ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಪುಸ್ತಕದಿಂದ ಬಂದೀತೇ ಸಂವಿಧಾನದ ಅರಿವು?!

ಸಂವಿಧಾನದ ಪ್ರತಿಗಳನ್ನು ಗ್ರಂಥಾಲಯಗಳಿಗೆ ತಲುಪಿಸಿದ ಮಾತ್ರಕ್ಕೆ ಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡುತ್
Last Updated 27 ನವೆಂಬರ್ 2022, 19:30 IST
ಅಕ್ಷರ ಗಾತ್ರ

‘ಸಂವಿಧಾನದ ಕುರಿತು ಗ್ರಾಮೀಣ ಪ್ರದೇಶಗಳಲ್ಲಿಯೂಅರಿವು ಮೂಡಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಸಂವಿಧಾನದ ಪ್ರತಿಗಳನ್ನು ಪೂರೈಸಲಾಗುವುದು’ ಎಂದಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ವಿಧಾನಸೌಧದ ಆವರಣದಲ್ಲಿ ಇದೇ 26ರಂದು ನಡೆದ ‘ರಾಷ್ಟ್ರೀಯ ಸಂವಿಧಾನ ದಿನ’ದ ಆಚರಣೆಯ ಸಂದರ್ಭದಲ್ಲಿ ಅವರು ನಮ್ಮ ಸಂವಿಧಾನದ ಶ್ರೇಷ್ಠತೆಯ ಗುಣಗಾನ ಮಾಡಿದ್ದಾರೆ.

ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜನಜೀವನದ ಪ್ರತಿಯೊಂದು ಆಯಾಮವನ್ನೂ ರೂಪಿಸುವ, ಕಾಯುವ ಮತ್ತು ಆ ಕಾರಣಕ್ಕಾಗಿ ಪ್ರತಿಯೊಬ್ಬರೂ ಮೂಲಭೂತ ಅಂಶಗಳನ್ನಾದರೂ ತಿಳಿದಿರಬೇಕಾದ ಸಂವಿಧಾನದ ಪ್ರತಿಗಳು ಎಲ್ಲಿಯೂ ಲಭ್ಯವಿಲ್ಲ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ನೆರವಿನೊಂದಿಗೆ ‘ಭಾರತದ ಸಂವಿಧಾನ’ ಇಂಗ್ಲಿಷ್- ಕನ್ನಡ ದ್ವಿಭಾಷಾ ಆವೃತ್ತಿಯು (14 ಜನವರಿ 2019ರಂದು ಇದ್ದಂತೆ) ಇತ್ತೀಚೆಗೆ ಪ್ರಕಟವಾಗಿದೆ. ಎ4 ಅಳತೆಯಲ್ಲಿರುವ 716 ಪುಟಗಳ ಈ ಬೃಹತ್ ಹೊತ್ತಿಗೆಯ ಎಷ್ಟು ಪ್ರತಿಗಳನ್ನು ಮುದ್ರಿಸಲಾಗಿದೆ, ಮಾರಾಟದ ಬೆಲೆ ಎಷ್ಟು, ಎಲ್ಲಿ ಲಭ್ಯ ಎಂಬಂಥ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ ನಾವು ಕೇಳಿದರೂ ಪುಸ್ತಕ ಮಾರಾಟಗಾರರು ಇದನ್ನು ತರಿಸಿ, ಮಾರುವ ಸಾಹಸಕ್ಕೆ ಕೈಹಾಕುವುದಿಲ್ಲ.

ನಾಗಾಭರಣ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸರ್ವ ಸದಸ್ಯರ ಸಭೆಯೊಂದರಲ್ಲಿ ಒಬ್ಬ ಸದಸ್ಯರು ಈ ಆವೃತ್ತಿಯ ಕನ್ನಡ ಪಠ್ಯವನ್ನು ಮಾತ್ರ ಪ್ರತ್ಯೇಕಿಸಿ, ಪ್ರಕಟಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಮಾಡಿದ ಪ್ರಸ್ತಾಪವನ್ನು ಇಡೀ ಸಭೆ ಸ್ವಾಗತಿಸಿತು. ಆದರೆ, ಅದನ್ನು ಕಾರ್ಯಗತಗೊಳಿಸುವುದು ಪ್ರಾಧಿಕಾರದ ಆದ್ಯತೆ ಆಗಲೇ ಇಲ್ಲ. ಇದೇ ರೀತಿ, ಸಂವಿಧಾನದ ‘ಪ್ರಸ್ತಾವನೆ’ಯ ಕನ್ನಡ ಆವೃತ್ತಿಯ ಫೋಟೊವನ್ನು ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಹಾಕಿಸಬೇಕು, ಆ ಕಾರ್ಯ ವಿಧಾನಸೌಧದಿಂದಲೇ ಆರಂಭವಾಗಬೇಕು ಎಂದು ಶಿಫಾರಸು ಮಾಡಬೇಕೆಂದು ಇದೇ ಸದಸ್ಯರು ನೀಡಿದ್ದ ಪ್ರಸ್ತಾವವೂ ಅನುಮೋದನೆಗೊಂಡಿತು. ಆದರೂ, ವಿಧಾನಸೌಧದ ಕಚೇರಿಗಳ ಗೋಡೆಗಳಲ್ಲಿ ಸಂವಿಧಾನದ ಪ್ರಸ್ತಾವನೆಗೆ ಮಾತ್ರ ಈಗಲೂ ಜಾಗ ಸಿಕ್ಕಿಲ್ಲ.

ಸಂವಿಧಾನ ದಿನಾಚರಣೆಯ ಒಂದು ಭಾಗ ಎಂಬಂತೆ ನಡೆದ ಕಾರ್ಯಕ್ರಮದಲ್ಲಿ ‘ಸಂವಿಧಾನದ ಪ್ರಕಾರವೇ ನಡೆದುಕೊಳ್ಳುವುದಾಗಿ’ ಸಚಿವರು, ಅಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು ಎಂಬ ಸುದ್ದಿ ಇದೆ. ನಮ್ಮ ಜನಪ್ರತಿನಿಧಿಗಳು ಮತ್ತು ಅವರ ಅನುಯಾಯಿಗಳು ದೇಶದಲ್ಲಿ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ಈ ತರಹದ ಸೋಗಿನ ಪ್ರಮಾಣವಚನಕ್ಕೆ ಏನಾದರೂ ಬೆಲೆಯಿದೆಯೇ ಎಂಬ ಅನುಮಾನ ಬರುತ್ತದೆ. ನಿಜವಾಗಿಯೂ ಸಂವಿಧಾನದ ಮೌಲ್ಯಗಳ ಅರಿವಿನ ತೀವ್ರ ಅಗತ್ಯವಿರುವುದು ಇವರಿಗೇ.

ಇನ್ನು, ಗ್ರಾಮ ಪಂಚಾಯಿತಿ ಗ್ರಂಥಾಲಯ ಗಳಿಗೆ ಸಂವಿಧಾನದ ಪ್ರತಿಗಳನ್ನು ಉಚಿತವಾಗಿ ಹಂಚುವುದರಿಂದ ಇನ್ನೊಂದಷ್ಟು ಕೋಟಿ ಹಣವನ್ನು ಸರ್ಕಾರ ವ್ಯರ್ಥ ಮಾಡಿದಂತೆಯೇ ಸರಿ. ಸಂವಿಧಾನದ ಮೂಲ ಪ್ರತಿಯನ್ನು ಓದಿದ್ದ ಯಾರಿಗಾದರೂ ಗೊತ್ತಾಗುತ್ತದೆ, ಕನ್ನಡದ ಆವೃತ್ತಿಯಲ್ಲಿಯೂ ಕನ್ನಡ
ದವರಿಗೇ ಅದು ಓದಿಸಿಕೊಂಡು ಹೋಗುವಂತೆ ಇಲ್ಲ ಎಂಬುದು. ಅದರ ಅಡಿಟಿಪ್ಪಣಿಗಳು ಹಿಂದಿ ಆವೃತ್ತಿಯ ಯಥಾವತ್ ಅನುವಾದವಾಗಿರುವುದ ರಿಂದ ಎದ್ದು ಕಾಣುವ ಕೃತ್ರಿಮತೆ ಓದಿಗೆ ಅಡ್ಡಿಯನ್ನು ಉಂಟುಮಾಡುತ್ತದೆ. ಇದನ್ನು ಗಮನಿಸಿದ ಲಡಾಯಿ ಪ್ರಕಾಶನವು ಇದೀಗ ‘ಸರಳ ಓದಿಗಾಗಿ ಸಂವಿಧಾನ’ ಎಂಬ ಆವೃತ್ತಿಯನ್ನು ಪ್ರಕಟಿಸಿದೆ. ಕೊನೆಯ ಪಕ್ಷ ಇದಾದರೂ ಅಂಗಡಿಗಳಲ್ಲಿ ಲಭ್ಯವಾಗುತ್ತದೆ. ಹೀಗಾಗಿ, ಸರ್ಕಾರವು ಸಾಮಾನ್ಯ ಸುಶಿಕ್ಷಿತರೂ ಸುಗಮವಾಗಿ ಓದಿ ಅರ್ಥ ಮಾಡಿಕೊಳ್ಳಲು ಕಷ್ಟವಾಗುವ ಸಂವಿಧಾನದ ಪ್ರತಿಗಳು ಯಾರೂ ಓದದೇ ಕೊಳೆಯುವಂತೆ ಮಾಡುವ ಬದಲಿಗೆ, ಸಂವಿಧಾನದ ಮೂಲ ಆಶಯವಿರುವ ಪ್ರಸ್ತಾವನೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ಮತದಾನದ ಹಕ್ಕು, ಚುನಾವಣೆಗಳ ಮಹತ್ವದಂಥ, ಸಾರ್ವಜನಿಕರಿಗೆನೇರವಾಗಿ ಸಂಬಂಧಪಟ್ಟ ಭಾಗಗಳನ್ನು ಮಾತ್ರ ವಿವರಿಸಿ, ಉಳಿದ ಭಾಗಗಳ ಶೀರ್ಷಿಕೆ ಮತ್ತು ಸಾರಾಂಶವನ್ನಷ್ಟೇ ಕೊಡುವಂಥ ಅಧಿಕೃತ ಜನಪ್ರಿಯ ಆವೃತ್ತಿ ಗಳನ್ನು ಕಡಿಮೆ ಬೆಲೆಗೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಹೆಚ್ಚು ಉಪಯುಕ್ತವಾದೀತು.

ಸಂವಿಧಾನದ ಪ್ರತಿಗಳು ಲಭ್ಯವಿದ್ದ ಕೂಡಲೇ ಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡುತ್ತದೆ ಎನ್ನುವುದೂ ತಪ್ಪುಗ್ರಹಿಕೆಯಾಗುತ್ತದೆ. ಮಹಾತ್ಮರು, ಸಾಧಕರ ಬಾನೆತ್ತರದ ಪ್ರತಿಮೆಗಳನ್ನು
ನಿಲ್ಲಿಸುವ ಮೂಲಕ ಜನರಲ್ಲಿ ಅವರ ಗುಣಗಳು, ಬೋಧನೆಗಳು, ಮೌಲ್ಯಗಳು ಮೈಗೂಡುತ್ತವೆ ಎಂದು ಭಾವಿಸುವಂತೆಯೇ ಇದೂ ಆಗಿಬಿಡುತ್ತದೆ. ಬದಲಿಗೆ, ಜನಸಮುದಾಯಕ್ಕೆ ಸಂಗತವಾಗುವ ಹಾಗೆ ಸಂವಿಧಾನದ ಮೂಲ ಸಂದೇಶಗಳು, ಮೌಲ್ಯಗಳು, ಬಾಧ್ಯತೆಗಳು, ಕರ್ತವ್ಯಗಳ ಕುರಿತು ಮತ್ತು ಈ ಸಾಕ್ಷರತೆಯಿಂದ ಸಬಲಗೊಂಡು ಸರ್ಕಾರದಲ್ಲಿ, ಸಾರ್ವಜನಿಕ ಜೀವನದಲ್ಲಿ, ಕುಟುಂಬದಲ್ಲಿ ಹೇಗೆ ಸಾಂವಿಧಾನಿಕ ಮೌಲ್ಯಗಳ ಅರಿವು ಮತ್ತು ವರ್ತನೆ ಗಳನ್ನು ಅನುಷ್ಠಾನಕ್ಕೆ ತರಬೇಕು ಎನ್ನುವ ರೀತಿಯ ಸಹಭಾಗಿ ಕಾರ್ಯಶಿಬಿರಗಳನ್ನು, ಸಂವಹನಕಾರರ ಸಬಲೀಕರಣ ಶಿಬಿರಗಳನ್ನು ನಡೆಸಬೇಕು.

ಈ ಜವಾಬ್ದಾರಿಯನ್ನು ಯಾವುದೇ ರಾಜಕೀಯ ಪಕ್ಷದ ಸಂಸ್ಥೆಗಳಿಗೆ ನೀಡದೆ ಮತಧರ್ಮ, ಪಂಥ, ಪಕ್ಷ ನಿರಪೇಕ್ಷರಾದ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ಕಾರ್ಯಪಡೆಗೆ ನೀಡಬೇಕು. ನಮ್ಮ ಮುಖ್ಯಮಂತ್ರಿಯವರು ಇದನ್ನು ಮಾಡಿ ತೋರಿಸಲಿ ಎಂಬುದು ನಮ್ಮ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT