ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಗಾಂಧಿಸ್ಮೃತಿ ಎಂಬ ಸಾತ್ವಿಕಪ್ರಜ್ಞೆ

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಮತ್ತೆಮತ್ತೆ ಸಂದಿಗ್ಧಗೊಳ್ಳುವ ಜಗತ್ತು ಬಿಡುಗಡೆಗೆ ಮುಖ ಮಾಡುವುದು ಆ ಕಡೆಗೇ... ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಮಾತನ್ನು ಕೃತಿಯಲ್ಲಿಯೂ ನಿರೂಪಿಸಿ, ಸಮಕಾಲೀನ ಜಾಗತಿಕ ಸ್ಮೃತಿಯಲ್ಲಿ ಅಚ್ಚೊತ್ತಿದ ಅಪರೂಪದ ದಾರ್ಶನಿಕನತ್ತ... ಹೌದು, ಇಂದು ಸಾರ್ವಕಾಲಿಕ ಶ್ರೇಷ್ಠ ಮಾನವೀಯ ಸಂತ
ಮಹಾತ್ಮ ಗಾಂಧಿ ಅವರನ್ನು ಜಗತ್ತು ಮತ್ತೊಮ್ಮೆ ಎದೆಯೊಳಗೆ ಬೆಳಕಾಗಿ ತಂದುಕೊಳ್ಳುತ್ತಿದೆ. ಸರಳತೆಯ ತತ್ವಗಳು ಮತ್ತು ಅಹಿಂಸಾಚರಣೆಯ ಬದ್ಧತೆಗಳನ್ನುಹಾಗೆಲ್ಲಾ ಪರಿಪೂರ್ಣವಾಗಿ ಬಾಳಿ, ಬೋಧಿಸಿ, ಜನ ಸಾಮಾನ್ಯನೊಬ್ಬ ವಿಶ್ವಚರಿತ್ರೆಯಲ್ಲಿ ಅಸಾಮಾನ್ಯನಾಗಿ ಬೆಳೆದುನಿಂತ ಪರಿಯೇ ಕಾಲದ ಅಚ್ಚರಿ.

‘ನನ್ನೊಟ್ಟಿಗಿರುವ ಎಲ್ಲರಿಗೂ ಕನಿಷ್ಠ ಅಗತ್ಯಗಳು ದೊರಕುವವರೆಗೂ ನಾನು ಸರಳವಾಗಿ ಬದುಕುತ್ತೇನೆ...’ ಅಂದುಕೊಂಡ ಗಾಂಧಿ ನಿಲುವಿಗಿಂತ ದೊಡ್ಡ ಅಧ್ಯಾತ್ಮ ಏನಿದೆ ಈ ಜಗತ್ತಿನಲ್ಲಿ? ಕುಟುಂಬದೊಟ್ಟಿಗಿದ್ದು, ಜೀವನ ಸಂಗ್ರಾಮವನ್ನು ಕಂಡುಂಡು ಲೌಕಿಕದ ಲೋಭವನ್ನು ಅಂಟಿಸಿಕೊಳ್ಳದೆ, ‘ಇರಬೇಕು ಇಲ್ಲದಂತಿರಬೇಕು’ ಎಂಬಂತೆ ಸಾರ್ವಜನಿಕ ಬದುಕಲ್ಲಿ ತಾತ್ವಿಕತೆಯ ದೀಪಧಾರಿಯಾಗಿ ಸದಾ ಉಳಿದಿರುವುದೂ ‘ಗಾಂಧಿ’ ಎಂಬ ಸೋಜಿಗವೇ. ಬದುಕಿನುದ್ದಕ್ಕೂ ಆಡಂಬರಕ್ಕಿಂತ ಆಚರಣೆಗೆ, ವಿಜೃಂಭಣೆಗಿಂತ ವಿಚಾರಗಳಿಗೆ ಪ್ರಾಶಸ್ತ್ಯ ಸಿಗಬೇಕು, ‘ಅದ್ದೂರಿಯ ನೆಪದಲ್ಲಿ ಮಿತಿರಹಿತವಾಗಿ, ಮತಿರಹಿತವಾಗಿ ಮಾಡುವ ದುಂದುವೆಚ್ಚ ಮತ್ತು ವಸ್ತು
ಗಳನ್ನು ಅರ್ಧಂಬರ್ಧ ಬಳಸಿ ಬಿಸಾಕುವ ಪ್ರವೃತ್ತಿಗಳು ಅಪಾಯಕಾರಿ’ ಎಂದು ಎಚ್ಚರಿಸಿದ್ದರು ಗಾಂಧಿ.

ಗೀತೆ, ಕುರಾನ್, ಬೈಬಲ್, ಟಾಲ್‍ಸ್ಟಾಯ್ ಮತ್ತು ರಸ್ಕಿನ್‍ರ ಕೃತಿಗಳ ಆಳ ಅಧ್ಯಯನದಲ್ಲಿ ಮಾನವ ಜಗತ್ತಿನ ಅಭ್ಯುದಯವನ್ನು ಕಂಡುಕೊಂಡರು ಗಾಂಧೀಜಿ. ಬರೀ ಸ್ವಾತಂತ್ರ್ಯ ಹೋರಾಟಕ್ಕಷ್ಟೇ ಸೀಮಿತವಾಗದ ಅವರ ವ್ಯಕ್ತಿತ್ವವು ಅಸ್ಪೃಶ್ಯತೆ ನಿವಾರಣೆ, ನೀಲಿ ಬೆಳೆಗಾರರ ಸಂಕಷ್ಟ ನಿವಾರಣೆ, ಗ್ರಾಮೋದ್ಧಾರ, ಶಿಕ್ಷಣ, ಆರ್ಥಿಕತೆ, ಪರಿಸರ ರಕ್ಷಣೆ, ಪತ್ರಿಕಾರಂಗ, ಮೌಲ್ಯಗಳ ಮರುಸ್ಥಾಪನೆಯಂತಹ ಕಾರ್ಯಗಳನ್ನೂ ಒಳಗೊಂಡಿದ್ದು, ಅವರ ಪ್ರಭಾವಗಳು ಢಾಳಾಗಿವೆ.

ನೈಸರ್ಗಿಕ ಸಂಪನ್ಮೂಲಗಳನ್ನು ಹಿತಮಿತವಾಗಿ ಮತ್ತು ಜಾಗರೂಕವಾಗಿ ಬಳಸಬೇಕೆಂದು ಕರೆ ಕೊಡುತ್ತಾ ತಮ್ಮ ದೂರದೃಷ್ಟಿಯ ಚಿಂತನೆಯನ್ನು ತೆರೆದಿಟ್ಟಿದ್ದರು. ‘ಪ್ರಕೃತಿಗೆ ಮನುಷ್ಯನೂ ಸೇರಿದಂತೆ ಎಲ್ಲ ಜೀವರಾಶಿಗಳ ಅವಶ್ಯಕತೆಗಳನ್ನು ಪೊರೆಯುವ ಶಕ್ತಿಯಿದ್ದರೂ ದುರಾಸೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ’ ಎಂಬ ಅವರ ದಿವ್ಯಸಂದೇಶದಲ್ಲಿ ಜೀವಪರತೆ ಧ್ವನಿಸುತ್ತದೆ. ಪ್ರಸ್ತುತ ಯಾಂತ್ರೀಕೃತ ಜಗತ್ತು ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳೆಲ್ಲಾ ಸಂಪತ್ತಿನ ಕ್ರೋಡೀಕರಣ ಮತ್ತು ದುರಾಸೆಯ ಫಲ ಎಂದೂ ಎಚ್ಚರಿಸಿದ್ದರು.

ಪರಿಸರ ಪ್ರಜ್ಞೆಯೆಂಬುದೇ ಹುಟ್ಟಿರದ ಕಾಲದಲ್ಲಿ ‘ಪಶ್ಚಿಮದ ಆಧುನಿಕ ನಾಗರಿಕತೆ’ಯು ಉಳಿದ ಜಗತ್ತನ್ನು ತನ್ನ ಅನುಭೋಗಕ್ಕಿರುವ ಭೌತವಸ್ತು ಎಂಬಂತೆ ಪರಿಗಣಿಸುವ ಮೂಲಕ ಅವುಗಳ ಆಧ್ಯಾತ್ಮಿಕ ಅಸ್ತಿತ್ವವನ್ನೇ ನಿರ್ಲಕ್ಷಿಸುತ್ತದೆ’ ಎಂಬ ಕಟುಸತ್ಯವನ್ನು ಮನವರಿಕೆ ಮಾಡಲೆತ್ನಿಸಿದ್ದರು. ಅವರಲ್ಲಿ ಪ್ರಕೃತಿಯೊಟ್ಟಿಗಿನ ನವಿರು ಸಂಬಂಧಕ್ಕೂ ಸಕಲಜೀವರಾಶಿ ಗಳಲ್ಲಿನ ದೈವತ್ವಭಾವಕ್ಕೂ ಪ್ರಾಧಾನ್ಯ ಇತ್ತು. ಆತ್ಮವಿಕಸನದ ಅದ್ಭುತ ಮಾದರಿಯಂತಿದ್ದ ಅವರು ‘ನೈತಿಕ ಪ್ರಜ್ಞೆ ಇರುವ ವ್ಯಕ್ತಿಗೆ ಅಪಾರ ಶಕ್ತಿ ಪ್ರಾಪ್ತವಾಗುತ್ತದೆ’ ಎಂದೂ ನಂಬಿದ್ದರು.

ಹಳ್ಳಿಗಳು ಒಂದು ವಲಯವಾಗಿ ರೂಪುಗೊಂಡು ಸ್ವಯಂ ಆಡಳಿತ, ಶಾಲೆ, ಸಹಕಾರ ಸಂಘ, ಬ್ಯಾಂಕ್‌ಗಳನ್ನು ನಿರ್ವಹಿಸುತ್ತಾ ದೇಶ ಕಟ್ಟುವ ಇಟ್ಟಿಗೆಗಳಾಗಬೇಕು ಎಂಬುದು ರಾಷ್ಟ್ರಪಿತನ ಬಯಕೆಯಾಗಿತ್ತು. ಗ್ರಾಮೋದ್ಯೋಗವನ್ನು ಹುಟ್ಟುಹಾಕಿ ಗ್ರಾಮೋದ್ಧಾರದ ಕಲ್ಪನೆಯನ್ನೂ ರಾಮರಾಜ್ಯದ ವಾಸ್ತವಿಕ ಮಾದರಿಯನ್ನೂ ಕಟ್ಟಿಕೊಟ್ಟರು. ನಮ್ಮ ಪ್ರಕೃತಿ- ಸಂಸ್ಕೃತಿಗಳನ್ನು ಉಳಿಸಲು ಸ್ವದೇಶಿ ಕೈಉತ್ಪನ್ನಗಳನ್ನು ಬೆಂಬಲಿಸಬೇಕಾದ ಹೊತ್ತಿನಲ್ಲಿ ‘ನನ್ನನ್ನು ವಿದೇಶಿಯರು ಆಳುವುದಲ್ಲ...!’ ಎಂದೂ ಮಾರ್ಮಿಕವಾಗಿ ಎಚ್ಚರಿಸಿದ್ದರು. ಅದೀಗ ‘ಗಾಂಧಿಪ್ರಣೀತ ಆರ್ಥಿಕತೆ’ ಎಂಬ ಅಭಿವೃದ್ಧಿಯ ಅನನ್ಯ ಮಾದರಿಯಾಗಿ ಅಲ್ಲಲ್ಲಿ ಮರುಹುಟ್ಟು ಕಾಣುತ್ತಿದೆ.

ಗಾಂಧೀಜಿ ಬೋಧಿಸಿದ ದುಡಿಮೆರಹಿತ ಸಂಪತ್ತು, ಆತ್ಮಸಾಕ್ಷಿರಹಿತ ಭೋಗ, ನೀತಿರಹಿತ ವಾಣಿಜ್ಯ, ತತ್ವರಹಿತ ರಾಜಕೀಯ, ಶೀಲವಿಲ್ಲದ ಶಿಕ್ಷಣ, ತ್ಯಾಗವಿಲ್ಲದ ಪೂಜೆ, ಮಾನವೀಯತೆ ಇಲ್ಲದ ವಿಜ್ಞಾನ ಎಂಬ ಏಳು ಸಾಮಾಜಿಕ ಪಾಪಗಳನ್ನು ಜಗತ್ತು ಮರೆತರೆ ಅಪಾಯ. ಯುವಮನಸುಗಳ ಎದೆಯೊಳಗೆ ಗಾಂಧಿಚಿಂತನೆಯನ್ನು ಬಿತ್ತಬೇಕಾದದ್ದು ಇಂದಿನ ಜರೂರು.

ಜಗತ್ತಿನ ಬಹುತೇಕ ದೇಶಗಳಲ್ಲಿನ ರಸ್ತೆ, ಸ್ಮಾರಕ, ಸಂಸ್ಥೆಗಳಿಗೆ ಗಾಂಧಿಯ ಹೆಸರಿಟ್ಟಿರುವುದು, ವಿವಿಧ ದೇಶಗಳ ಪ್ರಮುಖ 270 ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರಗಳಿರುವುದು ಅವರ ಪ್ರಸ್ತುತತೆಗೆ ಸಾಕ್ಷಿ. ಗಾಂಧೀಜಿ ಬೋಧನೆ, ತತ್ವಾದರ್ಶಗಳಿಗೆ ಸಾರ್ವಕಾಲಿಕ ಮಹತ್ವವಿದೆ. ಇತರ ದೇಶಗಳೆಲ್ಲಾ ತಮ್ಮಲ್ಲಿಗೆ ಭೇಟಿ ನೀಡುವ ಗಾಂಧಿದ್ವೇಷಿಗಳನ್ನೂ ‘ಗಾಂಧಿ ನಾಡಿನಿಂದ ಬಂದವರು’ ಎಂದೇ ಆದರಣೀಯವಾಗಿ ನಡೆಸಿಕೊಳ್ಳುತ್ತವೆ!

ಗಾಂಧಿ ಎಂಬ ಅರಿವಿನ ಬೆಳಕಿನಲ್ಲಿ ನಾವೆಲ್ಲ ಆತ್ಮಾನು ಸಂಧಾನದ ಮತ್ತು ಆತ್ಮಶುದ್ಧಿಯ ದಿವ್ಯಮಾರ್ಗವನ್ನು ಅರಸಬೇಕಾದದ್ದು, ಅನುಸರಿಸಬೇಕಾದದ್ದು ಅಗತ್ಯ. ಗಾಂಧಿಸ್ಮೃತಿಯು ಸಾತ್ವಿಕಪ್ರಜ್ಞೆಯಾಗಿ, ಆತ್ಮಸಾಕ್ಷಿಯಾಗಿ ಎಲ್ಲಕಾಲಕ್ಕೂ ಉಳಿದಿರುತ್ತದೆ. ಹುತಾತ್ಮರಾದ ಎಪ್ಪತ್ತೈದು ವರ್ಷಗಳ ನಂತರವೂ ಮತ್ತೆಮತ್ತೆ ಜಗದಾತ್ಮವನ್ನು ಪ್ರಚೋದಿಸುತ್ತಾ, ಪ್ರಭಾವಿಸುತ್ತಲೇ ಇರುವ ಗಾಂಧಿ ಎಂಬ ವಿಶ್ವಚೇತನದ ನೆನಕೆಯಲ್ಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT