ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಅಭಿವೃದ್ಧಿ: ದಿಕ್ಕುತಪ್ಪಿದೆ ಗುರಿ

Last Updated 24 ಜುಲೈ 2019, 19:45 IST
ಅಕ್ಷರ ಗಾತ್ರ

ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ನಿಗದಿಪಡಿಸಿರುವ 17 ಗುರಿಗಳ ಪೈಕಿ ಭಾರತದ ಸ್ಥಾನ, ಸಿದ್ಧತೆ ಹಾಗೂ ಸಾಧನೆಯ ಮಟ್ಟ ಹೇಗಿದೆ ಎಂಬುದನ್ನು, ನೀತಿ ಆಯೋಗ ಕಳೆದ ವರ್ಷದ ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ. ಅನುಷ್ಠಾನದ ವಿಷಯದಲ್ಲಿ, ಜಗತ್ತಿನ 156 ದೇಶಗಳ ಪೈಕಿ 112ನೇ ಸ್ಥಾನದಲ್ಲಿರುವ ನಾವು, ಸಿದ್ಧತೆಯಲ್ಲಿ 57ನೇ ರ‍್ಯಾಂಕ್‍ ಗಳಿಸಿದ್ದೇವೆ. ದಕ್ಷಿಣ ಏಷ್ಯಾ ಗುಂಪಿನ ಆರು ದೇಶಗಳ ಪೈಕಿ 5ನೇ ಸ್ಥಾನದಲ್ಲಿ ದ್ದೇವೆ. ಗಾಸಿಗೊಳಿಸುವ ಮಾಹಿತಿ ಎಂದರೆ, ಸುಸ್ಥಿರ ಅಭಿವೃದ್ಧಿಯ ಮುಖ್ಯ ಗುರಿಗಳಾದ ಜವಾಬ್ದಾರಿಯುತ ಉತ್ಪಾದನೆ ಮತ್ತು ಬಳಕೆ, ವಾಯುಗುಣ ನಿರ್ವಹಣೆ ಮತ್ತು ನೀರಿನಡಿಯ ಜೀವಜಾಲಗಳ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲದಿರುವುದರಿಂದ, ಅವುಗಳಿಗೆ ಸಂಬಂಧಿಸಿದ ಕೆಲಸ ಪ್ರಾರಂಭವಾಗಿಯೇ ಇಲ್ಲ!

ವಿಶ್ವಸಂಸ್ಥೆಯು 2015ರಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಈ ಗುರಿಗಳನ್ನು ನೀಡಿ, ಗುರಿ ತಲುಪಲು 15 ವರ್ಷಗಳ ಕಾಲಾವಧಿಯನ್ನು ನಿಗದಿ ಗೊಳಿಸಿತು. ಆಯಾ ದೇಶ ತನ್ನದೇ ಕಾರ್ಯಸೂಚಿಯನ್ನು ಹೊಂದಿ ಕೆಲಸ ಮಾಡಲು ಹುರಿದುಂಬಿಸಿತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ಸಂಪೂರ್ಣ ಹುರುಪಿನೊಂದಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿತ್ತು. ಆ ಮಾತಿಗೆ ಈಗ ನಾಲ್ಕೂವರೆ ವರ್ಷಗಳು ತುಂಬಿವೆ. ಕೆಲಸ ಮಾಡುವುದಿರಲಿ, ಗುರಿ ತಲುಪಲು ಬೇಕಾದ ಕಾರ್ಯಸೂಚಿಯೇ ಇನ್ನೂ ತಯಾ ರಾಗಿಲ್ಲ ಮತ್ತು ಅಂಥದ್ದೊಂದು ಕಾರ್ಯಸೂಚಿಗೆ ಕೇಂದ್ರ ಮಂತ್ರಿಮಂಡಲ ಮತ್ತು ಸದನದ ಅನುಮೋ ದನೆಯೂ ದೊರೆತಿಲ್ಲ! ನಿಗದಿತ ಗುರಿಗಳು ಹಲವಾರು ಸಚಿವಾಲಯಗಳ ವ್ಯಾಪ್ತಿಗೆ ಒಳಪಡುತ್ತವೆಯಾದರೂ ತಮ್ಮ ಕೆಲಸ ಏನು, ಅದರ ರೂಪುರೇಷೆ ಏನು ಎಂಬುದು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿ ವಲಯಕ್ಕೆ ಇಂದಿನವರೆಗೂ ಸ್ಪಷ್ಟವಾಗಿ ತಿಳಿದಿಲ್ಲ.

ಗುರಿ ಸಾಧನೆಯ ಮೇಲುಸ್ತುವಾರಿಯ ಹೊಣೆ ಹೊತ್ತಿರುವ ನೀತಿ ಆಯೋಗ, ಅದನ್ನು ಹೇಗೆ ಅನ್ವಯ ಮಾಡಬೇಕೆಂಬುದನ್ನು ಸ್ಪಷ್ಟಪಡಿಸುವ ತರಾತುರಿಯಲ್ಲಿ ಎಡವಟ್ಟು ನಿರ್ಧಾರ ಕೈಗೊಂಡಿದೆ. ಅದೆಂದರೆ, ಸುಸ್ಥಿರ ಅಭಿವೃದ್ಧಿಯ ನೇರ ವಿರೋಧಿಯಾದ ನದಿ ಜೋಡಣೆಯ ವಿಷಯವನ್ನು ಆದ್ಯತೆಯನ್ನಾಗಿಸಿಕೊಂಡು, ಸಂಬಂಧಿಸಿದ ಇಲಾಖೆಗಳಿಗೆ ಕೆಲಸ ವಹಿಸಿದೆ. ಸುಸ್ಥಿರ ಅಭಿವೃದ್ಧಿಯ 16ನೇ ಗುರಿಯಾದ ಮಾನವ ಹಕ್ಕುಗಳ ವಿಷಯವನ್ನು, ಮಾನವ ಹಕ್ಕುಗಳ ಬಗ್ಗೆ ಲಕ್ಷ್ಯ ವಹಿಸದ ಕೇಂದ್ರ ಗೃಹ ಇಲಾಖೆಗೆ ನೀಡಿ ಪ್ರಮಾದವೆಸಗಿದೆ. ‘ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೂ ಸುಸ್ಥಿರ ಅಭಿವೃದ್ಧಿ ಗುರಿಗಳ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ’ ಎನ್ನುತ್ತಾರೆ ಆಕ್ಸ್‌ಫ್ಯಾಮ್‌ ಇಂಡಿಯಾ ಸ್ವಯಂಸೇವಾ ಸಂಸ್ಥೆಯ ನಿರ್ದೇಶಕ ಅಮಿತಾಭ್‌ ಬೆಹರ್.

ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯ ಸಂಪೂರ್ಣ ಜವಾಬ್ದಾರಿ ವಿದೇಶಾಂಗ ವ್ಯವಹಾರ ಸಚಿವಾಲಯದ್ದು. ಆದರೆ ಈ ಸಚಿವಾಲಯ ಮತ್ತು ವಿಶ್ವಸಂಸ್ಥೆಯೊಂದಿಗೆ ದೀರ್ಘಕಾಲದ ಒಡನಾಟ ಹೊಂದಿರುವ, ವಿರೋಧ ಪಕ್ಷಗಳಿಗೆ ಸೇರಿದ ತಜ್ಞರನ್ನು ರಾಜಕೀಯ ಕಾರಣಗಳಿಗಾಗಿ ದೂರ ಇರಿಸಲಾಗಿದೆ. ಸಮರ್ಥರು, ಬುದ್ಧಿಜೀವಿಗಳನ್ನು ಸುಸ್ಥಿರ ಅಭಿವೃದ್ಥಿ ಕಾರ್ಯಕ್ರಮಗಳಿಂದ ದೂರ ಇಟ್ಟರೆ, ಅಭಿವೃದ್ಧಿ ಯೋಜನೆಗಳ ಬಗ್ಗೆ ಒಮ್ಮತ ಮೂಡುವುದಾದರೂ ಹೇಗೆ? ಸಾರ್ವಜನಿಕ ಚರ್ಚೆ, ಸಹಭಾಗಿತ್ವ ಇಲ್ಲದೆ ಅಂತರರಾಷ್ಟ್ರೀಯ ಒಪ್ಪಂದಗಳ ನ್ಯಾಯೋಚಿತ ಅನುಷ್ಠಾನ ಹೇಗೆ ಸಾಧ್ಯ? ಉನ್ನತ ಅಧಿಕಾರಿಗಳಿಗೇ ಮಾಹಿತಿಯ ಕೊರತೆ ಇರುವಾಗ, ಇದನ್ನು ಸಮರ್ಪಕವಾಗಿ ಅನುಪ್ಠಾನಕ್ಕೆ ತರಬೇಕಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮಾಹಿತಿ, ಮಾರ್ಗದರ್ಶನ ನೀಡುವವರೇ ಇಲ್ಲದೆ ಗುರಿ ತಪ್ಪಿದಂತಾಗಿದೆ.

ಸುಸ್ಥಿರ ಅಭಿವೃದ್ಧಿ ಕುರಿತು ತಮಗೇನೂ ಗೊತ್ತೇ ಇಲ್ಲ ಎಂಬುದನ್ನು ಭಾರತದ ಅನೇಕ ರಾಜ್ಯಗಳ ಶಾಸಕರು ಯಾವ ಮುಜುಗರವಿಲ್ಲದೇ ಹೇಳಿದ್ದಲ್ಲದೆ, ಅವುಗಳಿಂದ ರಾಜ್ಯಕ್ಕೆ ಯಾವ ರೀತಿ ಲಾಭ ಆಗುತ್ತದೆ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ತರಬೇತಿಗೆ ಹಾಜರಾಗಿದ್ದ ಛತ್ತೀಸಗಡದ 90 ಶಾಸಕರಲ್ಲಿ 60 ಜನರಿಗೆ ಸುಸ್ಥಿರ ಅಭಿವೃದ್ಧಿಯ ಪ್ರಾಥಮಿಕ ಮಾಹಿತಿಯೂ ಇರಲಿಲ್ಲ.

ವಾಯುಗುಣ ಹಾಳು ಮಾಡುವಲ್ಲಿ ಭಾರತ, ಚೀನಾಗಳ ಪಾತ್ರ ದೊಡ್ಡದು ಎಂಬ ಆರೋಪವಿರುವಾಗ, ಅತ್ಯಂತ ಸೂಕ್ಷ್ಮ ಹಾಗೂ ಜಗತ್ತಿನ ಅತಿ ಚರ್ಚಿತ ವಾಯುಗುಣದ ಕುರಿತು ಸ್ಪಷ್ಟ ರೂಪುರೇಷೆ ರಚಿಸಿಕೊಂಡು ಕೆಲಸ ಮಾಡಬೇಕಾದ ತುರ್ತು ಸರ್ಕಾರಕ್ಕೆ ಇಲ್ಲವೇ? ಕೃಷಿ ಕ್ಷೇತ್ರದ ಸಮಸ್ಯೆಗಳು, ಹೆಚ್ಚುತ್ತಿರುವ ಬರಪೀಡಿತ ಪ್ರದೇಶಗಳು, ಏರುತ್ತಿರುವ ನಿರುದ್ಯೋಗಿ ಯುವಜನರ ಸಂಖ್ಯೆ, ಮೂಲನಿವಾಸಗಳಿಂದ ದೂರವಾಗುತ್ತಿರುವ ಕಾಡಿನ ಬುಡಕಟ್ಟು ಸಮುದಾಯಗಳ ರಕ್ಷಣೆ ಮತ್ತು ಪುನರ್ವಸತಿ ಸಮಸ್ಯೆ, ಅತಿಯಾದ ಮಾಲಿನ್ಯವು ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ನಿರ್ಮಿಸಿರುವ ಇಂದಿನ ಸಂದರ್ಭದಲ್ಲಿ, ಸುಸ್ಥಿರ ಅಭಿವೃದ್ಧಿಯ ಗುರಿಗಳು ಸಹಜವಾಗಿಯೇ ಚಾಲನೆ ಪಡೆದುಕೊಳ್ಳಬೇಕಿತ್ತು. ಜ್ವಲಂತ ಸಮಸ್ಯೆಗಳಾದ ತೀವ್ರ ಬಡತನ, ಶೋಷಣೆ, ಸಾಮುದಾಯಿಕ ಆರೋಗ್ಯ, ಅಸಮಾನತೆಯನ್ನು ಇಲ್ಲವಾಗಿಸಲು ವಿಶ್ವಸಂಸ್ಥೆ ಹಾಕಿಕೊಟ್ಟಿರುವ ಈ ದಾರಿಯಲ್ಲಿ ದೃಢವಾಗಿ ಸಾಗಲು ಇನ್ನೆಷ್ಟು ವರ್ಷಗಳು ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT