ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಮದ್ದಿನ ಸದ್ದಡಗಿಸಲು ಸಕಾಲ

ಕೋವಿಡ್‌ ಕಾಲಘಟ್ಟದ ಇಂದಿನ ವಿಷಮ ಸ್ಥಿತಿಯಲ್ಲಿ ಮೋಜಿಗಾಗಿ ಪಟಾಕಿ ಸುಡುವುದೆಂದರೆ, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆಯೇ ಸರಿ
Last Updated 5 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ನಡೆದ ಪ್ರಸಂಗ. ಆ ಆಲ್ಸೇಶಿಯನ್ ಶ್ವಾನದ ಒಂದು ಕಿವಿ ಹರಿದಿತ್ತು. ಮೈಮೇಲೆಲ್ಲಾ ಗೀರು ಗಾಯ. ರಕ್ತ ಸೋರುತ್ತಿದ್ದರೂ ಅದರ ಪರಿವೆಯೇ ಇಲ್ಲದಂತೆ ಮಂಕಾಗಿ ಮಲಗಿತ್ತು. ಹಾಗಂತ ಬೇರೆ ಪ್ರಾಣಿಯೊಂದಿಗಿನ ಕಾದಾಟದಲ್ಲೋ ಮಾನವನ ಹಲ್ಲೆಯಿಂದಲೋ ಹೀಗೆಲ್ಲಾ ಆದದ್ದಲ್ಲ. ಪಕ್ಕದ ಮನೆಯವರು ದಸರೆಯ ಖುಷಿಗೆ ಪಟಾಕಿ ಸಿಡಿಸಿದ್ದರು. ಸದ್ದಿಗೆ ಬೆಚ್ಚಿದ ನಾಯಿ ಕತ್ತಿನ ಬೆಲ್ಟನ್ನು ತುಂಡು ಮಾಡಿಕೊಂಡು ಹೊರ ಓಡಿ, ತಂತಿಬೇಲಿ ನುಸುಳುವಾಗ ಹೀಗೆ ಅನಾಹುತ ಮಾಡಿಕೊಂಡಿತ್ತು. ಚಿಕಿತ್ಸೆಯ ಹೊರತಾಗಿಯೂ ಚೇತರಿಕೆಗೆ ಕೆಲವು ದಿನಗಳೇ ಹಿಡಿದವು.

ಹೌದು, ಮಾನವನಿಗಿಂತಲೂ ಖಗ ಮೃಗಗಳಲ್ಲೇ ಪಟಾಕಿ ಸಿಡಿತದ ದುಷ್ಪರಿಣಾಮಗಳು ಹೆಚ್ಚು. ಕಾರಣ, ತುಂಬಾ ಸೂಕ್ಷ್ಮವಾಗಿರುವ ಅವುಗಳ ಶ್ರವಣೇಂದ್ರಿಯ. ನಮಗೆ ಕೇಳಿಸದ ಅತಿ ಸಣ್ಣ ಶಬ್ದವನ್ನೂ ಇವು ಗುರುತಿಸಬಲ್ಲವು. ಮಾನವನ ಕಿವಿ 20ರಿಂದ 20,000 ಹರ್ಟ್ಸ್ ಮಾಪನದ ತರಂಗಗಳನ್ನು ಗ್ರಹಿಸಬಲ್ಲದಾದರೆ ಹಸು, ನಾಯಿ ಇದರ ಎರಡು ಪಟ್ಟು, ಬೆಕ್ಕಿಗೆ ಸುಮಾರು ಮೂರು ಪಟ್ಟು ಅಧಿಕ ಗ್ರಹಣ ಸಾಮರ್ಥ್ಯವಿದೆ. ಮಾನವನ ಇಂದ್ರಿಯಕ್ಕೆ ನಿಲುಕದ 20 ಕಿಲೊ ಹರ್ಟ್ಸ್‌ಗಿಂತಲೂ ಹೆಚ್ಚಿನ ಶ್ರವಣಾತೀತ ಶಬ್ದವನ್ನು (ಅಲ್ಟ್ರಾಸೋನಿಕ್ ಸೌಂಡ್) ಪ್ರಾಣಿಗಳು ಕೇಳಿಸಿಕೊಳ್ಳುತ್ತವೆ!

ಹೋಲಿಕೆಯಲ್ಲಿ ನಾಯಿಯು ಮನುಷ್ಯನಿಗಿಂತ ನಾಲ್ಕರಷ್ಟು ದೂರದ ಶಬ್ದವನ್ನು ಗ್ರಹಿಸಬಲ್ಲದು. ಪ್ರಾಣಿಗಳು ತಮ್ಮ ಅಗಲವಾದ ಹೊರಗಿವಿಗಳನ್ನು ನಿಮಿರಿಸಿ ಆಂಟೆನಾ ರೀತಿಯಲ್ಲಿ ಬೇಕಾದೆಡೆ ತಿರುಗಿಸಿ ಸದ್ದನ್ನು ಸ್ಪಷ್ಟವಾಗಿ ಗ್ರಹಿಸುತ್ತವೆ. ಬೇಟೆಯಾಡಲು, ಅಪಾಯದಿಂದ ರಕ್ಷಿಸಿಕೊಳ್ಳಲು ಪ್ರಾಣಿ, ಪಕ್ಷಿಗಳಿಗೆ ಪ್ರಕೃತಿ ನೀಡಿದ ವರವಿದು. ಈ ವರವೇ ದೀಪಾವಳಿ ವೇಳೆಯಲ್ಲಿ ಅವುಗಳಿಗೆ ಶಾಪವಾಗುತ್ತಿದೆ.

ಕರ್ಣೇಂದ್ರಿಯ ಅತಿ ಸೂಕ್ಷ್ಮವಾಗಿರುವ ಕಾರಣ ಪಟಾಕಿಯ ಸದ್ದು ಅಪ್ಪಳಿಸಿದಾಗ ಪ್ರಾಣಿಗಳು ವಿಪರೀತ ಬೆದರುತ್ತವೆ. ಸರಣಿ ಸ್ಫೋಟದಿಂದ ಬೆಚ್ಚಿ ಬೀಳುತ್ತವೆ. ಮಾನಸಿಕ ಒತ್ತಡ, ಆಘಾತ, ಖಿನ್ನತೆಯ ಜೊತೆಗೆ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ. ಸಾಮಾನ್ಯವಾಗಿ 90 ಡೆಸಿಬಲ್‍ಗಿಂತ ಹೆಚ್ಚಿನ ಸಪ್ಪಳ ಕಿವಿಯ ಮೇಲೆ ಬಿದ್ದರೆ ಅದು ಅಪಾಯಕಾರಿ. ಪಟಾಕಿ ಹಚ್ಚಿದಾಗ ಶಬ್ದ 140 ಡೆಸಿಬಲ್‍ಗಿಂತ ಹೆಚ್ಚಿರುವುದರಿಂದ ತಾತ್ಕಾಲಿಕ ಇಲ್ಲವೇ ಶಾಶ್ವತ ಕಿವುಡುತನ ಬರಬಹುದು. ಪಟಾಕಿಯಲ್ಲಿರುವ ರಾಸಾಯನಿಕಗಳು ಗಾಳಿಯಲ್ಲಿ ಸೇರಿದಾಗ ಉಸಿರಾಟಕ್ಕೂ ತೊಂದರೆ.

ಹಠಾತ್ ಸ್ಫೋಟದಿಂದ ಆಘಾತಗೊಂಡ ನಾಯಿ, ಬೆಕ್ಕು, ಪಕ್ಷಿಗಳು ಹೃದಯ ಸ್ತಂಭನದಿಂದ ಸಾವನ್ನಪ್ಪುವ ಸಂಗತಿ ಪ್ರತೀ ದೀಪಾವಳಿಯಲ್ಲೂ ಸಾಮಾನ್ಯ. ನಾಯಿ, ಜಾನುವಾರುಗಳ ಬಾಲಕ್ಕೆ ಪಟಾಕಿಸರ ಕಟ್ಟಿ ವಿಕೃತಾನಂದ ಪಡೆಯುವವರೂ ಇದ್ದಾರೆ. ಬೆದರಿದ ಹಸುಗಳಲ್ಲಿ ಅಡ್ರಿನಾಲಿನ್ ರಸದೂತದ ಉತ್ಪತ್ತಿ ಹೆಚ್ಚಿ ಹಾಲು ಸ್ರವಿಸಲು ಆಗತ್ಯವಾದ ಆಕ್ಸಿಟೋಸಿನ್‍ಗೆ ತಡೆಯಾಗುವುದರಿಂದ ಉತ್ಪಾದನೆ ಹಠಾತ್ ಕುಸಿಯುತ್ತದೆ. ಭಯಗೊಂಡ ಪ್ರಾಣಿಗಳು ಆಕ್ರಮಣಕ್ಕೆ ಮುಂದಾಗುವುದೂ ಉಂಟು. ಬೆದರಿ ಓಡುವಾಗ ಗಾಯಗೊಂಡ, ವಾಹನಗಳಿಗೆ ಸಿಲುಕಿ ಸಾವನ್ನಪ್ಪಿದ ನಿದರ್ಶನಗಳೂ ಇವೆ. ಕೇವಲ ಶಬ್ದವಷ್ಟೇ ಅಲ್ಲ ಪಟಾಕಿ, ಬಾಣ ಬಿರುಸುಗಳ ಪ್ರಖರ ಬೆಳಕಿನ ಕಿಡಿಯಿಂದ ಪಶು, ಪಕ್ಷಿಗಳ ದೃಷ್ಟಿಗೂ ಹಾನಿಯಾಗುತ್ತದೆ. ಸಿಡಿಮದ್ದುಗಳ ವಿಷಕಾರಿ ರಾಸಾಯನಿಕಗಳು ನೀರು ಸೇರಿದಾಗ ಪ್ರಾಣಿ, ಜಲಚರಗಳಿಗೆ ಕಂಟಕಕಾರಿ.

ದೀಪಾವಳಿಯೆಂಬುದು ಮೂಲತಃ ಬೆಳಕಿನ ಹಬ್ಬ. ರಾತ್ರಿಯೇ ಅಧಿಕವಾಗಿರುವ ಈ ಋತುಮಾನದಲ್ಲಿ ಕತ್ತಲೆ ಮತ್ತು ಚಳಿಯನ್ನು ಹೋಗಲಾಡಿಸಲು, ವಾತಾವರಣವನ್ನು ತುಸು ಬೆಚ್ಚಗಿಡಲು ಹಬ್ಬದ ದಿನಗಳಲ್ಲದೆ ಇಡೀಕಾರ್ತಿಕ ಮಾಸದಲ್ಲಿ ದೀಪೋತ್ಸವದ ಹೆಸರಲ್ಲಿ ದೀಪ ಗಳನ್ನು ಹಚ್ಚಿಡುವ ಪದ್ಧತಿ ಶುರುವಾಗಿರಬಹುದು.
ಬೆಳೆಗಳನ್ನು ಬಾಧಿಸುವ ಕೀಟಗಳನ್ನು ದೀಪಗಳು ಆಕರ್ಷಿಸುವುದರಿಂದ ಕೀಟನಾಶದ ಜೊತೆಗೆ ಅವುಗಳ ಸಂತಾನೋತ್ಪತ್ತಿಯ ಚಕ್ರವನ್ನು ಏರುಪೇರಾಗಿಸುವ ಸಂಖ್ಯೆಯ ನಿಯಂತ್ರಣದ ಗುಟ್ಟೂ ಇರಬಹುದು. ಆದರೀಗ ಶಾಸ್ತ್ರ, ಸಂಪ್ರದಾಯ, ವೈಜ್ಞಾನಿಕ ಕಾರಣಗಳು ಬದಿಗೆ ಸರಿದು ಸದ್ದು ಮಾತ್ರ ವಿಜೃಂಭಿಸುತ್ತಿದೆ. ದೀಪಾವಳಿ ಮಾತ್ರವಲ್ಲ, ಕ್ರಿಸ್‍ಮಸ್, ಹೊಸ ವರ್ಷಾಚರಣೆ, ವಿಜಯೋತ್ಸವ, ಮದುವೆಯೆಂದೆಲ್ಲಾ ಪಟಾಕಿ ಬಳಕೆ ಮಿತಿಮೀರಿದೆ. ಸಿಡಿಮದ್ದುಗಳನ್ನು ಸಿಡಿಸಲು ಸಮಯದ ನಿರ್ಬಂಧ ಹೇರಿರುವ ಸುಪ್ರೀಂ ಕೋರ್ಟ್‌ ತೀರ್ಪೂ ಸರಿಯಾಗಿ ಪಾಲನೆಯಾಗುತ್ತಿಲ್ಲ.

ಈ ಬಾರಿ ಕೋವಿಡ್ ಕಾರಣ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಚಳಿಗಾಲದಲ್ಲಿ ತೀವ್ರವಾಗುವ ವಾಯುಮಾಲಿನ್ಯ, ತತ್ಸಂಬಂಧದ ಶ್ವಾಸ ಸಮಸ್ಯೆಗಳು ವೈರಾಣುಗಳಿಗೆ ಕೆಂಪುಹಾಸು ಹಾಸುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಇಂತಹ ಸ್ಥಿತಿಯಲ್ಲಿ ಮೋಜಿಗಾಗಿ ಪಟಾಕಿ ಸುಡುವುದೆಂದರೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆಯೆ.

ಪರಿಸರ, ಜನ-ಜಾನುವಾರುಗಳ ಮೇಲಾಗುವ ಅನಾಹುತಗಳನ್ನು ಗಂಭೀರವಾಗಿ ಪರಿಗಣಿಸಿ ಪಟಾಕಿ, ಸಿಡಿಮದ್ದುಗಳಿಗೆ ನಿಷೇಧ ಹೇರಲು ಇದು ಸಕಾಲ. ಕೆಲವು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡುತ್ತಿರುವುದು ಸ್ವಾಗತಾರ್ಹ. ಕೊರೊನಾ ಕಾರಣದಿಂದ ಜಾಗೃತಿಯ ಜೊತೆಗೆ ಮನಃಸ್ಥಿತಿಯಲ್ಲೂ ಹೊಂದಾಣಿಕೆಯಾಗಿರುವ ಈ ‘ನ್ಯೂ ನಾರ್ಮಲ್’ ಕಾಲಘಟ್ಟದಲ್ಲಿ ಪಟಾಕಿರಹಿತ ಹಬ್ಬದಾಚರಣೆ ಕಷ್ಟವಾಗದು. ಸಂಭ್ರಮಕ್ಕಿಂತಲೂ ಸ್ವಾಸ್ಥ್ಯ ಮುಖ್ಯವಲ್ಲವೇ?

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಬಾಳೆಬೈಲು, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT