ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಕನ ಕನಸು; ಹೌದು ಹುಲಿಯಾ!

Last Updated 16 ಡಿಸೆಂಬರ್ 2019, 10:31 IST
ಅಕ್ಷರ ಗಾತ್ರ

ಓಣ್ಯಾಗಿನ ನಾಯಿಗಳಿಗೆ ಮನಿ ಮುಂದ ಬಿಸ್ಕಿಟ್‌ ತಿನ್ನಿಸ್ತಾ ನಿಂತಿದ್ದೆ. ‘ಏನ್‌ ಮಾಡಾಕತ್ತೀಯಪಾ’ ಅಂತ ಕೇಳ್ಕೋತ್‌ ಪ್ರಭ್ಯಾ ಬಂದ. ‘ಕಣ್ಣ ಕಾಣ್ತಾವ್‌ ಇಲ್ಲ. ಬಿಸ್ಕಿಟ್‌ ತಿಂದಿದ್ದಕ್ಕ ಈ ನಾಯಿಗಳು ಬಾಲ ಅಳ್ಳಾಡಿಸಿಕೊಂಡು ನನ್ನ ಹಿಂದ್‌ ಮುಂದಓಡಾಡತಾವ್‌. ಕುಮಾರಣ್ಣ ಹೇಳ್ದಂಗ್‌ ಇನ್ನೊಬ್ರು ಎಸೆಯೋ ಬಿಸ್ಕಿಟ್‌ ಆಸೆಗೆ ಬಿಟ್ಟು ಹೋಗೊ ಜಾತಿಗೆ ಈ ನಾಯಿಗಳು ಸೇರಿಲ್ಲ. ಅವುಗಳಿಗೆ ಸ್ವಾಮಿನಿಷ್ಠೆ ಅದ. ಕೆಲವಕ್ಕ ಪಕ್ಷ ನಿಷ್ಠೆನೇ ಇಲ್ಲ’ ಎಂದೆ.

‘ನಾಯಿ ಉಸಾಬರಿ ಬಿಡು. ಟೀವ್ಯಾಗ್‌ ಉಪಚುನಾವಣೆ ಫಲಿತಾಂಶದ ಸುದ್ದಿ ಬರಾಕತ್ತದ್‌. ಅನರ್ಹರ ಹಣೆಬರಹ ಏನಾಗೇದ್‌ ನೋಡೋಣ ನಡಿ’ ಎಂದು ಹೇಳುತ್ತಲೇ ಪ್ರಭ್ಯಾ ನನ್ನನ್ನು ದರದರ ಎಳೆದು ಕೊಂಡು ಒಳಗೆ ನಡೆದ. ಕಮಲ, ಹಸ್ತ, ತೆನೆಹೊತ್ತ ಮಹಿಳೆ ಪಕ್ಷದ ಹುರಿಯಾಳುಗಳು ಕ್ರಮವಾಗಿ 12–2–0 ಮುನ್ನಡೆಯಲ್ಲಿದ್ದುದನ್ನು ನೋಡಿ ಪ್ರಭ್ಯಾ ಕೇಕೆ ಹಾಕಿ ಸೂರು ಹಾರಿ ಹೋಗುಹಂಗ್‌ ನಕ್ಕ. ‘ನೋಡ್‌ ಮಗನ. ರಿಸಲ್ಟ್‌ ಹೆಂಗ್‌ ಬರಾಕತ್ತೈತಿ. ಅನರ್ಹರ ಹಣೆಪಟ್ಟಿ ಅರ್ಹರೆಂದು ಬದಲಾಗಾಕತ್ತೈತಿ. ಆಡಿಯೋರಪ್ನೋರ್‌ ಸರ್ಕಾರ್‌ ಮೂರೂವರೆ ವರ್ಷ ಸೇಫ್‌, ಸೇಫ್‌’ ಎಂದು ಕೂಗುತ್ತ ಕುಣಿದ. ಅದೇ ಖುಷಿಯೊಳ್ಗ ಟೀವಿಗೆ ಮೂರು ಬಾರಿ ನಮಸ್ಕಾರಾನೂ ಮಾಡ್ದಾ. ‘ಇದೇನೊ, ಟೀವ್ಯಾಗ್‌ ನೋಡಿದ ಆಡಿಯೋರಪ್ನೋರ್‌ ಕಾಲಿಗೂ ಬೀಳ್ತಿಯಲ್ಲ ತಲಿಗಿಲಿ ಕೆಟ್ಟದ ಏನ್‌’ ಎಂದೆ.

‘ಜೆಡಿಎಸ್‌ ಶಾಸಕರುಸಿಎಂ ಕಾಲಿಗೆ ಎರಡ್ಮೂರು ಬಾರಿ ಬೀಳುವಾಗ ನಾ ಬಿದ್ರ ನಿನ್ನ ಹೊಟ್ಯಾಗ್‌ ಏನ್‌ ಖಾರಾ ಕಲಸ್‌ದ್ಹಾಂಗ್‌ ಆತೇನ್‌’ ಎಂದು ತಿರುಗೇಟು ಕೊಟ್ಟ. ಸಮಾಧಾನ ಮಾಡಾಕಂತ, ‘ಹಂಗಲ್ಲೋ, ನೀನು ಸೇಫ್ ಸೇಫ್ ಅಂತ ಜೋರಾಗಿ ಕೂಗಿದ್ದು ಕೇಳಿ ನನಗೆ ಯುರೇಕಾ, ಯುರೇಕಾ ನೆನಪಾಯ್ತು. ಆರ್ಕಿಮಿಡೀಸ್‌ ಥರಾ ನೀನೂ ಸರ್ಕಾರ ಸೇಫ್‌ ಸೇಫ್‌ ಅಂತ ಮೈಮ್ಯಾಲೆ ಖಬರ್ ಇಲ್ದಂಗ್‌ ಬತ್ತಲೆಯಾಗಿ ಧವಳಗಿರಿವರೆಗೆ ಓಡಿ ಹೋದ್ರ ಜನಾ ನಿನ್ನನ್ನ ಅಟ್ಟಾಡಿಸಿ ಹೊಡಿತಾರ್’ ಎಂದೆ.

‘ಇನ್ನ ಮ್ಯಾಲೆ ಅನರ್ಹ ಅಂದವರಿಗೇ ಜನಾ ಸಿಕ್ಕಸಿಕ್ಕಲ್ಲಿ ಹೊಡಿತಾರ್ ನೋಡಂತ್. ಅಷ್ಟ್ಯಾಕ್‌, ಎರಡೇ ಎರಡು ಸೀಟು ಗೆದ್ದವರನ್ನ ನಾಯಕ ಪಟ್ಟದಿಂದ ಕೆಳಗ್‌ ಇಳಸಾಕ್‌ ಕೈನೋರು ಹುಲಿಯಾ ಮ್ಯಾಲೆ ಕೈಮಾಡಾಕ್‌ ತಯಾರಿನೂ ನಡಸ್ಯಾರ್‌ ನೆನಪಿರ‍್ಲಿ. ಇನ್‌ಮ್ಯಾಲೆ ಆಪರೇಷನ್‌ ಮ್ಯಾಲೆ ಆಪರೇಷನ್‌ ನಡಿತಾವ್‌’ ಎಂದೂ ಸೇರಿಸಿದ. ‘ಹಂಗೇನಾದ್ರ ಮಾಡಿದ್ರ ಜನಾ ಅಟ್ಟಾಡಿಸಿಕೊಂಡು ಹೊಡಿತಾರ್‌ ಅಂತ ಸಿದ್ರಾಮಣ್ಣ ಹೇಳಿದ್ದು ಮರಿಬ್ಯಾಡಲೇ’ ಎಂದು ನೆನಪಿಸಿದೆ.

‘ನಿನ್ನ ಮಾತಿನ್ಯಾಗ್‌ ದಮ್ಮs ಇಲ್ಲ. ಆಪರೇಷನ್‌ಗೆ ಒಳಗಾದವರನ್ನ ಜನಾ ತಲಿ ಮ್ಯಾಲೆ ಹೊತ್ಕೊಂಡ್‌ ಮೆರಸಾಕತ್ತಾರ್‌. ಅಂಥಾದ್ರಾಗ್‌ ಹೊಡಿಯುವ ಮಾತ್‌ ಎಲ್ಲಿದು ತಗಿ ಅತ್ಲಾಗ್’ ಎಂದ.

ಅದೇ ಹೊತ್ತಿಗೆ ಚಹಾ ತಂದಿಟ್ಟ ನನ್ನ ಹೆಂಡ್ತಿ, ನಿಮ್ಮ ಚೆಡ್ಡಿ ದೋಸ್ತನ ತಲಿಗಿಲಿ ಕೆಟ್ಟದ ಏನ್ರಿ ಅನ್ನೊ ಅರ್ಥದಾಗ ತಲೆಯತ್ತ ಕೈ ತಗೊಂಡು ಹೋಗಿ ಸ್ಕ್ರೂ ಲೂಸ್ ಆಗೇದ್‌ ಏನ್ ಅಂತ್‌ ಕೈಸನ್ನಿ ಮಾಡಿದಳು.

‘ವೈನಿ, ನಾ ಲೂಸ್‌ ಅಲ್ರಿ’ ಅನ್ನುತ್ತಲೇ ಚಪ್ಪಾಳೆ ಹೊಡ್ಯಾಕತ್ತ. ‘ಭಪ್ಪರೆ ಮಗ್ನ, ನಿನಗೂ ‘ನಮೋ’ ಸಾಹೇಬ್ರಿಗೂ ಏನೂ ವ್ಯತ್ಯಾಸ್ ಇಲ್ಲ’ ಎಂದು ಕಾಲೆಳೆದೆ.

‘ಏಯ್ ಖಬರ್‌ಗೇಡಿ. ಅಂಥಾ ದೊಡ್ಡ ಮನುಷ್ಯರಿಗೆ ನನ್ನನ್ನ ಹೋಲುಸ್‌ಬ್ಯಾಡೊ ಮಳ್ಳ. ನಾ ಅವರ ಕಾಲ್‌ ದೂಳಿಗೂ ಸಮನಲ್ಲ’ ಎಂದು ಹೇಳಿ, ತಪ್ಪಾಯಿತು ಎಂಬರ್ಥದಲ್ಲಿ ಗಲ್ಲ ಗಲ್ಲ ಬಡಿದುಕೊಂಡ.

‘ಕೆನ್ನೆಗಿನ್ನೆ ಮುಟ್ಕೊಂಡ್‌ ನೋಡ್ಕೊಬೇಡ. ವೀರಶೈವರು– ಲಿಂಗಾಯತರೇನೂ ಬೇರೆ ಪಕ್ಷಕ್ಕೆ ವೋಟ್‌ ಹಾಕಿಲ್ಲ. ಯಡಿಯೂರಪ್ನೋರ್‌ ಕೆನ್ನೆಗೇನ್‌ ಕೊಟ್ಟಿಲ್ಲ ಏಳ್‌’ ಎಂದೆ.

‘ಹೊಳಿ ನೀರಾಗ್‌ ಮನಿ ಮಠಾ ಕಳಕೊಂಡವರಿಗೆ ಪರಿಹಾರ ಕೊಡಸಾಕ್‌ ತಮ್ಮ ಭೇಟಿಗೆ ಮುಂದಾಗಿದ್ದ ನಮ್ಮ ಸಿಎಂಗೆ ಇದೇ ಪಿಎಂ ಸಾಹೇಬ್ರು ಅವಕಾಶವನ್ನೇ ಕೊಟ್ಟಿರಲಿಲ್ಲ. ಈಗ ಅದೇ ಸಿಎಂಗೆ ಉಘೇ ಉಘೇ ಅಂತ ಗೌರವ ಸೂಚಿಸ್ಯಾರ್‌. ಮಹಾರಾಷ್ಟ್ರ
ದಾಗ್‌ ಶಿವಸೇನಾ ಹುಲಿಯ ದಾಳಿಯಿಂದ ಹೈರಾಣ್‌ ಆದವರಿಗೆ ಕರ್ನಾಟಕದ ರಾಜಾಹುಲಿ ಭಾಜಪದ ‘ಸುಭದ್ರ’, ‘ಪವಿತ್ರ’ ಸರ್ಕಾರಕ್ಕೆ ಭದ್ರ ಬುನಾದಿ ಹಾಕ್ಯಾರಂತ ಬೆನ್ನ ಚೆಪ್ಪರ್‌ಸ್ಯಾರ್‌’ ಅಂತ ಹೊಗಳಿದೆ.

‘ನಮ್ಮ ರಾಜಾಹುಲಿ ಕಾಲಿಗೆ ಚಕ್ರ ಕಟ್ಕೊಂಡು ಪ್ರಚಾರ ಮಾಡಿ, ವೋಟಿಂಗ್ ದಿನಾ ಮನ್ಯಾಗ್‌ ಕುತ್ಕೊಂಡs ಫೋನ್‌ ಮ್ಯಾಲ್‌ ಫೋನ್‌ ಹಚ್ಚಿ ವೋಟ್ ಹಾಕಿಸಿ ಈಗ ಗೆಲುವಿನಿಂದ ಮೀಸೆ ತಿರುವಾಕತ್ತಾರ್‌. ಹೌದು ಹುಲಿಯಾ (ಕು)ಖ್ಯಾತಿಯ ಸಿದ್ರಾಮಣ್ಣ ಸೋಲಿನ ಆಘಾತ ತಡೀಲಾರ‍್ದ ದವಾಖಾನೆ ಸೇರ್ಕೊಂಡಾನಲ್ಲ’ ಎಂದ.

‘ಮತ್ತೇನ್‌ ಮಾಡ್ಬೇಕ್‌. ಅನರ್ಹರನ್ನ ಗೆಲ್ಲಿಸ ಬ್ಯಾಡ್ರೊ. ರೊಕ್ಕದ ಮಾರಿ ನೋಡಿ ನಿಮ್ಮನ್ನ ಮಾರ್ಕೊ ಬ್ಯಾಡ್ರೊ ಅಂತ ಬಡ್ಕೊಂಡವರನ್ನ, ಗಿಣಿಗೆ ಹೇಳ್ದಂಗ್‌ ಹೇಳಿದವರನ್ನ ಮತ್ತ ಸಂವಿಧಾನವನ್ನs ಜನಾ ಅನರ್ಹ ಮಾಡಿದ್ರ ಅಂವಾ ಅರ ಏನ್‌ ಮಾಡ್ಬೇಕು’ ಎಂದೆ.

‘ಅದಿರ‍್ಲಿ ಬಿಡು. ಸಿದ್ರಾಮಣ್ಣ ಮತ್ತ ಸಿಎಂ ಆಗಾಕ್‌ ತಿರುಕನ ಕನಸು ಕಾಣಾಕತ್ತಾರಂತ ಆಡಿಯೋರಪ್ನೋರ್‌ ಹೇಳಿದ್ದು ಖರೆ ಆಗೇದ್‌ ನೋಡ್‌’ ಎಂದ.

ಅದೇ ಹೊತ್ತಿಗೆ, ತಿರುಕನೋರ್ವನೂರ ಮುಂದೆ/ ಮುರುಕು ಧರ್ಮಶಾಲೆಯಲ್ಲಿ/ ಒರಗಿರುತ್ತಲೊಂದು ಕನಸ ಕಂಡನೆಂತೆನೆ/ ಪುರದ ರಾಜ ಸತ್ತನವಗೆ/ ವರಕುಮಾರರಿಲ್ಲದಿರಲು... ಹಾಡು ಕೇಳಿಬರಾಕತ್ತಿತ್ತು.

‘ಏಯ್‌ ಏಳೋ ತಿರುಬೋಕಿ. ತಿರುಕನ ಕನಸ್ ಕಾಣ್ತಾ ಮಲ್ಕೊಬ್ಯಾಡಾ. ಉಳ್ಳಾಗಡ್ಡಿ ಮುಗದಾವ್‌. ಬಜಾರ್ಕ್‌ ಹೋಗಿ ತರುದದ ಏಳ್‌’ ಎಂದು ಅಜ್ಜಿ ಬೈದು ಬಡಿಗೆಯಿಂದ ತಿವಿಯುತ್ತಿದ್ದಂತೆ, ‘ಥತ್‌ತೇರಿಕಿ, ತಿರುಕನ ಬದಲು ಉಳ್ಳಾಗಡ್ಡಿ ಕನಸಾದ್ರೂ ಬಿದ್ದಿದ್ರ ಛಲೋ ಇತ್ತು’ ಎಂದು ಗೊಣಗಿಕೊಳ್ಳುತ್ತ ಕಣ್ಣುಜ್ಜಿಕೊಳ್ಳುತ್ತ ಹಾಸಿಗೆಯಿಂದ ಎದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT