ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಉಳಿಯಲಿ ಪ್ರಶಸ್ತಿಯ ಗೌರವ

ಪ್ರಶಸ್ತಿಗಳನ್ನು ಮೀರಿ ಬೆಳೆದ ಹಲವು ವ್ಯಕ್ತಿತ್ವಗಳು ನಮಗೆ ಮಾದರಿಯಾಗಿವೆ
Last Updated 16 ನವೆಂಬರ್ 2021, 19:45 IST
ಅಕ್ಷರ ಗಾತ್ರ

ನವೆಂಬರ್ ಪ್ರಶಸ್ತಿ, ಪುರಸ್ಕಾರಗಳ ತಿಂಗಳು. ಪ್ರಶಸ್ತಿಗಳು ಅರ್ಹತೆಯ ಮಾನದಂಡವಲ್ಲ ಎನ್ನುತ್ತಿದ್ದರು ಸಾಹಿತಿ ಸತ್ಯಕಾಮ.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಬಾಗಲಕೋಟೆ ಜಿಲ್ಲೆಯ ಲೋಕಾಪುರ ಗ್ರಾಮದ ‘ಶ್ರೀಕೃಷ್ಣ ಪಾರಿಜಾತ’ದ ಹಿರಿಯ ಕಲಾವಿದೆ ಯಲ್ಲವ್ವ ರೊಡ್ಡನವರ ಅವರನ್ನು ‘ನಾಡೋಜ’ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ವಿಶ್ವವಿದ್ಯಾಲಯದ ಅಧಿಕಾರಿಯು ಫೋನಿನಲ್ಲಿ ಯಲ್ಲವ್ವ ಅವರಿಗೆ ವಿಷಯ ತಿಳಿಸಿ ಅಭಿನಂದನೆ ಹೇಳಿದರು. ಘಟಿಕೋತ್ಸವಕ್ಕೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಲು ಮನವಿ ಮಾಡಿದರು.

‘ಪ್ರಶಸ್ತಿಯೊಂದಿಗೆ ಎಷ್ಟು ಹಣ ಕೊಡುತ್ತೀರಿ’ ಎಂದು ಯಲ್ಲವ್ವ ನೇರವಾಗಿ ಪ್ರಶ್ನಿಸಿದರು. ಅಧಿಕಾರಿ ಬಹುಶಃ ಇಂಥ ಪ್ರಶ್ನೆ ನಿರೀಕ್ಷಿಸಿರಲಿಕ್ಕಿಲ್ಲ. ಅವರು ಸಾವರಿಸಿಕೊಂಡು ‘ಇದು ಗೌರವ ಪದವಿ. ಹಣ ಕೊಡುವುದಕ್ಕೆ ನಿಯಮದಲ್ಲಿ ಅವಕಾಶವಿಲ್ಲ’ ಎಂದರು. ‘ನಾನು ಬಡವಿ. ನನ್ನ ಹೊಟ್ಟೆ ತುಂಬಿಸದ ಈ ಪ್ರಶಸ್ತಿ ನನಗೆ ಬೇಡ. ಮತ್ತಾರಿಗಾದರೂ ಕೊಡಿ’ ಎಂದು ಹೇಳಿ ಫೋನ್ ಇಟ್ಟರು.

ಈ ಸಂಗತಿ ಲೋಕಾಪುರದ ಹಿರಿಯರಿಗೆ ಗೊತ್ತಾಗಿ, ಅವರು ಚಂದಾ ಹಣ ಕೂಡಿಸಿ ಯಲ್ಲವ್ವ ಅವರನ್ನು ಹಂಪಿಗೆ ಕಳಿಸಿ ಪ್ರಶಸ್ತಿ ಸ್ವೀಕರಿಸುವುದಕ್ಕೆ ನೆರವಾದರು. ಯಲ್ಲವ್ವ ತಾನು ‘ನಾಡೋಜ ಯಲ್ಲವ್ವ’ ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ಮತ್ತು ಬರೆದುಕೊಳ್ಳುವುದಿಲ್ಲ.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿತ್ತು. ಶ್ರೀಗಳು ಆತ್ಮಸಾಕ್ಷಿಗೆ ಬದ್ಧರಾಗಿರುವ ಸರಳ ಸಂತರು. ‘ನಾವು ಸನ್ಯಾಸಿಗಳು, ನಮಗೆ ಪದವಿ- ಬಿರುದುಗಳು ಬೇಡ’ ಎಂದು ವಿನಯದಿಂದ ಪ್ರಶಸ್ತಿ ನಿರಾಕರಿಸಿದರು.

ಕೆಲವು ವರ್ಷಗಳ ಹಿಂದೆ ಗುಲಬರ್ಗಾ ವಿಶ್ವವಿದ್ಯಾಲಯವು ಶ್ರೀಮಂತ ಮಠವೊಂದರ 24ರ ಹರೆಯದ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಮಠಾಧಿಪತಿಯಾಗಿ ಎರಡು ವರ್ಷ ಕೂಡ ಆಗಿರದ ಅವರನ್ನು ಆಯ್ಕೆ ಮಾಡಿದ್ದಕ್ಕೆ ಬಹಳಷ್ಟು ಅನುಮಾನಗಳು ಸೃಷ್ಟಿಯಾಗಿದ್ದವು. ಅವರ ಸಾಧನೆಯ ಬಗ್ಗೆ ಪತ್ರಕರ್ತರು ಮತ್ತೆ ಮತ್ತೆ ಕೆಣಕಿದಾಗ ಕುಲಪತಿಯವರು ಪತ್ರಿಕಾಗೋಷ್ಠಿ ಅರ್ಧಕ್ಕೇ ನಿಲ್ಲಿಸಿ ಹೊರಟುಹೋದ ವಿಷಾದಕರ ಘಟನೆಯೂ
ನಡೆಯಿತು.

ಇದು ಇಲ್ಲಿಗೇ ನಿಲ್ಲಲಿಲ್ಲ. ಘಟಿಕೋತ್ಸವದಲ್ಲಿ ಯುವ ಸ್ವಾಮೀಜಿ ಗೌರವ ಡಾಕ್ಟರೇಟ್ ಸ್ವೀಕರಿಸುವಾಗ ಅವರ ಬೆಂಬಲಿಗರು ಕುಣಿದು, ಜೈಕಾರ, ಕೇಕೆಹಾಕಿದ್ದು ಇನ್ನೊಂದು ವಿಷಾದದ ಸಂಗತಿಯಾಗಿ ದಾಖಲಾಗಿದೆ.

ಗದಗದ ಪುಣ್ಯಾಶ್ರಮದ ಡಾ. ಪುಟ್ಟರಾಜ ಗವಾಯಿಗಳಿಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕೆಂದು ಭಕ್ತರು ಹೋರಾಟ ಆರಂಭಿಸಿದ್ದರು. ಹೋರಾಟ ಉಗ್ರರೂಪ ತಾಳಿತು. ಕೆಲವರು ವಾಹನಗಳನ್ನು ತಡೆದು ರಸ್ತೆ ರೋಖೊ ಚಳವಳಿ ಕೂಡ ಮಾಡಿದರು. ಗವಾಯಿಗಳಿಗೆ ಈ ಎಲ್ಲ ಸಂಗತಿ ಗೊತ್ತಾಗಿ ಅವರು ‘ಇದರಿಂದ ಜನರಿಗೆ ಅನವಶ್ಯಕ ಹಿಂಸೆಯಾಗುತ್ತದೆ. ಅತ್ತೂ ಕರೆದು ಪ್ರಶಸ್ತಿ ಕೇಳುವುದು ಬೇಡ. ನನಗೆ ಬಹಳ ಅಪಮಾನವಾಗುತ್ತದೆ’ ಎಂದು ತಿಳಿಹೇಳಿ ಹೋರಾಟ ನಿಲ್ಲಿಸಿದರು.

ಕಾದಂಬರಿಕಾರ ಅರ್ನೆಸ್ಟ್ ಹೆಮಿಂಗ್ವೇ ನೊಬೆಲ್ ಪ್ರಶಸ್ತಿ ಸ್ವೀಕರಿಸಲು ಹೋಗಲಿಲ್ಲ. ಆಫ್ರಿಕಾದ ದಟ್ಟ ಅರಣ್ಯದ ಏಕಾಂತ ತೊರೆದು ಹೋಗುವುದು ತಮಗೆ ಇಷ್ಟವಿಲ್ಲ ಎಂದು ಹೇಳಿ ದೂರ ಉಳಿದರು. ನೊಬೆಲ್ ಸಮಿತಿಯವರೇ ಹುಡುಕಿಕೊಂಡು ಹೋಗಿ ಪ್ರಶಸ್ತಿ ನೀಡಿ ಗೌರವಿಸಿದರು.

ಚಿಲಿ ಕವಿ ಪಾಬ್ಲೊ ನೆರೂಡ ಅವರು ನೊಬೆಲ್ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಮಾಡಿದ ಭಾಷಣ ಎಲ್ಲ ಪ್ರಶಸ್ತಿಗಳ ಬಗೆಗಿನ ಮುನ್ನುಡಿಯಂತಿದೆ: ‘ನಮ್ಮ ಮನೆಯಲ್ಲಿ ದಿನನಿತ್ಯದ ಬ್ರೆಡ್ ಸಿದ್ಧಗೊಳಿಸುವ ಬೇಕರ್‍ನೇ ಅತ್ಯುತ್ತಮ ಕವಿಯಾಗಿದ್ದಾನೆ. ನೆರೆಮನೆಯಲ್ಲಿ ಹಿಟ್ಟು ಕಲೆಸುವ ಅಡುಗೆಯವನು ಕೂಡ ಉತ್ತಮ ಕವಿ. ಆದರೆ ನೊಬೆಲ್ ನನಗೆ ಬಂದುಬಿಟ್ಟಿದೆ’.

ರಾಷ್ಟ್ರಪತಿಯಾಗಿದ್ದ ಆರ್.ವೆಂಕಟರಾಮನ್ ಅವರು ಮುಂಬೈಯಲ್ಲಿ ವಾಸವಾಗಿದ್ದ ನರ್ಸ್ ಒಬ್ಬರ ಹೆಸರನ್ನು ಪದ್ಮಶ್ರೀ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಸೇರಿಸಲು ಸೂಚಿಸಿದ್ದರು. ಆ ಮಹಿಳೆಯನ್ನು ಪತ್ತೆ ಹಚ್ಚಲು ಸರ್ಕಾರಿ ಸಿಬ್ಬಂದಿ ಪರದಾಡಬೇಕಾಯಿತು. ಕೊನೆಗೆ ರಾಷ್ಟ್ರಪತಿಯವರ ಕುಟುಂಬಕ್ಕೆ ಹತ್ತಿರವಾಗಿದ್ದ ನರ್ಸ್ ಒಬ್ಬರ ಹೆಸರನ್ನು ಸೇರಿಸಲಾಯಿತು. ಆದರೆ ಆ ಪ್ರಶಸ್ತಿಯು ರಾಷ್ಟ್ರಪತಿಯವರ ಮನಸ್ಸಿನಲ್ಲಿದ್ದವರ ಬದಲಾಗಿ ಬೇರೆ ಮಹಿಳೆಯ ಪಾಲಾಗಿದ್ದುದು ತಡವಾಗಿ ಬೆಳಕಿಗೆ ಬಂದಿತು.

ನಾರ್ವೆಯ ಖ್ಯಾತ ಕವಯತ್ರಿ ಸಿಗ್ರಿಡ್ ಆನ್‍ಸೆಟ್ ಅವರಿಗೆ ಆ ದೇಶದ ಅತ್ಯುನ್ನತ ಪ್ರಶಸ್ತಿ ಪ್ರಕಟವಾಗುತ್ತಲೇ ಪತ್ರಕರ್ತರು ಸಂದರ್ಶನಕ್ಕೆ ಅವರ ಮನೆಗೆ ತೆರಳಿದಾಗ ಸಿಗ್ರಿಡ್ ಹೇಳಿದರು: ‘ಕ್ಷಮಿಸಿ, ನನಗೀಗ ಮಾತನಾಡಲು ಸಮಯವಿಲ್ಲ. ಏಕೆಂದರೆ ನಾನೀಗ ನನ್ನ ಮಗುವನ್ನು ಮಲಗಿಸುತ್ತಿದ್ದೇನೆ. ನಾನು ಲಾಲಿ ಹಾಡಿದಾಗಲೇ ಅದು ಮಲಗುತ್ತದೆ. ಪ್ರಶಸ್ತಿ ಪಡೆದ ಸಂತೋಷ ನನಗಿದೆ. ಆದರೆ ಅದಕ್ಕಿಂತ ಹೆಚ್ಚಿನ ಸಂತೋಷ ನನ್ನ ಮಗುವಿನ ಪಾಲನೆ, ಪೋಷಣೆಯಲ್ಲಿ ಸಿಗುತ್ತದೆ’. ಈ ತಾಯಿಯ ವಾತ್ಸಲ್ಯ ಕಂಡು ನಿಬ್ಬೆರಗಾದ ಪತ್ರಕರ್ತರು ತುಟಿಪಿಟಿಕ್ಕೆನ್ನದೆ ಅಲ್ಲಿಂದ ತೆರಳಿದರು.

‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?’ ಎಂಬ ಕವಿವಾಣಿ ಈ ಸಂದರ್ಭದಲ್ಲಿ ನೆನಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT