ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಭಾಷೆ ಮತ್ತು ವಿಷಯ: ಮುಚ್ಚಬೇಕಿದೆ ಕಂದಕ

ಕನ್ನಡ ಪಠ್ಯಪುಸ್ತಕದ ಮೂಲಕ ಕನ್ನಡ ಭಾಷೆ ಬಿಟ್ಟು ಬೇರೆಲ್ಲವನ್ನೂ ಕಲಿಸಲಾಗುತ್ತಿದೆ!
Published 5 ಅಕ್ಟೋಬರ್ 2023, 23:30 IST
Last Updated 5 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಪ್ರಥಮ್ ಫೌಂಡೇಷನ್ ರಾಜ್ಯದ 5-16 ವರ್ಷ ವಯಸ್ಸಿನ ಮಕ್ಕಳನ್ನು ಒಳಗೊಂಡು 2021ರ ಮಾರ್ಚ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ಮುಖ್ಯವಾಗಿ ಪ್ರಾಥಮಿಕ ತರಗತಿಗಳಲ್ಲಿ ಮೂಲಭೂತ ಕೌಶಲಗಳ ಕೊರತೆ ಇರುವುದು ಕಂಡುಬಂದಿದೆ. ಇದು ಸರ್ಕಾರಿ ಮತ್ತು ಖಾಸಗಿ ಎರಡೂ ಬಗೆಯ ಶಾಲೆಗಳಲ್ಲಿ ಕನ್ನಡ ಓದುವ ಸಾಮರ್ಥ್ಯಕ್ಕೂ ಅನ್ವಯಿಸುತ್ತದೆ.

ಪ್ರಥಮ್ ಅಧ್ಯಯನದಲ್ಲಿ 13,365 ಕುಟುಂಬಗಳ 18,385 ಮಕ್ಕಳು ಒಳಗೊಂಡಿದ್ದರು. ಅದರ ಪ್ರಕಾರ, ಒಂದನೇ ತರಗತಿಯ ಮಕ್ಕಳಲ್ಲಿ ಶೇ 56.8ರಷ್ಟು ಮಕ್ಕಳಿಗೆ ಮೂಲ ಅಕ್ಷರಗಳನ್ನು ಓದಲು ಆಗಲಿಲ್ಲ. 7ನೇ ತರಗತಿಯ ಶೇ 66ರಷ್ಟು ಮಕ್ಕಳಿಗೆ 2ನೇ ತರಗತಿಯ ಪಠ್ಯಪುಸ್ತಕವನ್ನು ಓದಲು ಬರಲಿಲ್ಲ. 8ನೇ
ತರಗತಿಯವರಲ್ಲಿ ಶೇ 9.8ರಷ್ಟು ಮಕ್ಕಳು ಮಾತ್ರ 2ನೇ ತರಗತಿಯ ಪಠ್ಯಪುಸ್ತಕವನ್ನು ಓದಬಲ್ಲವರಾಗಿದ್ದರು. ಗ್ರಹಿಕೆಯ ಕೌಶಲವಾದ ಓದುವುದರ ಸ್ಥಿತಿಯೇ ಹೀಗಿರುವಾಗ ಇನ್ನು ಉತ್ಪಾದಕ ಕೌಶಲವಾದ ಬರೆಯುವ ಕೌಶಲದ ಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಬಹುದಾಗಿದೆ.

ಇನ್ನೂ ದೊಡ್ಡ ದುರಂತ ಎಂದರೆ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಬರೀ ಒಂದು ಭಾಷೆಯಾಗಿ ಕಲಿಯುವುದಿಲ್ಲ, ಅದನ್ನು ವಿಜ್ಞಾನ, ಸಮಾಜವಿಜ್ಞಾನ, ಗಣಿತದಂಥ ವಿಷಯಗಳನ್ನು ಗ್ರಹಿಸುವ, ಮಾತನಾಡುವ, ಓದುವ ಮತ್ತು ಬರೆಯುವ ‘ಮಾಧ್ಯಮ’ವನ್ನಾಗಿಯೂ ಕಲಿಯಬೇಕಾಗುತ್ತದೆ.
ಆಯಾ ತರಗತಿಯಲ್ಲಿ ಕಲಿಯುವ ಮೂಲಭೂತ ಭಾಷಾ ಸಾಧನೆಯೇ ಇಷ್ಟು ದುರ್ಬಲ
ಆಗಿರುವಾಗ ಅದರ ಮೂಲಕ ವಿಷಯಗಳ ಕಲಿಕೆ ಎಷ್ಟು ದುರ್ಬಲ ಇರಬಹುದು ಎಂಬುದನ್ನು ಊಹಿಸಲೂ ದಿಗಿಲಾಗುತ್ತದೆ.

ಈ ಸ್ಥಿತಿಗೆ ಕಾರಣಗಳನ್ನು ಗುರುತಿಸುವುದು ಅಷ್ಟು ಸುಲಭದ ಕೆಲಸವೇನಲ್ಲ. ಆದರೂ ಎದ್ದು ಕಾಣುವ, ಪರಿಹರಿಸಲು ಸಾಧ್ಯವಿರುವ ಒಂದೆರಡು ಸಮಸ್ಯೆ
ಗಳನ್ನಾದರೂ ಗುರುತಿಸಬಹುದಾಗಿದೆ. ಮೂಲಭೂತ ಸಮಸ್ಯೆಯೆಂದರೆ, ಸರ್ಕಾರದ ಪಠ್ಯಪುಸ್ತಕ ಸಮಿತಿಯು ಭಾಷೆಯನ್ನು ಭಾಷಾ ಕೌಶಲಗಳ ಒಂದು ಸಂಯೋಜನೆ ಎಂದು ಸ್ಪಷ್ಟವಾಗಿ ಗುರುತಿಸದೇ ಇರುವುದು. ಭಾಷೆಯನ್ನು ಮೂಲಭೂತವಾಗಿ ಅಭಿವ್ಯಕ್ತಿ, ಅದಕ್ಕೂ ಮುಖ್ಯವಾಗಿ ಸಂವಹನದ ಸಾಧನವನ್ನಾಗಿ ಕಲಿಯಬೇಕು. ಆ ಸಾಧನವನ್ನು ಬಳಸಿ ನಾವು ಯಾವುದೇ ವಿಷಯವನ್ನು ಗ್ರಹಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು ಸಾಧ್ಯವಾಗಬೇಕು.

ಕನ್ನಡ ಪಠ್ಯಪುಸ್ತಕಗಳನ್ನು ಒಮ್ಮೆ ನೋಡಿ. ಸುಮಾರು 3ನೇ ತರಗತಿ ದಾಟಿದ ಕೂಡಲೇ ಕನ್ನಡ ಭಾಷಾ ಪುಸ್ತಕಗಳು ‘ಕನ್ನಡ ಸಾಹಿತ್ಯ’ ಪಠ್ಯಗಳಾಗಿಬಿಟ್ಟಿರುತ್ತವೆ. ಇಲ್ಲಿನ ಪಾಠಗಳಲ್ಲಿ ಹಳಗನ್ನಡ, ನಡುಗನ್ನಡ, ವಚನ, ನವೋದಯ, ದಲಿತ, ಮಹಿಳಾ, ಮುಸ್ಲಿಂ, ಕ್ರೈಸ್ತ ಹೀಗೆ ವಿವಿಧ ಬಗೆಯ ಸಾಹಿತ್ಯಕ್ಕೆ ಮೀಸಲಾಗಿರುತ್ತವೆ. ಅದರಲ್ಲಿಯೂ ಪದ್ಯ, ಪ್ರಬಂಧ, ನಾಟಕ, ಪ್ರವಾಸ ಸಾಹಿತ್ಯದಂತಹ ಪ್ರಕಾರಗಳನ್ನು ಒಳಗೊಂಡಿರುತ್ತವೆ. ಜೊತೆಗೆ, ಪ್ರಾಯೋಗಿಕ ಕನ್ನಡ ಬಳಕೆಯನ್ನು ಕಲಿಸುವ ಬದಲಿಗೆ, ಸಂಸ್ಕೃತ, ಕನ್ನಡ ಸಂಧಿ, ಸಮಾಸ, ವ್ಯಾಕರಣ, ಛಂದಸ್ಸು ಎಂದೆಲ್ಲಾ ಇರುತ್ತವೆ. ಎಂದರೆ ಕನ್ನಡ ‘ಸಾಹಿತ್ಯ’ವೇ ಕನ್ನಡ ಭಾಷೆ ಎನ್ನುವಂತೆ ಭಾವಿಸಲಾಗಿದೆ.

ಸಮಾಜವಿಜ್ಞಾನ, ವಿಜ್ಞಾನ, ಗಣಿತ ಇವುಗಳ ಹಾಗೆ ಕನ್ನಡ ಸಾಹಿತ್ಯವೂ ಒಂದು ವಿಷಯವೇ. ಇವೆಲ್ಲವನ್ನೂ ಕಲಿಯಲು ಬಳಸುವ ಸಾಧನ ಕನ್ನಡ ಭಾಷೆ. ಈ ಸೂಕ್ಷ್ಮವನ್ನು ಪಠ್ಯಪುಸ್ತಕ ಸಂಘವು ಪರಿಗಣಿಸುವುದೇ ಇಲ್ಲ. ಸಾಹಿತ್ಯವು ವಿಶೇಷ ಆಸಕ್ತಿಯ ವಿಷಯ. ಆದರೂ, ಇತರ ವಿಷಯಗಳಷ್ಟೇ ಸಾಹಿತ್ಯವೂ ಜೀವನದ ಮೂಲಭೂತ ಅಗತ್ಯ ಎಂದು ಶಿಕ್ಷಣ ತಜ್ಞರಿಗೆ ಅನ್ನಿಸಿದರೆ ಅದನ್ನೂ ಒಂದು ಪ್ರತ್ಯೇಕ ವಿಷಯವನ್ನಾಗಿ ಪರಿಚಯಿಸಲಿ. ಕನ್ನಡ ಭಾಷಾ ಕೌಶಲಗಳನ್ನು ರೂಢಿಸುವುದಕ್ಕಾಗಿ ಮೀಸಲಾಗಬೇಕಾಗಿದ್ದ ಪಠ್ಯಕ್ರಮವನ್ನು ಸಾಹಿತ್ಯ ಆಕ್ರಮಿಸಿಕೊಳ್ಳದಿರಲಿ.

ವಿಜ್ಞಾನ, ಸಮಾಜವಿಜ್ಞಾನ, ಗಣಿತದಂಥ ವಿಷಯಗಳ ನಿರೂಪಣೆಯಲ್ಲಿ ಬಳಸಲಾಗಿರುವ ಕನ್ನಡ ಭಾಷೆಯ ಮಟ್ಟವನ್ನು ಗಮನಿಸಿದ್ದೀರಾ? ಆಯಾ ಕ್ಷೇತ್ರಕ್ಕೆ ವಿಶೇಷವಾದ ಪಾರಿಭಾಷಿಕ ಪದಗಳು, ವಾಕ್ಯರಚನೆಗಳು, ತರ್ಕ, ಲೇಖನ ಮತ್ತು ಗಣಿತದ ಚಿಹ್ನೆಗಳು- ಇವೆಲ್ಲವೂ ಕಲಿಕೆ ಮತ್ತು ಸಂವಹನ ಕೌಶಲದ ಅಂಗಾಂಶಗಳು. ವಿಜ್ಞಾನದಂತಹ ವಿಷಯಗಳ ಪಠ್ಯಪುಸ್ತಕಗಳಲ್ಲಿ ಈ ಭಾಷಾಕೌಶಲಗಳನ್ನು ಕಲಿಸುವ ಉದ್ದೇಶ, ವ್ಯವಸ್ಥೆ ಇರುವುದಿಲ್ಲ. ಆ ಪ್ರೌಢ ಮಟ್ಟದ ಭಾಷಾ ಕೌಶಲ ಮಕ್ಕಳಲ್ಲಿ ಸಾಧಿತವಾಗಿರುತ್ತದೆ ಎಂದು ಪರಿಭಾವಿಸಲಾಗುತ್ತದೆ. ಆದರೆ, ಅದಕ್ಕಾಗಿ ಇರುವ ಕನ್ನಡ ಪಠ್ಯಕ್ರಮ ಅಥವಾ ಪುಸ್ತಕದಲ್ಲಿ ಈ ಉದ್ದೇಶವೇ ಕಾಣೆಯಾಗಿರುತ್ತದೆ. ಕನ್ನಡ ಪಠ್ಯಪುಸ್ತಕದ ಮೂಲಕ ಕನ್ನಡ ಭಾಷೆಯೊಂದನ್ನು ಬಿಟ್ಟು ಬೇರೆಲ್ಲವನ್ನೂ ಕಲಿಸಲಾಗುತ್ತದೆ. ಭಾಷೆ ಮತ್ತು ವಿಷಯ ಇವುಗಳ ನಡುವಿನ ಈ ಅಪಾಯಕಾರಿ ಕಂದಕವನ್ನು ಮುಚ್ಚುವವರು ಯಾರು?

ಸರ್ಕಾರವು ಇತ್ತೀಚೆಗೆ ಪಠ್ಯಪುಸ್ತಕಗಳ ಸಮಗ್ರ ಪರಿಷ್ಕರಣೆಗಾಗಿ ನೇಮಿಸಿರುವ ಹಲವಾರು ಸಮಿತಿ ಗಳಲ್ಲಿ ಕನ್ನಡ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯೂ ಒಂದು. ಈ ಸಮಿತಿಗೆ ನಾವು ಮೇಲೆ ಚರ್ಚಿಸಿರುವ ಸಮಸ್ಯೆಯ ಅರಿವು ಇರಬೇಕಾಗಿರುವುದು ಅಗತ್ಯ. ಇಲ್ಲದಿದ್ದರೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತಯಾರಾಗುವ ಪರಿಷ್ಕೃತ ಪಠ್ಯಪುಸ್ತಕಗಳೂ ವಿದ್ಯಾರ್ಥಿ ಗಳಲ್ಲಿ ಶೈಕ್ಷಣಿಕ ಕಲಿಕೆ ಮತ್ತು ಮುಂದಿನ ಬದುಕಿಗೆ ಅಗತ್ಯವಾದ ಭಾಷಾ ಸಾಮರ್ಥ್ಯ ಮೂಡಿಸುವುದರಲ್ಲಿ ಮತ್ತೆ ಸೋಲುವ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT