ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಲಯ ತಪ್ಪಿದ ವಿಶ್ವವಿದ್ಯಾಲಯ

Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ಪ್ರಪಾತಕ್ಕೆ ಸರ್ಕಾರಿ ವಿ.ವಿಗಳು’ ಎಂಬ ವಿಶೇಷ ವರದಿ (ಪ್ರ.ವಾ., ಒಳನೋಟ, ಡಿ.10)ರಾಜ್ಯದ ವಿಶ್ವವಿದ್ಯಾಲಯಗಳ ದುಃಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಅನುದಾನದ ಕೊರತೆ, ಹಣಕಾಸಿನ ದುರ್ಬಳಕೆ, ಸರ್ಕಾರದ ಹಸ್ತಕ್ಷೇಪದಂತಹ ಸಮಸ್ಯೆಗಳು ವಿಶ್ವವಿದ್ಯಾಲಯಗಳನ್ನು ಪ್ರಪಾತಕ್ಕೆ ತಳ್ಳಿವೆ. ಇಂಥ ಸನ್ನಿವೇಶದಲ್ಲಿ ಗುಣಮಟ್ಟದ ಸಂಶೋಧನೆ ಮತ್ತು ದಕ್ಷ, ಪ್ರಾಮಾಣಿಕ, ಸಾಮಾಜಿಕ ಕಾಳಜಿಯುಳ್ಳ ಭವಿಷ್ಯದ ನೇತಾರರನ್ನು ರೂಪಿಸುವಂತಹ ಮಹತ್ವದ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಗಳು ನಿರ್ವಹಿಸುವುದಾದರೂ ಹೇಗೆ?

ಈ ಎರಡು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ವಿಶ್ವವಿದ್ಯಾಲಯ ಸಹಜವಾಗಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಎಂದು ಆಯ್ಕೆಯಾಗುವ ಬಹುತೇಕ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ಭವಿಷ್ಯದ ನೇತಾರರ ತಯಾರಿಗೆ ಹೆಚ್ಚು ಒತ್ತು ಕೊಡುವುದನ್ನು ಕಾಣಬಹುದು.

ನಾನು ಸ್ನಾತಕೋತ್ತರ ಪದವಿ ಪಡೆದ ವಿಶ್ವವಿದ್ಯಾಲಯದ ವಿಭಾಗಕ್ಕೆ ಕೆಲವು ದಿನಗಳ ಹಿಂದೆ ಭೇಟಿ ನೀಡುವ ಸಂದರ್ಭ ಎದುರಾಯಿತು. ಒಂದು ಕಾಲದಲ್ಲಿ ಏಳೆಂಟು ಜನ ಪೂರ್ಣಕಾಲಿಕ ಬೋಧಕರನ್ನು ಒಳಗೊಂಡಿದ್ದ ವಿಭಾಗದಲ್ಲಿ ಇಂದು ಪೂರ್ಣಕಾಲಿಕ ಬೋಧಕರೇ ಇಲ್ಲ. ಅರೆಕಾಲಿಕ ಉಪನ್ಯಾಸಕರಿಂದ ಸ್ನಾತಕೋತ್ತರ ಕೋರ್ಸಿನ ಎರಡು ತರಗತಿಗಳ ಪಾಠ ಪ್ರವಚನ ನಿರ್ವಹಿಸಬೇಕಾದ ಸನ್ನಿವೇಶ ಎದುರಾಗಿದೆ. ಪೂರ್ಣಕಾಲಿಕ ಬೋಧಕರಿಲ್ಲದ ಕಾರಣ, ಸಂಶೋಧನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಇದು ಬರೀ ಒಂದು ವಿಶ್ವವಿದ್ಯಾಲಯದ ಚಿತ್ರಣವಲ್ಲ. ರಾಜ್ಯದ ಬಹಳಷ್ಟು ವಿಶ್ವವಿದ್ಯಾಲಯಗಳು ಇಂದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿವೆ. ವಿಶ್ವವಿದ್ಯಾಲಯಗಳ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಯಾಗುತ್ತಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳಲ್ಲಿನ ಸಮಸ್ಯೆಗಳೇ ಬೆಟ್ಟದಷ್ಟಿರುವಾಗ ಇನ್ನು ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಲು ಹೊರಡುವುದು ಆತುರದ ನಿರ್ಧಾರವಾಗುತ್ತದೆ.

ವೃತ್ತಿಪರ ಕೋರ್ಸುಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿರುವುದರಿಂದ ವಿಜ್ಞಾನ ಮತ್ತು ಸಮಾಜವಿಜ್ಞಾನ ಕೋರ್ಸುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ವಿವೇಚನೆಯ ನಡೆಯಲ್ಲ. ಅದರ ಬದಲು, ಈಗ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳನ್ನು ಬಲಪಡಿಸಬೇಕಾದದ್ದು ಅಗತ್ಯ.ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಸದ್ಯಕ್ಕಿಲ್ಲ ಎಂದಿರುವ ಉನ್ನತ ಶಿಕ್ಷಣ ಸಚಿವರ ನಿರ್ಧಾರ ಸ್ವಾಗತಾರ್ಹ.

ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಇತ್ತೀಚೆಗೆ ಸ್ನಾತಕೋತ್ತರ ಸಂಶೋಧನಾ ಪ್ರಬಂಧದ ಬರವಣಿಗೆ ಸಂಬಂಧಿತ ಶೀರ್ಷಿಕೆಗಳ ಪಟ್ಟಿಯನ್ನು ತಯಾರಿಸಿದೆ. 24 ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ಸುಮಾರು 1,400ಕ್ಕಿಂತ ಹೆಚ್ಚು ಶೀರ್ಷಿಕೆಗಳು ಈ ಪಟ್ಟಿಯಲ್ಲಿವೆ. ಪ್ರಸ್ತುತ ವೈದ್ಯಕೀಯ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿರುವ ಸಂಶೋಧನಾ ಶೀರ್ಷಿಕೆಗಳು ಗುಣಮಟ್ಟದವಾಗಿಲ್ಲ ಎನ್ನುವ ಕಾರಣದಿಂದ ಆಯೋಗವೇ ಈ ಕಾರ್ಯಕ್ಕೆ ಮುಂದಾಗಿದೆ. ಈ ಮಾತು ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗೆ ಮಾತ್ರವಲ್ಲ ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಒಟ್ಟಾರೆ ವೇತನ ಬಡ್ತಿ ಮತ್ತು ಉದ್ಯೋಗ ಬಡ್ತಿಯು ಸಂಶೋಧನೆಯ ಮೊದಲ ಆದ್ಯತೆಯಾಗಿವೆ. ಡಾಕ್ಟರೇಟ್ ಪದವಿ ಪಡೆದವರು ಮತ್ತೆ ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ವಿರಳ.

ಸಂವಾದ, ಚರ್ಚೆ, ಗೋಷ್ಠಿಗಳಿಗೆ ಮುಕ್ತ ವೇದಿಕೆಯಾಗಬೇಕಾದ ವಿಶ್ವವಿದ್ಯಾಲಯಗಳು ಆಳುವ ಸರ್ಕಾರಗಳ ಕೈಗೊಂಬೆಗಳಂತೆ ವರ್ತಿಸುತ್ತಾ, ಆಡಳಿತಾರೂಢರ ಮುಖಸ್ತುತಿಗೆ ಸೀಮಿತವಾಗುತ್ತಿವೆ. ಕಾಲಕಾಲಕ್ಕೆ ಆಡಳಿತದ ಚುಕ್ಕಾಣಿ ಹಿಡಿಯುವ ರಾಜಕೀಯ ಪಕ್ಷಗಳ ಚಹರೆ ವಿಶ್ವವಿದ್ಯಾಲಯಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ. ಆಯಾ ಅವಧಿಯ ಸರ್ಕಾರಗಳು ತಮ್ಮ ಸೈದ್ಧಾಂತಿಕ ನೆಲೆಯನ್ನು ವಿಸ್ತರಿಸಲು ವಿಶ್ವವಿದ್ಯಾಲಯಗಳನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿವೆ. ಇದಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯಗಳ ಆಯಕಟ್ಟಿನ ಸ್ಥಾನಗಳನ್ನು ರಾಜಕೀಯ ಪಕ್ಷಗಳ ಹಿಂಬಾಲಕರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ.

ವಿಶ್ವವಿದ್ಯಾಲಯಗಳನ್ನು ಆವರಿಸಿಕೊಂಡಿರುವ ಜಡತ್ವದಲ್ಲಿ ಬೋಧಕರ ಪಾತ್ರವನ್ನು ಕೂಡ ಕಡೆಗಣಿಸುವಂತಿಲ್ಲ. ಪಾಠ ಮತ್ತು ಸಂಶೋಧನೆಗಿಂತ ‘ರಾಜಕೀಯ’ ಮತ್ತು ಉನ್ನತ ಹುದ್ದೆಗಳಿಗಾಗಿ ನಡೆಸುವ ಲಾಬಿಗೇ ಬೋಧಕರ ಹೆಚ್ಚಿನ ಸಮಯ ವಿನಿಯೋಗ ಆಗುತ್ತಿದೆ. ಜಾತಿ, ಧರ್ಮವು ವಿಶ್ವವಿದ್ಯಾಲಯದ ಬೋಧಕ, ವಿದ್ಯಾರ್ಥಿ ಗಣವನ್ನು ವ್ಯವಸ್ಥಿತವಾಗಿ ವಿಭಾಗಿಸುತ್ತಿವೆ.  

ಪ್ರಸ್ತುತ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಭ್ರಷ್ಟಾಚಾರ ಮುಕ್ತಗೊಳಿಸುವುದು, ಆವರಿಸಿಕೊಂಡಿರುವ ಪ್ರಭುತ್ವದ ಚಹರೆಯನ್ನು ತೆಗೆದುಹಾಕುವುದು, ಬೋಧಕ ಗಣವನ್ನು ಜಾತಿ-ಧರ್ಮದ ಸಂಕೋಲೆಯಿಂದ ಹೊರತರುವುದು, ಬೋಧನೆ ಹಾಗೂ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ. ವಿಶ್ವವಿದ್ಯಾಲಯಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ತೊಡಗಿದಾಗ ಸಂಶೋಧನೆಯ ಗುಣಮಟ್ಟ ಹೆಚ್ಚುತ್ತದೆ ಮತ್ತು ಭವಿಷ್ಯದ ಪ್ರಜ್ಞಾವಂತ ನೇತಾರರು ರೂಪುಗೊಳ್ಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT