ಸೋಮವಾರ, ಜೂನ್ 27, 2022
28 °C

ಅದೇ ರಾಗ, ಅದೇ ಚಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಫೇಸ್‌ಬುಕ್ ಎಂಬ ಮಾಯೆಗೆ ಜೋತು ಬಿದ್ದವರಲ್ಲಿ ಕೆಲವರಿಗೆ ರಾಜಕಾರಣವೇ ಉಸಿರು. ಹಾಗೆಂದು ಇವರೆಲ್ಲ ರಾಜಕಾರಣಿಗಳೇನಲ್ಲ. ಅವರ ಇಷ್ಟದ ಪಕ್ಷಗಳ ನಾಯಕರ ಚೇಲಾಗಳು ಹಾಗೂ ಅವರಿಗೆ ಇಷ್ಟವಿಲ್ಲದ ಪಕ್ಷದ ಚೇಳುಗಳು! ರಾಜಕೀಯಕ್ಕೆ ಸಂಬಂಧವೇ ಇಲ್ಲದ ವಿಷಯಗಳಿದ್ದರೂ ಅವುಗಳನ್ನು ರಾಜಕೀಯಕ್ಕೆ ಎಳೆಯುವುದರಲ್ಲಿ ಇವರು ನಿಸ್ಸೀಮರು. ಅಂತಹ ಚೇಳುಗಳಲ್ಲಿ ಒಬ್ಬ ಗರಂಸ್ವಾಮಿ. ಆತನ ಗರಂ ಪೋಸ್ಟ್ ಅಥವಾ ಕಮೆಂಟುಗಳನ್ನು ಓದಿದರೆ ತಲೆ ಚಿಟ್ಟು ಹಿಡಿಯಬೇಕು, ಹಾಗಿರುತ್ತವೆ!

ಒಮ್ಮೆ ಯಾರೋ ಒಬ್ಬಾತ ತನ್ನ ಹೆಂಡತಿಯನ್ನು ತುಂಬಾ ಆತ್ಮೀಯವಾಗಿ ಅಪ್ಪಿಕೊಂಡಿರುವ ಫೋಟೊ ಹಾಕಿದ. ಎಲ್ಲರೂ ಸೂಪರು, ಚೆನ್ನಾಗಿದೆ, ದೇವಲೋಕದ ದಂಪತಿ ಎಂದೆಲ್ಲಾ ಪ್ರತಿಕ್ರಿಯಿಸುತ್ತಿದ್ದಾಗ ಗರಂಸ್ವಾಮಿ ಬೇರೆ ರಾಗ ತೆಗೆದ.

‘ನೀವು ಪತ್ನಿಯೊಂದಿಗೆ ಅನ್ಯೋನ್ಯವಾಗಿ ಇರುವುದಕ್ಕೆ ನಾವ್ಯಾರೂ ಸಾಕ್ಷ್ಯ ಕೇಳಿದಂತಿಲ್ಲ. ಆದರೂ ಫೋಟೊ ಹಾಕಿದ್ದೀರಿ. ನಿಮ್ಮ ದಾಂಪತ್ಯ ಹೀಗೇ ಮುಂದುವರಿಯಲಿ. ಆದರೆ ಒಂದು ವಿಷಯ. ಗಿಳಿಯು ಪಕ್ಷವೊಂದರ ಚಿಹ್ನೆಯೆಂದು ಚೆನ್ನಾಗಿ ಗೊತ್ತಿದ್ದರೂ, ನಿಮ್ಮ ಹೆಂಡತಿ ಗಿಳಿಯ ಚಿತ್ರಗಳಿರುವ ಸೀರೆಯನ್ನೇ ಧರಿಸಿದ್ದಾರೆ. ಈ ‘ಗಿಳಿಗಿಳಿ ಪಕ್ಷ’ ಇಡೀ ದೇಶವನ್ನು ಗಂಡಾಂತರಕ್ಕೆ ತಳ್ಳುವುದಕ್ಕೆ ಹೊರಟಿರುವುದು ನಿಮಗಿನ್ನೂ ತಿಳಿದಿಲ್ಲವೇ?’

ಮೊನ್ನೆ ಪತಿಪೀಡಕಿಯರ ವಿರೋಧಿ ಹೋರಾಟಗಾರ ಕಿ.ತಾ. ಪತಿ ಅವರಿಗೆ ‘ಗಂಡಭೇರುಂಡ’ ಪ್ರಶಸ್ತಿ ಸಿಕ್ಕಿದ್ದನ್ನು ಬೇರೆ ಎಲ್ಲಾ ಮಾಧ್ಯಮಗಳಿಗಿಂತಲೂ ಮೊದಲು ಬಿತ್ತರಿಸಿದ್ದು ಫೇಸ್‌ಬುಕ್! ಪ್ರಶಸ್ತಿ ಬಂದ ವಿಷಯ ಓದಿ ‘ಕಂಗ್ರಾಜುಲೇಷನ್ಸ್’ ಪ್ರವಾಹವೇ ಹರಿಯಿತು. ಗರಂಸ್ವಾಮಿ ಕೂಡಾ ಅಲ್ಲಿ ಪ್ರತ್ಯಕ್ಷನಾದ!

‘ಶುಭಾಶಯಗಳು. ಕಿ.ತಾ. ಪತಿ ಅವರು ನಮ್ಮ ಸಮಾಜದ ಎಮ್ಮೆ. ಎಮ್ಮೆ ಚರ್ಮವಿಲ್ಲದೇ ಹೋಗಿದ್ದರೆ ಅವರು ಪತಿಪೀಡಕಿಯರ ವಿರುದ್ಧ ಹೋರಾಡುವ ಎದೆಗಾರಿಕೆ ತೋರಿಸುತ್ತಿರಲಿಲ್ಲ. ಆ ದರಿದ್ರ ‘ಗಿಳಿಗಿಳಿ ಪಕ್ಷ’ದ ಮುಖಂಡರು ಮಾತ್ರ ‘ಎಮ್ಮೆ ಚರ್ಮ’ದ
ವರೆಂದು ಭಾವಿಸಿದ್ದೆ. ಶ್ರೀಮಾನ್ ಕಿ.ತಾ. ಪತಿಯವರಿಗೆ ಅದು ಹೇಗೆ ದಯಪಾಲಿಸಿದೆಯೋ!’ ಸುಮ್ಮನೆ ಶುಭಾಶಯ ಬರೆದು ಕೈ ಕಟ್ಟಿ ಕೂರುವ ಬದಲು ಅಲ್ಲೂ ರಾಜಕೀಯ ಹೇಗೆ ಎಳೆದು ತಂದ ನೋಡಿ!

ಯಕ್ಷಗಾನದ ವಿಡಿಯೊ ತುಣುಕುಗಳನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಡುವುದು ಈಗ ಸಾಮಾನ್ಯ. ಒಂದು ದಿವಸ ನಮ್ಮ ಗರಂಸ್ವಾಮಿ ಕೂಡಾ ‘ಮಹಿಷಾಸುರ ಮರ್ದಿನಿ’ ಎಂಬ ವಿಡಿಯೊ ಹಾಕಿದ. ಪಾಪ, ಮಹಿಷಾಸುರನನ್ನು ತನ್ನ ಪಾಡಿಗೆ ಕುಣಿಯುವುದಕ್ಕೂ ಬಿಡಲಿಲ್ಲ. ಅವನು ಅದಕ್ಕೊಂದು ಅಡಿಟಿಪ್ಪಣಿ ಬರೆದ. ಅದು ಹೀಗಿತ್ತು.

‘ಆಹಾ! ನನಗೆ ಬಹಳ ದಿವಸಗಳಿಂದ ನಿರೀಕ್ಷಿಸಿದ್ದ ಪ್ರಸಂಗ ನೋಡುವ ಭಾಗ್ಯ ಕೊನೆಗೂ ಸಿಕ್ಕಿತು. ಆದರೆ ನನ್ನ ನಿದ್ದೆಗೆಡಿಸಿದ್ದು ನಡುವೆ ಬಂದ ಗಿಳಿಗಿಳಿ ಪಕ್ಷದ ‘ಸೂತ್ರಧಾರ’. ಮೈಕ್ ಎದುರು ಮಹಿಷಾಸುರನ ಆರ್ಭಟ ಮತ್ತು ಹಾವಭಾವ ಕಂಡಾಗ ಥೇಟ್ ಗಿಳಿಗಿಳಿ ಪಕ್ಷದ ಸೂತ್ರಧಾರನನ್ನು ನೋಡಿದಂತಾಗಿ ಆಗಾಗ ಬೆಚ್ಚಿ ಬೀಳುತ್ತಿದ್ದೆ! ನನಗಂತೂ ದೇಶದ ಭವಿಷ್ಯ ನೆನೆದು ಯಕ್ಷಗಾನ ಪೂರ್ತಿ ಎಂಜಾಯ್ ಮಾಡಲಿಕ್ಕಾಗಲಿಲ್ಲ’.

ಒಮ್ಮೆ ಗರಂಸ್ವಾಮಿ ಹಿರಿಯ ನಟರೊಬ್ಬರ ಫೋಟೊ ಹಾಕಿದ್ದ. ಎಲ್ಲರೂ ಒಂದಾನೊಂದು ಕಾಲದ ಜನಪ್ರಿಯ ನಟನ ಬಗ್ಗೆ ಅದೇನೋ ಒಳ್ಳೆಯದನ್ನು ಬರೆದಿದ್ದಾನೆ ಎಂದು ಓದಲು ಆರಂಭಿಸಿದರೆ, ಅಲ್ಲೂ ತರಲೆ ಪುರಾಣವಿತ್ತು. ‘ಇವರೊಬ್ಬ ಒಳ್ಳೆಯ ನಟ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವರಿಗೆ ಸಿಕ್ಕ ಸಿಕ್ಕ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ದುರಭ್ಯಾಸವಿತ್ತು. ಪೆದ್ದಗುಂಡಪ್ಪ ಸ್ಮರಣಾರ್ಥ ಪ್ರಶಸ್ತಿ ಕೂಡಾ ಅವರಿಗೆ ಸಿಕ್ಕಿತ್ತು. ಗಿಳಿಗಿಳಿ ಪಕ್ಷದ ಅತ್ಯಂತ ಭ್ರಷ್ಟ ಪುಢಾರಿಯಾಗಿದ್ದ ದಿ.ಪೆದ್ದಗುಂಡಪ್ಪನ ಹೆಸರಿನ ಪ್ರಶಸ್ತಿಯನ್ನು ಈ ನಟಚತುರ ಸ್ವೀಕರಿಸಲೇಬಾರದಿತ್ತು. ಇನ್ನಾದರೂ ಆ ಪ್ರಶಸ್ತಿಯನ್ನು ಅವರ ಮಕ್ಕಳು ಹಿಂತಿರುಗಿಸಬೇಕು’.

ಮುಗಿಸುವ ಮುನ್ನ ‘ಕಪಾಟಿನಲ್ಲಿ ಅದೇನೋ ಹುಡುಕುವಾಗ ಅಕಸ್ಮಾತ್ ಸಿಕ್ಕಿದ ಈ ನಟನ ಫೋಟೊ ನೋಡಿ, ಇದೆಲ್ಲಾ ನೆನಪಾಯಿತು’ ಎಂದು ಬರೆಯುವುದಕ್ಕೆ ಗರಂಸ್ವಾಮಿ ಮರೆಯಲಿಲ್ಲ.

ಬೇರೆ ಏನೂ ಬೇಡ, ಗರಂ-ಆಸಾಮಿಗೆ ನೀಟಾಗಿ ಹುಟ್ಟುಹಬ್ಬದ ಶುಭಾಶಯ ಕೋರುವುದಕ್ಕೂ ಬರುವುದಿಲ್ಲ. ಪ್ರಖ್ಯಾತ ಸಾಹಿತಿಯೊಬ್ಬರ ಹುಟ್ಟಿದ ದಿನದಂದು ಅವನು ಸಾಹಿತಿ ಜತೆಗಿದ್ದ ಫೋಟೊ ಹಾಕಿಕೊಂಡಿದ್ದ. ಹ್ಞಾಂ! ಏನಾದರೂ ಬರೆಯದೆ ಆತ ಸುಮ್ಮನಿರುತ್ತಾನೆಯೇ?

‘ನನ್ನ ಅಚ್ಚುಮೆಚ್ಚಿನ ಕತೆಗಾರ ಜುಬ್ಬರಾಜ ಅವರಿಗೆ ನೂರನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ಇಂದಿಗೂ ಅವರ ಪುಸ್ತಕಗಳಿಗೆ ಅತೀ ಹೆಚ್ಚಿನ ಬೇಡಿಕೆಗಳಿರುವುದು ವಿಶೇಷವೇ ಸರಿ. ಅವರು ಬರೆದಿರುವ ‘ಅಜ್ಜ ಹೇಳದ ಕತೆ’, ‘ನಿಂಬೆಹಣ್ಣು’, ‘ಪಾಪಿ’, ‘ಬೆಳ್ಳಿ ಜಿಂಕೆ’, ‘ಕಪ್ಪು ಕುರಿ’ ಮುಂತಾದ ಕಾದಂಬರಿಗಳನ್ನು ಓದದವರು ಅಪರೂಪ ಅನ್ನಬೇಕು. ಇವರು ಹುಟ್ಟಿದ ದಿನವೇ ಗಿಳಿಗಿಳಿ ಪಕ್ಷದ ಮಾಜಿ ಮುಖ್ಯಮಂತ್ರಿ ಸಂಕಟಪ್ಪ ಕೂಡಾ ಹುಟ್ಟಿದ್ದರೂ, ಸಂಕಟಪ್ಪಗೆ ನಮ್ಮ ರಾಜ್ಯದಲ್ಲಿ ಅಷ್ಟೇ ಕೆಟ್ಟ ಹೆಸರಿದೆ. ಈ ನಾಚಿಕೆಗೆಟ್ಟ
ವರಿಗೆ ಇವತ್ತು ಬೇರೆ ಬೃಹತ್ ಹುಟ್ಟುಹಬ್ಬದ ಸಭೆ ಹಮ್ಮಿಕೊಂಡಿದ್ದಾರೆ!’

ಅದೇ ರಾಗ, ಅದೇ ಚಾಳಿ ಬಿಟ್ಟುಕೊಡದ ಗರಂಸ್ವಾಮಿ ನಿಮ್ಮ ಫೇಸ್‌ಬುಕ್‌ನಲ್ಲೂ ಕಾಣಿಸಿಕೊಳ್ಳಬಹುದು, ಹುಷಾರ್!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.