ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕನ್ನಡ ಕಲಿಯಬೇಕು, ಆದರೆ ಕಲಿಸುವವರು ಯಾರು?

ಅನಿವಾರ್ಯ, ಅಗತ್ಯ, ಪ್ರಯೋಜನ, ಕಲಿಯದಿದ್ದರೆ ನಷ್ಟ ಎನ್ನುವಂಥ ಸ್ಥಿತಿಗಳಿದ್ದರೆ ಮಾತ್ರ ಒಂದು ಭಾಷೆಯನ್ನು ಕಲಿಯುವ ಪ್ರೇರಣೆ ಉಂಟಾಗುತ್ತದೆ...
Published 21 ಜೂನ್ 2023, 23:31 IST
Last Updated 21 ಜೂನ್ 2023, 23:31 IST
ಅಕ್ಷರ ಗಾತ್ರ

‘ಕನ್ನಡ ಭಾಷೆ ಈಗ ಅಪಾಯಕ್ಕೆ ಸಿಲುಕಿದೆ. ಬೆಂಗಳೂರಿನಲ್ಲಿ ಶೇ 60ರಷ್ಟು ಮಂದಿಗೆ ಕನ್ನಡ ಭಾಷೆ ಮಾತನಾಡಲು ಬರುವುದೇ ಇಲ್ಲ’ ಎಂದು ರಾಜಧಾನಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ಇಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಒಂದು– ಕನ್ನಡ ಭಾಷೆ ಅಪಾಯದಲ್ಲಿಯೇ ಎಂಬುದು. ಎರಡನೆಯದು– ಹಲವರಿಗೆ ಕನ್ನಡ ಮಾತನಾಡಲು ಬರವುದಿಲ್ಲ ಎಂಬುದು. 

ಮೊದಲನೆಯದಾಗಿ ಕನ್ನಡವು ಖಂಡಿತಾ ಅಪಾಯದಲ್ಲಿ ಸಿಲುಕಿಲ್ಲ. ರಾಜ್ಯದ ಜನಸಂಖ್ಯೆ ಏಳು ಕೋಟಿಯನ್ನು ತಲುಪುತ್ತಿದೆ. 56ಕ್ಕೂ ಹೆಚ್ಚು ಮಾತೃಭಾಷೆಗಳನ್ನು ಮಾತಾಡುವ ಜನ ಇದ್ದರೂ ಶೇ 90ಕ್ಕೂ ಹೆಚ್ಚಿನ ಜನರಿಗೆ ಕನ್ನಡ ಚೆನ್ನಾಗಿ ಬರುತ್ತದೆ. ಸಾಕ್ಷರತೆಯ ಪ್ರಮಾಣ ಶೇ 75ಕ್ಕೂ ಹೆಚ್ಚು, ಮೂವತ್ತಕ್ಕೂ ಹೆಚ್ಚು ರಾಜ್ಯಮಟ್ಟದ ದೈನಿಕ, ಸಾಪ್ತಾಹಿಕ, ಮಾಸ ಪತ್ರಿಕೆಗಳು, ಜೊತೆಗೆ ಸ್ಥಳೀಯ ಪತ್ರಿಕೆಗಳು, ವರ್ಷಕ್ಕೆ 1,500ಕ್ಕೂ ಹೆಚ್ಚು ಹೊಸ ಪುಸ್ತಕಗಳು, ಸುಮಾರು 200 ಹೊಸ ಚಲನಚಿತ್ರಗಳು, 67 ಆಕಾಶವಾಣಿ ಮತ್ತು ಖಾಸಗಿ ರೇಡಿಯೊ ಸ್ಟೇಷನ್‌ಗಳು, 20 ಸಮುದಾಯ ರೇಡಿಯೊ ಸ್ಟೇಷನ್‌ಗಳು, ಹಗಲು– ರಾತ್ರಿ ನಡೆಯುವ 38ಕ್ಕೂ ಹೆಚ್ಚು ರಾಜ್ಯಮಟ್ಟದ ಟಿ.ವಿ. ಚಾನೆಲ್‌ಗಳು, ಜೊತೆಗೆ ಸ್ಥಳೀಯ ಟಿ.ವಿ. ಚಾನೆಲ್‌ಗಳು ಮತ್ತು ಯುಟ್ಯೂಬರ್‌ಗಳು- ಕನ್ನಡವು ಹೊಸ ಹೊಸ ಸವಾಲುಗಳು ಎದುರಾದಾಗ ಹಾಗೆ ಅವನ್ನೂ ಮೈಗೂಡಿಸಿಕೊಂಡು ಬೆಳೆಯುತ್ತಾ ಇದೆ. ನಿಜವೆಂದರೆ ಕನ್ನಡ ಭಾಷೆಯು ವಿವಿಧ ಪ್ರಾದೇಶಿಕ ಭಾಷೆಗಳ ರೂಪದಲ್ಲಿ ಗ್ರಾಮೀಣರಲ್ಲಿ ಜೀವಂತವಿದೆ. ಹೀಗಾಗಿ ಕನ್ನಡ ಭಾಷೆ ಅಳಿಯುವ ಯಾವುದೇ ಅಪಾಯವಿಲ್ಲ. ಆ ಕುರಿತು ಆತಂಕ ಅನಗತ್ಯ.

ಆದರೆ, ಇನ್ನೊಂದು ಕಡೆ, ರಾಜ್ಯದಲ್ಲಿ ಕನ್ನಡ ಬಾರದವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ ಎಂಬ ಮಾತೂ ಸತ್ಯ. ಆದರೆ, ಬೆಂಗಳೂರಿನಲ್ಲಿ ಶೇ 60ರಷ್ಟು ಜನರಿಗೆ ಕನ್ನಡ ಬರುವುದಿಲ್ಲ ಎಂಬುದಕ್ಕೆ ಆಧಾರವಾಗಿ ನಮ್ಮಲ್ಲಿ ಸಮೀಕ್ಷೆಗಳೇನೂ ಆದಂತಿಲ್ಲ. ರಾಜ್ಯದಲ್ಲಿ ಕನ್ನಡ ಬಾರದೇ ಇರುವವರಲ್ಲಿ ಕೆಲವು ಬಗೆಗಳಿವೆ. ಕೆಲವು ತಿಂಗಳುಗಳ ಹಿಂದಷ್ಟೇ ವಿವಿಧ ಬಗೆಯ ಜೀವನೋಪಾಯಗಳನ್ನು ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದು ಕೆಲವು ವರ್ಷ ಇಲ್ಲೇ ನೆಲೆಸಲಿರುವವರು, ರಾಜ್ಯದಲ್ಲಿ ನೆಲೆಸಿ ಬಹಳ ವರ್ಷಗಳೇ ಆಗಿದ್ದರೂ ಹಲವು ಕಾರಣಗಳಿಗಾಗಿ ಕನ್ನಡ ಕಲಿಯದೇ ಇರುವವರು, ಕರ್ನಾಟಕದವರೇ ಆಗಿದ್ದರೂ ತಮ್ಮ ತಮ್ಮ ಸಮುದಾಯಗಳ ವ್ಯಾಪ್ತಿಗಳಲ್ಲಿ ಬದುಕಿದವರು ಮತ್ತು ಶಾಲಾ ಶಿಕ್ಷಣದ ಸಮಯದಲ್ಲಿ ತಮ್ಮ ಮಾತೃಭಾಷೆ ಅಥವಾ ಇಂಗ್ಲಿಷ್ ಮಾಧ್ಯಮದ ಮೋಹಕ್ಕೆ ಮರುಳಾಗಿ ಕನ್ನಡ ಕಲಿಯುವ ಅವಕಾಶವಿದ್ದರೂ ಕಲಿಯದೇ ಇದ್ದವರು.

ಬೆಂಗಳೂರು ನಾವೇ ಒಪ್ಪಿಕೊಂಡಿರುವ ಹಾಗೆ ಒಂದು ರೀತಿ ಆಧುನಿಕ ಜಗತ್ತಿಗೆ ಸೇರಿದ ಮಹಾನಗರ. ಕನ್ನಡೇತರರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಅವರಿಗೆ ಕನ್ನಡವನ್ನು ಕಲಿಯುವ ಅನಿವಾರ್ಯ ಇರುವುದಿಲ್ಲ. ಈ ಸ್ಥಿತಿ ಬೇರೆ ಕಡೆಯೂ ಇದೆ. ಮೈಸೂರು, ತುಮಕೂರು, ಹುಬ್ಬಳ್ಳಿ, ಬೆಳಗಾವಿ ಮುಂತಾದ ಅಭಿವೃದ್ಧಿಶೀಲ ನಗರಗಳು ಮತ್ತು ಇತರ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಪಟ್ಟಣಗಳು, ಗ್ರಾಮಗಳಲ್ಲಿಯೂ ಕನ್ನಡ ಬಾರದೇ ಇರುವ ಜನ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಕನ್ನಡ ಭಾಷೆ ಕುರಿತ ಅಭಿಮಾನವನ್ನು ನಾವು ಪ್ರೇರಕವಾಗಿ ಬಳಸಲು ನೋಡಿದರೆ ಅದು ಅವರವರ ಮಾತೃಭಾಷೆಗಳ ಕುರಿತು ಜನರ ಅಭಿಮಾನವನ್ನು ಕೆರಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಖನಿ ಉರ್ದು, ತೆಲುಗು, ತಮಿಳು, ಕೊಡವ, ಮಲಯಾಳಂ, ಮರಾಠಿ, ಬಂಜಾರ ಇತ್ಯಾದಿ ಮಾತೃಭಾಷೆ ಜನ ತಮ್ಮ ಭಾಷೆ, ಸಂಸ್ಕೃತಿ, ಲಿಪಿಯ ಬಗ್ಗೆ ಹೆಚ್ಚು ಅಭಿಮಾನವನ್ನು ಬೆಳೆಸಿಕೊಂಡಿರುತ್ತಾರೆ. ಅವುಗಳ ಸಂರಕ್ಷಣೆ, ಬೆಳವಣಿಗೆ ಅವರ ಹಕ್ಕೂ ಕೂಡ. ಇದನ್ನು ಮೊದಲು ನಾವು ಗುರುತಿಸುವುದನ್ನು ಕಲಿಯಬೇಕು. ಅಲ್ಲದೇ, ಅನಿವಾರ್ಯ, ಅಗತ್ಯ, ಪ್ರಯೋಜನ, ಕಲಿಯದಿದ್ದರೆ ನಷ್ಟ ಎನ್ನುವಂಥ ಸ್ಥಿತಿಗಳಿದ್ದರೆ ಮಾತ್ರ ಒಂದು ಭಾಷೆಯನ್ನು ಕಲಿಯುವ ಪ್ರೇರಣೆ ಉಂಟಾಗುತ್ತದೆ ಎಂಬುದನ್ನೂ ನಾವು ತಿಳಿದುಕೊಳ್ಳಬೇಕು. ಕನ್ನಡದ ಕುರಿತು ಈ ಅನಿವಾರ್ಯವನ್ನು ಸೃಷ್ಟಿಸುವ ಕೆಲಸ ನಮ್ಮಿಂದಲೇ ಆಗಬೇಕು. ಹಾಗೆ ನೋಡಿದರೆ ಕರ್ನಾಟಕದಲ್ಲಿ ಸರ್ವೇಸಾಮಾನ್ಯವಾಗಿ ಕನ್ನಡವನ್ನು ಕಲಿಯುವುದು ಕಷ್ಟದ ಕೆಲಸವೇನೂ ಅಲ್ಲ. ಆದರೆ, ವ್ಯವಸ್ಥಿತ ರೀತಿಯಲ್ಲಿ ಕನ್ನಡವನ್ನು ಕಲಿಯುವ, ಕಲಿಸುವ ಅವಕಾಶಗಳೂ ಇರಬೇಕು.

ಕನ್ನಡ ಮಾತನಾಡಲೂ ಬರುವುದಿಲ್ಲ, ಇನ್ನು ಓದು– ಬರಹದ ಮಾತು ದೂರವೇ ಎಂದು ನಾವು ಕನ್ನಡೇತರರನ್ನು ದೂಷಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಪ್ರಸ್ತುತ ಆರ್ಥಿಕ, ರಾಜಕೀಯ ಸ್ಥಿತಿಯಲ್ಲಿ ರಾಜ್ಯದಲ್ಲಿ ದುಡಿಮೆಯಲ್ಲಿ ತೊಡಗಿರುವವರೆಲ್ಲರೂ ಇಲ್ಲಿನ ಸಂಪತ್ತು, ಸೇವೆ, ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತೊಡಗಿರುತ್ತಾರೆ. ಕನ್ನಡ ಬಾರದೇ ಇರುವವರಿಗೆ ಕನ್ನಡ ಕಲಿಸುವ ಅಧಿಕೃತ ವ್ಯವಸ್ಥೆ ಮಾತ್ರ ಇಲ್ಲ.

ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯು ಐಎಎಸ್, ಐಪಿಎಸ್‌, ಬ್ಯಾಂಕು, ಕಾರ್ಖಾನೆ ಅಧಿಕಾರಿಗಳಿಗೆ ಕನ್ನಡ ಕಲಿಸುತ್ತಿತ್ತು. ಈಗ ಅದು ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊದಲು ಕನ್ನಡೇತರರಿಗೆ ಕನ್ನಡ ಕಲಿಸುವುದನ್ನೇ ಪ್ರಮುಖ ಗುರಿಯನ್ನಾಗಿ ಹೊಂದಿತ್ತು. ಈಗ ಅಲ್ಲಿ ಆ ಯೋಜನೆ ಇಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲವು ಆಶಾದಾಯಕ ಯೋಜನೆ ಆರಂಭವಾದವು, ಅವೂ ಹಣಕಾಸಿನ ಕೊರತೆಯಿಂದಾಗಿ ಅರ್ಧಕ್ಕೇ ನಿಂತುಹೋದವು. ಕನ್ನಡ ಸಾಹಿತ್ಯ ಪರಿಷತ್ತು ಈ ಕುರಿತು ಒಂದು ಸಭೆಯನ್ನು ನಡೆಸಿತು. ಆದರೆ ಕೆಲಸ ಮುಂದುವರಿಯಲಿಲ್ಲ. ತಮ್ಮದೇ ನೆಲೆಗಟ್ಟಿನಲ್ಲಿ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ ತೊಡಗಿದ್ದಾರೆ. ಆದರೆ, ಕನ್ನಡವನ್ನು ಸರ್ವವ್ಯಾಪಿ ಭಾಷೆಯನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಸರ್ಕಾರವು ಕನ್ನಡೇತರರಿಗೆ ಕನ್ನಡ ಕಲಿಸುವ ರಾಜ್ಯವ್ಯಾಪಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಶಾಲೆಗಳಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಸುಧಾರಿಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT