ಸೋಮವಾರ, ಡಿಸೆಂಬರ್ 6, 2021
24 °C
ಈಗಿನ ರೈತರ ಹೋರಾಟಕ್ಕೂ ನೀಲಿ ಗಿಡ ಬೆಳೆದ ಆಗಿನ ರೈತರ ಹೋರಾಟಕ್ಕೂ ಸಾಮ್ಯತೆಯಿದೆ

ಸಂಗತ | ಸಂಘಟಿತ ಹೋರಾಟದ ಎರಡು ಮಾದರಿ

ಸಿ.ಎನ್. ರಾಮಚಂದ್ರನ್ Updated:

ಅಕ್ಷರ ಗಾತ್ರ : | |

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ‘ರೈತರ ಪ್ರತಿಭಟನೆಯನ್ನು ಸರ್ಕಾರವು ಅತ್ಯಂತ ಲಘುವಾಗಿ ಪರಿಗಣಿಸಿತ್ತು’ ಎಂಬ ಸತಾರ್ಕಿಕ ಹಾಗೂ ಅರ್ಥಪೂರ್ಣವಾದ ವಾಕ್ಯವನ್ನು ಸಂಪಾದಕೀಯದಲ್ಲಿ (ಪ್ರ.ವಾ., ನ. 20) ಓದುತ್ತಿದ್ದಂತೆ, 160 ವರ್ಷಗಳ ಹಿಂದೆ ನಡೆದಿದ್ದ ರೈತ ಹೋರಾಟ ನೆನಪಿಗೆ ಬಂದಿತು. ಸುಮಾರು ಮೂರು ವರ್ಷಗಳ ಕಾಲ ನೀಲಿ ಬೆಳೆಯ ವಿರುದ್ಧ ನಡೆದಿದ್ದ ರೈತರ ಹೋರಾಟ ಅದು.

ಮಗ್ಗಗಳಲ್ಲಿ ನೇಯ್ದ ಹತ್ತಿ ಬಟ್ಟೆಗಳಿಗೆ ಉಪಯೋಗಿಸುವ ಬಣ್ಣವನ್ನು ನೀಲಿ ಗಿಡದ ಎಲೆಗಳ ಮೂಲಕ ತಯಾರಿಸುವ ಪದ್ಧತಿ ಭಾರತದಲ್ಲಿ, ಮುಖ್ಯವಾಗಿ ಬಂಗಾಳದಲ್ಲಿ, ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿತ್ತು. ಆದರೆ, ನೀಲಿ ಬೆಳೆ ಎಂದೂ ವ್ಯಾಪಾರಿ ಬೆಳೆಯಾಗಿರಲಿಲ್ಲ. ಸ್ಥಳೀಯ ನೇಯ್ಗೆಗಾರರ ಅವಶ್ಯಕತೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಅಗತ್ಯವಾದಷ್ಟನ್ನು ಮಾತ್ರ ರೈತರು ಬೆಳೆಯುತ್ತಿದ್ದರು.

18ನೆಯ ಶತಮಾನದಿಂದ ಇಂಗ್ಲೆಂಡ್‌ ಹಾಗೂ ಯುರೋಪಿಯನ್ ರಾಷ್ಟ್ರಗಳಲ್ಲಿ ಟೆಕ್ಸ್‌ಟೈಲ್ ಉದ್ಯಮವು ಪ್ರಬಲವಾದಾಗ, ಡೆನಿಮ್ ಬಟ್ಟೆಗಳಿಗೆ ಹಾಗೂ ನೀಲಿ ಜೀನ್ಸ್‌ಗೆ ಬೇಕಾಗುವ ನೀಲಿ ಬಣ್ಣಕ್ಕೆ ಇನ್ನಿಲ್ಲದ ಬೇಡಿಕೆ ಬಂದಿತು. ಆಗ ಬಂಗಾಳದಲ್ಲಿ ಪರಮಾಧಿಕಾರ ಹೊಂದಿದ್ದ ಈಸ್ಟ್ ಇಂಡಿಯಾ ಕಂಪನಿಯು ನೀಲಿಯನ್ನು ಬೆಳೆಯಲು ಅಲ್ಲಿಯ ರೈತರನ್ನು ಆಗ್ರಹಿಸಲು ಆರಂಭಿಸಿತು.

ರೆಗ್ಯುಲೇಶನ್ 7- 1799, ರೆಗ್ಯುಲೇಶನ್ 5- 1812 ಈ ಶಾಸನಗಳ ಮೂಲಕ ಭೂಮಿಯ ಸಂಪೂರ್ಣ ಒಡೆತನವನ್ನು ಜಮೀನ್ದಾರರಿಗೆ ಕಂಪನಿ ಕೊಟ್ಟಿತು. ಎಂದೂ ಸ್ವತಃ ಕೃಷಿ ಮಾಡದ ಜಮೀನ್ದಾರರನ್ನು ಒಲಿಸಿಕೊಳ್ಳುವುದು ಕಂಪನಿಗೆ ಸುಲಭವಾಗಿತ್ತು ಮತ್ತು 1837ರ ಶಾಸನವು ಹೊರದೇಶಗಳ ಯಾರು ಬೇಕಾದರೂ ಬಂಗಾಳದಲ್ಲಿ ಕೃಷಿಭೂಮಿಯನ್ನು ಕೊಂಡುಕೊಳ್ಳುವ ಹಾಗೂ ಅಲ್ಲಿ ಯಾವ ಬೆಳೆಯನ್ನು ಬೇಕಾದರೂ ಬೆಳೆಯುವ ಹಕ್ಕನ್ನು ಕೊಟ್ಟಿತು (ಜಾಗತೀಕರಣದತ್ತ ಮೊದಲ ಹೆಜ್ಜೆ?).

ಪರಿಣಾಮವಾಗಿ ಬ್ರಿಟಿಷ್ ಹಾಗೂ ಇತರ ಯುರೋಪಿಯನ್ ಉದ್ಯಮಿಗಳು ಬಂಗಾಳದಲ್ಲಿ ಕೃಷಿಭೂಮಿಯನ್ನು ಕೊಂಡುಕೊಂಡು, ಅಲ್ಲಿ ಕೇವಲ ನೀಲಿ ಗಿಡಗಳನ್ನೇ ಬೆಳೆಯಲು ತಮ್ಮ ಪ್ರತಿನಿಧಿಗಳ ಮೂಲಕ ಗೇಣಿದಾರರ ಮೇಲೆ ಒತ್ತಾಯ ಹೇರಲಾರಂಭಿಸಿದರು.

ಈ ಪ್ರತಿನಿಧಿಗಳು ಮೊದಲು ರೈತರನ್ನು ಸಂಪರ್ಕಿಸಿ, ಅವರಿಗೆ ಸಾಲವನ್ನು ಕೊಟ್ಟು, ನೀಲಿ ಗಿಡಗಳನ್ನು ಬೆಳೆಯುವ ಮತ್ತು ಅದರಿಂದ ತಯಾರಾದ ನೀಲಿ ಬಣ್ಣವನ್ನು ತಮಗೇ ಮಾರಾಟ ಮಾಡುವ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದರು. ಆನಂತರ ಆ ಬಣ್ಣವನ್ನು ಕೊಂಡುಕೊಳ್ಳುವಾಗ ಅದು ತಮ್ಮ ನಿರೀಕ್ಷೆಗೆ ಸರಿಯಾಗಿಲ್ಲವೆಂದು ರೈತರಿಗೆ ಅತಿ ಕಡಿಮೆ ಬೆಲೆಯನ್ನು ಕೊಡುತ್ತಿದ್ದರು. ಬೇರೆ ಯಾರಿಗೂ ಅದನ್ನು ಮಾರುವಂತಿರಲಿಲ್ಲ. ಇತ್ತ ರೈತರಿಗೆ ಹಣವೂ ಇಲ್ಲ, ಅತ್ತ ಆಹಾರಧಾನ್ಯವನ್ನು ಬೆಳೆಯುವ ಅವಕಾಶವೂ ಇಲ್ಲ. ಈ ಪರಿಸ್ಥಿತಿಯಲ್ಲಿ ಸಾವಿರಾರು ರೈತರು ಮಾಡಿದ ಸಾಲವನ್ನು ತೀರಿಸಲಾಗದೆ ನಿರ್ಗತಿಕರಾಗಿ, ತಮ್ಮ ಮನೆ- ಮಠಗಳನ್ನು ಕಳೆದುಕೊಂಡು ನಗರಗಳಲ್ಲಿ ಕೂಲಿ ಕೆಲಸ ಮಾಡಲು ಗುಳೆ ಹೋದರು. ನೂರಾರು ಜನ ಆತ್ಮಹತ್ಯೆ ಮಾಡಿಕೊಂಡರು.

ಭಾರತೀಯರೊಬ್ಬರು ಬರೆದ ಮೊದಲ ಇಂಗ್ಲಿಷ್ ಸಾಮಾಜಿಕ ಕಾದಂಬರಿ ಈ ಪರಿಸ್ಥಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಅದರ ಮುಖ್ಯ ಪಾತ್ರವಾದ ಗೇಣಿ ಕೃಷಿಕ ಹೀಗೆ ಅಳುತ್ತಾನೆ: ‘ನೀಲಿ ಬೆಳೆದರೆ ನಾವು ಹೊಟ್ಟೆಗೆ ಏನು ತಿನ್ನುವುದು?’ (ಲಾಲ್ ಬಿಹಾರಿ ಡೇ, ‘ಗೋವಿಂದ ಸಾಮಂತ’, 1874).

ಈ ಪರಿಸ್ಥಿತಿಯು ಉಲ್ಬಣವಾದಾಗ, 1859ರಲ್ಲಿ, ತಾವು ನೀಲಿ ಕೃಷಿಯನ್ನು ಮಾಡುವುದಿಲ್ಲವೆಂದು
ರೈತರು ಒಟ್ಟಾಗಿ ಸರ್ಕಾರದ ನೀತಿಯ ವಿರುದ್ಧ ಬಂಡೆದ್ದರು. ಮೊದಲು ಜೆಸ್ಸೋರ್ ಮತ್ತು ನಾದಿಯಾ ಪ್ರದೇಶಗಳಲ್ಲಿ ಪ್ರಾರಂಭವಾದ ಈ ಚಳವಳಿ ಬಹು ಬೇಗ ಬಂಗಾಳದ ಇತರ ಪ್ರದೇಶಗಳಿಗೂ ಹರಡಿ, ಸುಮಾರು ಎರಡೂವರೆ ವರ್ಷಗಳ ಕಾಲ ಶಾಂತಿಯುತವಾಗಿ ಮುಂದುವರಿಯಿತು. ಇವರನ್ನು ಮಣಿಸಲು ಈಸ್ಟ್ ಇಂಡಿಯಾ ಕಂಪನಿಯು ಭಾರತೀಯ ಪೋಲೀಸರನ್ನೇ ಉಪಯೋಗಿಸಿಕೊಂಡು ಹಿಂಸೆಯ ಎಲ್ಲಾ ಮಾರ್ಗಗಳನ್ನು ಅವಲಂಬಿಸಿದರೂ ನೂರಾರು ರೈತರು ಹಾಗೂ ರೈತ ಮಹಿಳೆಯರು ಸಾವು- ನೋವುಗಳನ್ನು ಅನುಭವಿಸಿದರೂ ಹೋರಾಟದ ಕೆಚ್ಚು ಹೆಚ್ಚುತ್ತಲೇ ಹೋಯಿತು. ಕೊನೆಗೆ (ಅಷ್ಟು ಹೊತ್ತಿಗೆ ಇಂಗ್ಲೆಂಡಿನ ರಾಣಿಯೇ ನೇರವಾಗಿ ಭಾರತದ ಆಡಳಿತವನ್ನು ವಹಿಸಿಕೊಂಡುದರಿಂದ) ಬ್ರಿಟಿಷ್ ಸರ್ಕಾರವೇ ಮಣಿದು, ಆ ಮೂರೂ ಕೃಷಿ ಕಾಯ್ದೆಗಳನ್ನು 1862ರಲ್ಲಿ ಹಿಂಪಡೆಯಿತು (ಈ ಕಾಯ್ದೆಗಳನ್ನು ರದ್ದು ಮಾಡಿದ ಶಾಸನವನ್ನು ಲಾಲ್ ಬಿಹಾರಿ ಡೇ ‘ಇದು ಕೃಷಿಕರ ಮ್ಯಾಗ್ನಾಕಾರ್ಟಾ’ ಎಂದು ತಮ್ಮ ಕಾದಂಬರಿಯಲ್ಲಿ ವರ್ಣಿಸುತ್ತಾರೆ).

ಭೂಮಿಯಲ್ಲಿ ಹಗಲೂ- ರಾತ್ರಿ ದುಡಿಯುವ ರೈತರಿಗೆ ಭೂಮಿಯಷ್ಟೇ ಸಹನೆ ಇರುತ್ತದೆ. ಆದರೆ, ಶೋಷಣೆ ಹೆಚ್ಚಾಗಿ ಅವರ ಸಹನೆಯ ಕಟ್ಟೆ ಒಡೆದು ಅವರು ಸಂಘಟಿತರಾಗಿ ಬಂಡೆದ್ದರೆ ಯಾವ ಪ್ರಭುತ್ವವೂ- ಅದು ಬ್ರಿಟಿಷ್ ಪ್ರಭುತ್ವವಾಗಲಿ ದೇಶಿ ಪ್ರಭುತ್ವವಾಗಲಿ- ಆ ಹೋರಾಟವನ್ನು ನಿಲ್ಲಿಸಲು ಅಥವಾ ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಇಂದಿನ ರೈತರು ಸಾರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು