ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಸರ್ವರ್ ಸಮಸ್ಯೆ ಸರ್ವವ್ಯಾಪಿ

Last Updated 2 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಗ್ರಾಮ ಪಂಚಾಯಿತಿ ಕಚೇರಿಗೆ ನಮ್ಮ ಮನೆಯಿಂದ ಹೋಗಿ ಬರಲು ನಲವತ್ತು ರೂಪಾಯಿ ಪ್ರಯಾಣ ವೆಚ್ಚವಾಗುತ್ತದೆ. ಪಂಚಾಯಿತಿ ನೌಕರರು ಕೇಳುವ ಮೊದಲೇ ಮನೆ ತೆರಿಗೆ ಕಟ್ಟಿಬಿಡೋಣ ಎಂದು ಪ್ರಾಮಾಣಿಕತನ ಪ್ರದರ್ಶನಕ್ಕೆ ಹೋಗಿದ್ದೆ. ಈಗ ಹಿಂದಿನ ವರ್ಷದ ಹಾಗೆ ಮನೆ ತೆರಿಗೆಯ ಮೊತ್ತಕ್ಕೆ ಕೈಯಲ್ಲಿ ರಸೀದಿ ಬರೆದುಕೊಡುವ ಕ್ರಮವಿಲ್ಲ. ‘ಡಿಜಿಟಲ್ ಇಂಡಿಯಾ’ದ ಬೃಹತ್ ಕನಸು ಸಾಕಾರಗೊಳಿಸಲು ಆನ್‍ಲೈನ್ ಮೂಲಕವೇ ಹಣ ಪಾವತಿಯಾಗಬೇಕು.

ಹಿಂದಿನ ಕ್ರಮದಲ್ಲಾದರೆ ಯಾರಾದರೂ ಹಣ ತೆಗೆದುಕೊಂಡು ರಸೀದಿ ಕೊಡುತ್ತಿದ್ದರು. ಆದರೆ ನಾನು ಹೋದ ದಿನ ಬಿಲ್ ಕಲೆಕ್ಟರ್ ರಜೆಯಂತೆ. ಬೆರಳಚ್ಚು ಕೊಡದೆ ತೆರಿಗೆಯ ಖಾತೆ ತೆರೆಯಲು ಸಾಧ್ಯವಿಲ್ಲ. ಸಂಬಂಧಿಸಿದ ಸಹಾಯಕ ರಜೆ ಹಾಕಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಆದರೆ ಇಲ್ಲಿ ಅದಕ್ಕೂ ಬರ. ‘ಹಣ ಕೊಟ್ಟು ಹೋಗಿ, ನಾಳೆ ರಸೀದಿ ತಲುಪಿಸುತ್ತೇವೆ’ ಎಂದರು. ಹಣ ಕೊಟ್ಟು ಬಂದರೂ ರಸೀದಿ ಬರಲಿಲ್ಲ. ಸಮಯಕ್ಕೆ ತೆರಿಗೆ ಕೊಡದಿದ್ದರೆ ಅಪರಾಧ. ಆದರೆ ರಸೀದಿ ಕೊಡದಿದ್ದರೆ ಸಹಜ ಭಾವ. ಕರೆ ಮಾಡಿ ಕೇಳಿದರೆ ‘ಸರ್ವರ್ ಸರಿ ಇಲ್ಲ, ನಾಳೆ ನೋಡೋಣ’ ಎಂಬ ಉತ್ತರ ಬಂತು.

ಭಾರತವು ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ ಎಂದು ಸರ್ಕಾರದ ಜಾಹೀರಾತುಗಳಲ್ಲಿ ಭಾರಿ ಪ್ರಚಾರ ಮೊಳಗುತ್ತಿದೆ. 5ಜಿ ತರಂಗಾಂತರದ ಅಂತರ್ಜಾಲ ವ್ಯವಸ್ಥೆಯನ್ನು ಸ್ವಾಗತಿಸಲು ದೇಶ ಸಿದ್ಧವಾಗುತ್ತಿದೆ. ಆದರೆ ಜನಸಾಮಾನ್ಯರ ಬದುಕಿನಲ್ಲಿ ಸಾಮಾನ್ಯ ಎನಿಸಿಕೊಂಡ, ಸರ್ವರ್ ಸರಿಯಿಲ್ಲ ಎಂಬ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ರೈತರಿರಲೀ ವ್ಯಾಪಾರಿಗಳಿರಲೀ ಸರ್ಕಾರಿ ಕಚೇರಿಗಳೊಂದಿಗೆ ಸಂಬಂಧ ಬೆಳೆಸದೆ ಬದುಕುವಂತಿಲ್ಲ. ರೈತನೊಬ್ಬ ಪಹಣಿ ಪತ್ರಕ್ಕಾಗಿ ನಾಡ ಕಚೇರಿಗೆ ಹೋದರೆ ಅಲ್ಲೂ ಇದೇ ಸರ್ವರ್ ಸರಿಯಿಲ್ಲದ ಸಮಸ್ಯೆ. ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಬಸ್ ನಿರ್ವಾಹಕರ ಟಿಕೆಟ್ ಯಂತ್ರದ ಹಾಗಿರುವ ಸಾಧನವನ್ನು ಕೊಟ್ಟಿದ್ದಾರೆ. ಎಲ್ಲ ವ್ಯವಹಾರವೂ ಗಣಕೀಕೃತವಾಗಿದೆ ಎಂದು ಸರ್ಕಾರ ಹೇಳಿಕೊಳ್ಳ
ಬಹುದು. ಆದರೆ ಬಹುತೇಕ ದಿನಗಳಲ್ಲಿ ವಿವಿಧ ಖಾತೆಗಳಿಗೆ ಹಣ ತುಂಬಲು, ಹಣ ಪಡೆಯಲು ಬರುವವರಿಗೆ ಈ ಸರ್ವರ್ ಬಾಧೆ ತಾಸುಗಟ್ಟಲೆ ಕಾಯಿಸಿ ನಿರಾಸೆಯಿಂದ ಮರಳುವಂತೆ ಮಾಡುತ್ತಿದೆ.

ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ₹ 10 ಸಾವಿರದ ತನಕ ಬೆರಳಚ್ಚನ್ನು ಮಾತ್ರ ನೀಡಿ ಪಡೆಯುವ ಅನುಕೂಲವಿದೆ ಎಂಬುದು ದಿಟ. ಆದರೆ ಸರ್ವರ್ ಸರಿಯಿಲ್ಲ ಎಂದು ಅಂಚೆ ಪಾಲಕರು ಬರಿಗೈಯಲ್ಲಿ ಮನೆಗೆ ಕಳುಹಿಸುತ್ತಾರೆ. ದೊಡ್ಡ ಅಂಚೆ ಕಚೇರಿಗಳಲ್ಲಿ ಕಂಪ್ಯೂಟರ್‌ಗಳಿವೆ. ಸಾಮಾನ್ಯವಾಗಿ ಸರ್ವರ್ ಸಮಸ್ಯೆ ಅಷ್ಟೊಂದು ಕಾಡುವುದಿಲ್ಲ. ಆದರೆ ಗ್ರಾಮೀಣ ಜನರ ಪಾಲಿಗೆ ಈ ವ್ಯವಸ್ಥೆ ಇದ್ದರೂ ಲಾಭವಿಲ್ಲದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗುತ್ತದೆ.

ಡಿಜಿಟಲ್ ವ್ಯವಸ್ಥೆಯ ಮೂಲಕ ಹಣ ಕಳುಹಿಸಲು ಸರ್ಕಾರ ತರಾತುರಿ ತೋರಿದಂತೆ ಅಂತರ್ಜಾಲ ವ್ಯವಸ್ಥೆಯ ಸುಧಾರಣೆಗೆ ಆಸಕ್ತಿ ತೋರಿಸಬೇಕಾಗಿತ್ತು. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್, ದೂರವಾಣಿ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಗಳಿಸಿದ್ದ ಕೀರ್ತಿಯೆಲ್ಲವೂ ಈಗ ಮಣ್ಣುಗೂಡಿದೆ. ವಿದ್ಯುತ್ ಇದ್ದರೆ ಮಾತ್ರ ಅದರ ಸಂಕೇತ ಸಿಗುತ್ತದೆ. ಗೋಪುರವು ಸಂಕೇತ ನೀಡಬೇಕಿದ್ದರೆ ವಿದ್ಯುತ್ ಬೇಕು. ಜನರೇಟರ್ ಸೌಲಭ್ಯ ಇಲ್ಲ. ಇದ್ದರೂ ಅದಕ್ಕೆ ಬೇಕಾದ ಡೀಸೆಲ್ ಪೂರೈಕೆಯಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಇದರಿಂದ ಲಾಭವಿಲ್ಲ. ಇನ್ನು ಖಾಸಗಿ ಕಂಪನಿಗಳಂತೂ ಗ್ರಾಮೀಣ ಜನರನ್ನು ಕಡೆಗಣಿಸಿದಂತೆ ಕಾಣುತ್ತದೆ. ಸಂಕೇತ ಸಿಗಬೇಕಿದ್ದರೆ ಅದರ ಗೋಪುರದ ಕೆಳಗೆ ಹೋಗಿ ನಿಲ್ಲಬೇಕಾದಂತಹ ಕ್ಷೀಣ ಸಂಕೇತ ವ್ಯವಸ್ಥೆಯಿದೆ.

ಸೌಲಭ್ಯವನ್ನು ಅಳವಡಿಸುವುದರಲ್ಲಿ ಇರುವ ತರಾ
ತುರಿಯು ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಇಲ್ಲವಾಗುತ್ತದೆ. ಸರ್ವರ್ ಸಮಸ್ಯೆಯ ಕಾರಣದಿಂದ ಹಳ್ಳಿಯ ಜನ ಮತ್ತೆ ಮತ್ತೆ ಕಚೇರಿಯ ದಾರಿ ತುಳಿಯಲು ಹಣವೂ ಖರ್ಚಾಗುತ್ತದೆ, ಸಮಯವೂ ವ್ಯರ್ಥವಾಗುತ್ತದೆ.

ಇಪ್ಪತ್ತೊಂದನೆಯ ಶತಮಾನದ ಕಾಲು ಭಾಗ ಮುಗಿಯುತ್ತಿದೆ. ವಿದೇಶಗಳಿಗೆ ಹೋಗಿಬಂದು ಅಲ್ಲಿನ ರಸ್ತೆಗಳನ್ನು ಹೊಗಳುತ್ತೇವೆ. ಅಂತರ್ಜಾಲ ಸೌಕರ್ಯವನ್ನು ವೈಭವೀಕರಿಸುತ್ತೇವೆ. ಆದರೆ ನಮಗೆ ಇನ್ನೂ ಅದು ಸಾಧ್ಯವಾಗಿಲ್ಲ. ಅಲಕ್ಷ್ಯದ ಪರಿಣಾಮವಾಗಿ ಜನ ಅಲೆದಾಡುವಂತಾಗಿದೆ. ಇದು, ಜನಸಾಮಾನ್ಯರ ಸಹನೆಗೆ ಎಸೆಯುವ ಸವಾಲು ಅಲ್ಲವೇ? ಒಂದು ಸಲ ಕಚೇರಿಗೆ ಬಂದಾಗ ಇಂತಹ ಅವ್ಯವಸ್ಥೆಯ ಕಾರಣದಿಂದ ಫಲಾನುಭವಿ ಬರಿಗೈಯಲ್ಲಿ ಮರಳಿಹೋದರೆ ಅವನಿಗೆ ಉಂಟಾಗುವ ನಷ್ಟಕ್ಕೆ ಯಾರು ಹೊಣೆ? ಇಂತಹ ಬಾಧೆಗಳು ಸಂಭವಿಸಿದಾಗ ಕೈಯಲ್ಲೇ ರಸೀದಿ ಬರೆದುಕೊಡಲು ನಿರ್ದೇಶಿಸಿದರೆ ಶ್ರಮಪಟ್ಟು ಕಚೇರಿಗೆ ಪಾದಯಾತ್ರೆ ಮಾಡಿದವರಿಗೆ ಉಪಕಾರವಾದೀತು.

ಅಂಚೆ ಕಚೇರಿಯಿರಲಿ, ನಾಡ ಕಚೇರಿಯಿರಲಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಆಧುನೀಕರಣವನ್ನು ಅನುಷ್ಠಾನಗೊಳಿಸುವ ಧಾವಂತದಲ್ಲಿ ಮತ್ತೆ ಮತ್ತೆ ಸಂಭವಿಸುವ ಪರಿಹಾರ ಸಾಧ್ಯವಿರುವ ಸಮಸ್ಯೆಗಳು ಜನರ ಬದುಕಿನೊಂದಿಗೆ ಆಟವಾಡುವುದು ಕ್ಷಮಾರ್ಹವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT