ಇದೋ, ಇದು ಜೋಕ್‌ ಸಭಾ

ಮಂಗಳವಾರ, ಜೂನ್ 18, 2019
28 °C

ಇದೋ, ಇದು ಜೋಕ್‌ ಸಭಾ

Published:
Updated:
Prajavani

ನಮಸ್ಕಾರ, ಈಗ ಜೋಕ್ ಸಭೆ ಚುನಾವಣೆಯ ಫಲಿತಾಂಶದ ಸಾರಾಂಶ.

ರಾಜ್ಯದಲ್ಲಿ ಭೀಕರ ಬರಗಾಲ: ರಾಜ್ಯದ ಕೈಲಾಸ ಪಕ್ಷ ಈ ಬಾರಿಯ ಜೋಕ್ ಸಭೆ ಚುನಾವಣೆಯಲ್ಲಿ ಅಕ್ಷರಶಃ ಕೈ ಲಾಸ್ ಮಾಡಿಕೊಂಡು ಕುಳಿತಿದೆ. ಬರೀ ಒಂದು ಸೀಟು ಪಡೆದಿರುವ ಅವರು ಮುಂದಿನ ಐದು ವರ್ಷ ಇದೇ ‘ಬರಗಾಲ’ದ ಪರಿಸ್ಥಿತಿಯಲ್ಲಿ ಬದುಕಬೇಕಾಗಿದೆ.

ಚಂಡಮಾರುತ: ಪಶ್ಚಿಮ ಬಂಗಾಳಕ್ಕೆ ‘ಫೋನಿ’ ಚಂಡಮಾರುತದಿಂದ ಯಾವುದೇ ಸಮಸ್ಯೆಯಾಗದಿದ್ದರೂ, ಈಗ ಹೊಡೆದ ‘ನಮೋ’ ಚಂಡಮಾರುತವು ದೀದಿ ಪಕ್ಷ ಮತ್ತು ಎಡಪಕ್ಷಗಳಿಗೆ ತೀವ್ರ ಹಾನಿ ಉಂಟು ಮಾಡಿದೆ. ಎಂದಿನಂತೆ ಒಡಿಶಾದಲ್ಲಿ ಮುಂಜಾಗ್ರತೆ ಕ್ರಮದ ಫಲವಾಗಿ ‘ನಮೋ’ದಿಂದ ಅಪಾರ ನಷ್ಟವೇನಾಗಿಲ್ಲ. ಚಂಡಮಾರುತದ ತಾಣ ಆಂಧ್ರಪ್ರದೇಶದಲ್ಲಿ ಟಿಡಿಪಿಗೆ ‘ಜಗನ್’ನ ಭಾರೀ ಹೊಡೆತ ಬಿದ್ದಿದೆ.

ಹಗಲು ದರೋಡೆ: ತಮಿಳುನಾಡಿನಲ್ಲಿರುವ ‘ಅಮ್ಮ ಮನೆ’ಯಲ್ಲಿ ಕಂಡು ಕೇಳರಿಯದಂತಹ ದರೋಡೆ ನಡೆದಿದೆ. ಉಟ್ಟ ಬಟ್ಟೆಯೊಂದನ್ನು ಬಿಟ್ಟು ಮನೆಯಲ್ಲಿದ್ದ ಬೆಲೆಬಾಳುವ (ಮತ್ತು ವೇಸ್ಟ್‌ಗಳು) ವಸ್ತುಗಳನ್ನು ಹಗಲು ಹೊತ್ತಿನಲ್ಲಿಯೇ ದೋಚಿಕೊಂಡು ಹೋಗಿದ್ದಾರೆ. ಈ ಕೃತ್ಯ ಎಸಗಿದವರು ‘ಅಮ್ಮನ ಮನೆ’ಯ ಕಡು ವೈರಿಗಳೆಂದು ತಿಳಿದುಬಂದಿದೆ.

ಆನೆಗಳ ದಾಳಿಯಿಂದ ಪಾರು: ಉತ್ತರ ಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಿರುವುದರಿಂದ ಅಲ್ಲಿನ ಮುಖ್ಯಮಂತ್ರಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಯಾವುದೇ ರೀತಿಯ ಅನಾಹುತಗಳಾಗಿಲ್ಲ.

ಬಸ್ಸಿನಡಿಗೆ ಸೈಕಲ್ ಸವಾರ: ಉತ್ತರ ಪ್ರದೇಶದ ಲಖನೌ ನಗರದಲ್ಲಿ ಯಾದವ್ ಎಂಬ ಸೈಕಲ್ ಸವಾರನೊಬ್ಬ ಬಸ್ಸಿನಡಿಗೆ ಬಿದ್ದು, ತೀರಾ ಆಶ್ಚರ್ಯಕರ ರೀತಿಯಲ್ಲಿ ಒಂದೇ ಕಾಲು ಮುರಿದುಕೊಂಡು ಪಾರಾಗಿದ್ದಾರೆ.

ರೂಪಾಯಿ ಬೆಲೆ ಕುಸಿತ: ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂಬ ಹಟ ತೊಟ್ಟು, ಹಣದ ಹೊಳೆಯನ್ನೇ ಹರಿಸಿದ್ದರು. ಆದರೆ ಅವರು ಹಂಚಿದ ನೋಟುಗಳಿಗೆ ಮತದಾರ ಬಂಧುಗಳು ಅವರಿಗೆ ಎಳ್ಳಷ್ಟೂ ಬೆಲೆ ಕೊಡಲಿಲ್ಲ. ‘ರೂಪಾಯಿ ಬೆಲೆ ಇಷ್ಟು ಕುಸಿಯುತ್ತದೆ ಅಂದ್ಕೊಂಡಿರಲಿಲ್ಲ’ ಎಂದು ಡಿಪಾಸಿಟ್ ಕಳಕೊಂಡ ಅಭ್ಯರ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಶಸ್ತಿ ಪ್ರದಾನ: ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಗೆದ್ದು ಬಂದಿರುವ ಲಾಯಕ್ ರಾಮ್ ಅವರಿಗೆ ದೇಶದ ಅತ್ಯುನ್ನತ ‘ನಾಲಾಯಕ್’ ಪ್ರಶಸ್ತಿಯನ್ನು ಕೊಡಲು ತೀರ್ಮಾನಿಸಲಾಗಿದೆ ಎಂದು ‘ವೋಟರ್ಸ್’ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಆತ್ಮಹತ್ಯೆ: ತಾವು ಈವರೆಗೆ ಗೆದ್ದು ಬಂದಿದ್ದ ಜೋಕ್ ಸಭಾ ಕ್ಷೇತ್ರವನ್ನು ಕುಟುಂಬದವರೊಬ್ಬರಿಗೆ ಬಿಟ್ಟು ಕೊಟ್ಟು, ಬೇರೆ ‘ಡೇಂಜರಸ್ ಝೋನ್’ ಕ್ಷೇತ್ರದಲ್ಲಿ ನಿಂತ ಮುದ್ದೆ ಮಂದಣ್ಣ, ಈ ಬಾರಿ ಸೋಲನ್ನು ಮೈಗೆಳೆದುಕೊಂಡಿದ್ದಾರೆ.

ಭಯೋತ್ಪಾದಕಳಾಗಿದ್ದರೂ ಹೆಚ್ಚಿನ ಅಂಕ!: ಸಾಮೂಹಿಕ ಕೊಲೆಗಳ ಹಿನ್ನೆಲೆಯಿರುವ ಅಭ್ಯರ್ಥಿ ಒಬ್ಬರು ಅತೀ ಹೆಚ್ಚಿನ ಅಂಕಗಳನ್ನು ಪಡೆದು ಪಾಸಾಗಿದ್ದಾರೆ. ಅವರಿಗೆ ಮುಂದೆ ರಕ್ಷಣಾ ಖಾತೆ ಸಚಿವರಾಗುವ ಆಸೆಯಂತೆ!

ವಯಾನಾಡಿನಲ್ಲಿ ಸುಸಜ್ಜಿತ ಗುಹೆ: ಗೇರಳದ ವಯಾನಾಡ್ ಕ್ಷೇತ್ರದಿಂದ ಆಯ್ಕೆಯಾಗಿರುವ ಕೈಲಾಸ ಪಕ್ಷದ ಅಧ್ಯಕ್ಷರು ಇನ್ನು ಮುಂದೆ ಅಲ್ಲೇ ವಾಸ ಮಾಡುತ್ತಾರೆ ಎಂದು ತಿಳಿದುಬಂದಿದೆ. ಅಲ್ಲಿರುವ ಬೆಟ್ಟವೊಂದರಲ್ಲಿ ಸುಸಜ್ಜಿತ ಗುಹೆಯನ್ನು ನಿರ್ಮಿಸಿ, ಅಲ್ಲೇ ವಾಸಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ತೆನೆ ಹೊತ್ತ ಮಹಿಳೆ ಬಾವಿಗೆ!: ಮಂಡ್ಯದಲ್ಲಿ ಎರಡು ಕಳ್ಳೆತ್ತುಗಳು ತೆನೆ ಹೊತ್ತ ಮಹಿಳೆಯೊಬ್ಬರ ಮೇಲೆ ಹರಿಹಾಯ್ದ ಪರಿಣಾಮ, ಅವರು ನಲವತ್ತು ಅಡಿ ಆಳದ ಬಾವಿಯೊಂದಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಪೊಲೀಸರು ಕಳ್ಳೆತ್ತುಗಳ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಶಂಕಾಸ್ಪದ ಸಾವು: ತುಂಬಾ ಅಂತರದಿಂದ ಪ್ರತಿಸ್ಪರ್ಧಿಯನ್ನು ಸೋಲಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಅಭ್ಯರ್ಥಿಯೊಬ್ಬರು ಈಗ ಹೀನಾಯವಾಗಿ ಸೋಲುವುದಕ್ಕೆ ತಮ್ಮ ಪಕ್ಷದವರೇ ಕಾರಣ ಎಂದು ಅಳಲು ತೋಡಿಕೊಂಡಿದ್ದಾರೆ. ‘ಇದು ಸ್ವಾಭಾವಿಕ ಸಾವು ಅಲ್ಲ, ಯಾರೋ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ’ ಎಂದು ಹೇಳಿರುವ ಅವರು, ಸಿಬಿಐ ತನಿಖೆಗೆ ಒತ್ತಾಯಿಸುವುದಿಲ್ಲ ಎಂದಿದ್ದಾರೆ

ಓಟಗಾರನ ಮೇಲೆ ಡ್ರಗ್ಸ್ ಆರೋಪ: ಚುನಾವಣೆ ರೇಸ್‌ನಲ್ಲಿ ಜಯಭೇರಿ ಗಳಿಸಿದ ಅಭ್ಯರ್ಥಿಯೊಬ್ಬರ ಮೇಲೆ ಎದುರಾಳಿ ಪಕ್ಷದ ಅಭ್ಯರ್ಥಿ ಗಂಭೀರ ಆರೋಪ ಮಾಡಿದ್ದಾರೆ. ಆತ ಮತದಾರರಿಗೆ ಆಮಿಷಗಳನ್ನು ಒಡ್ಡಿದ್ದು ಮಾತ್ರವಲ್ಲ, ಅಕ್ರಮ ವೋಟರ್ ಐ.ಡಿ.ಗಳ ಮೂಲಕ ಗೋಲ್‌ಮಾಲ್ ಮಾಡಿರುವುದರಿಂದಲೇ ಗೆದ್ದಿದ್ದಾನೆ ಎಂದು ಸೋತ ‘ಓಟಗಾರ’ ವಾದಿಸಿದ್ದಾರೆ.

ಭರ್ಜರಿ ದ್ವಿಶತಕ: ಹಾಲಿ ಸಂಸದರೊಬ್ಬರಿಗೆ ಅವರ ಕ್ಷೇತ್ರದ ಜನರು ಈ ಬಾರಿ ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ. ಎಷ್ಟು ಹೀನಾಯವಾಗಿ ಸೋತಿದ್ದಾರೆ ಎಂದರೆ, ಅವರಿಗೆ ಬರೀ ಇನ್ನೂರು ವೋಟುಗಳಷ್ಟೇ ಬಿದ್ದಿವೆ.

ಮಂಗಳ ಗ್ರಹಕ್ಕೆ ಆಹ್ವಾನ: ಮತ್ತೊಮ್ಮೆ ನಮೋ ಸರ್ಕಾರ ಬಂದಿರುವುದರಿಂದ ದೇಶ ಬಿಟ್ಟು ಮಂಗಳ ಗ್ರಹದಲ್ಲಿ ವಾಸಿಸಲು ಇಚ್ಛೆಯಿದ್ದರೆ ತಮ್ಮ ಹೆಸರನ್ನು ಕಳುಹಿಸಿಕೊಡಬಹುದು ಎಂದು ಸಚಿವ ಲಿಂಬೆಯಣ್ಣರಿಗೆ ನಾಸಾ ವಿಶೇಷ ಆಹ್ವಾನ ನೀಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !