ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು: ಕಥನವೋ? ಕದನವೋ?

ಅಕ್ಷರ ಗಾತ್ರ

ಸರ್ಕಾರವು ಆಯೋಜಿಸುವ ಟಿಪ್ಪು ಜಯಂತಿ ಆಚರಣೆ ರದ್ದುಗೊಂಡ ಬಳಿಕ, ಕರ್ನಾಟಕದ ಮಟ್ಟಿಗಂತೂ ಟಿಪ್ಪು ಸುಲ್ತಾನ್‌ ಮಹತ್ವದ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದಾನೆ. ಟಿಪ್ಪು ಪರ, ವಿರೋಧಗಳ ಚರ್ಚೆ ಬೌದ್ಧಿಕ ವಲಯವನ್ನು ದಾಟಿ, ರಾಜಕೀಯ ಹೋರಾಟವಾಗಿ ರೂಪುಗೊಳ್ಳುವಷ್ಟು ತಾರಕಕ್ಕೆ ಏರಿದೆ. ಟಿಪ್ಪು ಜಯಂತಿಯ ಪರ ಮತ್ತು ವಿರೋಧದ ಎರಡೂ ಗುಂಪುಗಳುಕೆಲ ವರ್ಷಗಳಿಂದ ನಡೆಸುತ್ತಿರುವ ಒಟ್ಟು ಚರ್ಚೆಯನ್ನು ಗಮನಿಸಿದರೆ, ಈ ಚರ್ಚೆಯು ಟಿಪ್ಪುವನ್ನು ಐತಿಹಾಸಿಕವಾಗಿ ಅರ್ಥಮಾಡಿಕೊಳ್ಳುವ ಮಹತ್ವದ ವೈಜ್ಞಾನಿಕ ಕ್ರಮ ಬಿಟ್ಟು, ವರ್ತಮಾನದ ಪಕ್ಷ ರಾಜಕೀಯದ ತಾತ್ವಿಕತೆ ಆಧರಿಸಿದ ಅಧಿಕಾರ ರಾಜಕಾರಣದ ಕಸರತ್ತಿನಂತೆ ಕಾಣುತ್ತಿದೆ.

ಭಾರತೀಯರಿಗೆ ಚರಿತ್ರೆಯನ್ನು ರೂಪಿಸಿಕೊಳ್ಳುವ ಕ್ರಮ ಎರಡು ರೀತಿಯಲ್ಲಿ ದಕ್ಕಿದೆ. 1. ಸಿದ್ಧ ಧಾರ್ಮಿಕ, ಸಾಮಾಜಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಪುರಾಣವನ್ನು ಆಧರಿಸಿದ ನಿರೂಪಣೆಯನ್ನೇ ಚರಿತ್ರೆಯಂತೆ ಕಟ್ಟಿಕೊಳ್ಳುವ, ಅದು ಮಾತ್ರವೇ ನೈಜ ಚರಿತ್ರೆಯೆಂದು ಸಾಧಿಸಬಯಸುವ ಕ್ರಮ. 2. ವಸಾಹತುಶಾಹಿ ವ್ಯವಸ್ಥೆ ರೂಪಿಸಿದ ಉದಾರವಾದಿ ನಿರೂಪಣೆಗಳ ಚೌಕಟ್ಟಿಗೆ ಸಾಮಾಜಿಕ, ಐತಿಹಾಸಿಕ ವಾಸ್ತವಗಳನ್ನು ಜೋಡಿಸಿ, ಭಾರತೀಯರೂ ಉದಾರವಾದಿ ನೆಲೆಯ ಅಂತಃಸತ್ವ ಹೊಂದಿದ್ದವರು ಎಂಬುದನ್ನು ವಿವರಿಸುವ ಕ್ರಮ.

ಈ ಎರಡೂ ಕ್ರಮಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದು ಇಲ್ಲಿ ಗಮನಾರ್ಹ. ಒಂದು, ಯುರೋಪಿಯನ್ ಧಾರ್ಮಿಕ ಥಿಯಾಲಜಿ ಕಟ್ಟಿಕೊಟ್ಟ ಚರಿತ್ರೆಯನ್ನು ನೋಡುವ ಕ್ರಮ. ಮತ್ತೊಂದು, ಯುರೋಪಿಯನ್ ಉದಾರವಾದಿ ರಾಜಕೀಯ ಐಡಿಯಾಲಜಿ ನಮ್ಮ ಚರಿತ್ರೆಯನ್ನು ಗುರುತಿಸಲು ಕಲಿಸಿಕೊಟ್ಟ ಕ್ರಮ. ಆದ್ದರಿಂದ ಇಂದು ಬಹುತೇಕ ಚಿಂತಕರು ಬಳಸುತ್ತಿರುವ ಈ ಎರಡೂ ಮಾದರಿಗಳು ನಮ್ಮ ಸಾಮಾಜಿಕ, ಐತಿಹಾಸಿಕ ವಾಸ್ತವಗಳ ಮಾಹಿತಿಯನ್ನು ಈಗಾಗಲೇ ಬೌದ್ಧಿಕ ವಲಯದಲ್ಲಿ ಪ್ರಖ್ಯಾತವಾಗಿರುವ ‘ಕೋಮುವಾದಿ’ ಮತ್ತು ‘ಉದಾರವಾದಿ’ ಎಂಬ ಚಿಂತನಾ ಚೌಕಟ್ಟುಗಳಿಗೆ ಹೊಂದಿಸಿ ವಿವರಿಸುವ ಕೆಲಸವನ್ನಷ್ಟೇ ಮಾಡುತ್ತಿವೆ. ಭಾರತೀಯ ಸನ್ನಿವೇಶದಲ್ಲಿ ಈ ಎರಡು ವಿವರಣಾ ಚೌಕಟ್ಟುಗಳ ಮಿತಿಗಳೇನು, ಇವು ನಿಜವಾಗಿಯೂ ಗತವನ್ನು ಆಧರಿಸಿದ ವರ್ತಮಾನದ ಭಾರತೀಯ ಜನಜೀವನವನ್ನು ಅದು ಇರುವಂತೆಯೇ ನಿರೂಪಿಸಿವೆಯೇ ಎಂಬುದರ ಕುರಿತಂತೆ ಏನನ್ನೂ ಚರ್ಚಿಸುತ್ತಿಲ್ಲ.

‘ಇತಿಹಾಸ’ ಎಂಬುದು, ಗತದ ಸಾಮಾಜಿಕತೆಯ ಮಾಹಿತಿಯನ್ನು ಕಲೆಹಾಕಿ, ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ‘ವೈಜ್ಞಾನಿಕ ಅಧ್ಯಯನ ಶಿಸ್ತು’. ಆದರೆ, ನಾವು ಚರಿತ್ರೆಯನ್ನು ನೋಡುವ ಕ್ರಮವು ಈ ಮಹತ್ವದ ಅಂಶವನ್ನೇ ನಗಣ್ಯಗೊಳಿಸಿದೆ. ಇಂದು ನಮ್ಮ ನಡುವೆ ನಡೆಯುತ್ತಿರುವ ಟಿಪ್ಪು ಕುರಿತ ಚರ್ಚೆಯ ವಿಚಾರದಲ್ಲಿಯೂ ಇದೇ ಆಗುತ್ತಿರುವುದು. ಇಲ್ಲಿ ಟಿಪ್ಪು ಉದಾಹರಣೆ ಮಾತ್ರ. ಶಿವಾಜಿ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಸೇರಿದಂತೆ ಯಾವುದೇ ಚಾರಿತ್ರಿಕ ವ್ಯಕ್ತಿತ್ವವನ್ನು ಹೀಗೆ ಬೈನರಿಯಾಗಿ ಇಟ್ಟು ಓದುವ ಕ್ರಮ ಚಾಲ್ತಿಯಲ್ಲಿದೆ. ಈ ರೀತಿಯ ಚರ್ಚೆಗೆ ಕೊನೆಯೂ ಇಲ್ಲ, ಅದರಿಂದ ಪ್ರಯೋಜನವೂ ಇಲ್ಲ. ಆ ಕಾರಣಕ್ಕೆ ಟಿಪ್ಪುವಿನ ಚರಿತ್ರೆಯ ಕುರಿತು ನಡೆಯುತ್ತಿರುವ ಒಟ್ಟು ಚರ್ಚೆಯು ಅಧಿಕಾರ ರಾಜಕಾರಣಕ್ಕೆ ಅನುಕೂಲಕರವಾಗುವಂತೆ ಕಟ್ಟಲು ಹೊರಟ ಹಾಸ್ಯಾಸ್ಪದ ಸಾಂಸ್ಕೃತಿಕ ನಿರೂಪಣೆಯಂತೆ ಕಾಣುತ್ತದೆ. ಇದರ ವಿರುದ್ಧವಾಗಿ, ಟಿಪ್ಪುವಿನ ಅಸ್ಮಿತೆಯನ್ನು ಧಾರ್ಮಿಕಗೊಳಿಸಿ ವಿವರಿಸುತ್ತಿರುವ ನಿರೂಪಣೆಯಲ್ಲಿ, ಬಹುತ್ವದ ಮೌಲ್ಯ ಪರಂಪರೆಯನ್ನು ಆಧರಿಸಿದ ನಮ್ಮ ಪ್ರಜಾಪ್ರಭುತ್ವ ಜೀವನಕ್ರಮಕ್ಕೆ ಧಕ್ಕೆಯನ್ನುಂಟು ಮಾಡುವ ಅಪಾಯಕಾರಿ ಲಕ್ಷಣಗಳು ಕಾಣುತ್ತಿವೆ.

ಈ ಎರಡೂ ಬದಿಯ ಜನರು ಬಳಸುತ್ತಿರುವ ಬೌದ್ಧಿಕ ಚೌಕಟ್ಟಿನ ಮಿತಿಗಳ ಕುರಿತು ಗಮನ ಸೆಳೆಯಬೇಕಾದ ಬೌದ್ಧಿಕ ವರ್ಗ ಯಾವುದೋ ಒಂದು ವಾದಕ್ಕೆ ಪೂರಕವಾಗಿ ನಿಲ್ಲುತ್ತಿರುವುದು ಆತಂಕದ ವಿಷಯ. ಆ ಕಾರಣಕ್ಕೆ, ಟಿಪ್ಪುವಿನ ಕುರಿತಾಗಿ ಐತಿಹಾಸಿಕ ದಾಖಲೆಗಳಿಂದ ಹೆಕ್ಕುತ್ತಿರುವ ಮಾಹಿತಿಗಳನ್ನು ಆಧರಿಸಿ ನಡೆಯುತ್ತಿರುವ ಚರ್ಚೆಗಳೆಲ್ಲವೂ ಒಂದೋ ಕೋಮುವಾದಿ ನೆಲೆಯಲ್ಲಿ ಸಾಮಾನ್ಯರನ್ನು ಪ್ರಚೋದಿಸಲು ಬಳಕೆಯಾಗುತ್ತಿವೆ. ಇಲ್ಲವೇ, ಟಿಪ್ಪು ಕಾಲದ ರಾಜಸತ್ತೆಯ ವ್ಯವಸ್ಥೆಯೊಳಗಿನ ಇತಿಮಿತಿಗಳನ್ನು ನಗಣ್ಯಗೊಳಿಸಿ ಉದಾರವಾದಿ ನೆಲೆಯಿಂದ ಟಿಪ್ಪುವಿನ ವೈಭವೀಕರಣವಾಗಿ ರೂಪುಗೊಳ್ಳುತ್ತಿವೆ. ವಾಸ್ತವದಲ್ಲಿ ಟಿಪ್ಪುವಿನ ಕುರಿತ ಈ ಎರಡೂ ಲೋಕದೃಷ್ಟಿಗಳು ಮಿತಿಯನ್ನು ಹೊಂದಿವೆ ಅನ್ನಿಸುತ್ತಿದೆ.

ನಮ್ಮ ಚರಿತ್ರೆಯನ್ನು ಗ್ರಹಿಸಲು, ಮೂಲತಃ ನಮ್ಮದಲ್ಲದ ಈ ಎರಡೂ ಲೋಕದೃಷ್ಟಿಗಳ ಮಿತಿಗಳನ್ನು ಮೀರಿ, ಪರ್ಯಾಯವಾಗಿ ಹೇಗೆ ಭಾರತೀಯ ಗತದಲ್ಲಿನ ಸಾಮಾಜಿಕ ವಾಸ್ತವವನ್ನು ವರ್ತಮಾನದ ಬದುಕಿಗೆ ಪೂರಕವಾಗಿ ನಿರೂಪಿಸಿಕೊಳ್ಳಬೇಕು ಎಂಬ ನೆಲೆಯ ಶೋಧನೆಗಳ ಕಡೆ ನಾವು ಗಮನವನ್ನು ಹೆಚ್ಚು ಕೇಂದ್ರೀಕರಿಸಬೇಕಿದೆ. ಬಹುಪಾಲು ಚಿಂತಕರು ನಮ್ಮ ಸಾಮಾಜಿಕ ನೆಲೆಗೆ ಅನ್ಯವಾದ ಚೌಕಟ್ಟುಗಳ ವಕ್ತಾರಿಕೆಯನ್ನೇ ಮಹತ್ವದ ಬೌದ್ಧಿಕ ಚರ್ಚೆ ಎಂಬಂತೆ ವಾದಿಸುತ್ತಿದ್ದಾರೆ ಮತ್ತು ಐತಿಹಾಸಿಕ ಸಂಗತಿಗಳನ್ನು ಅವುಗಳ ಸಮರ್ಥನೆಗೆ ಆಕರವಾಗಿ ಬಳಸುತ್ತಿದ್ದಾರೆ. ಈ ಮೂಲಕ, ನೂರಾರು ವರ್ಷಗಳ ಕಾಲ ಬಹುತ್ವವನ್ನು ಆಧರಿಸಿ ಜನರು ಕಟ್ಟಿದ ಸಹಬಾಳ್ವೆಯ ಚರಿತ್ರೆಯನ್ನು ಧಾರ್ಮಿಕಗೊಳಿಸುತ್ತಿರುವುದು ಆತಂಕವನ್ನು ಹೆಚ್ಚಾಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT