ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯೇಕೆ ಭೂಮಿ ಮೇಲಿದೆ?

Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚೀನಾದ ತತ್ವಶಾಸ್ತ್ರಜ್ಞ ಲಾವೋ ತ್ಸು ಹೇಳಿದಂತೆ, ‘ಇನ್ನೊಬ್ಬರು ತೋರಿಸುವ ಪ್ರೀತಿ ನಮಗೆ ಶಕ್ತಿಯನ್ನು ಕೊಡುತ್ತದೆ, ನಾವು ಇನ್ನೊಬ್ಬರ ಮೇಲಿಡುವ ಪ್ರೀತಿ ನಮಗೆ ಧೈರ್ಯ ನೀಡುತ್ತದೆ’. ಅಂದರೆ, ಪ್ರೀತಿ ಕೊಡುವವನಿಗೂ ಮತ್ತು ಪಡೆಯುವವನಿಗೂ, ಇಬ್ಬರಿಗೂ ನೆಮ್ಮದಿ ನೀಡುತ್ತದೆ. ಪ್ರೀತಿಯಿಂದ ಗೆಲ್ಲಲಾಗದ್ದನ್ನು ಬೇರೆ ಯಾವುದೇ ಮಾರ್ಗದಿಂದ ಗೆಲ್ಲುವುದು ಅಸಾಧ್ಯ ಎನ್ನುವುದು ಸಾರ್ವಕಾಲಿಕ ಸತ್ಯ. ಪ್ರೀತಿಯು ಮನುಷ್ಯನ ಸಹಜಗುಣ. ಇದೊಂದು ಮುಗ್ಧ, ಕಲ್ಮಶವಿಲ್ಲದ ಭಾವನೆ. ಯಾಕೆಂದರೆ, ಹುಟ್ಟಿದ ಮಗು ಸಹಜವಾಗಿ ತೋರಿಸುವ ಭಾವನೆ, ಪ್ರೀತಿ. ಆನಂತರ ಹಿರಿಯರ ‘ಮಾರ್ಗದರ್ಶನ’ದಂತೆ ಬೇರೆಲ್ಲಾ ಗುಣಗಳನ್ನು ಅಳವಡಿಸಿಕೊಳ್ಳುತ್ತಾ, ಭೇದಭಾವ ಮೈಗೂಡಿಸಿಕೊಳ್ಳುತ್ತದೆ.

ಪ್ರೀತಿಯ ಮೇಲಿನ ಈ ಬೇಡಿ, ಶತಮಾನಗಳಿಂದ ಮನುಷ್ಯ ಕಟ್ಟುತ್ತಾ ಬಂದಿರುವ, ಅತ್ಯಗತ್ಯವಾಗಿ ಬಿಡಿಸಿಕೊಳ್ಳಬೇಕಾದ, ಆದರೆ ಹೊರಬರಲಾರದೆ ಒದ್ದಾಡುತ್ತಿರುವ ಒಂದು ಚಕ್ರವ್ಯೂಹ. ಅಂದರೆ, ಮನುಷ್ಯ ‘ನಾಗರಿಕತೆ’ಯನ್ನು ವಿಸ್ತರಿಸಿಕೊಳ್ಳುತ್ತಾ ತಾನೇ ಸೃಷ್ಟಿಸಿದ ಸಾಮಾಜಿಕ ವ್ಯವಸ್ಥೆಯ ಮುಂದುವರಿಕೆಗಾಗಿ ಜಾತಿ, ಧರ್ಮ, ಪಂಥ, ಜನಾಂಗ, ವಯಸ್ಸು, ಅಂತಸ್ತು ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರೀತಿಸಬೇಕೆನ್ನುವ ಪರಿಧಿ ಸೃಷ್ಟಿಸಿದ್ದಾನಷ್ಟೆ. ಇದರಿಂದಾಗಿ ಪ್ರೀತಿ ಕಮರಿ, ಆ ಜಾಗದಲ್ಲಿ ದ್ವೇಷ, ಅಸೂಯೆ, ನೋವು, ನಿಟ್ಟುಸಿರು, ಹತಾಶೆ, ಸಂಶಯ, ಕೋಪದಂತಹ ನಕಾರಾತ್ಮಕ ಭಾವನೆಗಳಿಗೆ ಆಹ್ವಾನ ನೀಡಿದ್ದೇವೆ ಮತ್ತು ಪ್ರೀತಿಯನ್ನು ಹೂತು ಹಾಕಿದ್ದೇವೆ. ಈ ಬದಲಾದ ಆದ್ಯತೆಗಳಿಂದ ನಾವು ಸಾಧಿಸಿದ್ದಾದರೂ ಏನು?

ಮನಸ್ಸು ವ್ಯಾವಹಾರಿಕವಾಗಿ ಆಲೋಚನೆ ಮಾಡಿದರೆ, ಹೃದಯ ಭಾವನಾತ್ಮಕವಾಗಿ ಮಿಡಿಯುತ್ತದೆ ಎಂದು ದಾರ್ಶನಿಕರು ಹೇಳುವುದಿದೆ. ಅಂದರೆ, ಹೃದಯದಲ್ಲಿ ಹುಟ್ಟುವ ಮುಗ್ಧ ಪ್ರೀತಿಯು ಮನಸ್ಸಿನ ಮಾತು ಕೇಳಿದರೆ, ಪ್ರೀತಿಯ ವ್ಯವಹಾರ ಮಾಡುತ್ತೇವೆ. ಮನಸ್ಸು ಪ್ರೀತಿಸಿದವರ ಜಾತಿ, ಧರ್ಮ, ಅಂತಸ್ತು, ಬಣ್ಣ, ವಯಸ್ಸು, ಮನೆತನ ಇತ್ಯಾದಿಗಳನ್ನು ಪರಿಶೀಲಿಸಿ ಮುಂದುವರಿಯಲು ಸೂಚಿಸಿದರೆ, ಹೃದಯವು ಇವುಗಳ ಎಲ್ಲೆ ಮೀರಿ, ಜೊತೆಯಾಗಿ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸುತ್ತದೆ. ಈ ಎರಡನೆಯ ಮಾರ್ಗದಲ್ಲಿ ನಡೆದವರೇ ಇತಿಹಾಸದ ಪುಟದಲ್ಲಿ ಆದರ್ಶ ಪ್ರೇಮಿಗಳೆಂದು ಅಜರಾಮರ ಆಗಿರುವವರು. ಈ ಪ್ರೀತಿಯ ವ್ಯಾಖ್ಯಾನವನ್ನು ವಿಸ್ತರಿಸಿ, ಬದುಕಿನ ವಿವಿಧ ಘಟ್ಟಗಳಲ್ಲಿ ನಮ್ಮ ಜೊತೆಯಾಗುವ ಎಲ್ಲ ಸಂಬಂಧಗಳಿಗೂ ಅದನ್ನು ಅನ್ವಯಿಸಬಹುದು.

ತತ್ವಶಾಸ್ತ್ರಜ್ಞರು ಹೇಳುವಂತೆ, ತನ್ನನ್ನು ತಾನು ಪ್ರೀತಿಸದ ಮನುಷ್ಯ ಇನ್ನೊಬ್ಬರನ್ನು ಮನಃಪೂರ್ವಕವಾಗಿ ಪ್ರೀತಿಸಲಾರ. ಕೆಲವೊಮ್ಮೆ ಗಾಢವಾಗಿ ಪ್ರೀತಿಸಿ ಮದುವೆಯಾದವರು, ವಾಸ್ತವ ಬದುಕಿನ ಜಂಜಾಟದಲ್ಲಿ ಕುಸಿದುಹೋಗಿ ವಿಚ್ಛೇದನ ಪಡೆಯುವುದನ್ನು ಕಾಣುತ್ತೇವೆ. ಹಾಗಿದ್ದಲ್ಲಿ, ನಮ್ಮ ಪೂರ್ವಜರು ವೈವಾಹಿಕ ಜೀವನದಲ್ಲಿ ಸಂತೋಷವಾಗಿದ್ದರೇ ಎಂದರೆ, ಸ್ಪಷ್ಟ ಉತ್ತರ ಸಿಗಲಾರದು. ಯಾಕೆಂದರೆ, ನಮ್ಮ ಹಿರಿಯರಿಗೆ ಮದುವೆ ಒಂದು ಸಾಮಾಜಿಕ ಜವಾಬ್ದಾರಿಯೇ ಹೊರತು ಅದು ಪ್ರೀತಿಯ ದ್ಯೋತಕವೆಂದು ಅಂದುಕೊಂಡಿರಲಿಕ್ಕಿಲ್ಲ. ಇಲ್ಲಿ ವಂಶ ಪರಂಪರೆ ಮುಂದುವರಿಯಲು ಎರಡು ದೇಹಗಳ ಮಿಲನದ ಅಗತ್ಯವಿತ್ತೇ ಹೊರತು ಮನಸ್ಸುಗಳ ಕೂಡುವಿಕೆಯಲ್ಲ. ಹಾಗಾಗಿಯೇ ಹೆಚ್ಚಿನ ದಂಪತಿಗಳು ಪ್ರಥಮ ಬಾರಿ ಪರಸ್ಪರ ಮುಖ ನೋಡುತ್ತಿದ್ದುದು ಮದುವೆಯ ದಿನವಷ್ಟೇ. ಇಂತಹ ವ್ಯವಸ್ಥೆಯ ನಡುವೆ, ಹೆಚ್ಚಿನ ಸಂದರ್ಭದಲ್ಲಿ ಪ್ರೀತಿಯು ಮದುವೆಯ ಒಳಗೆ ದೊರೆಯುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಂದು ವೇಳೆ ಹೊರಗೆ ದೊರಕಿದರೂ ಪಡೆಯುವ ಧೈರ್ಯವಿಲ್ಲದೆ, ಸಾಮಾಜಿಕ ಕಟ್ಟಲೆಗಳಿಂದ ಹೊರಬರಲಾರದೆ ಒದ್ದಾಡುತ್ತಾ ನಿಟ್ಟುಸಿರಿನಲ್ಲಿಯೇ ಜೀವನ ಪ್ರಯಾಣ ಮುಗಿಸಿಬಿಡುತ್ತೇವೆ. ಬಹುಶಃ, ಈ ಜನ್ಮದಲ್ಲಿ ಪಡೆಯಲಾಗದ ಪ್ರೀತಿಯನ್ನು ಮುಂದೆಂದಾದರೂ ಪಡೆಯುವ ಹುಸಿ ಭರವಸೆ ನೀಡುವ ನಿಟ್ಟಿನಲ್ಲಿ, ಮರುಜನ್ಮಗಳ ಕಲ್ಪನೆಯನ್ನು ನಮ್ಮ ಹಿರಿಯರು ಮಾಡಿರಬಹುದು.

ಪರಸ್ಪರ ಪ್ರೀತಿಸಲಾಗದ ಎರಡು ಜೀವಗಳು ಸಂಸಾರದ ಚೌಕಟ್ಟಿನೊಳಗೆ ನಿಟ್ಟುಸಿರುಬಿಡುತ್ತ, ಮಕ್ಕಳ ಹೆಸರಲ್ಲಿ ಅಥವಾ ಸಂಬಂಧಿಕರ ಒತ್ತಾಸೆಗೆ ಒಳಪಟ್ಟು ಒಟ್ಟಿಗೆ ಜೀವನ ಸಾಗಿಸಬೇಕು ಎನ್ನುವುದು ಎಷ್ಟು ಸಮಂಜಸ? ಸಂಸಾರದಲ್ಲಿ ಪರಕೀಯತೆ ಅನುಭವಿಸುತ್ತಾ, ತಮ್ಮ ಆಸೆ, ಅಭಿಲಾಷೆ, ಸಂತೋಷ, ದುಃಖ, ನೋವನ್ನು ಹಂಚಿಕೊಳ್ಳಲು ಹೊರಗಿನ ಸಾಂಗತ್ಯ ಅನಿವಾರ್ಯವೆನಿಸಿದರೆ, ಅದಕ್ಕೆ ದಾಂಪತ್ಯ ಎನ್ನಬಹುದೇ? ಮನುಷ್ಯ ಕಟ್ಟಿಕೊಂಡ ಎಲ್ಲ ವ್ಯವಸ್ಥೆಗಳ ಹಿಂದೆ ಆಯಾ ಕಾಲಘಟ್ಟದ ಸಾಂದರ್ಭಿಕ ಅನಿವಾರ್ಯಗಳಿವೆ. ಕೂಡು ಕುಟುಂಬದ ಜಾಗದಲ್ಲಿ ಚಿಕ್ಕ ಸಂಸಾರ ಬಂದಿರುವ ಈ ಕಾಲಘಟ್ಟದಲ್ಲಿ ಪ್ರೀತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ದಂಪತಿ ಸ್ನೇಹಿತರಾಗದಿದ್ದರೆ, ಸಂಸಾರದಲ್ಲಿ ಸ್ವಾರಸ್ಯವಿಲ್ಲ.

ಜಗತ್ತಿನ ಉಳಿವು ಸಹ ಪ್ರೀತಿಯ ಮೇಲೆ ನಿಂತಿದೆ. ಸಕಲ ಚರಾಚರ ಜೀವಿಗಳಿಗೂ ಪ್ರೀತಿ ಬೇಕು. ಅಂತಹ ಪ್ರೀತಿಯನ್ನು ನಾವು ತೋರಿಸಿದ್ದಲ್ಲಿ, ಜಗತ್ತಿನ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು. ಹಾಗಾಗಿ, ಪ್ರೀತಿಯನ್ನು ಬದುಕಿರುವಾಗಲೇ ವ್ಯಕ್ತಪಡಿಸೋಣ, ಹೃದಯದಲ್ಲಿ ಮುಚ್ಚಿಟ್ಟು ಗೋರಿಯವರೆಗೆ ಕೊಂಡೊಯ್ಯದಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT