ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಶಾಲಾ ಶಿಕ್ಷಣ: ಗಟ್ಟಿಯಾಗಲಿ ಬೇರು

ಶೈಕ್ಷಣಿಕ ಗುಣಮಟ್ಟದ ನೈಜ ಸ್ಥಿತಿಯನ್ನು ಬಿಂಬಿಸುತ್ತಿರುವ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಒಪ್ಪಿಕೊಂಡು, ಗುಣಮಟ್ಟದ ಸವಾಲನ್ನು ಎದುರಿಸುವ ಮಾರ್ಗೋಪಾಯಗಳ ಬಗ್ಗೆ ಚಿಂತಿಸಬೇಕು
ಎಚ್‌.ಬಿ.ಚಂದ್ರಶೇಖರ್
Published 14 ಮೇ 2024, 19:18 IST
Last Updated 14 ಮೇ 2024, 19:18 IST
ಅಕ್ಷರ ಗಾತ್ರ

ವೆಬ್‌ಕಾಸ್ಟಿಂಗ್‌ ಕಾರಣದಿಂದ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಕುಸಿದಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರೇಸ್‌ ಅಂಕಗಳನ್ನು ನೀಡಿ, ಫಲಿತಾಂಶವನ್ನು ಉತ್ತಮಪಡಿಸಲಾಗಿದೆ. ಅನೇಕರು ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲೊಂದು ಸಂಗತಿಯನ್ನು ನಾವು ಗಮನಿಸಬೇಕು. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸದ ಕಾರಣಕ್ಕೆ ಫಲಿತಾಂಶವು ಚೆನ್ನಾಗಿ ಬರುವುದು ಅಥವಾ ಪರೀಕ್ಷೆಯನ್ನು ಬಿಗಿಗೊಳಿಸಿದ ಕಾರಣಕ್ಕೆ ಕಡಿಮೆ ಫಲಿತಾಂಶ ಬರುವುದು, ಈ ಎರಡೂ ಸನ್ನಿವೇಶಗಳಲ್ಲಿ ತೊಂದರೆಗೆ ಒಳಗಾಗುವವರು ವಿದ್ಯಾರ್ಥಿಗಳು. ಪರೀಕ್ಷೆಯನ್ನು ಹೀಗೆಯೇ ನಡೆಸಿ ಎಂದು ವಿದ್ಯಾರ್ಥಿಗಳು ಒತ್ತಾಯಿಸುವುದಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ನೈಜ ಕಲಿಕೆಯನ್ನು ಪುರಸ್ಕರಿಸುವ ರೀತಿಯಲ್ಲಿ ಪರೀಕ್ಷೆಯನ್ನು ನಡೆಸಿರುವುದು ಉತ್ತಮವಾದ ಕ್ರಮವಾಗಿದೆ.

ಈ ಬಾರಿಯ ಫಲಿತಾಂಶವು ಶಿಕ್ಷಣದ ಗುಣಮಟ್ಟದ ವಾಸ್ತವಿಕ ಸ್ಥಿತಿಯನ್ನು ಬಿಂಬಿಸುತ್ತಿದೆ. ಕಹಿಯೆನಿಸುವ ಈ ಸತ್ಯವನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಾಗ ಮಾತ್ರ ಅದರಿಂದ ಪಾರಾಗುವ ಮಾರ್ಗೋಪಾಯಗಳ ಬಗ್ಗೆ ಚಿಂತಿಸಲು ಸಾಧ್ಯ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೇಲೆ ನಮ್ಮೆಲ್ಲರ ಗಮನ ಒಂದಷ್ಟು ಹೆಚ್ಚಾಗಿಯೇ ಕೇಂದ್ರೀಕೃತವಾಗಿರುತ್ತದೆ. ಇಷ್ಟೇ ಗಮನವನ್ನು ನಾವು ಕೆಳ ಹಂತದ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಕಲಿಕೆಯ ಮೇಲೂ ಹರಿಸಬೇಕಿದೆ. 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ‘ಪರೀಕ್ಷೆಯಲ್ಲಿ ಫೇಲು ಮಾಡುವಂತಿಲ್ಲ’ ಎಂಬ ನಿಯಮವನ್ನು ರಾಜ್ಯದಲ್ಲಿ ನಾವು ಹೊಂದಿದ್ದೇವೆ. ನಿಧಾನ ಕಲಿಕೆಯ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನಹರಿಸಿ, ವಿಭಿನ್ನವಾಗಿ ಕಲಿಸಿ ಪಾಸು ಮಾಡಬೇಕು ಎಂಬುದನ್ನು ಮರೆತು, ಸಮರ್ಪಕವಾಗಿ ಕಲಿಯದವರ ಮೇಲೆ ಉದಾರ ಮನೋಭಾವ ತೋರಿ ಮುಂದಿನ ತರಗತಿಗೆ ಕಳುಹಿಸಲಾಗುತ್ತಿದೆಯೇ ಎಂಬ ಅನುಮಾನ ಕಾಡದಿರದು. ಇದರ ಫಲವಾಗಿ, ಎಸ್‌ಎಸ್‌ಎಲ್‌ಸಿ ತಲುಪಿದ ಕೆಲವು ವಿದ್ಯಾರ್ಥಿಗಳಲ್ಲಿ ಮೂಲಭೂತ ಕಲಿಕಾ ಕೌಶಲಗಳ ಕಲಿಕೆ ಸ್ಪಷ್ಟವಾಗಿ ಇರದು. ಆದಕಾರಣ, ಅಂತಹವರು ಎಸ್‌ಎಸ್‌ಎಲ್‌ಸಿ ಪಾಸು ಮಾಡಲು ತೊಂದರೆ ಅನುಭವಿಸುತ್ತಾರೆ. ಆ ಬಗೆಯ ವಿದ್ಯಾರ್ಥಿಗಳಿಗೆ ಕಲಿಸುವಂಥ ಪ್ರಯತ್ನದಲ್ಲಿ ಶಿಕ್ಷಕರು ಹೆಚ್ಚಿನ ಸವಾಲನ್ನು ಎದುರಿಸುತ್ತಾರೆ.

ಕನಿಷ್ಠ ಕಲಿಕಾ ಸಾಮರ್ಥ್ಯಗಳನ್ನೂ ಕಲಿಯದೇ ಇರುವ ಮಕ್ಕಳನ್ನು 5 ಮತ್ತು 8ನೇ ತರಗತಿಗಳಲ್ಲಿ ಫೇಲು ಮಾಡಿ, ಸಮರ್ಪಕವಾಗಿ ಕಲಿಸಿ, ನಂತರ ಅವರನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸುವ ನಿಯಮ ಜಾರಿಗೆ ತರಬಹುದು. ಈ ಕುರಿತು ಕೇಂದ್ರ ಸರ್ಕಾರವು ಶಿಕ್ಷಣ ಹಕ್ಕು ಅಧಿನಿಯಮಕ್ಕೆ ತಿದ್ದುಪಡಿಯನ್ನು ತಂದಿದ್ದು, ರಾಜ್ಯ ಸರ್ಕಾರಗಳು ಇಚ್ಛಿಸಿದಲ್ಲಿ ಈ ನಿಯಮವನ್ನು ಅಳವಡಿಸಿಕೊಳ್ಳಬಹುದು. ಈ ನಿಯಮವು ಅಸ್ಸಾಂ, ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದರೆ ಈ ನಿಯಮದ ಕಾರಣ ಒಡ್ಡಿ, ಕಲಿಸದೇ ಮಕ್ಕಳನ್ನು ಅನುತ್ತೀರ್ಣ ಮಾಡುವ ಪ್ರವೃತ್ತಿ ರೂಢಿಗೆ ಬರದಂತೆ ನೋಡಿಕೊಳ್ಳಬೇಕು.

ಶಿಕ್ಷಣ ಇಲಾಖೆ, ಸಾರ್ವಜನಿಕರು, ಪೋಷಕರು, ಜನಪ್ರತಿನಿಧಿಗಳು ಹಾಗೂ ಶಿಕ್ಷಕರ ಗಮನ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿರುತ್ತದೆ. ಈ ವಿದ್ಯಾರ್ಥಿಗಳಿಗೆ ಹೆಚ್ಚಿನ ತಯಾರಿ ನೀಡಿ, ಅವರನ್ನು ಎಸ್‌ಎಸ್‌ಎಲ್‌ಸಿಯ ಗಡಿ ದಾಟಿಸುವ ಸದುದ್ದೇಶವನ್ನು ಎಲ್ಲರೂ ಹೊಂದಿರುತ್ತಾರೆ. ಇದಕ್ಕಾಗಿ ಪಾಸಿಂಗ್‌ ಪ್ಯಾಕೇಜ್‌, ವಿಶೇಷ ತರಗತಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗಳಿಗೆ ಅಧಿಕಾರಿಗಳು, ಶಿಕ್ಷಕರ ನಿಯಮಿತ ಭೇಟಿಯಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಹಂತಕ್ಕೆ ತೆಗೆದುಕೊಳ್ಳುವ ಕ್ರಮಗಳಲ್ಲಿ ಕನಿಷ್ಠ ಶೇ 50ರಷ್ಟನ್ನು 1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಕಲಿಕೆಗೂ ತೆಗೆದುಕೊಂಡಿದ್ದಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮಗೊಳ್ಳಲು ಸಹಕಾರಿಯಾಗುತ್ತಿತ್ತು ಎನಿಸದೇ ಇರದು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವೊಂದನ್ನೇ ಉತ್ತಮಪಡಿಸುವ ಕ್ರಮವು ಗಿಡದ ಬೇರನ್ನು ಅಗತ್ಯವಾದಷ್ಟು ಪ್ರಮಾಣದ ನೀರು, ಮಣ್ಣು, ಗೊಬ್ಬರದಿಂದ ಗಟ್ಟಿಗೊಳಿಸದೆ ಗಿಡದ ಮೇಲ್ಭಾಗಕ್ಕೆ ನೀರು, ಗೊಬ್ಬರ ಒದಗಿಸಿದಂತೆ ಆಗುತ್ತದೆ. ಈ ಕಾರಣದಿಂದ, ಆಯಾ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕೆಯಾಗುವಂತೆ ಮಾಡುವುದರ ಜೊತೆಗೆ ಕೆಳಹಂತದ ತರಗತಿಗಳಲ್ಲಿನ ಬೋಧನೆ-ಕಲಿಕೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು.

ಶಿಕ್ಷಕರು ಬೋಧನೆ-ಕಲಿಕೆಯ ಚಟುವಟಿಕೆಗಳಲ್ಲಿ ಏಕಾಗ್ರತೆಯಿಂದ ತೊಡಗಿಕೊಳ್ಳಲು ಸಾಧ್ಯವಾಗುವಂತೆ ಅನುಕೂಲಕರವಾದ ಶೈಕ್ಷಣಿಕ ವಾತಾವರಣವನ್ನು
ಎಲ್ಲ ಶಾಲೆಗಳಲ್ಲಿ ಸೃಜಿಸಬೇಕು. ಮಕ್ಕಳು ಶಾಲೆಗೆ ಹಾಜರಾಗಲು ಹಾಗೂ ಕಲಿಯಲು ಅನುಕೂಲ ಕಲ್ಪಿಸುವ  ಚಟುವಟಿಕೆಗಳಾದ ಮಧ್ಯಾಹ್ನದ ಬಿಸಿಯೂಟ, ಸಮ
ವಸ್ತ್ರದಂತಹವನ್ನು ಶಿಕ್ಷಕರ ಕನಿಷ್ಠ ಬೋಧನಾ ಸಮಯ ಬಳಸಿ ಅನುಷ್ಠಾನ ಮಾಡುವಂತಹ ಸಾಧ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು.

ಮಕ್ಕಳ ಕಲಿಕಾ ಗುಣಮಟ್ಟ ಹಾಗೂ ಸಂಬಂಧಿತ ವಿಷಯಗಳ ಪ್ರಗತಿ ಪರಿಶೀಲನೆಯು ಪ್ರಥಮ ಆದ್ಯತೆ ಆಗಬೇಕು. ಶಿಕ್ಷಕರು, ಶಿಕ್ಷಣ ಚಿಂತಕರು, ಪೋಷಕರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ, 3ರಿಂದ 5 ವರ್ಷಗಳವರೆಗಿನ ದೂರದೃಷ್ಟಿಯೊಂದಿಗೆ ಶಾಲಾ ಶಿಕ್ಷಣದ ಬೇರುಗಳನ್ನು ಗಟ್ಟಿಗೊಳಿಸಲು ಸೂಕ್ತ ಯೋಜನೆ, ಕಾರ್ಯತಂತ್ರ, ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT