ಭಾನುವಾರ, ಜನವರಿ 19, 2020
26 °C
ದಾಂದಲೆ ನಡೆಸಿದವರಾರು ಎನ್ನುವುದಕ್ಕಿಂತ, ಇಂಥ ದಾಂದಲೆ ಏಕೆ ನಡೆಯುತ್ತಿದೆ ಎಂದು ಯೋಚಿಸಿದರೆ ಎಲ್ಲಿ ಎಡವಿದ್ದೇವೆ ಎಂಬುದು ಅರ್ಥವಾಗುತ್ತದೆ

ಈ ಅರಾಜಕತೆಗೆ ಯಾರು ಹೊಣೆ?

ನಾ. ದಿವಾಕರ Updated:

ಅಕ್ಷರ ಗಾತ್ರ : | |

Prajavani

ವಿದ್ಯಾರ್ಥಿಗಳು ಈ ದೇಶದ ಭವಿಷ್ಯದ ಆಸ್ತಿ. ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತಳಹದಿ. ವಿದ್ಯಾರ್ಥಿ ದೆಸೆಯಲ್ಲಿನ ಪ್ರತಿಯೊಂದು ಹೆಜ್ಜೆಯೂ ಭವಿಷ್ಯದ ಪೀಳಿಗೆಯ ಹೆಜ್ಜೆಗಳನ್ನು ನಿರ್ಧರಿಸುತ್ತದೆ. ಇಂತಹ ಯುವ ಮನಸ್ಸುಗಳಲ್ಲಿ ವಿಷಬೀಜಗಳನ್ನು ಬಿತ್ತುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನೇ ಹಾಳುಗೆಡಹುವ ವಿಕೃತಿಯನ್ನು ಸೃಷ್ಟಿಸುವಲ್ಲಿ ಈ ದೇಶದ ದ್ವೇಷ ರಾಜಕಾರಣ ಯಶಸ್ವಿಯಾಗಿದೆ. ಇದರ ಒಂದು ತುಣುಕನ್ನು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಕಾಣುತ್ತಿದ್ದೇವೆ.

ದೇಶದ ರಾಜಧಾನಿಯಲ್ಲಿರುವ ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯದ ಆವರಣದೊಳಗೆ ಮುಸುಕುಧಾರಿ ಪುಂಡರು ಆಯುಧಗಳೊಡನೆ ಪ್ರವೇಶಿಸುತ್ತಾರೆ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಥಳಿಸುತ್ತಾರೆ, ಇಪ್ಪತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಳ್ಳುತ್ತಾರೆ, ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ, ಎಡಪಂಥೀಯ ವಿಚಾರಧಾರೆಯ ಆಯಿಷಿ ಘೋಷ್, ಉಪನ್ಯಾಸಕಿ ಸುಚರಿತಾ ಸೇನ್ ಅವರ ತಲೆಯಿಂದ ರಕ್ತ ಸುರಿಯುವಂತೆ ಹೊಡೆಯಲಾಗುತ್ತದೆ, ಹಾಸ್ಟೆಲ್ ಒಳಕ್ಕೆ ನುಗ್ಗಿ ದಾಂದಲೆ ಮಾಡಲಾಗುತ್ತದೆ, ವಾಹನಗಳನ್ನು ಜಖಂ ಮಾಡಲಾಗುತ್ತದೆ, ಗಾಜುಗಳು ಪುಡಿಯಾಗುತ್ತವೆ. ಇಷ್ಟೆಲ್ಲ ದಾಂದಲೆ ನಡೆದರೂ ಆಡಳಿತ ವ್ಯವಸ್ಥೆಯಾಗಲೀ ಜೆಎನ್‌ಯು ಕುಲಪತಿಯಾಗಲೀ ಪೊಲೀಸರಿಗೆ ದೂರು ನೀಡಲು ಎರಡು ಗಂಟೆ ವಿಳಂಬ ಮಾಡುತ್ತಾರೆ. ವಿಶ್ವವಿದ್ಯಾಲಯದ ಗೇಟುಗಳು ಬಂದ್ ಆಗಿರುತ್ತವೆ. ದುಷ್ಕರ್ಮಿಗಳು ಒಳಕ್ಕೆ ಬಂದದ್ದಾದರೂ ಹೇಗೆ? ಭದ್ರತಾ ತಪಾಸಣೆ ಇಲ್ಲದೆ ಮಾರಕಾಸ್ತ್ರಗಳನ್ನು ಒಳಕ್ಕೆ ಕೊಂಡೊಯ್ದಿದ್ದಾದರೂ ಹೇಗೆ? ಅಲ್ಲಿ ಹಾಸ್ಟೆಲ್‌ ಶುಲ್ಕ ಏರಿಕೆ, ಪೌರತ್ವ (ತಿದ್ದುಪಡಿ) ಕಾಯ್ದೆ ಮುಂತಾದ ವಿಷಯಗಳ ವಿರುದ್ಧ ವಿದ್ಯಾರ್ಥಿಗಳು ದನಿ ಎತ್ತಿದ್ದರು. ಅದಕ್ಕೂ ಈ ದಾಂದಲೆಗೂ ಸಂಬಂಧ ಇದೆಯೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.

ಆಡಳಿತ ವ್ಯವಸ್ಥೆ ನಿಷ್ಕ್ರಿಯವಾದರೆ ಇದೆಲ್ಲ ಸಾಧ್ಯವಾಗುತ್ತದೆ, ಇಲ್ಲವಾದರೆ ವ್ಯವಸ್ಥಿತ ಷಡ್ಯಂತ್ರಕ್ಕೆ ಆಡಳಿತ ವ್ಯವಸ್ಥೆಯು ಮೌನ ಸಮ್ಮತಿ ನೀಡಿದರೆ ಸಾಧ್ಯವಾಗುತ್ತದೆ. ಮುಷ್ಕರ, ಪ್ರತಿರೋಧ, ಪ್ರತಿಭಟನೆ ನಡೆಸುವುದೇ ದೇಶದ್ರೋಹ ಎಂಬ ಭಾವನೆಯನ್ನು ಬಿತ್ತುವ ಮೂಲಕ ಪ್ರತಿರೋಧದ ದನಿಗಳನ್ನು ಹಿಂಸಾತ್ಮಕ ಮಾರ್ಗ ಅನುಸರಿಸಿ ಹತ್ತಿಕ್ಕಲು, ದನಿ ಎತ್ತುವವರ ಮೇಲೆ ದೈಹಿಕ ಹಲ್ಲೆ ನಡೆಸುವ ಮೂಲಕ ಸುಮ್ಮನಾಗಿಸಲು ಪರವಾನಗಿ ನೀಡಿರುವ ಫಲವನ್ನು ಜೆಎನ್‌ಯು ಆವರಣದಲ್ಲಿ ಕಾಣುತ್ತಿದ್ದೇವೆ. ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವ ಹೊಣೆಯನ್ನು ನಾಗರಿಕರಿಗೆ ನೀಡುವ ಫಲವನ್ನು ಇಂದು ಉಣ್ಣುತ್ತಿದ್ದೇವೆ. ಸಾಂಸ್ಕೃತಿಕ ಪೊಲೀಸರಾಗಿದ್ದವರು ಇಂದು ನಾಗರಿಕ ಸಮಾಜದ ಪೊಲೀಸರಂತೆ ವರ್ತಿಸುತ್ತಿದ್ದಾರೆ. ಕಾನೂನು ಪಾಲನೆ ಮಾಡಬೇಕಾದ ಸಂರಕ್ಷಕರು ಮೂಕಪ್ರೇಕ್ಷಕ ರಂತೆ ವರ್ತಿಸುವುದನ್ನು ಕಾಣುತ್ತಿದ್ದೇವೆ. ದಾಂದಲೆ ನಡೆಸಿದವರಾರು ಎನ್ನುವುದಕ್ಕಿಂತಲೂ ಈ ರೀತಿಯ ದಾಂದಲೆ ಏಕೆ ನಡೆಯುತ್ತಿದೆ ಎಂದು ಯೋಚಿಸಿದರೆ ನಾವು ಎಲ್ಲಿ ಎಡವಿದ್ದೇವೆ ಎಂದು ಅರ್ಥವಾಗುತ್ತದೆ.

ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ, ಶಾಂತಿಯುತ ಹೋರಾಟಗಳನ್ನೂ ದೇಶದ್ರೋಹದ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುವ ಮೂಲಕ ಭಾರತದ ರಾಜಕೀಯ ವ್ಯವಸ್ಥೆ ಇಂತಹ ವಿಕೃತಿಗಳಿಗೆ ಮನ್ನಣೆ ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ಈ ರೀತಿಯ ಹೊಡಿಬಡಿ ರಾಜಕಾರಣವನ್ನು ಪ್ರೇರೇಪಿಸಿದವರಾರು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ವಿದ್ಯಾರ್ಥಿ ಸಮುದಾಯವನ್ನು ಖಂಡಿಸುತ್ತಾ, ಓದುವ ಹೊತ್ತಿನಲ್ಲಿ ರಾಜಕಾರಣ ಬೇಕೇ ಎಂದು ಪ್ರಶ್ನಿಸಿದ್ದವರು ಈಗಿನ ಗೂಂಡಾಗಿರಿಯ ಬಗ್ಗೆ ಏನು ಹೇಳಬಲ್ಲರು?

ವಿದ್ಯಾರ್ಥಿಗಳು ರಾಜಕಾರಣದಿಂದ ದೂರ ಇರಬೇಕಿಲ್ಲ, ದೇಶದಲ್ಲಿ ನಡೆಯುವ ರಾಜಕೀಯ, ಸಮಾಜೋ ಸಾಂಸ್ಕೃತಿಕ ವಿದ್ಯಮಾನಗಳಿಂದ ದೂರ ಇರಬೇಕಿಲ್ಲ. ಏಕೆಂದರೆ ಇದು ಅವರ ಭವಿಷ್ಯದ ಪ್ರಶ್ನೆ. ಆದರೆ ವಿದ್ಯಾರ್ಥಿಗಳು ದ್ವೇಷ ರಾಜಕಾರಣದಿಂದ, ಮತಾಂಧತೆಯಿಂದ, ಜಾತಿ ಶ್ರೇಷ್ಠತೆಯ ವ್ಯಸನದಿಂದ ದೂರ ಇರಬೇಕಾಗುತ್ತದೆ, ಸಾಂಸ್ಕೃತಿಕ, ಮತಧಾರ್ಮಿಕ ರಾಜಕಾರಣದಿಂದ ದೂರ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಜೆಎನ್‌ಯುನಲ್ಲಿ ನಡೆದಿರುವಂಥ ಘಟನೆಗಳು ಹೆಚ್ಚಾಗುತ್ತಲೇ ಹೋಗುತ್ತವೆ.

ವಿದ್ಯಾರ್ಥಿಗಳು ಗೂಂಡಾಗಿರಿಯಲ್ಲಿ ತೊಡಗುವುದನ್ನು ತಪ್ಪಿಸಲು ಪ್ರಜ್ಞಾವಂತ ನಾಗರಿಕ ಸಮಾಜ ಶ್ರಮಿಸಬೇಕಿದೆ. ವಿದ್ಯಾರ್ಥಿಗಳ ದನಿಯನ್ನು ಆಲಿಸುವ ವ್ಯವಧಾನ ಆಳುವ ವರ್ಗಗಳಲ್ಲಿ ಇಲ್ಲದೇ ಹೋದಾಗ ವಿಕೃತಿಗಳು ಸಂಭವಿಸುತ್ತವೆ. ಈ ದೇಶದ ಏಕತೆ, ಸಮಗ್ರತೆ ಮತ್ತು ಸ್ವಾಸ್ಥ್ಯಕ್ಕಾಗಿ ಹೋರಾಡುವ ಮನಸ್ಸುಗಳು ತಪ್ಪುಗಳನ್ನು ಸರಿಪಡಿಸಲು ಶ್ರಮಿಸುತ್ತವೆ. ಈ ಮನಸ್ಸುಗಳಿಗೆ ಸ್ಪಂದಿಸುವ ಸಂವೇದನೆ ಆಡಳಿತ ವ್ಯವಸ್ಥೆಯಲ್ಲಿ ಇಲ್ಲದೇ ಹೋದರೆ ಪ್ರತಿರೋಧದ ದನಿಗಳೆಲ್ಲವೂ ವಿದ್ರೋಹದಂತೆಯೇ ಕಾಣುತ್ತವೆ. ಆಳುವ ವರ್ಗಗಳ ನೀತಿಗಳೆಲ್ಲವನ್ನೂ ಒಪ್ಪಲೇಬೇಕೆಂದು ಬಯಸುವುದು ಪ್ರಜಾತಂತ್ರ ವ್ಯವಸ್ಥೆಗೆ ಶೋಭಿಸುವುದಿಲ್ಲ ಅಲ್ಲವೇ?‌

ಜೆಎನ್‌ಯು ಆವರಣದಲ್ಲಿ ನಡೆದ ದಾಂದಲೆಗೆ ದಾರಿತಪ್ಪಿದ ಕೆಲವು ಮಕ್ಕಳು ಕಾರಣ ಎನ್ನಬಹುದು. ಆದರೆ ಈ ಮಕ್ಕಳು ದಾರಿ ತಪ್ಪುವಂತೆ ಮಾಡಿದ ಹಿರಿಯರು ನೈತಿಕ ಹೊಣೆ ಹೊರಬೇಕಾಗುತ್ತದೆ. ದ್ವೇಷ ರಾಜಕಾರಣ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯ ವ್ಯಸನ ಈ ದೇಶದ ಯುವ ಪೀಳಿಗೆಯ ನೈತಿಕ ಭ್ರಷ್ಟತೆಗೆ ಕಾರಣವಾಗುತ್ತಿದೆ.

ಪ್ರತಿಕ್ರಿಯಿಸಿ (+)