ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಮಹಿಳಾ ವಿಶ್ವ ವಿದ್ಯಾಲಯಕ್ಕೆ ಬೇಕಿದೆ ಕಾಯಕಲ್ಪ

ಶಿಕ್ಷಣದ ಮೂಲಕ ಮಹಿಳೆಯರ ಸರ್ವಾಂಗೀಣ ಸಬಲೀಕರಣದ ಗುರಿಯನ್ನು ಹೊಂದಿರುವ ಈ ವಿಶ್ವವಿದ್ಯಾಲಯವು ಮೂರು ನೆಲೆಯ ಸವಾಲುಗಳನ್ನು ಎದುರಿಸುತ್ತಿದೆ
Last Updated 27 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯವನ್ನು ವಿಜಯಪುರದಲ್ಲಿ ಆರಂಭಿಸುವಾಗ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಹದಿಮೂರು ಜಿಲ್ಲೆಗಳ ವ್ಯಾಪ್ತಿ ನಿಗದಿಯಾಗಿತ್ತು. ಕರ್ನಾಟಕ ಸರ್ಕಾರವು 2017ರಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿ ರಾಜ್ಯಪತ್ರವನ್ನು ಹೊರಡಿಸಿತು. ಅದರ ಪ್ರಕಾರ, ಎಲ್ಲಾ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯಗಳು ಮತ್ತು ಇನ್ನು ಮುಂದೆ ಆರಂಭವಾಗುವ ಮಹಿಳಾ ಪದವಿ ಮಹಾ ವಿದ್ಯಾಲಯಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರಬೇಕಿತ್ತು. ಆದರೆ ಈ ಆದೇಶ ಕಾಗದದಲ್ಲಿ ಮಾತ್ರ ಉಳಿದಿದ್ದು, ಇನ್ನೂ ಆಡಳಿತಾತ್ಮಕವಾಗಿ ಜಾರಿ ಆಗಿಲ್ಲ.

ದೂರದೂರದ ಕಾಲೇಜುಗಳ ಜೊತೆ ಆಡಳಿತಾತ್ಮಕ ದೂರವನ್ನು ಪ್ರಾದೇಶಿಕ ಕೇಂದ್ರಗಳ ಸ್ಥಾಪನೆಯ ಮೂಲಕ ನಿವಾರಿಸುವ ಸಿದ್ಧತೆಯೂ ಆಗಿತ್ತು. ಈಗಾಗಲೇ ಮಹಿಳಾ ವಿಶ್ವವಿದ್ಯಾಲಯವು ಮಂಡ್ಯ, ಸಿಂಧನೂರು (ರಾಯಚೂರು ಜಿಲ್ಲೆ) ಮತ್ತು ಉಡುತಡಿಗಳಲ್ಲಿ (ಶಿವಮೊಗ್ಗ ಜಿಲ್ಲೆ) ಪ್ರಾದೇಶಿಕ ಮತ್ತು ಹೊರಾವರಣ ಕೇಂದ್ರಗಳನ್ನು ಹೊಂದಿದೆ. ಈ ಭೌಗೋಳಿಕ ವ್ಯಾಪ್ತಿ ಮತ್ತು ವಿಶ್ವವಿದ್ಯಾಲಯ ಸ್ಥಾಪನೆಯ ಧ್ಯೇಯೋದ್ದೇಶದ ಮೂಲಕವೇ ನಾವು ಅದರ ಕಾಯಕಲ್ಪದ ಕುರಿತು ಮಾತನಾಡಬೇಕಾಗಿದೆ.

ಶಿಕ್ಷಣದ ಮೂಲಕ ಮಹಿಳೆಯರ ಸರ್ವಾಂಗೀಣ ಸಬಲೀಕರಣದ ಗುರಿಯನ್ನು ಹೊಂದಿರುವ ಈ ವಿಶ್ವವಿದ್ಯಾಲಯವು ಮೂರು ನೆಲೆಯ ಸವಾಲುಗಳನ್ನು ಎದುರಿಸುತ್ತಿದೆ. ಮೊದಲನೆಯದು, ಶೈಕ್ಷಣಿಕವಾಗಿ ಇತರ ವಿಶ್ವವಿದ್ಯಾಲಯಗಳಂತೆ ಪದವಿ, ಸ್ನಾತಕ ಪದವಿ ಮತ್ತು ಸಂಶೋಧನೆ ಕೋರ್ಸುಗಳನ್ನು ನಡೆಸುವುದು. ಇದರಲ್ಲಿ ಪಾಠಪಠ್ಯ (ಸಿಲೆಬಸ್) ತಯಾರಿಯಲ್ಲಿ ಲಿಂಗಸೂಕ್ಷ್ಮತೆ, ಮಹಿಳಾ ಸಬಲೀಕರಣದ ಮಾದರಿ ನೀಡಿಕೆ ಮತ್ತು ಎಲ್ಲಾ ಜ್ಞಾನ ಶಿಸ್ತುಗಳಲ್ಲಿ ಮಹಿಳಾ ಲೋಕದೃಷ್ಟಿಯ ವಿನ್ಯಾಸ ತಿಳಿಸುವ, ಬೆಳೆಸುವ ಕ್ರಮವನ್ನು ವಿಶ್ವವಿದ್ಯಾಲಯ ಜಾರಿಯಲ್ಲಿಟ್ಟಿದೆ.

ಎರಡನೆಯದು, ತನ್ನ ಸ್ಥಾಪನೆಯ ಧ್ಯೇಯೋ ದ್ದೇಶದ ಈಡೇರಿಕೆಗೆ ಶಿಕ್ಷಣದ ಸಿದ್ಧಚೌಕಟ್ಟಿನ ಮಾದರಿಗಳನ್ನು ಮುರಿದು ಕಟ್ಟುವ ಬಗೆಯನ್ನು ಶೋಧಿಸುವುದಾಗಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯ ಗಳಲ್ಲಿ ಇರುವ ಮಹಿಳಾ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆಯಷ್ಟು ವಿದ್ಯಾರ್ಥಿನಿಯರನ್ನು ಮಹಿಳಾ ವಿಶ್ವವಿದ್ಯಾಲಯ ಒಂದರಲ್ಲೇ ಕಾಣಬಹುದು. ಇಲ್ಲಿನ ಎಲ್ಲ ಸಂಶೋಧನಾ ಮಹಾಪ್ರಬಂಧಗಳು ಹಾಗೂ ಸಂಶೋಧನಾ ಯೋಜನೆಗಳು, ಆದಿವಾಸಿ, ಅಲೆಮಾರಿ, ಗ್ರಾಮೀಣ, ಅಸಂಘಟಿತ ವಲಯದ ಮಹಿಳೆಯರ ಸಮಸ್ಯೆಗಳು, ಅವರ ಆರೋಗ್ಯ, ಪೌಷ್ಟಿಕತೆ, ಸಾಮಾಜಿಕ– ರಾಜಕೀಯ ಪಾಲ್ಗೊಳ್ಳುವಿಕೆ, ಆರ್ಥಿಕ ಸ್ಥಿತಿಗತಿಗಳ ಕುರಿತು ಬೆಳಕು ಚೆಲ್ಲುತ್ತವೆ.

ಯೋಜನೆಗಳು ಮತ್ತು ಮಹಾಪ್ರಬಂಧಗಳು ರಾಜಕೀಯ ರಂಗದಲ್ಲಿ ನೀತಿ ನಿರೂಪಣೆ ಮಾಡುವಲ್ಲಿ ಗಣನೀಯ ಕೊಡುಗೆಯನ್ನು ನೀಡಿವೆ. ಇಂತಹ ಕಾರ್ಯಕ್ರಮ ಮತ್ತು ಯೋಜನೆಗಳು ಅನುದಾನದ ಕೊರತೆಯನ್ನು ಎದುರಿಸುತ್ತಿವೆ. ಈ ಕೊರತೆಯನ್ನು ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುದಾನ ಬಿಡುಗಡೆ ಮಾಡುವ ಮೂಲಕ ಪರಿಹರಿಸಬಹುದು. ಇದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಮಾತ್ರ.

ಮೂರನೆಯದು, ಈ ವಿಶ್ವವಿದ್ಯಾಲಯವು ಹತ್ತರಲ್ಲಿ ಒಂದು ಅಷ್ಟೇ ಎಂಬ ಸರ್ಕಾರದ ಧೋರಣೆಯನ್ನು ಪರಾಮರ್ಶಿಸಿಕೊಳ್ಳುವಂತೆ ಒತ್ತಾಯಿಸಿ, ವಿಶೇಷ ಸ್ಥಾನಮಾನಕ್ಕಾಗಿ ಪ್ರಯತ್ನಿಸುವುದು.

ಮಹಿಳಾ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಧಾನಸಭೆಯ ‘ಭರವಸೆ ಸಮಿತಿ’ಯ ಸಹಕಾರವನ್ನು ನೆನಪಿಸಿಕೊಳ್ಳಬೇಕು. ಅರುಣ್ ಶಹಾಪುರ, ಬಸವರಾಜ ಹೊರಟ್ಟಿ ಮುಂತಾದವರ ಆಸ್ಥೆಯಿಂದ ಸಮಿತಿಯ ಸಭೆಯು ವಿಶ್ವವಿದ್ಯಾಲಯದಲ್ಲಿ 2019ರಲ್ಲಿ ನಡೆದಿತ್ತು. ಆಗ ಭರವಸೆ ಸಮಿತಿಯು ನೀಡಿದ ಶಿಫಾರಸುಗಳು ಅನುಷ್ಠಾನಕ್ಕೆ ಬಂದಲ್ಲಿ ಕಾಯಕಲ್ಪ ಖಂಡಿತ ಸಾಧ್ಯವಿದೆ. ಮುಖ್ಯವಾಗಿ ಇದಕ್ಕೂ ಸರ್ಕಾರದ ಇಚ್ಛಾಶಕ್ತಿ ಬೇಕಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರವು ವಿಶ್ವವಿದ್ಯಾಲಯಕ್ಕೆ ನೀಡುತ್ತಿದ್ದ ಅಭಿವೃದ್ಧಿ ಅನುದಾನ ಕುಸಿತ ಕಂಡಿದೆ. ಎಲ್ಲವನ್ನೂ ಆಂತರಿಕ ಸಂಪನ್ಮೂಲದಿಂದ ಕೈಗೊಳ್ಳುವಂತೆ ಹೇಳಲಾಗುತ್ತಿದೆ. ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಸಂಖ್ಯೆ ನಾಲ್ಕೈದು ಪಟ್ಟು ಕಡಿಮೆ. ವ್ಯಾಪ್ತಿ ನಾಲ್ಕೈದು ಪಟ್ಟು ಹೆಚ್ಚು. ಇದರಿಂದ ಆಡಳಿತಾತ್ಮಕ ಹೊರೆ ಅಧಿಕ. ಕಾಯಂ ಶಿಕ್ಷಕೇತರ ಸಿಬ್ಬಂದಿಯಿಲ್ಲದ ಕೊರತೆಯಿಂದ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಿದೆ. ಇಂಥ ವಿಶಿಷ್ಟ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಮಾಡಿದ ಪ್ರಯತ್ನಗಳು ಯಶಸ್ಸು ಕಂಡಿಲ್ಲ.

ಮೇಲಿನ ವಿಚಾರಗಳ ಜೊತೆ ಮಹಿಳಾ ಮಹಾ ವಿದ್ಯಾಲಯಗಳಲ್ಲಿ ಯುಜಿಸಿ ಮಾರ್ಗಸೂಚಿಯಂತೆ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪನೆ, ಐಚ್ಛಿಕ ಮಹಿಳಾ ಅಧ್ಯಯನ ಪತ್ರಿಕೆಯ ಆರಂಭ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ‘ಮಹಿಳಾ ಅಧ್ಯಯನ’ ಓದಿದ ವರಿಗೆ ಉದ್ಯೋಗಾವಕಾಶ ವಿಸ್ತರಿಸುವುದು ಹಾಗೂ ಬಹುಮುಖ್ಯವಾಗಿ ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ನಿರ್ದಿಷ್ಟ ಮೊತ್ತವನ್ನು ಮಹಿಳೆ ಮತ್ತು ಮಕ್ಕಳ ವಿವಿಧ ಕಾರ್ಯಕ್ರಮ ಹಾಗೂ ಸಂಶೋಧನಾ ಯೋಜನೆಗಳಿಗೆ ನಿರಂತರವಾಗಿ ನೀಡುವುದರಿಂದ ಕಾಯಕಲ್ಪ ನೀಡಿದಂತೆ ಆಗುತ್ತದೆ.

ಲೇಖಕಿ: ವಿಶ್ರಾಂತ ಕುಲಪತಿ, ಕರ್ನಾಟಕ ರಾಜ್ಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT