ಪ್ರಕರಣ- 2: ಅದು 1999ರ ಕಾಲ. ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಅಟಲ್‌ ಬಿಹಾರಿ ವಾಜಪೇಯಿ, ‘ನೆಹರೂ ಮತ್ತು ನನ್ನ ನಡುವೆ ಬಹಳಷ್ಟು ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ಒಮ್ಮೆ ನಾನು ಅವರಿಗೆ ‘ನಿಮ್ಮದು ಹೊಂದಾಣಿಕೆಯ ವ್ಯಕ್ತಿತ್ವ. ನಿಮ್ಮಲ್ಲಿ ಚರ್ಚಿಲ್‌ ಮತ್ತು ಚೆಂಬರ್ಲಿನ್‌ ಇಬ್ಬರ ಗುಣಗಳೂ ಇವೆ’ ಎಂಬ ಗಂಭೀರ ಟೀಕೆಯನ್ನು ಮಾಡಿಬಿಟ್ಟಿದ್ದೆ! ಆದರೆ ನಂತರ ದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವು ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು. ಆಗ, ಲೋಕಸಭೆಯ ದಕ್ಷಿಣ ಬ್ಲಾಕಿನಲ್ಲಿ ಯಾವಾಗಲೂ ಇರುತ್ತಿದ್ದ ನೆಹರೂ ಅವರ ಭಾವಚಿತ್ರ
ವನ್ನು ತೆಗೆಯಲಾಗಿತ್ತು. ವಿದೇಶಾಂಗ ಸಚಿವನಾಗಿದ್ದ ನಾನು, ಆ ಬಗ್ಗೆ ಪ್ರಶ್ನಿಸಿದೆ. ಎಲ್ಲರೂ ಮೌನವಾಗಿದ್ದರು. ಮರುಕ್ಷಣವೇ ನೆಹರೂ ಅವರ ಭಾವಚಿತ್ರವನ್ನು ಅಲ್ಲಿ ಮತ್ತೆ ಹಾಕಲಾಯಿತು’ ಎಂದು ಸ್ಮರಿಸಿದ್ದರು.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ರಾಜಕೀಯದಲ್ಲಿ ಘಟಿಸಿದ ಈ ಎರಡು ಪ್ರಕರಣಗಳು  ಭಾರತದ ರಾಜಕಾರಣದಲ್ಲಿ ವೈಯಕ್ತಿಕ ಅಭಿಪ್ರಾಯಗಳ ಆಚೆಗಿನ ಸಾರ್ವಜನಿಕ ವಿಮರ್ಶೆಯ ಮಾದರಿಯೊಂದನ್ನು ನಮಗೆ ಪರಿಚಯಿಸುತ್ತವೆ. ಹಾಗೆ ನೋಡುವುದಾದರೆ, ಈ ನೆಲದ ಜಾನಪದ ಪರಂಪರೆ, ಪುರಾಣಗಳು, ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು, ಮಂಟೆಸ್ವಾಮಿ ಮತ್ತು ಮಲೆ ಮಹದೇಶ್ವರ ಕಾವ್ಯದ ರಚನೆಗಳು ಸೇರಿದಂತೆ ಎಲ್ಲವೂ ವೈಯಕ್ತಿಕತೆಯ ಆಚೆಗಿನ ಈ ಸಮೃದ್ಧ ತಾತ್ವಿಕ ಸಂಘರ್ಷದ ಮಾದರಿಯನ್ನೇ ಮೂಲದ್ರವ್ಯವಾಗಿ ಹೊಂದಿವೆ. ಉದಾಹರಣೆಗೆ, ಸ್ವಾತಂತ್ರ್ಯ ಚಳವಳಿಯ ಕಾಲದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಇತಿಹಾಸವೇ ಈ ವೈವಿಧ್ಯಮಯ ತಾತ್ವಿಕ ಸಂಕಥನಗಳ ಅರ್ಥಪೂರ್ಣ ಚರಿತ್ರೆಯಾಗಿದೆ. ಅದರಲ್ಲೂ ಮಂದಗಾಮಿಗಳು, ತೀವ್ರಗಾಮಿಗಳು ಮತ್ತು ಗಾಂಧಿವಾದಿಗಳ ನಡುವಿನ ಆರೋಗ್ಯಕರ ತಾತ್ವಿಕ ಸಂವಾದಗಳು ಈ ದೇಶದ ಪರಂಪರೆಯು ರೂಢಿಸಿಕೊಂಡು ಬಂದ ಬೌದ್ಧಿಕ ಅರಿವಿನ ಮುಂದು ವರಿದ ಭಾಗವೇ ಅನ್ನುವಷ್ಟು ಆಸಕ್ತಿಕರವಾಗಿವೆ.

‘ಯಾವ ಸ್ವರೂಪದ ಸ್ವಾತಂತ್ರ್ಯ ನಮಗೆ ಬೇಕು’ ಎಂಬ ಪ್ರಶ್ನೆಯನ್ನು ಆಧರಿಸಿ, ಗಾಂಧಿ, ಭಗತ್‌ ಸಿಂಗ್‌, ಅಂಬೇಡ್ಕರ್‌ ಸೇರಿದಂತೆ ಆ ಕಾಲದ ರಾಷ್ಟ್ರೀಯವಾದಿಗಳು ಮತ್ತು ಸಮಾಜವಾದಿಗಳು ಮುಂದಿಟ್ಟ ಚರ್ಚೆಯು ಕೆಲವು ಮಿತಿಗಳ ಆಚೆಗೆ ಜಗತ್ತಿನ ಜ್ಞಾನ ವಿಸ್ತರಣೆಗೆ ಹೊಸದೊಂದು ಚೌಕಟ್ಟನ್ನು ರೂಪಿಸಿಕೊಟ್ಟಿತ್ತು. ಆ ಕಾರಣಕ್ಕೆ, ಭಾರತೀಯ ಸ್ವಾತಂತ್ರ್ಯ ಚಳವಳಿಯು ಜಗತ್ತಿನ ಬೇರೆ ಎಲ್ಲಾ ದೇಶಗಳ ಸ್ವಾತಂತ್ರ್ಯ ಹೋರಾಟಗಳಿಗಿಂತ ಭಿನ್ನ ಮತ್ತು ಆಸಕ್ತಿಕರ ಎಂಬ ಸಂಗತಿಯನ್ನು ‘ದಿ ಐಡಿಯಾ ಆಫ್‌ ಇಂಡಿಯಾ’ ಕೃತಿಯ ಲೇಖಕ ಸುನಿಲ್‌ ಖಿಲ್ನಾನಿ ಸೇರಿದಂತೆ ಹಲವಾರು ವಿದ್ವಾಂಸರು ಬೆಳೆಸಿದ್ದಾರೆ.

ಈ ಮಾದರಿಯ ಚರ್ಚೆಯು ರಾಜಕೀಯ ನಾಯಕರ ಮೇಲೆ ಎಷ್ಟು ವ್ಯಾಪಕವಾದ ಪ್ರಭಾವ ಬೀರುತ್ತಿತ್ತು ಅಂದರೆ, ಹಿಂದೂ ಕೋಡ್‌ ಬಿಲ್‌ ಮಂಡಿಸಿದ ಸಮಯದಲ್ಲಿ, ತಾವು ನಂಬಿದ ತಾತ್ವಿಕತೆಯನ್ನು ಲೋಕಸಭೆ ಒಪ್ಪದಿದ್ದಾಗ, ಕಾನೂನು ಸಚಿವ ಸ್ಥಾನಕ್ಕೆ ಅಂಬೇಡ್ಕರ್‌ ರಾಜೀನಾಮೆ ಸಲ್ಲಿಸಿದ್ದರು. ರೈಲ್ವೆ ಸಚಿವರಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು, ರೈಲು ಅಪಘಾತವಾಗಿ ನೂರಾರು ಜನ ಪ್ರಾಣತೆತ್ತಾಗ ಎರಡು ಬಾರಿ ರಾಜೀನಾಮೆ ನೀಡಿದ್ದರು. ಇದಕ್ಕೂ ಅವರು ಕೊಟ್ಟ ಕಾರಣ ನೈತಿಕ ಹೊಣೆ.

ಆದರೆ ವರ್ತಮಾನದ ನಮ್ಮ ರಾಜಕೀಯಕ್ಷೇತ್ರ ‘ಸಂವಾದರಾಹಿತ್ಯ’ ಸ್ಥಿತಿಯತ್ತ ಚಲಿಸುತ್ತಿದೆ. ಅದು ಧರ್ಮದ ಕುರಿತ ಚರ್ಚೆಯಿರಲಿ, ಸಾರ್ವಜನಿಕ ನೀತಿಗಳ ಕುರಿತ ಚರ್ಚೆಯಿರಲಿ ಇವು ಯಾವುವೂ ಸಮರ್ಥವಾದ ತಾತ್ವಿಕತೆಯನ್ನು ಆಧರಿಸಿ ಮಂಡಿಸುತ್ತಿರುವ ವಾದಕ್ಕೆ ಬದಲಾಗಿ ವೈಯಕ್ತಿಕ ಕೆಸರೆರಚಾಟವನ್ನೇ ಆಧರಿಸಿರುವಂತೆ ಭಾಸವಾಗುತ್ತಿವೆ. ಈ ಕ್ರಮವು ರಾಜಕೀಯ ನಾಯಕ, ಆತನ ಧಾರ್ಮಿಕ ಹಿನ್ನೆಲೆ, ಆತನ ಪಕ್ಷದಂತಹ ಸಂಕುಚಿತ ನೆಲೆಯಲ್ಲಿಯೇ ಯೋಚಿಸುವ ಗುಂಪಾಳ್ವಿಕೆಯ ಮನಃಸ್ಥಿತಿ ಸೃಷ್ಟಿಸಿಬಿಡುತ್ತದೆ.

ದೇಶದ ಪ್ರಜಾಪ್ರಭುತ್ವದ ಭವಿಷ್ಯದ ದೃಷ್ಟಿಯಿಂದ ಇದು ಅಪಾಯಕಾರಿಯಾದ ಬೆಳವಣಿಗೆ. ಏಕೆಂದರೆ ಈ ಮಾದರಿಯ ಏಕಮುಖ ವೈಯಕ್ತಿಕ ಚರ್ಚೆಯು ಪ್ರಜಾಪ್ರತಿನಿಧಿಗೆ ಇರಲೇಬೇಕಾದ ಸಾರ್ವಜನಿಕ ನೈತಿಕತೆಯ ಪ್ರಶ್ನೆಯನ್ನೇ ಅಪ್ರಸ್ತುತಗೊಳಿಸಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ನೈತಿಕತೆಗೆ ಮತ್ತು ಸಾರ್ವಜನಿಕ ಉತ್ತರದಾಯಿತ್ವಕ್ಕೆ ಇರುವ ಮಹತ್ವವನ್ನೇ ಅಪಮೌಲ್ಯಗೊಳಿಸಿಬಿಡುತ್ತದೆ. ಈ ಕುರಿತ ಎಚ್ಚರವನ್ನು ಈ ಕಾಲದ ರಾಜಕೀಯ ನಾಯಕರು ತಾವೇ ಪ್ರತಿಪಾದಿಸುವ ತಮ್ಮದೇ ಪರಂಪರೆ ಮತ್ತು ಚರಿತ್ರೆಯಿಂದ ಕಲಿಯುವರೇ ಎಂಬುದು ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT