ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಚಿಕಿತ್ಸೆಯಷ್ಟೇ ಸಾಲದು, ಸಮಯವೂ ಬೇಕು!

Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಮೊನ್ನೆಯಷ್ಟೇ ಅನಾರೋಗ್ಯದ ನಿಮಿತ್ತ ಮಗಳನ್ನು ಕರೆದುಕೊಂಡು ವೈದ್ಯರ ಬಳಿ ಹೋಗಿದ್ದೆ. ₹ 350 ಸಂದರ್ಶನ ಶುಲ್ಕ. ಓಪಿಡಿಯಲ್ಲಿ ಡಾಕ್ಟರ್ ಎರಡು ನಿಮಿಷದ ಮೇಲೆ ನಮಗೆ ಸಮಯ ಕೊಡಲಿಲ್ಲ. ‘ಆಯ್ತು ಆಯ್ತು’ ಎನ್ನುತ್ತಾ ಔಷಧಿ ಬರೆದರು. ನಾವು ಹೇಳಬೇಕೆಂದುಕೊಂಡದ್ದು ಹಾಗೆಯೇ ಉಳಿಯಿತು. ಪೂರ್ತಿ ಕೇಳಿಸಿಕೊಳ್ಳದೇ ಕೊಟ್ಟ ಅವರ ಔಷಧಿಯನ್ನು ತೆಗೆದುಕೊಳ್ಳುವುದೋ ಬೇಡವೋ ಎಂಬ ಚಿಂತೆ ಕಾಡಿತು.

ಅವರು ನಮ್ಮನ್ನು ಬೇಗನೇ ಆಚೆ ಕಳುಹಿಸಿದ್ದಕ್ಕೆ ಅದಾಗಲೇ ಬಹಳಷ್ಟು ರೋಗಿಗಳು ಸರತಿಯಲ್ಲಿ ಕಾಯುತ್ತಿ
ದ್ದುದು ಕಾರಣವಾಗಿರಬಹುದು. ಅವರೆಲ್ಲರಿಗೂ ಅವರು ಸಮಯ ಕೊಡಬೇಕಾಗಿರುತ್ತದೆ. ಹಾಗೆಂದು, ಒಬ್ಬ ರೋಗಿ ತಾನು ಹೇಳಬೇಕಾದುದನ್ನು ಹೇಳದೇ ಬಂದರೆ, ಸಂದೇಹ ಉಳಿಸಿಕೊಂಡು ಬಂದರೆ ರೋಗ ಗುಣವಾಗುವುದು ಹೇಗೆ?

ಹೆಚ್ಚು ರೋಗಿಗಳನ್ನು ನೋಡುವುದು ಒಂದು ಸೇವೆಯಾದರೂ ಅದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಾರೆ. ಒಬ್ಬ ರೋಗಿ ತಾನು ಸಂದರ್ಶನ ಶುಲ್ಕ ಪಾವತಿಸಿ ಬಂದರೆ ಅವನಿಗೆ ದತ್ತಕವಾಗುವ ಓಪಿಡಿ ಸಮಯ ಎಷ್ಟು? ಹೀಗೊಂದು ಪ್ರಶ್ನೆಯೂ ಮೂಡುತ್ತದೆ. ಎಲ್ಲರಿಗೂ ಇಷ್ಟೇ ಎಂದು ಸಮಯ ನೀಡಲಾಗುವುದಿಲ್ಲ
ನಿಜ. ಅವರವರ ಆರೋಗ್ಯ ಸ್ಥಿತಿಯ ಮೇಲೆ ಅದು ನಿರ್ಧಾರವಾಗಬಹುದು. ಆದರೂ ಎಷ್ಟೋ ಬಾರಿ ರೋಗಿ ತನ್ನ ಮಾತುಗಳನ್ನು ಉಳಿಸಿಕೊಂಡೇ ಆಚೆ ಬರುತ್ತಾನೆ. 

ಕೆಲವೊಮ್ಮೆ ವೈದ್ಯರ ಐದು ನಿಮಿಷದ ಸಂದರ್ಶನಕ್ಕೆ ರೋಗಿ ಸಂಪೂರ್ಣವಾಗಿ ಒಂದು ದಿನವನ್ನೇ
ವ್ಯಯಿಸಬೇಕಾಗುತ್ತದೆ. ವೈದ್ಯರು ಸಕಾಲಕ್ಕೆ ಲಭ್ಯವಾಗದೇ ಇರುವುದು, ಅವರ ವೃತ್ತಿಯ ವ್ಯಾಪ್ತಿ, ಅಳತೆ ಮೀರಿ ನೀಡಲಾಗುವ ಸಂದರ್ಶಕರ ಸಂಖ್ಯೆ... ಇಂಥದ್ದೇ ಹತ್ತು ಹಲವು ಕಾರಣಗಳಿರಬಹುದು.‌ ಆ ಮಾಹಿತಿ ರೋಗಿಗೆ ಲಭ್ಯವಾಗದೆ ಆತ ಆಸ್ಪತ್ರೆಯ ಬಾಗಿಲು ಕಾಯುತ್ತಾ ಕೂರಬೇಕಾಗುತ್ತದೆ. ವೈದ್ಯರಿಗೆ ಸಮಯ ಮುಖ್ಯವಾದಂತೆ ರೋಗಿಗೂ ಅವನದೇ ಆದ ಒಂದು ಸಮಯ ಎಂಬುದಿರುತ್ತದೆ. ಅದೂ ಮುಖ್ಯವಾಗಬೇಕು. ನಮ್ಮ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಎಷ್ಟರಮಟ್ಟಿಗೆ ಲಭ್ಯವಾಗುತ್ತದೆ ಎಂಬುದರ ಬಗೆಗಿನ ಆತಂಕ ಹಾಗೂ ಕಾಳಜಿಯ ಕಾರಣದಿಂದ ಇದು ಮುಖ್ಯವಾಗುತ್ತದೆ. ವರದಿಯೊಂದರ ಅಂದಾಜಿನ ಪ್ರಕಾರ, ಭಾರತದಲ್ಲಿ ಒಬ್ಬ ರೋಗಿಗೆ ಓಪಿಡಿಯಲ್ಲಿ ದತ್ತಕವಾಗುವ ಅವಧಿ ಸುಮಾರು ಎರಡು ನಿಮಿಷ. ಸ್ವೀಡನ್‌ನಲ್ಲಿ ಒಬ್ಬ ರೋಗಿಗೆ ವೈದ್ಯರ ಬಳಿ ಮಾತನಾಡಲು 22.5 ನಿಮಿಷ ಸಿಗುತ್ತದೆ ಎಂಬ ಉಲ್ಲೇಖ ಅದೇ ವರದಿಯಲ್ಲಿದೆ.

‘ಸಾವಿರ ಜನರಿಗೆ ಒಬ್ಬ ವೈದ್ಯರು ಇರಬೇಕಾದದ್ದು ಅವಶ್ಯ ಮತ್ತು ಇದೊಂದು ಸರಿಯಾದ ಅನುಪಾತ ಎಂದು‌ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಹೇಳಿದೆ. ವಿಶೇಷವೆಂದರೆ, ಭಾರತದಲ್ಲಿ ಈಗ 834 ಜನರಿಗೆ ಒಬ್ಬ ವೈದ್ಯರಿದ್ದಾರೆ.‌ ಇದು ಡಬ್ಲ್ಯುಎಚ್‌ಒ ಅನುಪಾತಕ್ಕಿಂತ ತುಂಬಾ ಸಮಾಧಾನಕರ ಅಂಕಿಅಂಶ. ಆದರೂ ಭಾರತದಲ್ಲಿ ವೈದ್ಯರು‌ ಓಪಿಡಿಯಲ್ಲಿ ರೋಗಿಗೆ ಹೆಚ್ಚು ಸಮಯ ಕೊಡಲಾರರು ಎಂಬ ದೂರಿದೆ.‌

ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣವು ಕ್ಷಿಪ್ರವಾಗಿ ಬೆಳೆಯುತ್ತಿರುವ ಆರ್ಥಿಕ ಕ್ಷೇತ್ರಗಳಾಗಿ ಬದಲಾಗಿವೆ. ಅವು ಸೇವೆಯ ಗಡಿಯನ್ನು ಎಂದೋ ಮೀರಿವೆ. ವಿಪರ್ಯಾಸವೆಂದರೆ, ಆಸ್ಪತ್ರೆಗಳು ಜಾಹೀರಾತು ನೀಡಿ ರೋಗಿಗಳನ್ನು ಆಹ್ವಾನಿಸುತ್ತವೆ. ಪರಸ್ಪರ ಸ್ಪರ್ಧೆಗೆ ಇಳಿಯುತ್ತವೆ. ಹಣದ ಹೊಳೆ ಹರಿಯುತ್ತದೆ. ಒಬ್ಬ ವ್ಯಕ್ತಿ ತನ್ನ ಆದಾಯದ ಶೇ 30ರಷ್ಟು ಭಾಗವನ್ನು ಆಸ್ಪತ್ರೆಗೆ ಸುರಿಯುತ್ತಿದ್ದಾನೆ. ತನ್ನ ಹಣಕ್ಕೆ ಸರಿಯಾದ ಚಿಕಿತ್ಸೆ ಸಿಗುವುದೇ ಎಂಬುದು ಇಂದಿಗೂ ಅವನಿಗೆ ಖಚಿತವಿಲ್ಲ.

ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳ ದೊಡ್ಡ ಸವಾಲು ಅಲ್ಲಿನ ಪ್ರಜೆಗಳ ಆರೋಗ್ಯ. ಆರೋಗ್ಯವಂತ ಪ್ರಜೆಗಳಿಂದ ಮಾತ್ರ ದೇಶ ಬೆಳೆಯಬಲ್ಲದು. ದುಡಿಯುವ ಕೈಗಳು ರೋಗಮುಕ್ತವಾದರೆ ಅದಕ್ಕೆ ಬಲ ಹೆಚ್ಚು. ಈ ವಿಚಾರದಲ್ಲಿ ಭಾರತವೇನೂ ಹೊರತಲ್ಲ.‌ ವೈದ್ಯರ ಬಳಿಯ ಒಂದು ಸಂದರ್ಶನಕ್ಕೆ ದಿನವಿಡೀ ಕಾಯುವ, ತನ್ನ ಆದಾಯದ ಬಹುಭಾಗವನ್ನು ಆಸ್ಪತ್ರೆಗೆ ಸುರಿಯುವ ಮತ್ತು ಆರೋಗ್ಯ ಕ್ಷೇತ್ರ ಒಂದು ವ್ಯವಸ್ಥಿತ ಉದ್ಯಮ
ಆಗಿರುವ ಈ ಹೊತ್ತಿನಲ್ಲಿ, ರೋಗಿಗೆ ಸಮಾಧಾನಕರ ಚಿಕಿತ್ಸೆ ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. 

ಇದರ ಹೊರತಾಗಿಯೂ ಹಗಲು ರಾತ್ರಿ ತನ್ನ ರೋಗಿಗಳಿಗಾಗಿ ದುಡಿಯುವ ವೈದ್ಯರನ್ನು ನೋಡಿದ್ದೇವೆ. ಸಮೂಹ ಸಹಭಾಗಿತ್ವದಲ್ಲಿ ದೇಣಿಗೆ ಸಂಗ್ರಹಿಸಿ ಬಡವರಿಗೆ ಉಚಿತ ಚಿಕಿತ್ಸೆ ಕೊಡುವ ಆಸ್ಪತ್ರೆಗಳನ್ನು ನೋಡಿದ್ದೇವೆ. ಅದೇ ಓಪಿಡಿಯಲ್ಲಿ ರೋಗಿಗೆ ಬಹಳಷ್ಟು ಸಮಯಾವಕಾಶ ಕೊಟ್ಟು, ಅವರ ಅನುಮಾನವನ್ನು ಇಲ್ಲವಾಗಿಸುವ ಹೃದಯವಂತ ವೈದ್ಯರನ್ನೂ ಕಂಡಿದ್ದೇವೆ. ಅಷ್ಟರಮಟ್ಟಿಗೆ ಒಂದು‌ ಸಣ್ಣ ನೆಮ್ಮದಿ.

ನಮ್ಮ ಆರೋಗ್ಯ ಕ್ಷೇತ್ರ ಬಹಳಷ್ಟು ಬದಲಾಗಬೇಕಾಗಿದೆ. ಪ್ರತಿ ರೋಗಿಗೂ ಗುಣಾತ್ಮಕ ಚಿಕಿತ್ಸೆ ಸಿಗಬೇಕಾಗಿದೆ. ಉಳ್ಳವರಿಗೆ ದಕ್ಕುವ ಚಿಕಿತ್ಸೆಗಳು ಇಲ್ಲದವರಿಗೂ ದಕ್ಕಬೇಕು. ಉತ್ತಮ ವೈದ್ಯರು ಬೇಕು. ಸೇವಾ ಮನೋಭಾವದ ವೈದ್ಯರು ಈ ಹೊತ್ತಿನ ತುರ್ತು. ಗೆಳೆಯನೊಬ್ಬ ಹೇಳುತ್ತಿದ್ದ, ಆಸ್ಪತ್ರೆಗೆ ಹೋಗದಿದ್ದರೆ ಪ್ರಾಣ ಮಾತ್ರ ಹೋಗಬಹುದು, ಆದರೆ ಈ ಆಸ್ಪತ್ರೆಗಳು ಒಮ್ಮೊಮ್ಮೆ ಹಣ ಮತ್ತು ಪ್ರಾಣ ಎರಡನ್ನೂ ಕಿತ್ತುಕೊಂಡು ಬಿಡುತ್ತವೆ ಎಂದು. ಅದು ಬಹುತೇಕರ ಅನುಭವ ಆಗದೇ ಇರಲಿ. ದೇವರಂತಹ ವೈದ್ಯರ ಸಂತತಿ ಹೆಚ್ಚಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT