ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಮಧ್ಯ(ದ್ಯ) ರಾತ್ರಿಯಲ್ಲಿ!

Last Updated 4 ಫೆಬ್ರುವರಿ 2020, 20:30 IST
ಅಕ್ಷರ ಗಾತ್ರ

ಕುಂಟುತ್ತಾ ಬಂದ ಗುಂಡಣ್ಣನ ಹಣೆಯ ಬುಗುಟು ನೋಡಿ ಕೇಳಿದೆ– ‘ಏನಯ್ಯಾ ಸಮಾಚಾರ?’

‘ನಿನ್ನೆ ರಾತ್ರಿ... ಅಲ್ಲ, ಇವತ್ತು ಬೆಳಗಿನಜಾವ, ಸ್ವಲ್ಪ ಯಡವಟ್ಟಾಯ್ತಪ್ಪಾ’ ಎಂದ.

‘ಬಿಡಿಸಿ ಹೇಳೋ’.

‘ಮುಂಬೈ ನಗರ 24X7 ವ್ಯವಹರಿಸಲು ಅನುಮತಿಸಿದಂತೆ ನಮ್ಮ ನಗರಕ್ಕೂ ಏಕೆ ಸಮ್ಮತಿಸಬಾರದೂಂತ ಬಾರಲ್ಲಿ ಚರ್ಚೆ ಮಾಡ್ತಿದ್ದಾಗ ಮಧ್ಯರಾತ್ರಿ ಮೀರಿದ್ದೇ ತಿಳೀಲಿಲ್ಲ...’

‘ಓ ಅದೇ ಹಳೇ ಕತೆಯಾ? ಪೇಪರ್, ಟೀವಿ ನೋಡಿದೆಯೇನೋ- ಮದ್ಯ ನಿಷೇಧ ಆಂದೋಲನದ ಸಾವಿರಾರು ಮಹಿಳೆಯರು ಕೂಡಲಸಂಗಮದಲ್ಲಿ ಜಲಸತ್ಯಾಗ್ರಹ ಮಾಡಿದ್ರಲ್ಲಾ!’

‘ಸರ್ಕಾರ, ಬೀರ್ ಬಿಟ್ಟು ವಿಸ್ಕಿ ಕುಡೀರಿ ಅಂತಿದೆಯಂತೆ!’

‘ಹೋಗ್ಲಿ ಬಿಡು, ನಿನ್ನ ಹಣೆಬರಹ- ಹಣೆ ಬುಗುಟಿನ ವಿಷ್ಯವೇನು?’

‘ಬೆಳಗಿನಜಾವ ಮನೆಗೆ ಹೋದಾಗ ಎಷ್ಟು ಕೂಗಿದ್ರೂ ಹೆಂಡ್ತಿ ಬಾಗಿಲು ತೆಗೀಲಿಲ್ಲ. ಮಹಡಿಯಿಂದ ಬಿದ್ದು ಸಾಯ್ತೀನೀಂತ ಹೇಳಿ ಐದು ನಿಮಿಷ ಕಾದೆ. ಉಹ್ಞೂಂ. ವರಾಂಡದಲ್ಲಿದ್ದ ದೊಡ್ಡ ರದ್ದಿ ಪೇಪರ್ ಗೋಣಿಚೀಲ ಕೆಳಗೆ ಹಾಕಿದೆ. ಧೊಪ್ಪಂತ ಶಬ್ದ ಕೇಳಿ ಹೊರಗೆ ಓಡಿಬಂದಳು. ಮರೆಯಲ್ಲಿ ನಿಂತಿದ್ದ ನಾನು ಸರಕ್ಕನೆ ಒಳ ಹೋಗಿ ಬಾಗಿಲು ಹಾಕಿಕೊಂಡೆ’.

‘ಎಲಾ ಇವನ! ಫುಲ್ ಟೈಟ್ ಆಗಿದ್ರೂ ಬುದ್ಧಿ ಚುರುಕಾಗೇ ಇತ್ತು ಅನ್ನು... ಆಮೇಲೆ?’

‘ಬಾಗಿಲು ಬಡಿಯೋ ಸರದಿ ಅವಳದಾಯ್ತು! ‘ಇಷ್ಟೊತ್ತಿನಲ್ಲಿ ಮನೆ ಹೊರಗೆ ನನ್ನನ್ನು ನೋಡಿದ್ರೆ ನೆರೆ-ಹೊರೆಯವ್ರು ಏನಂದ್ಕೊಳ್ತಾರೆ. ದಮ್ಮಯ್ಯಾ ಅಂತೀನಿ, ಬಾಗಿಲು ತೆಗೀರಿ. ಇನ್ಮೇಲೆ ನಿಮ್ಗೆ ಏನೂ ಅನ್ನೋಲ್ಲ ಅಂದ್ಮೇಲೆ ಬಾಗಿಲು ತೆಗೆದೆ. ಆದ್ರೆ ಒಳಗೆ ಬಂದ್ಮೇಲೆ ಉಲ್ಟಾ ಹೊಡೆದಳು! ನನ್ಮೇಲೆ ಅವಳ ಮುದ್ದೆಕೋಲು, ಲಟ್ಟಣಿಗೆ ಪ್ರಯೋಗ ಗುರಿ ತಪ್ಪಲಿಲ್ಲ’.

‘ಇನ್ಮೇಲಾದ್ರೂ ಗುಂಡು ಹಾಕೋದನ್ನ ಬಿಡ್ತೀ ತಾನೆ?’

‘ಹ್ಞೂಂನಪ್ಪಾ, ಹೆಂಡ್ತೀನ ಮದ್ಯ ನಿಷೇಧ ಮಹಿಳಾ ಆಂದೋಲನಕ್ಕೆ ಸೇರಿಸ್ತೀನಿ’.

‘ಗುಂಡು ಹಾಕೋನು ನೀನಲ್ವೇನೋ?’

ಗುಂಡಣ್ಣ ಮುಗಿಲು ನೋಡಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT