ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹಾರುವ ಅತಿಥಿ... ಎತ್ತ ಸಾಗುತಿ?

ಕೃತಕ ಬೆಳಕು ಉಂಟುಮಾಡುವ ಬೆಳಕಿನ ಮಾಲಿನ್ಯವು ನಿಶಾಚರಿ ಪ್ರಾಣಿ, ಪಕ್ಷಿಗಳ ವಲಸೆ ಮತ್ತು ಜೀವನಕ್ರಮದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ...
Last Updated 7 ಅಕ್ಟೋಬರ್ 2022, 21:39 IST
ಅಕ್ಷರ ಗಾತ್ರ

‘ನಿಮ್ಮ ಹಳ್ಳಿಗೆ ಹೈಮಾಸ್ಟ್ ದೀಪದ ವ್ಯವಸ್ಥೆ ಮಾಡುತ್ತೇನೆ’ ಎಂದ ಸ್ಥಳೀಯ ಶಾಸಕರ ವಿರುದ್ಧ ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ‘ಊರಿಗೆ ದೊಡ್ಡ ದೀಪ ಬಂದರೆ ಒಳ್ಳೆಯದಲ್ಲವೇ’ ಎಂದು ಪ್ರತಿಭಟನೆಯಲ್ಲಿ ನಿರತರಾದವರನ್ನು ಸುದ್ದಿವಾಹಿನಿಯವರು ಪ್ರಶ್ನಿಸಿದಾಗ ‘ನೋಡಿ, ನಮ್ಮದು 500 ಮನೆಗಳಷ್ಟೇ ಇರುವ ಚಿಕ್ಕಹಳ್ಳಿ. ಊರಿನ ತುಂಬಾ ಗೋಣಿ, ಆಲದ ಮರಗಳು ಇವೆ. ಅವುಗಳಲ್ಲಿ ಸಾವಿರಾರು ಪಕ್ಷಿಗಳು ಗೂಡು ಕಟ್ಟುತ್ತವೆ, ನೂರಾರು ಬಾವಲಿಗಳು ಆಶ್ರಯ ಪಡೆದಿರುತ್ತವೆ. ಅವುಗಳಿಗೆ ಕಿರಿಕಿರಿಯಾಗುತ್ತದೆ. ಆದ್ದರಿಂದ ಎತ್ತರದ ಹಾಗೂ ಭಾರಿ ಬೆಳಕಿನ ದೀಪ ನಮಗೆ ಬೇಡ’ ಅಂದರು.

ಹಳ್ಳಿಗರ ಮಾತಿನಲ್ಲಿ ಸತ್ಯವಿತ್ತು. ಬಹುಮಹಡಿ ಕಟ್ಟಡ, ವಾಹನ, ಅಮ್ಯೂಸ್‌ಮೆಂಟ್ ಪಾರ್ಕ್, ಪಟಾಕಿ ಸಿಡಿತದಿಂದ ಹೊಮ್ಮುವ ತೀಕ್ಷ್ಣ ಕೃತಕ ಬೆಳಕು ಬೆಳಕಿನ ಮಾಲಿನ್ಯ ಉಂಟು ಮಾಡಿ ನಿಶಾಚರಿ ಪ್ರಾಣಿ– ಪಕ್ಷಿಗಳ ವಲಸೆ ಮತ್ತು ಜೀವನಕ್ರಮದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂಬ ಅಂಶ ವೈಜ್ಞಾನಿಕ ಅಧ್ಯಯನದಿಂದ ತಿಳಿದುಬಂದಿದೆ. ವಿಶೇಷವಾಗಿ ವಲಸೆ ಹಕ್ಕಿಗಳಂತೂ ಕೃತಕ ಬೆಳಕಿನಿಂದ ತಮ್ಮ ತಾಣವನ್ನು ತಲುಪಲು ಭಾರಿ ಕಷ್ಟಪಡುತ್ತವೆ ಎಂಬುದು ತಜ್ಞರ ಅಭಿಮತ.

ರಾತ್ರಿ ಹೊತ್ತಿನಲ್ಲಿ ಮಾತ್ರ ವಲಸೆ ಕೈಗೊಳ್ಳುವ ಬಾತುಕೋಳಿ, ಹೆಬ್ಬಾತು, ಗೊರವ ಮತ್ತು ಹಾಡುಗಾರ ಹಕ್ಕಿಗಳು ಕೃತಕ ಬೆಳಕಿಗೆ ಸಿಲುಕಿ ದಾರಿತಪ್ಪಿ ಅಲ್ಲಲ್ಲೇ ಸುತ್ತುತ್ತಾ ಬೃಹತ್ ಕಟ್ಟಡ, ಎಲೆಕ್ಟ್ರಿಕ್ ತಂತಿಗಳಿಗೆ ಬಡಿದು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತವೆ.
ಪೆಟ್ರಿಲ್ಸ್‌ ಕೃತಕ ಬೆಳಕಿಗೆ ಆಕರ್ಷಣೆಗೊಂಡು ಭೂಮಿಗಿಳಿದು ಇಲಿ, ಬೆಕ್ಕುಗಳಿಗೆ ಆಹಾರವಾದ ಎಷ್ಟೋ ನಿದರ್ಶನಗಳಿವೆ. ಹಾರುವ ಹಕ್ಕಿಗಳ ಸಂವಹನ, ಆಹಾರದ ಹುಡುಕಾಟ ಮತ್ತು ವಲಸೆ ಮಾದರಿಗಳನ್ನು ಕೃತಕ ಬೆಳಕು ಬದಲಾಯಿಸುವುದರಿಂದ, ವರ್ಷವೊಂದಕ್ಕೆ ಲಕ್ಷಾಂತರ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ.

ವಿಶ್ವದ ಕೃತಕ ಬೆಳಕಿನ ಪ್ರಮಾಣ ಪ್ರತಿವರ್ಷ ಶೇಕಡ 2.5ರಷ್ಟು ಹೆಚ್ಚುತ್ತಿದೆ. ನಗರಗಳ ಕೃತಕ ಬೆಳಕಿನಿಂದ ವಲಸೆ ಪಕ್ಷಿಗಳ ದೇಹದ ಜೈವಿಕ ಗಡಿಯಾರದಲ್ಲಿ ಏರುಪೇರು ಕಂಡುಬರುತ್ತಿದೆ. ಬೆಳಕಿನ ಮಾಲಿನ್ಯದಿಂದ ಹಕ್ಕಿಗಳ ಸ್ವಭಾವ, ಸಂತಾನೋತ್ಪತ್ತಿ ಕ್ಷಮತೆ, ವಲಸೆ ಮಾದರಿಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಕ್ರಿಮಿಕೀಟಗಳು ಕೃತಕ ಬೆಳಕಿನಿಂದ ಆಕರ್ಷಿತಗೊಂಡು ದೀಪಗಳ ಬಳಿಸಾರಿ ಪ್ರಾಣ ಕಳೆದುಕೊಳ್ಳುವುದರಿಂದ ಹಕ್ಕಿಗಳಿಗೆ ಆಹಾರ ಕಡಿಮೆಯಾಗಿದೆ. ಪಕ್ಷಿಗಳಷ್ಟೇ ಅಲ್ಲ, ಸಮುದ್ರತೀರದ ಉದ್ದಕ್ಕೂ ಹಬ್ಬಿರುವ ಕೃತಕ ಬೆಳಕಿನಿಂದ ಕಂಗಾಲಾಗಿ ಕಡಲಾಮೆಗಳು ಮರಳಿನಲ್ಲಿ ಗೂಡು ಕಟ್ಟುವುದನ್ನು ಕಡಿಮೆ ಮಾಡಿವೆ.

2016ರಲ್ಲಿ ಕಂಪ್ಯೂಟರ್ ಎಂಜಿನಿಯರ್‌ಗಳು ವಿಶ್ವದ ರಾತ್ರಿ ಆಕಾಶದ ಅಟ್ಲಸ್ ಅನ್ನು ಬಿಡುಗಡೆ ಮಾಡಿದಾಗ, ಭೂಮಿಯು ನಕ್ಷತ್ರಪುಂಜದಂತೆಹೊಳೆಯುವುದನ್ನು ಕಂಡು ಜನ ನಿಬ್ಬೆರಗಾಗಿದ್ದರು.ಸಿಂಗಪುರ, ಕತಾರ್, ದುಬೈ ನಗರವು ಕೃತಕ ಬೆಳಕಿನ ಓಕುಳಿ ಆಡುತ್ತಿದ್ದವು. ಉತ್ತರ ಅಮೆರಿಕದ ಬಹುಭಾಗ, ಯುರೋಪ್, ಚೀನಾ ಮತ್ತು ಭಾರತದ ಅನೇಕ ನಗರ ಭಾಗಗಳು ಕೃತಕ ಬೆಳಕಿನಿಂದ ಸ್ಫಟಿಕದಂತೆ ಮಿಂಚುತ್ತಿದ್ದವು. ಸೈಬೀರಿಯ, ಸಹಾರ ಮರುಭೂಮಿ ಮತ್ತು ಅಮೆಜಾನ್ ಕಾಡುಗಳಲ್ಲಿ ಮಾತ್ರ ಕತ್ತಲು ಕವಿದಿತ್ತು.

ಜನರ ವಾಹನಗಳ ರಾತ್ರಿ ಓಡಾಟಕ್ಕೆ, ಭದ್ರತೆಗೆ ಬೆಳಕಿನ ಅವಶ್ಯಕತೆ ಇದೆ. ಆದರೆ ಅದು ಪ್ರಾಣಿ-ಪಕ್ಷಿ,ವನ್ಯಜೀವಿ ಸಂತತಿಗಳ ಸಹಜ ಜೀವನಕ್ಕೆ ತೊಂದರೆಯುಂಟು ಮಾಡಬಾರದು ಎಂಬ ನಿಯಮ 2020ರಲ್ಲಿ ಗುಜರಾತಿನ ಗಾಂಧಿನಗರದಲ್ಲಿ,ವಲಸೆ ಹಕ್ಕಿಗಳ ಸಂತತಿ ರಕ್ಷಣೆ ವಿಷಯದ ಕುರಿತು ನಡೆದ 13ನೆಯ ‘ಕಾನ್ಫರೆನ್ಸ್ ಆಫ್ ಪಾರ್ಟಿಸ್’ನಲ್ಲಿಅನುಮೋದನೆಗೊಂಡು ನಿಯಮವಾಗಿ ಹೊರಹೊಮ್ಮಿದೆ.

ನಿಶಾಚರಿ ಬಾವಲಿಗಳ ಕುರಿತಾದ ‘ಯುರೊ ಬ್ಯಾಟ್ಸ್’ ನಿರ್ಣಯದ ಪ್ರಕಾರ, ನಗರಗಳ ರಾತ್ರಿ ಬೆಳಕನ್ನು ಡಿಮ್ ಮಾಡಬೇಕೆಂಬ ನಿಯಮರಾಷ್ಟ್ರಗಳಲ್ಲಿ ಇದೆ. ಜೀವಿಗಳ ಸಮರ್ಥ ಬೆಳವಣಿಗೆಗೆ ಶುದ್ಧ ನೀರು, ಗಾಳಿ ಹೇಗೆ ಅವಶ್ಯವೋ ಹಾಗೆಯೇ ಸ್ವಾಭಾವಿಕ ಕತ್ತಲೆಯೂ ಅತ್ಯವಶ್ಯಕ. ಅಮೆರಿಕದ ‘ಸೈನ್ಸ್ ಡೈಲಿ’ ಪತ್ರಿಕೆ ಅಲ್ಲಿನ 298 ಪಕ್ಷಿಪ್ರಭೇದಗಳು ಬೆಳಕಿನ ಮಾಲಿನ್ಯದಿಂದ ಬೃಹತ್ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಅಸುನೀಗುತ್ತವೆ ಎಂದು ವರದಿ ಮಾಡಿದೆ. ಸಾಗರದಾಳದ ಜೀವಿ ವ್ಯವಸ್ಥೆಯನ್ನು ಅರಿಯಲು ಅಧ್ಯಯನದ ಹೆಸರಿನಲ್ಲಿ ಅಲ್ಲೂ ಕೃತಕ ಬೆಳಕಿನ ವ್ಯವಸ್ಥೆ ಮಾಡಿಕೊಂಡಿರುವ ನಾವು ಜಲಚರಗಳಿಗೆ ತೊಂದರೆ ಕೊಡುತ್ತಿದ್ದೇವೆ.

ಕೃತಕ ಬೆಳಕು ಬಳಸುವ ಗಾಜಿನ ಬೃಹತ್ ಕಟ್ಟಡಗಳು ರಾತ್ರಿ ಪ್ರಯಾಣದ ಪಕ್ಷಿಗಳಿಗೆ ಕಂಟಕ ಎಂದು ಸಾಬೀತಾಗಿರುವುದರಿಂದ ರಾತ್ರಿ ವೇಳೆ ಅವುಗಳ ಬೆಳಕನ್ನು ಕಡಿಮೆ ಮಾಡುವುದೇ ಪರಿಹಾರವಾಗಿದೆ. ಅಮೆರಿಕ, ಯುರೋಪ್‌ನಲ್ಲಿ ರಾತ್ರಿಯ ಕೃತಕ ಬೆಳಕನ್ನು ನಿಯಂತ್ರಿಸಲು ಪ್ರತ್ಯೇಕ ಸಂಘಟನೆಗಳಿವೆ. ಅಮೆರಿಕದಲ್ಲಿ ರಾತ್ರಿ ಕತ್ತಲಿನ ರಕ್ಷಣೆಗಾಗಿ ಇರುವ ಇಂಟರ್‌ನ್ಯಾಷನಲ್
ಡಾರ್ಕ್ ಸ್ಕೈ ಅಸೋಸಿಯೇಷನ್ ಜನರಿಗೆ ಕೃತಕ ಬೆಳಕಿನ ಮಾಲಿನ್ಯದ ಕುರಿತು ಜಾಗೃತಿ ಮೂಡಿಸುತ್ತಿದೆ. ಅಂದಹಾಗೆ ಅಕ್ಟೋಬರ್‌ ತಿಂಗಳ ಎರಡನೇ ಶನಿವಾರವು ವಿಶ್ವ ವಲಸೆ ಹಕ್ಕಿಗಳ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT