ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಕಂಗಳಲ್ಲಿ ಹಣತೆ ಹಚ್ಚುವವರು

ಅಧ್ಯಾಪಕರು ಹೊಸ ಆಯಾಮಗಳಿಗೆ ಸಜ್ಜಾಗಬೇಕಾಗಿದೆ
Last Updated 3 ಸೆಪ್ಟೆಂಬರ್ 2020, 20:30 IST
ಅಕ್ಷರ ಗಾತ್ರ

ಪ್ರಸಂಗ 1: ವಾಟ್ಸ್ಆ್ಯಪ್‌ನಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ಅದರಲ್ಲಿ ಬಿಳಿ ಬಣ್ಣದ ನಾಯಿಯೊಂದನ್ನು ಕಟ್ಟಿಹಾಕಲಾಗಿದೆ. ಅದರ ಮೇಲೆ ‘ಸ್ಟೂಡೆಂಟ್ಸ್’ ಎಂದು ಬರೆದಿದೆ. ಕರಿನಾಯಿಯೊಂದು ಬಿಳಿನಾಯಿಗೆ ಎದುರಾಗಿ ನಿರಂತರವಾಗಿ ಬೊಗಳುತ್ತಿದೆ. ಕರಿನಾಯಿಯ ಮೇಲೆ ‘ಆನ್‌ಲೈನ್ ಟೀಚಿಂಗ್ ಸ್ಟ್ಯಾಫ್’ ಎಂದು ಬರೆಯಲಾಗಿದೆ. ಕರಿನಾಯಿ ಎಷ್ಟು ಬೊಗಳಿದರೂ ಬಿಳಿನಾಯಿ ಕ್ಯಾರೇ ಎನ್ನುವುದಿಲ್ಲ. ಬಿಳಿನಾಯಿಯ ಹತ್ತಿರ ಖಾಲಿ ಪಾತ್ರೆಯೊಂದನ್ನು ಇಡಲಾಗಿದೆ. ಪಕ್ಕದಲ್ಲಿ ‘ಗಮನ ಕೊಟ್ಟು ಕೇಳ್ರೋ’ ಅಂತ ಬರೆದು ಕೈಮುಗಿದು ನಗುವ ಚಿತ್ರಗಳನ್ನು ಹಾಕಲಾಗಿದೆ.

ಪ್ರಸಂಗ 2: ಪ್ರತಿಷ್ಠಿತ ಸಂಸ್ಥೆಯೊಂದರ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಸಂದರ್ಶನಕ್ಕೆ ವಿಷಯತಜ್ಞನಾಗಿ ಹೋಗಿದ್ದೆ. ಭಾಗವಹಿಸಿದ್ದ ನೂರಾರು ಅಭ್ಯರ್ಥಿಗಳಲ್ಲಿ ಬಹಳಷ್ಟು ಜನ ಡಾಕ್ಟರೇಟ್ ಪದವೀಧರರೇ ಆಗಿದ್ದರು. ಒಬ್ಬ ಅಭ್ಯರ್ಥಿ ‘ತರಾಸು ಅವರ ಸಾಮಾಜಿಕ ಕಾದಂಬರಿಗಳು: ಒಂದು ಅಧ್ಯಯನ’ ಕುರಿತ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪಡೆದಿದ್ದರು. ಅವರಿಗೆ ‘ಐತಿಹಾಸಿಕ ಮತ್ತು ಸಾಮಾಜಿಕ ವಸ್ತು ನಿರ್ವಹಣೆಯಲ್ಲಿ ತರಾಸು ಅವರ ಸೃಜನಶೀಲ ವ್ಯತ್ಯಾಸಗಳನ್ನು ಹೇಗೆ ಗುರುತಿಸುತ್ತೀರಿ’ ಎಂದು ಪ್ರಶ್ನಿಸಿದೆ. ‘ತರಾಸು ಅವರ ಐತಿಹಾಸಿಕ ಕಾದಂಬರಿಗಳನ್ನು ನಾನು ಓದಿಲ್ಲ’ ಎಂದು ಉತ್ತರಿಸಿದರು.

ಬೋಧನಾ ಗುಣಮಟ್ಟದ ಕೊರತೆಯಿಂದ ಆತ್ಮಗೌರವ ಕಳೆದುಕೊಂಡು ಗೇಲಿಗೆ ಒಳಗಾಗುತ್ತಿರುವ ಕೆಲವು ಅಧ್ಯಾಪಕರ ಮನೋಧರ್ಮವನ್ನು ಮೊದಲ ಪ್ರಸಂಗ ಬಿಂಬಿಸಿದರೆ, ಎರಡನೆಯದು, ಆತ್ಮಾಭಿಮಾನ
ವನ್ನು ಹೊಂದಲು ಅವಶ್ಯಕವಾದ ಅಧ್ಯಯನಶೀಲತೆಯ
ಕೊರತೆಯನ್ನು ಸೂಚಿಸುತ್ತದೆ.

ಪ್ರತಿವರ್ಷ ಸೆ. 5ರಂದು ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಹಾರ ಹಾಕಿ ಶಿಕ್ಷಕರ ಚಾರಿತ್ರ್ಯ ಮತ್ತು ಕೊಡುಗೆಗಳನ್ನು ಕೊಂಡಾಡುವುದು ವಾಡಿಕೆ. ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಕುರಿತು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಶಿಕ್ಷಕ ಆ ಹೊಸ ನೀತಿಯ ಪಾಲುದಾರನಾಗಿ ತನ್ನ ಪಾತ್ರ ಮತ್ತು ಜವಾಬ್ದಾರಿಯ ಬಗ್ಗೆ ಆಲೋಚಿಸಬೇಕಾಗಿದೆ. ಭಾರತದ ಪರಂಪರಾಗತ ಕೃಷಿಮೂಲ ವಿಜ್ಞಾನ ಮಾದರಿಗಳು ನೇಪಥ್ಯಕ್ಕೆ ಸರಿದು, ಯಾಂತ್ರಿಕ ಸಮೃದ್ಧಿಯ ಅತ್ಯುತ್ಸಾಹ ಎಲ್ಲ ಕ್ಷೇತ್ರಗಳಲ್ಲಿ ಮೇರೆವರಿದಿರುವಾಗ, ಯುವ ಸಮುದಾಯಕ್ಕೆ ಭೌತಿಕ ಪರಿಶ್ರಮ ಮತ್ತು ಬೌದ್ಧಿಕ ಸಂಪನ್ನತೆಯ ಸಮನ್ವಯದ ಮಾರ್ಗಗಳನ್ನು ತೋರಿಸಬೇಕಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತವು ಔದ್ಯೋಗಿಕ ಅವಕಾಶ ಒದಗಿಸುವ ಅನುಭವ ಮತ್ತು ಜ್ಞಾನ ಸೃಷ್ಟಿಯ ಕಮ್ಮಟವಾಗಬೇಕು. ಪುಸ್ತಕ, ಪೆನ್ನು, ಪೆನ್ಸಿಲ್‌ ನಿತ್ಯ ಬಳಸುವ ವಸ್ತುಗಳಾಗಿರುವಂತೆ ಗುದ್ದಲಿ, ಸಲಿಕೆಗಳು ವಿರಳವಾಗಿಯಾದರೂ ಬಳಕೆಯಾಗುವ ಸಲಕರಣೆಗಳಾಗಬೇಕು. ಎತ್ತು, ಎಮ್ಮೆ, ಆಕಳು, ಆಡು, ಕುರಿ, ಕೋಳಿಗಳನ್ನು ಬರೀ ಮೊಬೈಲು, ಟಿ.ವಿ, ಕಂಪ್ಯೂಟರ್‌ನಲ್ಲಷ್ಟೇ ನೋಡುವಂತಾಗಿರುವ ನಮ್ಮ ಹುಡುಗರು, ತಿಂಗಳಿಗೊಮ್ಮೆಯಾದರೂ ಪಶುಪಾಲನಾ ಪ್ರೀತಿಯನ್ನು ಅನುಭವಿಸುವಂತಾಗಬೇಕು.
ಕುಂಡದ ಗಿಡಗಳ ಚಂದದೆದುರು ಸೆಲ್ಫಿ ತೆಗೆದುಕೊಳ್ಳುವ ಹುಡುಗ– ಹುಡುಗಿಯರಿಗೆ ಆಳವಾಗಿ ಬೇರು ಬಿಟ್ಟು ಆಕಾಶದಲ್ಲಿ ಹರಡಿದ ದಟ್ಟ ನೆರಳಿನ ಆನಂದ ದೊರೆಯಬೇಕು. ಮೊಲವನ್ನೋ ನವಿಲನ್ನೋ ಅಮೃತಶಿಲೆಯ ಹಾಸುಗಲ್ಲಿನ ಮೇಲೆ ಓಡಾಡಿಸುವ ಮಾನವ ಪ್ರತಿಷ್ಠೆಯ ಸಂಭ್ರಮಕ್ಕಿಂತ ಗಿಡಪೊದೆಗಳ ನಡುವೆ ಅವುಗಳ ಚಿನ್ನಾಟದ ಸ್ವಾತಂತ್ರ್ಯವನ್ನು ಕಣ್ತುಂಬಿಕೊಳ್ಳುವ ಹೃದಯಕಲೆ ಅರಳಬೇಕು. ಇಂಥ ಸಂಗತಿಗಳು ನಗರದಲ್ಲೂ ಸಾಧ್ಯವಾಗುವಂತೆ ನಗರಾಭಿವೃದ್ಧಿ ನೀತಿಯನ್ನು ಪರಿಷ್ಕರಿಸಬೇಕು.

ಶಿಕ್ಷಣವನ್ನು ಕೇವಲ ಹಣ ಮತ್ತು ಉದ್ಯೋಗ ಸಂಪಾದನೆಗಾಗಿ ಪಡೆಯಬಾರದು, ಆತ್ಮೋನ್ನತಿಗಾಗಿ ಜ್ಞಾನ ಪಡೆಯಬೇಕು ಎಂಬ ಉಪದೇಶವನ್ನು ಕೇಳಲು ಯುವ ಸಮುದಾಯ ತಯಾರಿಲ್ಲ. ಆಧುನಿಕ ಶಿಕ್ಷಣವು ಲೌಕಿಕ ಬದುಕಿನ ಪ್ರಾಮುಖ್ಯವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ಆದರೆ ನ್ಯಾಯದ ಹಾದಿಯಲ್ಲಿ ದಕ್ಕುವ ಸುಖಕ್ಕಾಗಿ ಕಾಯಬೇಕಾಗುತ್ತದೆ. ಅಷ್ಟು ಸಹನೆ ಯಾರಿಗೆ ಬೇಕಾಗಿದೆ? ಅನ್ಯಾಯದ ಅಡ್ಡಹಾದಿಯಲ್ಲಿ ಸುಖ ಥಟ್ಟನೆ ಕೈಗೆಟಕುತ್ತದೆ. ಇರುವೆಯಾಗಿ ಸಕ್ಕರೆ ತಿನ್ನುವ ನಿಧಾನ ನೆಮ್ಮದಿಗಿಂತ ಆನೆಯಾಗಿ ಕಬ್ಬಿನ ಗದ್ದೆಗೆ ನುಗ್ಗುವ ಧಾವಂತವೇ ಇಷ್ಟವಾಗುತ್ತಿದೆ.

ಮಿಂಚುಗಣ್ಣಿನ, ಮುಗಿಲಾಕಾಂಕ್ಷೆಯ, ಸಿಡಿಲಕೋಪದ ತರುಣ– ತರುಣಿಯರಿಗೆ ಅಧ್ಯಾಪಕರು ದಿನನಿತ್ಯ ಮುಖಾಮುಖಿಯಾಗುತ್ತಾರೆ. ಆ ಕಣ್ಣುಗಳಿಂದ ಬೆಳಕನ್ನೂ ಹೊಮ್ಮಿಸಬಹುದು, ಬೆಂಕಿಯನ್ನೂ ಉಗುಳಿಸಬಹುದು. ಸಮಾನತೆಯ ಕನಸುಗಾರನಾದ ಅಧ್ಯಾಪಕ ಮಾತ್ರ ಸದಾ ಹಣತೆ ಹಚ್ಚುತ್ತಾನೆ.

90ರ ದಶಕ ಮುಗಿಯುವವರೆಗೆ ಅಧ್ಯಾಪಕರು ಬಹುಶ್ರುತ ಜ್ಞಾನದಾಹಿಗಳಾಗಿದ್ದರು. ಮಾನವ ಸಂಪನ್ಮೂಲದ ಮಾದರಿಯಂತಿದ್ದರು. ಅಪಾರ ಸಂಖ್ಯೆಯ ಪುಸ್ತಕಗಳ ದೊರೆಗಳಾಗಿದ್ದರು. ಕಾರು, ಬಂಗಲೆಯ ಕೊರಗು ಅವರಿಗಿರಲಿಲ್ಲ. ಸಮಾಜ ‘ಪಾಪ, ಮೇಷ್ಟ್ರು’ ಅಂತ ಸಹಾನುಭೂತಿಯ ಗೌರವ ತೋರುತ್ತಿತ್ತು. ಈಗ ವಸ್ತುಸ್ಥಿತಿ ಸ್ವಲ್ಪ ಬೇರೆಯೇ ಇದೆ. ಅಧ್ಯಾಪಕರ ಆಸಕ್ತಿ ಕೇಂದ್ರಗಳು ಬದಲಾಗಿವೆ. ಇಂತಹ ವಾತಾವರಣದಲ್ಲಿ, ಅಧ್ಯಾಪಕರು ಹೊಸ ಆಯಾಮಗಳಿಗೆ ಸಜ್ಜುಗೊಳ್ಳುತ್ತಾ ಸಮಾಜದ ಕಣ್ಣಿನಲ್ಲಿ ಟೀಚರ್ಸ್ ಚೀಟರ್ಸ್ ಆಗುವ ಅಪಾಯದಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕಾಗಿದೆ. ಸಮಾಜದ ಚಾರಿತ್ರ್ಯವನ್ನು ಸಮಾನತೆಯ ಮೂಲಕವೇ ಕಟ್ಟುವ ಕಾಯಕದಲ್ಲಿ ತಮ್ಮ ಅನನ್ಯವಾದ ಹೊಣೆಗಾರಿಕೆಯನ್ನು ನಿರೂಪಿಸಬೇಕಾಗಿದೆ. ಶಿಕ್ಷಣದ ಮತ್ತು ಶಿಕ್ಷಕರ ಘನತೆಯನ್ನು ಎತ್ತಿ ಹಿಡಿಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT