ಬುಧವಾರ, ಏಪ್ರಿಲ್ 14, 2021
24 °C
ಅತಿ ಹೆಚ್ಚು ವರಮಾನ ಪಡೆಯುವ ಕೆಲವರಿಂದ ಈ ಸೌಲಭ್ಯ ದುರ್ಬಳಕೆ ತಡೆಯುವ ಭರದಲ್ಲಿ ಉಳಿದವರ ಹಿತಾಸಕ್ತಿಗೆ ಭಂಗ ಬಾರದಿರಲಿ

ಸಂಗತ: ಇಳಿಸಂಜೆಗೆ ಸುಭದ್ರ ಹೂಡಿಕೆ

ಯು.ಪಿ.ಪುರಾಣಿಕ್‌ Updated:

ಅಕ್ಷರ ಗಾತ್ರ : | |

Prajavani

ಜೀವನದ ಸಂಜೆಯಲ್ಲಿ ಹಂಗಿಲ್ಲದ ಬದುಕು ಸಾಗಿಸಲು ಪ್ರತೀ ನೌಕರನೂ ಆರಂಭದಿಂದಲೇ ಆರ್ಥಿಕ ಯೋಜನೆ ಹಾಕಿಕೊಳ್ಳಬೇಕು. ಇದಕ್ಕಾಗಿ ಒಳ್ಳೆಯ ಪ್ರತಿಫಲ ತಂದುಕೊಡುವ, ಅತ್ಯಂತ ಸುಭದ್ರವಾದ ಹೂಡಿಕೆ ಭವಿಷ್ಯ ನಿಧಿ (ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫಂಡ್‌). ಇದು ಕ್ರಮಬದ್ಧವಾದ, ಉತ್ತಮ ವರಮಾನ ತರುವ ಹಾಗೂ ಬಡ್ಡಿ ವರಮಾನಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿಯುಳ್ಳ ಯೋಜನೆ.

ಪಿ.ಎಫ್‌. ಖಾತೆಗೆ ಐಚ್ಛಿಕವಾಗಿ ಹಣ ಜಮಾ ಮಾಡಲು ಮಿತಿ ಇಲ್ಲದ ಕಾರಣ ಹಾಗೂ ದೊಡ್ಡ ಮೊತ್ತ ಹೂಡಿ ಬಡ್ಡಿ ವರಮಾನದಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯುವ ಸವಲತ್ತು ಇರುವುದರಿಂದ ಬಹುರಾಷ್ಟ್ರೀಯ ಕಂಪನಿಗಳಲ್ಲಿ, ದೊಡ್ಡ ಖಾಸಗಿ ಕಂಪನಿಗಳಲ್ಲಿ ಹಾಗೂ ಸರ್ಕಾರಿ ವಲಯದಲ್ಲಿ ಅತಿಹೆಚ್ಚು ಸಂಬಳ ಪಡೆಯುವ (ಹೈ ನೆಟ್‌ವರ್ಥ್‌ ಇಂಡಿವಿಷುಯಲ್ಸ್) ನೌಕರರು ಇದರಲ್ಲಿ ಕೋಟಿಗಟ್ಟಲೆ ಹಣ ಜಮಾ ಮಾಡಿ, ತೆರಿಗೆ ವಿನಾಯಿತಿ ಪಡೆಯುತ್ತಿರುವುದನ್ನು ಸರ್ಕಾರ ಗಮನಿಸಿದೆ. ಭಾರತದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಬರೀ 20 ಜನ ಈ ನಿಧಿಯಲ್ಲಿ ಒಟ್ಟು ₹ 825 ಕೋಟಿ ಜಮಾ ಇರಿಸಿದ್ದಾರೆ ಎಂದರೆ ಯಾರಿಗೆ ತಾನೇ ಅಚ್ಚರಿ ಎನಿಸದು?

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನೌಕರರ ಭವಿಷ್ಯನಿಧಿ ಹೂಡಿಕೆಯ ಮಿತಿ ವಿಚಾರದಲ್ಲಿ ತೋರಿರುವ ಧೋರಣೆಯು ಕೆಲವು ನೌಕರರಲ್ಲಿ ಗೊಂದಲ ಉಂಟುಮಾಡಿರುವ ಸಾಧ್ಯತೆ ಇದೆ. ಬಜೆಟ್‌ನಲ್ಲಿ ಮಾಡಿರುವ ಪ್ರಸ್ತಾವದ ಪ್ರಕಾರ, ಒಬ್ಬ ನೌಕರ ವಾರ್ಷಿಕವಾಗಿ ಗರಿಷ್ಠ ಎರಡೂವರೆ ಲಕ್ಷ ರೂಪಾಯಿ ವರ್ಗಾಯಿಸಿ, ಬಡ್ಡಿ ವರಮಾನದಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಆತ ಪಿ.ಎಫ್‌.ಗೆ ಜಮಾ ಮಾಡಿದ್ದರೆ, ಅದಕ್ಕೆ ಬರುವ ಬಡ್ಡಿಯು ತೆರಿಗೆ ವಿನಾಯಿತಿಯಿಂದ ಹೊರತಾಗಿರಲಿದೆ.

ಈ ಹಿಂದೆ ಸೆಕ್ಷನ್‌ 10 (34) ಆಧಾರದ ಮೇಲೆ ಕಂಪನಿ ಷೇರುಗಳ ಮೇಲೆ ಪಡೆಯುವ ಡಿವಿಡೆಂಡ್‌ ಆದಾಯವು ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಹೊಂದಿತ್ತು. ಅತಿ ಶ್ರೀಮಂತರಾದ ಕೆಲವು ಷೇರುದಾರರು ಪ್ರತಿವರ್ಷ ಕೋಟಿಗಟ್ಟಲೆ ಡಿವಿಡೆಂಡ್‌ ಹಣವನ್ನು ತೆರಿಗೆರಹಿತವಾಗಿ ಪಡೆಯುತ್ತಿದ್ದರು. ಇದನ್ನು ಮನಗಂಡ ಸರ್ಕಾರವು ಕಳೆದ ವರ್ಷದ ಬಜೆಟ್‌ನಲ್ಲಿ ಡಿವಿಡೆಂಡ್‌ ಆದಾಯದ ತೆರಿಗೆ ವಿನಾಯಿತಿ ಮಿತಿಯನ್ನು ₹ 10 ಲಕ್ಷಕ್ಕೆ ಸೀಮಿತಗೊಳಿಸಿತ್ತು.

ಇಂದಿನ ಹಣದುಬ್ಬರದ ಪರಿಸ್ಥಿತಿಯಲ್ಲಿ ಪಿ.ಎಫ್‌.ನಲ್ಲಿ ವಾರ್ಷಿಕ ಹೂಡಿಕೆ ಮಾಡಲು ಬಜೆಟ್‌ನಲ್ಲಿ ನಿಗದಿಗೊಳಿಸಿದ ಎರಡೂವರೆ ಲಕ್ಷ ರೂಪಾಯಿ ಮೊತ್ತವು ಅತಿ ಕಡಿಮೆ. ಹಣದುಬ್ಬರ ಪ್ರಮಾಣವು ಕಳೆದ ವರ್ಷ ಶೇ 7ರ ಗಡಿಯನ್ನೂ ದಾಟಿತ್ತು. ತೈಲ ಬೆಲೆಯ ಏರಿಕೆಯನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಹಣದುಬ್ಬರ ಮತ್ತೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಹಣದುಬ್ಬರ ಹೆಚ್ಚಿನ ಪ್ರಮಾಣದಲ್ಲಿಯೇ ಇರುವಾಗ, ಪಿ.ಎಫ್. ಬಡ್ಡಿಗೆ ತೆರಿಗೆ ವಿಧಿಸಲೇಬೇಕು ಎಂದು ಸರ್ಕಾರಕ್ಕೆ ಅನ್ನಿಸಿದರೆ, ತುಸು ಹೆಚ್ಚಿನ ಮೊತ್ತಕ್ಕೆ ವಿನಾಯಿತಿ ನೀಡುವ ಬಗ್ಗೆ ಆಲೋಚಿಸಬೇಕು. ತಿಂಗಳಿಗೆ ₹ 21 ಸಾವಿರದವರೆಗೆ ಪಿ.ಎಫ್.ನಲ್ಲಿ ಉಳಿತಾಯ ಮಾಡುವುದು ಹಣದುಬ್ಬರ ಹೆಚ್ಚಿರುವ ಇಂದಿನ ದಿನಗಳಲ್ಲಿ ವಿಶೇಷವೇನೂ ಅಲ್ಲ. ಅಷ್ಟು ಉಳಿತಾಯವನ್ನು ಮಾಡಿದರೆ ಮಾತ್ರವೇ ವೃದ್ಧಾಪ್ಯದಲ್ಲಿ ಒಳ್ಳೆಯ ಗುಣಮಟ್ಟದ ಬದುಕು ಸಾಗಿಸಲು ಹಣ ಸಿಗುತ್ತದೆ. ಪಿ.ಎಫ್.ನಲ್ಲಿ ಮಾಡಿದ ಹೂಡಿಕೆಗಳು ಸಾರ್ವಜನಿಕ ಆಸ್ತಿ ಸೃಷ್ಟಿಗೆ ಕೂಡ ಲಭಿಸುತ್ತವೆಯಾದ ಕಾರಣ, ಅಲ್ಲಿ ನೌಕರರು ಇನ್ನಷ್ಟು ಉಳಿತಾಯ ಮಾಡುವುದನ್ನು ಸರ್ಕಾರ ಪ್ರೋತ್ಸಾಹಿಸಬಹುದು. ಹೀಗೆ ಮಾಡುವುದರಿಂದ ವಿವಿಧ ಯೋಜನೆಗಳಿಗೆ ಪಿ.ಎಫ್. ಸಂಸ್ಥೆಯ ಮೂಲಕ ಬಂಡವಾಳ ಹೂಡಿಕೆಯೂ ಆಗುತ್ತದೆ, ನೌಕರರ ಭವಿಷ್ಯ ಹೆಚ್ಚು ಭದ್ರ ಕೂಡ ಆಗುತ್ತದೆ.

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಉದ್ದಿಮೆ, ಸರ್ಕಾರಿ ಬ್ಯಾಂಕ್‌ ಹಾಗೂ ಸರ್ಕಾರದ ಇನ್ನಿತರ ನೌಕರ ವಲಯಗಳಲ್ಲಿ ಮಾತ್ರ ಉದ್ಯೋಗ ಭದ್ರತೆ ಇದೆ. ಖಾಸಗಿ ಕಂಪನಿಗಳ ನೌಕರರು ಪಿ.ಎಫ್‌.ನಲ್ಲಿ ತುಸು ಹೆಚ್ಚು ಹಣ ತೊಡಗಿಸುವ ಅನಿವಾರ್ಯ ಇದೆ. ಪಿಂಚಣಿ ಎನ್ನುವ ಸಾಂಪ್ರದಾಯಿಕ ಪರಿಕಲ್ಪನೆ ಇಂದು ಮಾಯವಾಗಿದೆ. ಸಾಕ್ಷರತೆ, ಜೀವರಕ್ಷಕ ಔಷಧಗಳು, ಆರೋಗ್ಯ ಪ್ರಜ್ಞೆ ಇವೇ ಮೊದಲಾದವುಗಳಿಂದ ಮನುಷ್ಯನ ಸರಾಸರಿ ಆಯುಷ್ಯದ ಪ್ರಮಾಣ 70 ವರ್ಷಗಳಿಗೆ ಏರಿದೆ. ಜೀವನದ ಸಂಜೆಯಲ್ಲಿ ನೆಮ್ಮದಿಯಾಗಿ ಬಾಳಲು ಪಿ.ಎಫ್‌ ಹೂಡಿಕೆ ಅನಿವಾರ್ಯ.

ದೇಶದ 130 ಕೋಟಿಗೂ ಹೆಚ್ಚಿನ ಜನರಿಗೆ ಸರ್ಕಾರದಿಂದ ಸಾಮಾಜಿಕ ಭದ್ರತೆ ಒದಗಿಸುವುದು ಸುಲಭದ ಕೆಲಸವಲ್ಲ. ಇಂದು ಮಕ್ಕಳ ಮೇಲೆ ಅವಲಂಬನೆ, ಅವಿಭಕ್ತ ಕುಟುಂಬ, ನಿವೃತ್ತಿಯಲ್ಲಿ ಪಿಂಚಣಿ ಇವೆಲ್ಲ ಬರೀ ಪರಿಕಲ್ಪನೆಯಾಗಿ ಉಳಿದಿವೆ. ಠೇವಣಿ ಮೇಲಿನ ಬಡ್ಡಿ ಕೂಡ ಬಹಳ ಕಡಿಮೆಯಾಗಿದೆ. ಹೆಚ್ಚಿನ ಖರ್ಚು ಬರುವುದೇ ಇಳಿವಯಸ್ಸಿನಲ್ಲಿ. ಆದ್ದರಿಂದ ದುಡಿಯುವ ವಯಸ್ಸಿನಲ್ಲಿ ಸ್ವಲ್ಪಮಟ್ಟಿಗೆ ತ್ಯಾಗ ಮಾಡಿಯಾದರೂ ಎಷ್ಟಾದರಷ್ಟು ಉಳಿಸುವುದು ಅನಿವಾರ್ಯ. ಸರ್ಕಾರ ಇವನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು, ನೌಕರ ವರ್ಗವು ಇನ್ನಷ್ಟು ಉಳಿತಾಯ ಮಾಡಲು ಪ್ರೋತ್ಸಾಹ ನೀಡುವುದು ಸೂಕ್ತ ಕ್ರಮವಾದೀತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು