ಶನಿವಾರ, ಮೇ 28, 2022
28 °C
ಬಡತನ ನಿರ್ಮೂಲನೆಗೆ ಸರ್ಕಾರಗಳು ಲೆಕ್ಕವಿರದಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿವೆ. ಆದರೂ ನಿರೀಕ್ಷಿತ ಫಲ ದೊರೆತಿಲ್ಲ. ಹೀಗೇಕೆ?

ಬೇಕು ಸುಸ್ಥಿರ ಕಾರ್ಯತಂತ್ರ

ಸತೀಶ್ ಜಿ.ಕೆ. ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಬಡತನ ಒಂದು ಜಾಗತಿಕ ಸಮಸ್ಯೆ. ಅದು ಪಾಪವೇನಲ್ಲ ನಿಜ, ಆದರದು ಅಭಿವೃದ್ಧಿಶೀಲ ಸಮಾಜಕ್ಕೆ ಅಂಟಿದ ಶಾಪವಂತೂ ಹೌದು!  ‘ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು’ ಎಂದವರು ಅರ್ಥಶಾಸ್ತ್ರಜ್ಞ ಆ್ಯಡಂ ಸ್ಮಿತ್. ರಾಷ್ಟ್ರದ ಅಭ್ಯುದಯದಲ್ಲಿ ದಣಿವರಿಯದೆ ದುಡಿಯುವ ಶ್ರಮಿಕವರ್ಗಕ್ಕೆ ದುಡಿಮೆಯ ಅವಕಾಶದ ಅಲಭ್ಯತೆಯ ಬಗ್ಗೆ ಸಮಾಜವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭವಿದು. ಶರಣಸಂಕುಲದ ಉತ್ಕಟ ಹಂಬಲವಾಗಿದ್ದ ಸಮಸಮಾಜದ ಪರಿಕಲ್ಪನೆಯು ಈಗಲೂ ನನಸಾಗದ ಕನಸಾಗಿಯೇ ಉಳಿದಿರುವುದು ದುರಂತ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವೀಗ ಮತ್ತಷ್ಟು ವಿಸ್ತಾರ.

ಯಾವುದೇ ದೇಶದ ಕ್ಷೇಮಾಭಿವೃದ್ಧಿಯ ಸೂಚ್ಯಂಕವು ಅಲ್ಲಿನ ಜನರ ಜೀವನಮಟ್ಟವನ್ನು ಅವಲಂಬಿಸಿರುತ್ತದೆ. ದಕ್ಕಿರುವ ಮೂಲಭೂತ ಸೌಲಭ್ಯಗಳು, ದುಡಿಮೆಯ ಅವಕಾಶ, ಉತ್ಪಾದಕತೆ ಮತ್ತು ಕೊಳ್ಳುವ ಸಾಮರ್ಥ್ಯದ ಮೇಲೆಯೇ ಅದನ್ನು ನಿರ್ಧರಿಸಲಾಗುತ್ತದೆ. ಅದು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕೈಗನ್ನಡಿ ಕೂಡ.

ಕಾಲಾಂತರದಿಂದ ಸರ್ಕಾರದ ಸಾಮಾಜಿಕ ಕಾಳಜಿಯಡಿಯಲ್ಲಿ ‘ಬಡತನ ನಿರ್ಮೂಲನೆ’ಗೆ ಲೆಕ್ಕವಿರದಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬರಲಾಗಿದೆ. ಫಲಿತಾಂಶದಲ್ಲಿ ಮಾತ್ರ ಕಳಪೆ ಸಾಧನೆ! ‘ಗರೀಬಿ ಹಟಾವೊ’ ಯಶಸ್ವಿಯಾಗುವುದು ‘ಗರೀಬೋಂಕಾ ಹಟಾವೊ ಆದಾಗಲೇ’ ಎಂಬಂತಹ ಕುಹಕವೊಂದು ಹುಟ್ಟಿಕೊಂಡದ್ದು ಪರಿಸ್ಥಿತಿಯ ವ್ಯಂಗ್ಯವೂ ಹೌದು!

ಬಡವರೆಂದರೆ ಸಣ್ಣ ವ್ಯಾಪಾರಿಗಳು, ಅತಿಸಣ್ಣ ರೈತರು, ಕೂಲಿಯಾಳುಗಳು, ರಸ್ತೆ- ಕಟ್ಟಡ ಕಾರ್ಮಿಕರು, ಹಮಾಲಿಗಳು, ಕೈಗಾಡಿ ಎಳೆಯುವವರು, ಸ್ವಚ್ಛತಾ ಕಾರ್ಯದಲ್ಲಿ ನಿರತರಾದವರು ಮತ್ತು ನಿರ್ಗತಿಕರನ್ನು ಒಳಗೊಂಡ ದೊಡ್ಡ ಸಂಖ್ಯೆಯ ಶ್ರಮಜೀವಿಗಳು. ದೇಶ ಕಟ್ಟುವ, ಸಂಪತ್ತು ಸೃಷ್ಟಿಸುವ, ಸಮಾಜದ ಜೀವಾಳವೇ ಇವರು. ನೆಲ-ಜಲ, ನಾಡು-ನುಡಿ, ಭಾಷೆ-ಸಂಸ್ಕೃತಿಯ ನೈಜ ವಾರಸುದಾರರು. ಆದರೂ ಎರಡು ಹೊತ್ತಿನ ಊಟ, ನೆರಳಿಗೊಂದು ನೆಲೆ, ಕನಿಷ್ಠ ಓದು-ಬರಹ, ಆರೋಗ್ಯ ಸೌಲಭ್ಯಗಳ ಖಾತರಿ ಇರದ ನತದೃಷ್ಟರು.

ವಿಪರ್ಯಾಸವೆಂದರೆ, ಭಾರತದ 63 ಮಂದಿ ಆಗರ್ಭ ಶ್ರೀಮಂತರ ಬಳಿ ಇರುವ ಸಂಪತ್ತು ದೇಶದ ಕಳೆದ ಹಣಕಾಸು ವರ್ಷದ ಬಜೆಟ್ ಆದ ₹ 24.42 ಲಕ್ಷ ಕೋಟಿಗಿಂತಲೂ ಹೆಚ್ಚಿದೆ! ಕಳೆದ ವರ್ಷ ‘ಆಕ್ಸ್‌ಫ್ಯಾಮ್’ ಬಿಡುಗಡೆ ಮಾಡಿರುವ ‘ಟೈಮ್ ಟು ಕೇರ್’ ವರದಿಯಲ್ಲಿ ಈ ಕುತೂಹಲದ ಮಾಹಿತಿ ಇದೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆ. ಈ ವರಮಾನವು ದೇಶದ ಒಟ್ಟಾರೆ ಜನಸಂಖ್ಯೆಯ
ಶೇ 70ರಷ್ಟಿರುವ 95.30 ಕೋಟಿ ಜನರ ಸಂಪತ್ತಿ ಗಿಂತ ನಾಲ್ಕು ಪಟ್ಟು ಹೆಚ್ಚು! ಗಮನಿಸಬೇಕಾದ್ದೇನೆಂದರೆ, ಒಂದು ದಶಕದ ಅವಧಿಯಲ್ಲಿ ಜಗತ್ತಿನ ಶತ ಕೋಟ್ಯಧೀಶರ ಸಂಖ್ಯೆ ದುಪ್ಪಟ್ಟಾಗಿದೆ. ಆರ್ಥಿಕ ಅಸಮಾನತೆ ಕೂಡ.

ಭಾರತದಲ್ಲಿ ಸಿರಿವಂತರ ಸಂಖ್ಯೆ 3.43 ಲಕ್ಷಕ್ಕೆ ಜಿಗಿತಗೊಂಡಿದ್ದು, ಸದ್ಯ ಅವರು 440 ಲಕ್ಷ ಕೋಟಿ ಆಸ್ತಿ ಉಳ್ಳವರಾಗಿದ್ದಾರೆ. ಇದೇ ವೇಳೆ ದೇಶದ ಶೇ 91ರಷ್ಟು ವಯಸ್ಕರ ಬಳಿ 7 ಲಕ್ಷ ಕೋಟಿಗಿಂತ ಕಡಿಮೆ ಸಂಪತ್ತಿದೆ, ಮಾತ್ರವಲ್ಲ ಜಗತ್ತಿನ ಐವರು ಕಡುಬಡವರಲ್ಲಿ ಒಬ್ಬ ಭಾರತೀಯನಿದ್ದಾನೆ!

‘ಕೂಲಿ ಕಾರ್ಮಿಕರು, ಮಹಿಳೆಯರ ದುಡಿಮೆಗೆ ಸೂಕ್ತ ವೇತನ ನೀಡದ ಮರೆಮಾಚಿದ ವ್ಯವಸ್ಥೆಯೇ ನಮ್ಮೆದುರಿಗಿದೆ. ಇದೇ ನಮ್ಮ ಸಮಾಜ, ವಹಿವಾಟು ಮತ್ತು ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ಕೆಲವು ಸಂಸ್ಥೆಗಳಿಗೆ ಸರ್ಕಾರವು ರಿಯಾಯಿತಿ ದರದಲ್ಲಿ ನೀರು, ಜಾಗ, ವಿದ್ಯುತ್‌ನಂಥ ಮೂಲ ಸವಲತ್ತುಗಳನ್ನು ಕರುಣಿಸುತ್ತದೆ. ಕೆಲವರ ಲಕ್ಷಾಂತರ ಕೋಟಿ ರೂಪಾಯಿಗಳ ಬ್ಯಾಂಕ್ ಹಿಂಬಾಕಿಯನ್ನು ಭರಿಸುತ್ತದೆ! ಆ ಮೂಲಕ ಬಡತನ, ಅಸಮಾನತೆ ನಿವಾರಣೆ ಉದ್ದೇಶದ ಕಾರ್ಯಕ್ರಮಗಳಿಗೆ ವರಮಾನವೇ ಇರದಂತಾಗುತ್ತದೆ’ ಎಂಬ ಆಕ್ಸ್‌ಫ್ಯಾಮ್ ಸಿಇಒ ಅಮಿತಾಭ್‌ ಬೆಹರ್ ಅವರ ಮಾತಿನಲ್ಲಿರುವ ಗಾಢ ಆತಂಕವು ಸ್ಫಟಿಕಸತ್ಯವಾಗಿ ಗೋಚರಿಸುತ್ತಿದೆ.

ಜನಸಂಖ್ಯೆಯ ಹೆಚ್ಚಳದ ಕಾರಣಕ್ಕೆ ತಲಾ ಆದಾಯವೂ ಕನಿಷ್ಠವಾಗಿರುವುದು ವಾಸ್ತವ. ಕೊರೊನಾ ಕಾಲದಲ್ಲಂತೂ ಮದ್ಯಮವರ್ಗದವರು ಬಡವರಾಗಿ, ಬಡವರು ಕಡುಬಡವರಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ವರ್ತಮಾನವನ್ನು ಕಾಡುತ್ತಿರುವ ಜನಸಂಖ್ಯಾ ಸ್ಫೋಟ, ತೀವ್ರತರದ ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟ, ಬೆಲೆ ಏರಿಕೆಯ ಬಿಸಿ, ಬಾಗಿಲು ಮುಚ್ಚಿ ಕೊಳ್ಳುತ್ತಿರುವ ಸಾರ್ವಜನಿಕ ಉದ್ದಿಮೆಗಳು, ನೈಸರ್ಗಿಕ ವಿಕೋಪಗಳು, ತೀವ್ರಗತಿಯ ಪರಿಸರ ಮಾಲಿನ್ಯ, ಅರಣ್ಯನಾಶ, ಹವಾಮಾನ ವೈಪರೀತ್ಯ ಮತ್ತು ಕೊರೊನಾದಂತಹ ವ್ಯಾಧಿಗಳೆಲ್ಲಾ ‘ಆಧುನಿಕ ಜಗತ್ತಿನ ನಡಿಗೆ ವಿನಾಶದೆಡೆಗೆ...’ ಎಂಬ ಕಹಿಸತ್ಯವನ್ನು ಧ್ವನಿಸುತ್ತವೆ. ಶೋಷಿತರಿಗೆ ಮಾತ್ರವಲ್ಲ ಸ್ಥಿತಿವಂತರಿಗೂ ಮುಂಬರಲಿರುವ ಸಂಕಟ ಮತ್ತು ಸಂಕಷ್ಟಗಳ ಬಗ್ಗೆ ಕಹಿಭವಿಷ್ಯ ನುಡಿಯುತ್ತಿವೆ. ಭರವಸೆಯ ನಾಳೆಗಳ ಕುರಿತು ಆತಂಕ-ಅನುಮಾನಗಳನ್ನು ಮೂಡಿಸುತ್ತವೆ.

ಬಹುವ್ಯಕ್ತಿ ಪ್ರಗತಿಗೆ ಒತ್ತು ನೀಡಿ, ಸಮೂಹ ಜೀವನ, ಕೂಡಿ ದುಡಿಯುವಿಕೆಯಂತಹ ಆದರ್ಶಗಳಿಗೆ ಜಗತ್ತು ಈಗ ಎದುರುಗೊಳ್ಳಲೇಬೇಕಾದ ಜರೂರತ್ತಿದೆ. ಹಾಗೆ ಕೈಗೊಳ್ಳುವ ಸೂಕ್ತ ಮತ್ತು ಸುಸ್ಥಿರ ಕಾರ್ಯತಂತ್ರದ ಮೂಲಕವಷ್ಟೇ ಬಡತನಕ್ಕೊಂದು ನ್ಯಾಯಯುತ ಪರಿಹಾರ ಕಂಡುಕೊಳ್ಳಲು ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು