ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ರಾಜಕೀಯ ಅಂಗಳದ ಜನಪರ ದಾಳ

‘ಸಮಬಾಳು, ಸಮಪಾಲು’ ಘೋಷಣೆಗಷ್ಟೇ ಅಲ್ಲ, ಆಚರಣೆಯಲ್ಲೂ ಸಾಧ್ಯ
Last Updated 30 ಜುಲೈ 2020, 21:08 IST
ಅಕ್ಷರ ಗಾತ್ರ

ಸಿದ್ದಿ ಎಂಬ ‘ಏಕಲವ್ಯ’ನ ಮನೆಗೆ ಇತ್ತೀಚೆಗೆ ಹೋಗಿ ಬಂದೆ. ಹೌದು, ನಸುಕು ಹರಿಯುತ್ತಲೇ ಯಲ್ಲಾಪುರ ದಾಟಿ, ಹಿತ್ಲಳ್ಳಿ ಪುರ್ಲೆಮನೆ ಎಂಬ ಪುಟ್ಟ ಊರನ್ನು ತಲುಪಿದೆ. ರಸ್ತೆಯ ಇಕ್ಕೆಲಗಳಲ್ಲಿ ಮೈದುಂಬಿ ಹರಿಯುವ ನದಿ, ಝರಿ, ತೋಡುಗಳು. ಹಚ್ಚಹಸಿರನ್ನು ಹೊದ್ದು ಆಕಾಶದತ್ತ ಮುಖ ಮಾಡಿ ನಿಂತ ಮರ, ಗಿಡ ಕಾಡು- ಮೇಡುಗಳ ಸಾಲು ಸಾಲು. ಪುರ್ಲೆಮನೆಯ ಒಳರಸ್ತೆಯಲ್ಲಿ ಸಾಗುತ್ತಲೇ ಬಲಬದಿಗೆ ಮಣ್ಣಿನ ಕಿರು ರಸ್ತೆ. ಅದನ್ನು ದಾಟುತ್ತಿದ್ದಂತೆಯೇ ನನ್ನ ಕುತೂಹಲದ ಕಣ್ಣು, ಶಾಂತಾರಾಮ ಸಿದ್ದಿಯವರ ಮನೆಯ ಮೇಲಿತ್ತು.

ನನ್ನ ಸಾರ್ವಜನಿಕ ಜೀವನದಲ್ಲಿ ಮೊದಲ ಬಾರಿ, ಸಮಾಜದ ಕಟ್ಟಕಡೆಯ ಮನುಷ್ಯ ಬದುಕಿ ಬಾಳುತ್ತಿರುವ ಗುಂಪಿನ ಮನೆಗಳನ್ನು ನೋಡುವ ಅವಕಾಶ ದೊರೆಯಿತು. ಗುಂಗುರು ತಲೆಕೂದಲು, ಸಂಕೋಚ, ಕೀಳರಿಮೆ, ಹಿಂಜರಿಕೆ, ಬೆರಗಿನ ಬಿರುನೋಟ... ಇವೆಲ್ಲವೂ ಆಧುನಿಕ ಯುಗದಲ್ಲಿ ಕಾಣಸಿಗುವುದು ಸಿದ್ದಿ ಸಮುದಾಯದಲ್ಲಿ ಮಾತ್ರ.

ಹೆಸರಿಗೆ ಅದೊಂದು ಹೆಂಚಿನ ಮನೆ. ಆದರೆ ಮಾಡನ್ನು ಹೆಂಚುಗಳಿಗಿಂತ ಪ್ಲಾಸ್ಟಿಕ್ ಟಾರ್ಪಾಲುಗಳೇ ಹೆಚ್ಚಾಗಿ ಮುಚ್ಚಿರುವುದು ಕಣ್ಣಿಗೆ ರಾಚುತ್ತದೆ. ಬಿಜೆಪಿಯ ಮೂಲಕ ವಿಧಾನಪರಿಷತ್ತಿಗೆ ಇತ್ತೀಚೆಗೆ ನಾಮನಿರ್ದೇಶನಗೊಂಡಿರುವ, ಶಾಂತಾರಾಮ ಸಿದ್ದಿ ಎಂಬ ವನವಾಸಿ ಕಾರ್ಯಕರ್ತ ನನ್ನೆದುರು ಬಂದು ನಿಂತು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮಾನ್ಯ ಸ್ವಯಂ ಸೇವಕನ ಶೈಲಿಯಲ್ಲೇ ಕೈಮುಗಿದು ಸ್ವಾಗತಿಸಿದಾಗ ಭಾವುಕನಾಗಿ ಪ್ರತಿನಮಸ್ಕರಿಸಿದೆ.

ರಾಜಕೀಯ ಪಡಸಾಲೆಯಲ್ಲಿ ‘ದುಡ್ಡಿದ್ದವನೇ ದೊಡ್ಡಪ್ಪ’ ಎಂಬ ಮಾತು ನಿತ್ಯ ಸತ್ಯವಾಗುತ್ತಿರುವ ಕಾಲದಲ್ಲಿ, ಜಾತಿಯೆಂಬ ಮಾನದಂಡವೇ ರಾಜಕೀಯ ಶಕ್ತಿಯಾಗಿ ಮಾರ್ಪಡುವ ಇಂದಿನ ಕಾಲಘಟ್ಟದಲ್ಲಿ, ಶಾಂತಾರಾಮ ಅವರಂತಹ, ಉದರ ಪೋಷಣೆಗಾಗಿ ಅರ್ಧ ಎಕರೆ ಕೃಷಿ ಭೂಮಿಗೆ ಸೀಮಿತವಾದ ನೆಲ, ಅದಕ್ಕೆ ಹೊಂದಿಕೊಂಡಿರುವ ಮರ, ಗಿಡ, ಕಾಡನ್ನು ಪ್ರೀತಿಸುತ್ತಾ ಇತರ ವನವಾಸಿಗಳೊಡನೆ ಬದುಕು ಬೆಸೆದುಕೊಂಡಿರುವ ವ್ಯಕ್ತಿಯನ್ನು ರಾಜಕೀಯ ಪಕ್ಷವೊಂದು ಗುರುತಿಸಿ ಮೇಲ್ಮನೆಗೆ ಕಳುಹಿಸಿರುವುದು ಊಹಿಸಲು ಅಸಾಧ್ಯವಾದ, ಆದರೆ ಕಣ್ಣೆದುರೇ ನಡೆದ ಅಚ್ಚರಿಗಳಲ್ಲೊಂದು.

ಸಿದ್ದಿ ಬುಡಕಟ್ಟು ಸಮುದಾಯವೇ ಹಾಗೆ; ಮನುಷ್ಯರನ್ನು ಕಂಡಾಗ ಅಂಜಿ ಓಡಿ, ಮರಗಿಡಗಳ ನಡುವೆ ಮರೆಯಾಗುವ ಕಾಡುಕೋಳಿಗಳಂತೆ. ಶಾಂತಾರಾಮ ಅವರು ಈ ವನವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾಯಕದಲ್ಲಿ ಮೂರು ದಶಕಗಳಿಂದ ತೊಡಗಿಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ಸಿದ್ದಿ ಸಮುದಾಯದ ಮೊದಲ ಪದವೀಧರನಾದ ಕೀರ್ತಿ ಅವರದು.

ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ಸವಿತಾ ಸಮಾಜದ ಅಶೋಕ ಗಸ್ತಿಯವರಂತಹ ಸಾಮಾನ್ಯರಲ್ಲಿ ಸಾಮಾನ್ಯನಾದ ಕಾರ್ಯಕರ್ತ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿರುವ ಸಾಬಣ್ಣ ತಳವಾರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಆಯ್ಕೆಯೂ ಇದಕ್ಕಿಂತ ಹೊರತಲ್ಲ. ಇಂತಹ ಆಯ್ಕೆಗಳಿಂದ ಸಮಬಾಳು, ಸಮಪಾಲು ಎಂಬುದು ಘೋಷಣೆಗೆ ಮಾತ್ರವಲ್ಲ, ಆಚರಣೆಯಲ್ಲೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಂತಾಗಿದೆ.

ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಮತ್ತು ಅವಕಾಶ ವಂಚಿತರ ಕೈಗೆ ಅಧಿಕಾರ ಹಸ್ತಾಂತರಿಸುವ ಜನಸ್ಪರ್ಶಿ ಕಾರ್ಯದಲ್ಲಿ ರಾಜಕೀಯ ಪಕ್ಷಗಳು ಪೂರ್ಣ ಸಫಲವಾಗಿಲ್ಲ ಎಂಬ ಆರೋಪಗಳಿವೆ. ‘ಭಾರತದ ಪುಣ್ಯಭೂಮಿಯಲ್ಲಿ ರಾಜಕಾರಣವನ್ನು ವೃತ್ತಿಯಾಗಿ ಸ್ವೀಕರಿಸಿದವರು ಕೋಟ್ಯಂತರ ಮಂದಿ. ಅದೇ, ರಾಜಕಾರಣವನ್ನು ವ್ರತವಾಗಿ ಸ್ವೀಕರಿಸಿದವರು ಬೆರಳೆಣಿಕೆ
ಯಷ್ಟು ಮಂದಿ’ ಎಂದು ಜನಸಂಘದ ಪ್ರಮುಖ ದೀನದಯಾಳ್‌ ಉಪಾಧ್ಯಾಯ ಹೇಳಿದ್ದಾರೆ. ಆದರೆ, ಈಗ ಆಯ್ಕೆಯಾಗಿರುವ ಈ ಗಣ್ಯರು ರಾಜಕಾರಣವನ್ನು ವ್ರತವಾಗಿ ಸ್ವೀಕರಿಸುವವರ ಸಾಲಿಗೆ ನಿಶ್ಚಯವಾಗಿಯೂ ಸೇರುತ್ತಾರೆ.

ಶಾಸಕರಾದವರು ಅಥವಾ ರಾಜ್ಯಸಭಾ ಸದಸ್ಯರಾದವರು ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಿ, ಹಾಕಿದ ಹಣ ವಾಪಸ್ ಬರುವುದು ಹೇಗೆ ಎಂದು ಯೋಚಿಸಿಬಿಟ್ಟರೆ, ರಾಜಕಾರಣವು ವ್ಯಾಪಾರೀಕರಣ ಆಗದಿರಲು ಸಾಧ್ಯವಿಲ್ಲ. ಹಣ ಹಂಚಿ ಗೆದ್ದವನೊಬ್ಬ, ನೀನು ಹಾಕಿದ ವೋಟಿಗೂ ನಾನು ಕೊಟ್ಟ ನೋಟಿಗೂ ಚುಕ್ತವಾಯ್ತು ಎಂದು ಮುಖ ತಿರುವಿದರೆ, ಜನತಂತ್ರ ವ್ಯವಸ್ಥೆಯ ಗತಿಯೇನು? ಭಾರತದ ರಾಜಕಾರಣದ ಪಡಸಾಲೆಯಲ್ಲಿ ಸ್ವಾರ್ಥರಹಿತ ರಾಜಕಾರಣ ಮುನ್ನೆಲೆಗೆ ಬರಬೇಕೆಂದರೆ, ವ್ಯವಸ್ಥೆಯಲ್ಲಿ ಹಣದ ಹೊಳೆಗೆ ನಿಯಂತ್ರಣ ಬೀಳಲೇಬೇಕಾಗಿದೆ. ಅದನ್ನು ಒಂದೇ ಸಾರಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಸಿದ್ದಿ, ಗಸ್ತಿ, ಸಾಬಣ್ಣ, ಕಡಾಡಿಯವರಂತಹ ಒಂದೊಂದೇ ಜನಪರ ದಾಳಗಳನ್ನು ಕರುನಾಡ ರಾಜಕಾರಣದ ಅಂಗಳಕ್ಕೆಸೆದು ಯಶಸ್ಸು ಕಾಣಬೇಕಾಗುತ್ತದೆ. ಇದೇ ಪ್ರಯೋಗವು ಕೇಂದ್ರ ಸರ್ಕಾರದಲ್ಲೂ ಗೋಚರಿಸಿದೆ.

ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಭವನದ ಮೇಲ್ಚಾವಣಿಯಲ್ಲಿ ನಿಂತು ತುಂತುರು ಮಳೆಯನ್ನು ತಲೆಯೆತ್ತಿ ನೋಡಿದಾಗ, ತಮ್ಮ ಬಾಲ್ಯದ ದಿನಗಳಲ್ಲಿ ಸರಿಯಾದ ಸೂರಿಲ್ಲದೆ, ತಮ್ಮ ಮನೆಯೊಳಗೆ ನೇರವಾಗಿ ನುಗ್ಗಿ ಬರುತ್ತಿದ್ದ ಮಳೆ ಹನಿಗಳ ನೆನಪಾಯಿತು ಎಂದು ಉದ್ಗರಿಸಿದ್ದರಂತೆ.

ಲೇಖಕ: ರಾಜ್ಯ ಮುಜರಾಯಿ, ಮೀನುಗಾರಿಕೆ,

ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT