ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹಿತ್ತಿಲೂ ಇಲ್ಲ ಮದ್ದಿನ ಗಿಡವೂ ಇಲ್ಲ

ಹಿತವಾದ ಹಿತ್ತಿಲು ಇಲ್ಲದ ಮನೆಯಲ್ಲಿ ಖುಷಿಯಿಂದ ಬದುಕುವುದಾದರೂ ಹೇಗೆ?
Last Updated 18 ನವೆಂಬರ್ 2021, 4:44 IST
ಅಕ್ಷರ ಗಾತ್ರ

ಬೆಂಗಳೂರಿನ ಒಂದು ಕಾಲೇಜಿಗೆ ಇತ್ತೀಚೆಗೆ ಉಪನ್ಯಾಸಕ್ಕೆಂದು ಹೋಗಿದ್ದೆ. ಏನನ್ನೋ ವಿವರಿಸು ತ್ತಿದ್ದಾಗ ಮಾತಿನ ಮಧ್ಯೆ ‘ಹಿತ್ತಿಲಗಿಡ ಮದ್ದಲ್ಲ’ ಎಂದೆ. ಆ ಮಾತು ವಿದ್ಯಾರ್ಥಿಗಳ ಮೇಲೆ ಯಾವ ಪರಿಣಾಮವನ್ನೂ ಬೀರಿದಂತೆ ಕಾಣಲಿಲ್ಲ. ನನಗೆ ಅನುಮಾನ ಬಂದು ‘ನಿಮಗೆ ಹಿತ್ತಿಲು ಗೊತ್ತಲ್ವ?’ ಅಂತ ಕೇಳಿದೆ. ಇಡೀ ತರಗತಿ ಮೌನವಾಗಿತ್ತು. ‘ನಾನೊಂದು ಕ್ಲೂ ಕೊಡ್ತೀನಿ ಆಗ ಹೇಳಬಹುದಾ?’ ಅಂದೆ. ಇಡೀ ತರಗತಿ ತಲೆಯಾಡಿಸಿತು.

ಇದು ಮನೆಗೆ ಅಂಟಿಕೊಂಡೇ ಇರುತ್ತದೆ, ಮನೆಯ ಒಂದು ಭಾಗವೂ ಹೌದೆಂದೆ. ಒಬ್ಬನು ಎದ್ದು ನಿಂತು ‘ಸರ್ ಹಿತ್ತಿಲು ಅಂದ್ರೆ ಪಾರ್ಕಿಂಗ್ಲಾಟ್ ಇರಬಹುದಾ?’ ಅಂದ. ನಾನು ಸುಸ್ತಾಗಿ ಹೋದೆ.

ಮನೆಗೆ ಆಪ್ತ ಗೆಳೆಯನಂತೆ ಇರುತ್ತಿದ್ದ ಹಿತ್ತಿಲ ಬಗ್ಗೆ ವಿವರಿಸಿದೆ. ಅಲ್ಲೇ ಬೆಳೆದುಕೊಳ್ಳುತ್ತಿದ್ದ ಕಾಯಿಪಲ್ಲೆ, ಅರಳುತ್ತಿದ್ದ ಬಗೆ ಬಗೆಯ ಹೂವುಗಳು, ಬೆಳೆದಿರುತ್ತಿದ್ದ ಒಂದೊ ಎರಡೊ ಮರಗಳು, ಹಣ್ಣಿನ ಗಿಡಗಳು, ತುಳಸಿ, ತುಂಬೆ, ಅರಿಶಿನದಂತಹ ಔಷಧೀಯ ಸಸ್ಯಗಳು, ಕೆಲವೊಂದು ಕಡೆ ಇರುತ್ತಿದ್ದ ಸಣ್ಣ ಬಾವಿ... ಹೀಗೆ ಮನೆಯನ್ನು ಹಿತವಾಗಿ ಸಲಹುವಂತೆ ಹಿತ್ತಿಲು ಮೈದಳೆದು ನಿಂತಿರುತ್ತಿದ್ದ ಬಗ್ಗೆ ಹೇಳಿದೆ.

ಸಂಜೆ ಹೊತ್ತಿಗೆ ಹಿತ್ತಿಲಲ್ಲಿ ಕೂತು ಒಂದು ದಿವ್ಯ ಏಕಾಂತವನ್ನು ಕಳೆಯಬಹುದಿತ್ತು. ಅಷ್ಟೊಂದು ಸೊಗಸಿರುತ್ತಿತ್ತು ಅದಕ್ಕೆ. ಈಗಲೂ ಬಹುತೇಕ ಹಳ್ಳಿಗಳಲ್ಲಿ ಹಿತ್ತಿಲುಗಳಿವೆ. ಆದರೆ ಅಲ್ಲಿಯೂ ಈಗ ಹಿತ್ತಿಲನ್ನು ಜಾಡಿಸಿ ನಗರದಲ್ಲಿ ಕಟ್ಟುವಂತಹ ಮನೆ ಕಟ್ಟಿಕೊಂಡು, ಸಂಜೆ ಮಹಡಿಯ ಮೇಲೆ, ಕಳೆದುಕೊಂಡ ಒಳ್ಳೆಯ ಕ್ಷಣಗಳನ್ನು ಹುಡುಕುವವರಂತೆ ನಿಂತಿರುತ್ತಾರೆ ಎಂಬುದನ್ನು ಹೇಳಿದೆ. ವಿದ್ಯಾರ್ಥಿಗಳ ಕಣ್ಣುಗಳು ಅರಳಿದ್ದವು.

ಇದು ಅವರ ತಪ್ಪಲ್ಲ. ಹಿತ್ತಿಲನ್ನು ಸಾಯಿಸಿ ಬೆಳೆಯುತ್ತಿರುವ ನಗರಗಳಿಂದ ಆದ ಈ ಬದಲಾವಣೆ ಅವರಿಗಾದರೂ ಹೇಗೆ ತಿಳಿಯಬೇಕು? ಒಂದು ಅಡಿ ಜಾಗವೂ ಅಮೂಲ್ಯವೇ ಆಗಿರುವಾಗ ನಗರಗಳಲ್ಲಿ ಒಂದು ಹಿತವಾದ ಹಿತ್ತಿಲು ನಿರ್ಮಿಸಿಕೊಳ್ಳುವುದು ಕಷ್ಟವೇ ಇರಬಹುದು. ಆದರೆ ಪ್ರಶ್ನೆ ಅದಲ್ಲ. ಹಿತ್ತಿಲಿಗೂ ಜಾಗ ಬಿಡದೆ ಕಟ್ಟಿದ ಮನೆಯಲ್ಲಾದರೂ ನೀವು ಹೇಗೆ ಬದುಕಿದ್ದೀರಿ ಎಂಬುದು.

ಮನೆಯ ಪ್ಲಾನ್ ಮಾಡುವಾಗ ಎಂಜಿನಿಯರ್‌ಗೆ ಎಲ್ಲಿಯೂ ಒಂದಿಂಚು ಜಾಗವೂ ವ್ಯರ್ಥವಾಗಬಾರದೆಂದು ತಾಕೀತು ಮಾಡುತ್ತೀರಿ. ಮನೆ ದೊಡ್ಡದಿರಬೇಕು, ಹಾಲ್ ವಿಶಾಲವಾಗಿರಬೇಕು, ಅಡುಗೆ ಕೋಣೆ ಸುಂದರವಾಗಿರಬೇಕು, ಡೈನಿಂಗ್ ಹಾಲ್ ಅಂತೂ ಕಡ್ಡಾಯ, ಮೂರು ಬೆಡ್ ರೂಮುಗಳು, ಎರಡು ಬಾಲ್ಕನಿಗಳು... ಹೀಗೆ ಎಲ್ಲವನ್ನೂ ಒಳಗೊಂಡಂತೆ ದಢೂತಿಯಾದ ಮನೆ ಕಟ್ಟುತ್ತೇವೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಗಂಡ-ಹೆಂಡತಿ ಇಬ್ಬರೂ ಆಫೀಸ್‌ನಲ್ಲೋ ಯಾವುದೊ ವ್ಯವಹಾರದಲ್ಲೋ ಮುಳುಗಿರುತ್ತಾರೆ. ಇರುವ ಒಂದಿಬ್ಬರು ಮಕ್ಕಳು ಸ್ಕೂಲು, ಕಾಲೇಜು, ಸಂಗೀತ, ಈಜು, ನಾಟ್ಯ ಎಂದೆಲ್ಲ ಮನೆ ಸೇರಲು ರಾತ್ರಿಯೇ ಆಗಬೇಕು. ರಾತ್ರಿ ಮಲಗಿ ಎದ್ದು ಹೋಗಲು ಒಂದಿಂಚು ಜಾಗವೂ ವ್ಯರ್ಥವಾಗದಂತೆ ಮನೆ ಕಟ್ಟಿಸಿಕೊಳ್ಳುತ್ತೇವೆ. ಹಿತ್ತಿಲು ನಮಗೆ ವ್ಯರ್ಥವಾಗುವ ಜಾಗದಂತೆಯೇ ತೋರುತ್ತದೆ. ಅದಕ್ಕಿಂತ ಹೆಚ್ಚು ವ್ಯರ್ಥದ ಬದುಕನ್ನು ಕಳೆಯುತ್ತಿರುವುದು ನಮ್ಮ ಗಮನಕ್ಕೆ ಬರುವುದೇ ಇಲ್ಲ.

ಸುಂದರವಾದ ಕಿಚನ್ ಕಟ್ಟಿಸಿಕೊಂಡು ವಾರಕ್ಕೆ ಮೂರು ದಿನ ಹೋಟೆಲ್‌ನಲ್ಲಿ ತಿನ್ನುತ್ತೇವೆ. ಹಿತ್ತಿಲಿನ ಪಳೆಯುಳಿಕೆಯೋ ಅನ್ನುವಂತೆ ಮನೆಯ ಮುಂದೊಂದು ಒಂಟಿ ತುಳಸಿ ಗಿಡವಿದ್ದೀತು ಅಷ್ಟೆ! ಅದೊಂದು ನಗರದ ಬದುಕಿನ ರೂಪಕದಂತೆ ಕಾಣಿಸುತ್ತದೆ.

ಮುಂಬೈನಲ್ಲಿರುವ ಗೆಳೆಯ ಕುಂಡಗಳಲ್ಲಿ ಒಂದೆರಡು ಗಿಡಗಳನ್ನು ನೆಡಲು ಮಣ್ಣಿಗಾಗಿ ಪರದಾಡಿ ಕೊನೆಗೆ ಅಮೆಜಾನ್‌ನಲ್ಲಿ ಖರೀದಿಸಿದ. ಇದು ದಶಕದ ಹಿಂದಿನ ಕಥೆ. ಇತ್ತೀಚಿನ ಕೆಲವು ನಗರಗಳು ಹಿಡಿ ಮಣ್ಣು ಸಿಗದಷ್ಟು ಆಧುನೀಕರಣಗೊಂಡಿರುವುದು ನಿಗೂಢ ವಿಷಯವೇನಲ್ಲ. ಹಳ್ಳಿಗಳಲ್ಲೂ ಮನೆಯ ಮುಂದಿನ ಅಂಗಳಗಳು ಈಗ ಸಿಮೆಂಟಿನ ಹಾದಿಗಳಾಗಿವೆ. ಮಕ್ಕಳು ಮಣ್ಣಿನಲ್ಲಿ ಆಡುವುದು ದೂರದ ಮಾತು. ಇನ್ನು ಮಕ್ಕಳು ಮಣ್ಣು ತಿನ್ನುತ್ತಿದ್ದರು ಎಂಬುದು ಈಗಿನ ಮಕ್ಕಳಿಗೆ ತೀರಾ ಅಚ್ಚರಿಯ ಸುದ್ದಿಯೇ ಸರಿ.

ನಗರದ ಬದುಕು ‘ಬಿಗ್‌ಬಾಸ್’ ಮನೆಯಂತಾಗಿದೆ. ಬಾಳನ್ನು ಕೂಡ ಒಂದು ಟಾಸ್ಕ್‌ನಂತೆಯೇ ಸ್ವೀಕರಿಸಿ ನಟಿಸುತ್ತಿದ್ದೇವೆ. ನಾವು ಯಾರೂ ಸಹಜವಾಗಿ ಬದುಕುತ್ತಿಲ್ಲ. ಎಲ್ಲದರಲ್ಲೊಂದು ಕೃತಕತೆ ಇದೆ. ಹಣದ ಹಿಂದೆ, ಹೆಸರಿನ ಹಿಂದೆ, ಆಸ್ತಿಯ ಹಿಂದೆ ಆತುರದಲ್ಲಿ ಓಡುತ್ತಿದ್ದೇವೆ. ಆದರೆ ಅದ್ಯಾವುದೂ ನಮಗೆ ಖುಷಿ ಕೊಡುವುದಿಲ್ಲವೆಂಬುದು ಅರಿವಾಗುವ ಹೊತ್ತಿಗೆ ಬದುಕೇ ಮುಗಿದುಹೋಗಿರುತ್ತದೆ.

‘ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೆ ಸುತ್ತಿ ಸಾವಂತೆ...’ ಅನ್ನುವ ಅಕ್ಕನ ವಚನ ಸದ್ಯದ ಬಾಳ್ವೆಗೆ ಹೋಲುತ್ತದೆ. ಆಧುನೀಕರಣದ ಹೆಸರಿನಲ್ಲಿ ನಾವು ಹೊಂದುತ್ತಿರುವ ಎಲ್ಲಾ ಸವಲತ್ತುಗಳು ನಮ್ಮನ್ನು ಬಂಧಿಸುತ್ತಿವೆ. ಅದು ನಾವೇ ಬಯಸಿ ಬಯಸಿ ಹಾಕಿಸಿಕೊಂಡ ಬೇಡಿ. ಅದರಿಂದಾಚೆ ಬರಲಾಗದೆ ಒದ್ದಾಡುತ್ತೇವೆ. ಒಂದೊಳ್ಳೆ ಬದುಕು ಅಲ್ಲಿಯೇ ಮುಗಿದು ಹೋಗುತ್ತದೆ. ಹಾಗಾಗದಂತೆ ಬದುಕಲು ಸಾಧ್ಯವಿದೆ. ಅದಕ್ಕೆ ನಾವು ಮನಸ್ಸು ಮಾಡಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT