ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ನಂಜು: ಹಸಿರು ಶಮನವುಂಟೇ?

ರೈತರನ್ನು ಮತ್ತೆ ನಿಸರ್ಗದ ಒಡಲಿಗೆ ಸೇರಿಸುವುದೊಂದೇ ಹಳ್ಳಿಗಳ ಪುನರುಜ್ಜೀವನಕ್ಕೆ, ಕೆರೆಗಳ ನಾಶ ತಪ್ಪಿಸುವುದಕ್ಕೆ ಇರುವ ಮಾರ್ಗ
Last Updated 24 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಈ ಬೆಂಕಿ, ಸೂರ್ಯ ಮಹಾರಾಜನಾಗಲೀ ಅಗ್ನಿ ಮಹಾರಾಜನಾಗಲೀ ಜಗವನ್ನು ಬೆಚ್ಚಗಿಡುವ ಪಂಚಭೂತಗಳಲ್ಲೊಂದಾಗಿಲ್ಲ. ನಾಗರಿಕ ಮನುಷ್ಯ ತನ್ನ ಕುಂಡಿ ಸುಟ್ಟುಕೊಳ್ಳುತ್ತಿರುವ ಯಂತ್ರ ಬೆಂಕಿ. 2018–19ರ ಆಯವ್ಯಯದಲ್ಲಿ ಅಂಟುವಾಳ ಬೆಳೆಸಲು ₹10 ಕೋಟಿ ತೆಗೆದಿಟ್ಟಿರುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಈ ಯಂತ್ರ ಬೆಂಕಿ ಆರಿಸುವ ತುಸು ಸಂತೋಷದ ವಿಚಾರವಿದು. ಇದು ಡಿಟರ್ಜೆಂಟ್ ಬದಲಿಯಾಗಿ ಸ್ವದೇಶಿ ಕಡೆ ಪುನಃ ತೆವಳುವ ಹಾದಿ. 2019–20ರ ಆಯವ್ಯಯದಲ್ಲಿ ಈ ಮಾತು ಇಲ್ಲ.

ನನ್ನ ಊರಿನ ಹಿತ್ತಲಿನಲ್ಲಿ ಒಂದು ಅಂಟುವಾಳ ಮರವಿತ್ತು. ಒಣಗಿದ ಕಾಯಿ ಆಯ್ದುಕೊಳ್ಳುತ್ತಿದ್ದಳು ನನ್ನವ್ವ. ಪೇಟೆ ಸಾಬು, ಸೇರಿಗೊಂದು ರೂಪಾಯಿನಂತೆ ಹಾಸನದ ಸೋಪು ಮಾಡುವ ಸ್ವದೇಶಿ ವಿಧಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದ. ಸ್ನಾನಕ್ಕೆ, ಬಟ್ಟೆ ಒಗೆಯಲು ಅದರದೇ ಕಾರುಬಾರು. ಜೊತೆಗೆ ಸೀಗೆಕಾಯಿ. ಹೀಗಿತ್ತು ಹಳ್ಳಿ ಸಂಸಾರ. ಈ ಹಸಿರು ಉತ್ಪನ್ನದಿಂದ ನನ್ನೂರ ಹಳ್ಳಿ ಹೆಣ್ಣುಮಕ್ಕಳ ಕೂದಲು ಮಾರುದ್ದ ಬೆಳೆದು ತುರುಬಾಗುತ್ತಿತ್ತು. ಸಾವಯವ ಕೃಷಿ ತಜ್ಞ ನಾರಾಯಣ ರೆಡ್ಡಿಯವರು, ‘ಎಷ್ಟಾದರೂ ಅಂಟುವಾಳ ಕಳುಹಿಸಿ, ಅದರ ಪುಡಿಯೊಡನೆ ನಿಂಬೆ, ಕಿತ್ತಲೆ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡಿ ಮಾರಾಟ ಮಾಡುತ್ತೇನೆ’ ಎಂದಿದ್ದರು. ಸ್ವದೇಶಿಯು ಜನರ ಒಳಗೆ ಇನ್ನೂ ಸಂಪೂರ್ಣ ಕಳಚಿಲ್ಲ, ಪರಿಸ್ಥಿತಿ ಕಳಚುತ್ತಿದೆ ಎನಿಸಿತು.

ಅಂಟುವಾಳದ ಆಸೆಯಲ್ಲಿ ನಾವು ಹೊಲದ ಬೇಲಿ, ತೋಟದ ಬೇಲಿಯಲ್ಲೆಲ್ಲ ಹಾಕಿದ್ದಾಗಿತ್ತು. ಮಧ್ಯಪ್ರದೇಶದಿಂದ ತರಿಸಿದ ತಪ್ಪಕಾಯಿಗಿಡ ನೆಟ್ಟಿದ್ದಾಯಿತು. ಪರನೆಲದ ಗಿಡ ನಮ್ಮೂರ ನೆಲಕ್ಕೆ ಹೊಂದಿ ಕಾಯಿ ಬಿಡಲಿಲ್ಲ. ಸ್ವದೇಶಿ ಅಂಟುವಾಳ ಹೆಚ್ಚಾಗಿ ಬಿಡಲಾರಂಭಿಸಿದವು. ಖರ್ಚಿಲ್ಲದ ಬೆಳೆ, ಹತ್ತಾರು ಸಾವಿರ ರೂಪಾಯಿ ಸಿಗಬಹುದೆಂದು ನಾವು ನಮ್ಮವ್ವದಿರೆಲ್ಲ ಸೇರಿ ಆಸೆಪಟ್ಟೆವು. ಈಗ ಸೈಕಲ್ ಸಾಬುನಂತಹವರೂ ಬರುತ್ತಿಲ್ಲ. ಪೇಟೆ ಸಂತೆಗೆ ತೆಗೆದುಕೊಂಡು ಹೋದರೆ, ಇದೊಂದು ಕಸ ಎಂಬಂತೆ ನೋಡಲಾರಂಭಿಸಿದ್ದಾರೆ. ಸೀಗೆಯಂತೂ ಮುಳ್ಳಿನೊಳು ಉದುರಿಸುವವರಿಲ್ಲ. ಹುಣಿಸೆಹಣ್ಣು ಕೆಡವುವವರಿಲ್ಲ. ಇದೆಲ್ಲ ಮಾಡಿಸಲು ಹೋದರೆ ಪೇಟೆಯಲ್ಲಿ ದರವೂ ಎಟಕುವುದಿಲ್ಲ. ಹೀಗಿದೆ ಕೆಲಸ ಮಾಡುವುದನ್ನೇ ಕೈ ಬಿಟ್ಟಿರುವ ಜನರ ಖರ್ಚಿಲ್ಲದ ಸ್ವದೇಶಿ ಪರಿಸ್ಥಿತಿ.

ನಮ್ಮವ್ವ ಅಂಟುವಾಳದಲ್ಲಿ ತಲೆಗೆ ಸ್ನಾನ ಮಾಡುತ್ತಿದ್ದರೆ, ಅದರ ಪುಡಿಯಲ್ಲಿ ಬಟ್ಟೆ ನೆನೆ ಹಾಕಿದ್ದರೆ, ಹುಣಿಸೆಹಣ್ಣಿನ ಹುಳಿ ಬಿಡುತ್ತಿದ್ದರೆ, ಕೆಲಸದಾಕೆ ‘ಏನ್ರವ್ವ ಅಂಗಡೀಲಿ ಸೋಪು, ಸೋಪಿನಪುಡಿ, ವಿನಿಗರ್ ಸಿಗಲ್ವೆ? ದುಡ್ಡು ಉಳಿಸಿ ಏನು ಮಾಡುತ್ತೀರಿ ಬಿಡಿಬಿಡಿ’ ಎನ್ನುತ್ತಾಳೆ. ಆಕೆಯ ಕೈಕಾಲು ಬಿರುಕು ಬಿಟ್ಟಿರುವುದು, ತಲೆ ಕೂದಲು ಉದುರಿರುವುದು ಯಾವುದರ ಜ್ಞಾನವೂ ಈಗ ಯಾರಲ್ಲೂ ಉಳಿದಿಲ್ಲ. ಅಂಟುವಾಳ ಎಂಬುದು ‘ಸೋಪ್‌ನಟ್’ ಎಂಬ ತಿಳಿವಳಿಕೆ ಈಗ ಜನರಲ್ಲಿ ಉಳಿದೇ ಇಲ್ಲ. ಶ್ಯಾಂಪೂಗಿಂತ ಸೀಗೆ ಶ್ರೇಷ್ಠ ಎಂಬ ಕಲ್ಪನೆಯೂ ಇಲ್ಲ. ವಿನಿಗರ್‌ಗಿಂತ ಹುಣಿಸೆಹಣ್ಣು ಆರೋಗ್ಯದಾಯಕ ಎಂಬ ಕಲ್ಪನೆಯೂ ಮಾಸುತ್ತಿದೆ. ಡಿಟರ್ಜೆಂಟ್ ಈಗೊಂದು ಹೆಮ್ಮಾರಿ. ‘ಯಂತ್ರ ಕಾರ್ಖಾನೆ ಹಾವಿನ ಹುತ್ತದಂತೆ ಒಳಗೆ ಒಂದಕ್ಕೊಂದು ಸುತ್ತಿಕೊಂಡ ನೂರಾರು ಹಾವು. ಕಾರ್ಖಾನೆಗಳಿಗೆ ದೊಡ್ಡ ನಗರಗಳೇ ಬೇಕು’ ಎನ್ನುತ್ತದೆ ಗಾಂಧೀಜಿ ಸ್ವರಾಜ್ ತಿಳಿವಳಿಕೆ.

ಹೌದು, ಬೆಳ್ಳಂದೂರು ಕೆರೆ, ವರ್ತೂರು ಕೆರೆ ಇತ್ಯಾದಿಗಳು ನಗರೀಕರಣದ ಎಚ್ಚರಿಕೆಯ ಗಂಟೆ. ಈ ನಗರ ಸುತ್ತಲಿನ ಒಂದರಲ್ಲೇ ಸಾವಿರಾರು ರಾಜಮಹಾರಾಜರ ಕೆರೆಗಳು ಕಣ್ಣುಮುಚ್ಚಿವೆ. ಉಳಿದವು ಏದುಬ್ಬಸ ಬಿಡುತ್ತಿವೆ. ಕಾರ್ಖಾನೆಗಳ ಕಲ್ಮಷ, ಮನೆಮನೆಯ ಡಿಟರ್ಜೆಂಟ್‌ನಿಂದ ಕುಲಗೆಟ್ಟ ನೀರು ಮನೆಮನೆ ದಾಟಿ ಕೆರೆ ತಲುಪಿ, ಇದರೊಡನೆ ಮನುಷ್ಯ ನಿರ್ಮಿತ ಅವಘಡಗಳೆಲ್ಲ ಸೇರಿ ಸಮುದ್ರ ತಲುಪಿ ಜೀವಾನು ಜೀವಿಗಳ ಅಂತ್ಯಕ್ಕೆ ವಾಕ್ಯ ಬರೆಯುತ್ತಿವೆ. ಕೆರೆ ನೀರು ಸೋಸಿ ಕೋಲಾರದ ಕೆರೆಗಳಿಗೆ ಬಿಡುವ ಸರ್ಕಾರದ ತೀರ್ಮಾನವೇನೋ ಸರಿ. ಆದರೆ ಕಂಟ್ರಾಕ್ಟರುಗಳು, ಎಂಜಿನಿಯರುಗಳು, ರಾಜಕಾರಣಿಗಳು ಹುತ್ತದೊಳಗಿನ ಹಾವುಗಳಾಗಿರುವಾಗ ಏನು ಮಾಡುವುದು? ಹಾಗೋ ಹೀಗೋ ಕುಡಿಯುತ್ತಿದ್ದ ಬೆಳೆಯುತ್ತಿದ್ದ ಬಡಜನರ ನೀರಿನೊಳಗೆ ನಗರದ ನಂಜು ಸೇರಿಸಲಾಗುತ್ತಿದೆ.

‘ಉದ್ಯೋಗಗಳ ಪುನರುಜ್ಜೀವನ ಎಂದರೆ ಹಳ್ಳಿಗಳಿಗೆ ಜೀವನ. ಅವುಗಳ ನಾಶವೇ ಸಾವು’ ಎನ್ನುತ್ತದೆ ಪುನಃ ಗಾಂಧೀಜಿ ಚಿಂತನೆ. ರೈತರ ಬೆನ್ನೆಲುಬಾಗಿ ಸರ್ಕಾರ ನಿಲ್ಲಬೇಕಾದರೆ ಕೇವಲ ಸಾಲ ಮನ್ನಾ ಮಾಡುತ್ತೇವೆಂದು ಮೂಗಿಗೆ ತುಪ್ಪ ಹಚ್ಚುವುದಲ್ಲ. ಅಂಟುವಾಳದಿಂದ ಹಿಡಿದು ರಾಗಿ, ಭತ್ತ, ತರಕಾರಿ, ಸೊಪ್ಪುಸೆದೆ ಬೆಳೆಯುವ ಎಲ್ಲ ರೈತರಿಗೆ ಬೆಲೆ ಪೋಷಕ ನೀತಿ ರಚಿಸುವುದು. ತಾಲ್ಲೂಕಿಗೊಂದು ವಿಸ್ತಾರವಾದ ರವಿ ವಿದ್ಯುತ್ ಹವಾ ದಾಸ್ತಾನು ಮಳಿಗೆ ತೆರೆದು ಇಡಲು, ಕೊಳ್ಳಲು ಅವಕಾಶ ಮಾಡುವುದು. ಇದಕ್ಕೆ ಉದಾಹರಣೆಯಾಗಿ ಹಾಲು ಸಂಸ್ಕರಣಾ ನೀತಿ ಈಗಾಗಲೇ ಇದೆ. ಈ ವಿಧಾನ ಎಲ್ಲಾ ರೈತಾಪಿ ವಸ್ತುವಿಗೂ ತಲುಪಬೇಕು. ಆಗಲೇ ಕೆರೆಗೆ ಬೆಂಕಿ ಬೀಳುವ ಡಿಟರ್ಜೆಂಟ್ ರೀತಿ ತಪ್ಪಿಸಬಹುದು. ಪುನಃ ರೈತಾಪಿಯನ್ನು ನಿಸರ್ಗದೊಡಲಿಗೆ ಸೇರಿಸಬಹುದು. ಬೆಳೆ ಬೀದಿಗೆ ಸುರಿದು ಆತ್ಮಹತ್ಯೆ ಕಡೆ ಹೋಗುವ ರೈತನನ್ನು ರಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT