ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಯುವಜನ: ಅರಿಯಬೇಕಿದೆ ಮನ

ಯುವಜನ ತಮ್ಮ ಕೌಶಲ ಮತ್ತು ಜ್ಞಾನವನ್ನು ಹೆಚ್ಚಿಸಿಕೊಂಡು, ತಂತ್ರಜ್ಞಾನ ಸೌಲಭ್ಯಗಳನ್ನು ಸಕಾರಾತ್ಮಕವಾಗಿ ಬಳಸುವತ್ತ ಆಲೋಚಿಸಬೇಕು
Published 12 ಆಗಸ್ಟ್ 2024, 0:03 IST
Last Updated 12 ಆಗಸ್ಟ್ 2024, 0:03 IST
ಅಕ್ಷರ ಗಾತ್ರ

ಯುವಜನ ಎನ್ನುವುದನ್ನು ಒಂದೊಂದೆಡೆ ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯು 15ರಿಂದ 24 ವರ್ಷದೊಳಗಿನವರು ಯುವಜನ ಎಂದು ಹೇಳಿದರೆ, ಭಾರತದ ಯುವಜನ ನೀತಿ–2014ರಂತೆ, ಇದು 15ರಿಂದ 29 ವರ್ಷಗಳ ವ್ಯಾಪ್ತಿಗೆ ಬರುತ್ತದೆ. ಇನ್ನು ಕೆಲವೆಡೆ, 15ರಿಂದ 35 ವರ್ಷದವರೆಗೆ ಎನ್ನುವುದೂ ಉಂಟು. ಯುವಜನರ ವ್ಯಾಪ್ತಿಯು ಎಷ್ಟು ವರ್ಷದಿಂದ ಎಷ್ಟು ವರ್ಷದ
ವರೆಗಾದರೂ ಇರಲಿ, ಜಗತ್ತಿನಾದ್ಯಂತ ನಮ್ಮ ಯುವಜನ ಈಗ ಹೇಗಿದ್ದಾರೆ, ನಾಳೆಗೆ ಹೇಗೆ ತಯಾರಾಗು
ತ್ತಿದ್ದಾರೆ ಎನ್ನುವುದು ಬಹಳ ಮುಖ್ಯ.

ವಿವಿಧ ದೇಶಗಳನ್ನು ಒಳಗೊಂಡ ಜಾಗತಿಕ ಸಮ್ಮೇಳನದ ಸಲಹೆಯಂತೆ, ಅಂತರರಾಷ್ಟ್ರೀಯ ಯುವಜನ ದಿನವನ್ನು ಆಚರಿಸಲು ವಿಶ್ವಸಂಸ್ಥೆಯ ಮಹಾಸಭೆ ಸಮ್ಮತಿ ನೀಡಿತು. ಅದರಂತೆ, 2000ದ ಆಗಸ್ಟ್‌ 12ರಂದು ಮೊದಲ ಬಾರಿಗೆ ಯುವಜನ ದಿನವನ್ನು ಆಚರಿಸಲಾಯಿತು. ಈ ವರ್ಷದ ಅಂತರ
ರಾಷ್ಟ್ರೀಯ ಯುವಜನ ದಿನಾಚರಣೆಯ ಘೋಷವಾಕ್ಯ, ‘ಕ್ಲಿಕ್‌ಗಳಿಂದ ಪ್ರಗತಿಯತ್ತ: ಸುಸ್ಥಿರ ಅಭಿವೃದ್ಧಿಗಾಗಿ ಯುವಜನರ ಡಿಜಿಟಲ್‌ ಹೆದ್ದಾರಿ’. ಇದು ಯುವಜನರ ಭವಿಷ್ಯವನ್ನು ರೂಪಿಸುವಲ್ಲಿ ಡಿಜಿಟಲ್‌ ತಂತ್ರಜ್ಞಾನದ ಸದುಪಯೋಗ ಮತ್ತು ಅದು ವಹಿಸುವ ಮುಖ್ಯವಾದ ಪಾತ್ರದ ಮಹತ್ವವನ್ನು ತಿಳಿಸುತ್ತದೆ.

ಜಗತ್ತಿನಲ್ಲಿ ಈಗ 15ರಿಂದ 24 ವರ್ಷದೊಳಗಿನ 120 ಕೋಟಿ ಯುವಜನರಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಶೇ 16ರಷ್ಟಾಗಿದ್ದು, ಮಾನವ ಇತಿಹಾಸದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಯುವಜನರಿರುವ ಕಾಲ ಇದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ 15ರಿಂದ 24 ವರ್ಷದೊಳಗಿನ 25.5 ಕೋಟಿ ಯುವಜನರಿದ್ದಾರೆ ಎಂದು ಅಂದಾಜಿಸಲಾಗಿದೆ ಅಂದರೆ, ದೇಶದ ಜನಸಂಖ್ಯೆಯಲ್ಲಿ ಯುವಜನರ ಪಾಲು ಶೇ 18.21ರಷ್ಟು. ಇಷ್ಟೆಲ್ಲಾ ಯುವಜನರು ಇದ್ದಾರೆ, ಭವಿಷ್ಯದಲ್ಲಿ ಇವರು ‘ಮಾನವ ಸಂಪನ್ಮೂಲ’ ಆಗುತ್ತಾರೆ ಎಂದು ಭಾರತವೂ ಸೇರಿದಂತೆ ಬಹುತೇಕ ಎಲ್ಲ ದೇಶಗಳೂ ಕಾಯುತ್ತಿವೆ. 2030ರೊಳಗೆ ಇಡೀ ಜಗತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲು ಹಾಕಿಕೊಂಡಿರುವ ಬಹಳಷ್ಟು ಗುರಿಗಳ ಸಾಧನೆಯಾಗಬೇಕೆಂದರೆ, ಯುವಜನರ ಶಿಕ್ಷಣ, ಕೌಶಲದ ಮಟ್ಟ ಏರಿ, ಅವರ ಆರೋಗ್ಯ, ಕೊಳ್ಳುವ ಶಕ್ತಿ ಮತ್ತು ಸೂಕ್ತ ನಿರ್ಧಾರ
ಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಮಟ್ಟವೂ ವೃದ್ಧಿಸಲೇಬೇಕು.

ಭವಿಷ್ಯದಲ್ಲಿ ಈ ಗುರಿ ಸಾಧಿಸುವ ದಿಸೆಯಲ್ಲಿ ಡಿಜಿಟಲ್‌ ತಂತ್ರಜ್ಞಾನ ಸಹಕಾರಿ ಎನ್ನಲಾಗುತ್ತದೆ. ಆದರೆ, ಭಾರತದಂತಹ ದೇಶದಲ್ಲಿ ಅಂತರ್ಜಾಲ ಸೌಕರ್ಯ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ, ಯುವಜನರು ಡಿಜಿಟಲ್‌ ಸಾಧನಗಳನ್ನು ಮನರಂಜನೆ, ಆಟಕ್ಕೇ ಹೆಚ್ಚಾಗಿ ಬಳಸಿ
ಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಇವರಲ್ಲಿ ಹೆಚ್ಚಿನವರು ನಿರುದ್ಯೋಗಿಗಳು ಇಲ್ಲವೇ ಅರೆ ಉದ್ಯೋಗಿಗಳು.

ಜಗತ್ತಿನಲ್ಲಿ ಪ್ರಸ್ತುತ 7.1 ಕೋಟಿ ಯುವಜನರು ನಿರುದ್ಯೋಗಿಗಳು ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ. ಬಾಲ್ಯದಲ್ಲಿ ಇವರಿಗೆ ಸಮರ್ಪಕವಾದ ಶಿಕ್ಷಣ, ಸೂಕ್ತ ವೃತ್ತಿಶಿಕ್ಷಣ, ಕೌಶಲ ತರಬೇತಿ ಸಿಗದಿರುವುದೇ ಇದಕ್ಕೆ ಕಾರಣ. ಕೇಂದ್ರ ಸರ್ಕಾರವು 2014ರ ಯುವಜನ ನೀತಿಯಲ್ಲಿ, ಯುವಜನರನ್ನು ‘ಅಭಿವೃದ್ಧಿಯ ಪಾಲುದಾರರು’ ಎಂದು ಗುರುತಿಸಿದೆ. ಆದರೆ ಶಾಲಾಕಾಲೇಜುಗಳ ಮಟ್ಟಕ್ಕೇರದ, ಕೃಷಿ, ಕೈಗಾರಿಕೆಯೂ ಸೇರಿದಂತೆ ವಿವಿಧ ಕೌಶಲಗಳನ್ನು ಹೊಂದದ ಯುವಜನರು ಅಭಿವೃದ್ಧಿಯ ಪಾಲುದಾರರು ಹೇಗೆ ಆದಾರು? ಬಾಲ್ಯವಿವಾಹ ಮತ್ತು 18 ವರ್ಷಗಳಾಗುವುದಕ್ಕೆ ಮೊದಲೇ ತಾಯಂದಿರಾಗುವುದು, ಲೈಂಗಿಕ ಶೋಷಣೆಗೆ ಸುಲಭವಾಗಿ ಪಕ್ಕಾಗುವ ಬಾಲಕಿಯರನ್ನು ರಕ್ಷಿಸಲು ಸಾಧ್ಯವಾಗದಿದ್ದಲ್ಲಿ ಅವರು ಅಭಿವೃದ್ಧಿಯ ಪಾಲುದಾರರಾಗಲು ಸಾಧ್ಯವೇ ಇಲ್ಲ.

ಅತ್ಯಂತ ಆತಂಕಕಾರಿ ವಿಚಾರವೆಂದರೆ,
ಶೇ 7.3ರಷ್ಟು ಹದಿವಯಸ್ಕರು ಮತ್ತು ಶೇ 10.6ರಷ್ಟು ಯುವಜನರು ವಿವಿಧ ಮಟ್ಟದ ಮಾನಸಿಕ ನ್ಯೂನತೆ ಹೊಂದಿದ್ದಾರೆ ಮತ್ತು ನಗರ ಪ್ರದೇಶಗಳಲ್ಲಿ ಈ ಪ್ರಮಾಣ ದುಪ್ಪಟ್ಟು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಸರ್ವೇಕ್ಷಣೆ 2015– 16 ಹೇಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನಂತೆ, ಪ್ರತಿ ಐವರು ಯುವಜನರಲ್ಲಿ ಒಬ್ಬರಿಗೆ ಮಾನಸಿಕ ಸಮಸ್ಯೆ ಇದೆ.

ಈ ಎಲ್ಲವನ್ನೂ ಎದುರಿಸಿ ಯುವಶಕ್ತಿಯು ಮಾನವ ಸಂಪನ್ಮೂಲವಾಗಿ ಬೆಳೆಯುವುದಕ್ಕೆ ಪೂರಕವಾಗಿ ಯುವಜನರ ಜೊತೆಗೆ ಸರ್ಕಾರ, ನೀತಿ ನಿರೂಪಕರು, ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಖಾಸಗಿ ರಂಗವು ಕೈಜೋಡಿಸಬೇಕು. ಡಿಜಿಟಲ್‌ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು. ಅದರ ಆರೋಗ್ಯಕರ ಬಳಕೆ ಕುರಿತು ಎಚ್ಚರಿಕೆ ನೀಡುವ ಕೆಲಸ ಆಗಬೇಕು.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಯುವಜನರು ವಹಿಸಬೇಕಾದ ಮಹತ್ವದ ಪಾತ್ರದ ಕುರಿತು ವ್ಯಾಪಕ ಪ್ರಚಾರ ನಡೆಸಬೇಕು. ಯುವಜನರೂ ತಮ್ಮ ಕೌಶಲ ಮತ್ತು ಜ್ಞಾನವನ್ನು ಹೆಚ್ಚಿಸಿಕೊಂಡು, ತಂತ್ರಜ್ಞಾನ ಸೌಲಭ್ಯಗಳನ್ನು ಸಕಾರಾತ್ಮಕವಾಗಿ ಬಳಸುವತ್ತ ಆಲೋಚಿಸಬೇಕು. ಡಿಜಿಟಲ್‌ ತಂತ್ರಜ್ಞಾನವು ಸ್ವಯಂ ಹಾನಿಕರ ಆಗದಂತೆ ಮತ್ತು ಇತರರ ಶೋಷಣೆಗೆ ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಗ್ರಾಮೀಣ ಮತ್ತು ನಗರ ಜೀವನದಲ್ಲಿ ಸುಸ್ಥಿರತೆ ಸಾಧಿಸಲು ಡಿಜಿಟಲ್‌ ತಂತ್ರಜ್ಞಾನ
ಬಳಕೆಯಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT