ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತು ಈತು ಅಂದ್ರೆ ಕೊಟ್ಟಿಗೆಯಲ್ಲಿ ಕಟ್ಟು ಅಂದ್ರಂತೆ!

ಚರ್ಚೆ
Last Updated 10 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ  ಪ್ರೌಢ­ಶಾಲಾ ಮಕ್ಕಳಿಗೆ ಸರ್ಕಾರ­ದಿಂದಲೇ ‘ಮನುಸ್ಮೃತಿ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ಈ ಸಂಬಂಧದ ಹಿ.ಶಿ.ರಾಮಚಂದ್ರೇಗೌಡರ ಪತ್ರದಲ್ಲಿ ‘ಬಿ.ಜೆ.ಪಿ. ಸರ್ಕಾರ ನೇಮಿಸಿದ ಆಯ್ಕೆ ಸಮಿತಿ ಅಧ್ಯಕ್ಷರನ್ನೇ ಉಳಿಸಿಕೊಂಡಿ­ದ್ದರಿಂದ ಈ ಅನುಮಾನ ಉಂಟಾಗಿದೆ’ ಎಂಬ  ಉಲ್ಲೇಖವೂ ಇತ್ತು. ಬಳಿಕ ಮೈಸೂ­ರಿನಲ್ಲಿ ಹೋರಾಟವೂ ನಡೆ­ಯಿತು.

ಹಿಂದೂ ಧರ್ಮವನ್ನು ಟೀಕಿಸುವ ಮೂಲಕ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವವರು ತಮ್ಮ ಹೆಸರಿ­ನಲ್ಲಿರುವ ‘ಜಾತಿ ವಾಚಕ’ವನ್ನೂ ಕಳೆದು­ಕೊಳ್ಳಲು ಸಾಧ್ಯವಾಗದವರ ವೈಚಾರಿ­ಕತೆಯೂ ಅರ್ಥವಾಯಿತು. ಆದರೆ ಪ್ರೊ.ಎ.ಕೆ. ಹಂಪಣ್ಣ ಅವರು ತಮ್ಮ ಜೀವನ­ದುದ್ದಕ್ಕೂ ದೀನದಲಿತರ ಪರ­ವಾಗಿ ಹೋರಾಡುತ್ತಾ ಬಂದವರು. ಚಿತ್ರ­ದುರ್ಗ ಜಿಲ್ಲೆಯ ಮಾದನಾಯಕ­ನ­ಹಳ್ಳಿಯ ದಲಿತರ ಕೇರಿಯಿಂದ ಕಡು ಬಡ­ತನದಿಂದ ಬಂದು ಕನ್ನಡದ ಪ್ರಾಧ್ಯಾಪಕರಾದವರು.

ಹಂಪಣ್ಣ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿರುವ 849 ಪುಸ್ತಕಗಳನ್ನು ವಿಚಾರ­ವಾದಿಗಳು ನೋಡಿದ್ದಾರೆಯೇ? ಕೊನೇಪಕ್ಷ ‘ಪ್ರಜಾವಾಣಿ’ ವರದಿ­ಯಲ್ಲಿ­ರುವ 26 ಪುಸ್ತಕಗಳನ್ನಾದರೂ ನೋಡಿ ಪರಾಮರ್ಶಿಸಿ ಪ್ರತಿಕ್ರಿಯಿಸಿದ್ದಾರೆಯೇ? ಎಂದು ನೋಡಿದರೆ ನಿರಾಶೆಯಾ­ಗು­ತ್ತದೆ. ‘ಎತ್ತು ಈತು ಅಂದ್ರೆ ಕೊಟ್ಟಿಗೆ­ಯಲ್ಲಿ ಕಟ್ಟು ಅಂದ್ರಂತೆ’ ಅನ್ನೋ ಮಟ್ಟಕ್ಕೆ ನಮ್ಮ ಬೌದ್ಧಿಕವಲಯ ಬಂದು ಬಿಡುತ್ತದೆಯಲ್ಲಾ ಎಂದು ಬೇಸರ­ವಾಗುತ್ತದೆ.

ಪತ್ರಿಕೆಯಲ್ಲಿನ  ಪಟ್ಟಿಯಲ್ಲಿ­ರುವ ‘ಭಗವದ್ಗೀತೆ ಬೆಳಕು ನೀಡು­ವುದೇ?’ ಎಂಬ ಕೃತಿಯನ್ನು ಎನ್‌. ಶಂಕ­ರಪ್ಪ ತೋರಣಗಲ್ಲು ಅವರು ಬರೆದಿ­ದ್ದಾರೆ. ನಾಡಿನ ವೈಚಾರಿಕ ಸ್ವಾಮೀಜಿ ಎಂದೇ ಹೆಸರಾದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ವೈಜ್ಞಾನಿಕ ಹಿನ್ನೆಲೆಯಲ್ಲಿ ಭಗವದ್ಗೀತೆಯು ಬೆಳಕು ನೀಡುವುದಿಲ್ಲ ಎಂದು ವಾದಿಸುವ ನಾಸ್ತಿಕವಾದಿ ಪುಸ್ತಕವಿದು.

ಆದರೆ ಅದರ ಶೀರ್ಷಿಕೆ­ಯನ್ನು ನೋಡಿಯೇ ಇದೂ ಹಿಂದೂ ಧರ್ಮವನ್ನು ಸಾರುವ ಕೋಮುವಾದಿ ಪುಸ್ತಕವೆಂಬ ಪಟ್ಟಿಗೆ ಸೇರಿಸಿರುವುದನ್ನು ನೋಡಿದರೆ ನಮ್ಮ  ಬೌದ್ಧಿಕ ವಲಯದ ದಾರಿದ್ರ್ಯ ಹಾಗೂ ಕಾಮಾಲೆ ದೃಷ್ಟಿ­ಕೋನ ಅರ್ಥವಾಗುತ್ತದೆ. ಇನ್ನು ‘ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ’ ಎಂಬ ಕೃತಿಯನ್ನು  ವಿದ್ವಾಂಸ­ರಾದ ಎಚ್‌.ವಿ. ನಾಗರಾಜರಾವ್‌ ಬರೆದಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಇದೂ ನಮ್ಮ ಚಿಂತಕರ ಕಣ್ಣಿಗೆ ಕೋಮುವಾದಿ ಕೃತಿ!

ಶಾಕ್ತಪಂಥ ಶಕ್ತಿದೇವತೆಯ ಆರಾ­ಧನೆಯ ಪಂಥ. ಆದಿಶಕ್ತಿ, ತಂತ್ರಗಳು ಎಲ್ಲಾ ತಳಸಮುದಾಯಗಳ ಆಧ್ಯಾತ್ಮಿ­ಕತೆಯ, ಸೈದ್ಧಾಂತಿಕತೆಯ, ಅನುಭಾವದ ಕೇಂದ್ರ. ಶಾಕ್ತ ಧರ್ಮದ ಬಗೆಗಾಗಲೀ, ತಂತ್ರಗ್ರಂಥಗಳ ಬಗೆಗಾಗಲೀ, ನಮ್ಮ ಹಿ.ಶಿ.ರಾ. ಅವರು ಅಥವಾ ಅಂಥವರ ಪಂಥದವರು ಬರೆದು ತೋರಿಸಲಿ ಎಂಬ ಸವಾಲಿನ ಪ್ರಶ್ನೆಯನ್ನು ಅತ್ಯಂತ ವಿನಮ್ರವಾಗಿ ಕೇಳಬೇಕೆನಿಸುತ್ತದೆ. ಸಾಂಖ್ಯದರ್ಶನ, ಶಾಕ್ತಪಂಥ, ತಂತ್ರಗ್ರಂಥ­ಗಳ ಬಗ್ಗೆ ಕನ್ನಡದಲ್ಲಿ ಆಳವಾದ ಅಧ್ಯಯನ ಮಾಡುತ್ತಿರುವ ಅರ­ಬಿಂದೋ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ ಪ್ರಕಟಿಸಿರುವ ಆರ್‌.ಎಲ್‌. ಕಶ್ಯಪ್‌ ರಚಿಸಿರುವ ‘ತಂತ್ರಸಾಧನೆ’, ‘ವೇದದ ಬೆಳಕಿನಲ್ಲಿ ಆಧುನಿಕ ಸವಾಲುಗಳ ನಿರ್ವಹಣೆ’ ಎಂಬ ಕೃತಿಗಳ ಆಯ್ಕೆಯೂ ಬಿಜೆಪಿ ಸರ್ಕಾರದ ಸ್ಮರಣೆಗೆ  ಕಾರಣ­ವಾಗುತ್ತೆ, ದಲಿತ ಕವಿ  ಹಂಪಣ್ಣನವರನ್ನು ಕೋಮುವಾದಿ, ಜಾತಿವಾದಿಯನ್ನಾಗಿ ಬಿಂಬಿಸುವಂತೆ ಮಾಡುತ್ತದೆ ಎಂಬು­ದನ್ನು  ಸಾಂಸ್ಕೃತಿಕ ಪರಿವೇಷದಲ್ಲಿರುವ ಜಾತೀವಾದದ, ರಾಜಕೀಯ ಸೋಗ­ಲಾಡಿತನವೆಂದು ಕರೆಯಬೇಕೋ ಏನೋ ಅರ್ಥವಾಗುತ್ತಿಲ್ಲ.

‘ವೇದ’ ಎಂದ ತಕ್ಷಣ ಬ್ರಾಹ್ಮಣರದ್ದು, ಕೋಮುವಾದದ್ದು, ಹಿಂದೂಗಳದ್ದು ಎಂದು ಬಡಬಡಿಸುವ ಇವರು ಋಗ್ವೇದದ ಹತ್ತನೆಯ ಕಾಂಡ­ವನ್ನು ಬರೆದವನು ಶ್ವಪಚ ವಾಮದೇವ ಎಂಬುದನ್ನು ಅರಿತಿಲ್ಲವೇ? ‘ಸಂಸ್ಕೃತ’ ಎಂದೊಡನೆ ಬ್ರಾಹ್ಮಣರ ಭಾಷೆ ಎಂದು ಅರ್ಥೈಸುವ ಇವರು, ಕುರುಬ ಕಾಳಿ­ದಾಸನೂ ಸಂಸ್ಕೃತದಲ್ಲಿ ಕಾವ್ಯ ರಚಿಸಿ­ದ್ದಾನೆ. ಸಂಸ್ಕೃತ ಸಮಸ್ತ ಭಾರತೀಯ­ರ­ದ್ದಾಗಿತ್ತು.

ಕಾಲಾನಂತರದಲ್ಲಿ ಜಾತೀಯ ಸ್ವಾರ್ಥಿ­ಗಳಿಂದ ಬ್ರಾಹ್ಮಣರಷ್ಟೇ ಕಲಿಯುವಂತಾಗಿ ಬ್ರಾಹ್ಮಣ­ರದ್ದೆನಿಸು­ವಂತಾ­ಗಿದೆ ಎಂಬ ಸತ್ಯ ತಿಳಿಯದ ಮುಗ್ಧರೆಂದು ನಾವು ನೀವು ನಂಬ­ಬೇಕೇ? ಅಥವಾ ಸಮಾಜ­ವನ್ನು ಬೌದ್ಧಿಕತೆಯ ಹೆಸರಿನ ಆಯುಧ­ದಿಂದಲೂ ಒಡೆಯಬಹುದೆಂಬ ಹುನ್ನಾರದ ಭಾಗವೆಂದು ತಿಳಿಯಬೇಕೇ? ಪ್ರಾಜ್ಞರು ಚಿಂತಿಸಬೇಕು. ಹಂಪಣ್ಣನವರ ಸಮಿತಿ ಆಯ್ಕೆ ಮಾಡಿರುವ ‘ಭಗವದ್ಗೀತೆ­ಯಲ್ಲಿ ಏನಿದೆ’ (ವೈಚಾರಿಕ ಚರ್ಚೆ) ಎಂಬ ಪುಸ್ತಕವನ್ನು  ಎ.ಐ.ಡಿ.ಎಸ್.ಒ ಸಂಘಟನೆ ಪ್ರಕಟಿಸಿದೆ. ಅದನ್ನೂ ಕೋಮು­ವಾದಿ  ಪುಸ್ತಕವೆಂದು ಭ್ರಮಿಸಿ ಮೈಸೂರಿನ ಎ.ಐ.ಡಿ.ಎಸ್.ಒ  ಸಂಘ­ಟ­ನೆ­­ಯವರೂ ಹೋರಾಡಿದ್ದಾರೆಂದರೆ ಎತ್ತು ಈದ್ರೆ ಕೊಟ್ಟಿಗೆಯಲ್ಲಿ ಕಟ್ಟೋ ಮಂದಿ ಹೇಗಿದ್ದಾರೆಂಬುದು  ಬಟ್ಟಂಬಯಲಾಯಿತು.

ಆಯ್ಕೆ ಸಮಿತಿಯು ಒಬ್ಬರೇ ಪ್ರಕಾಶ­ಕರ ಹತ್ತು ಸಂಸ್ಥೆಗಳ ಪುಸ್ತಕಗಳನ್ನು ಆಯ್ಕೆ ಮಾಡಿದೆ ಎಂಬುದೇ ಈ ವರದಿ­ಗಳ  ಹಿಂದಿರುವ ಚರ್ಚೆಯ ಕೇಂದ್ರ. ಪ್ರಕಾಶ­­ಕರ ಅತೃಪ್ತಿಯ ಮೇಲಾಟಕ್ಕೆ ಮೈಸೂರಿನ ಬುದ್ಧಿಜೀವಿಗಳು ‘ಮನು­ಸ್ಮೃತಿ’ಯ ಶೀರ್ಷಿಕೆಯ ಅಮಲು ಹತ್ತಿ­ಸಿದ್ದು ನಿಜಕ್ಕೂ ವ್ಯಾಪಾರೀ ವಲಯ ಎಂಥ ಪ್ರಭಾವಶಾಲಿ ಎಂಬುದನ್ನು ಮನದಟ್ಟು ಮಾಡಿದೆ. ಅದಕ್ಕೆ ಹಂಪಣ್ಣ­ಅವರ ಆಯ್ಕೆ ಸಮಿತಿಯು ‘ಹತ್ತು ಸಂಸ್ಥೆಗಳಿಂದ ಪುಸ್ತಕಗಳು ಬಂದಾಗ ಹತ್ತು ಸಂಸ್ಥೆಗಳ ಪುಸ್ತಕಗಳೆಂದು ತಿಳಿಯು­ತ್ತದೆ.

ಅವೆಲ್ಲವೂ ಒಬ್ಬ ಪ್ರಕಾಶಕನದು ಎಂಬುದು ತಿಳಿದಿರುವುದಿಲ್ಲ’ ಎಂದು ಸ್ಪಷ್ಟನೆಯನ್ನೂ ನೀಡಿದೆ. ನಾನೂ ಈ ಹಿಂದೆ ಈ ಸಮಿತಿಯ ಸದಸ್ಯನಾಗಿ ಎರಡು ವರ್ಷ ಹಾಗೂ ಸಾರ್ವಜನಿಕ ಗ್ರಂಥಾ­ಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಎರಡು  ವರ್ಷ ಕೆಲಸ ಮಾಡಿದ್ದೇನೆ. ಪ್ರಕಾಶ­­ಕರು ತಮ್ಮ ಪುಸ್ತಕಗಳು ಆಯ್ಕೆ­ಯಾದಾಗ ಸಂತಸಪಡುತ್ತಾರೆ. ಆಯ್ಕೆ­ಯಾಗದಿದ್ದಾಗ ಸಮಿತಿಯನ್ನೇ ಕಟಕಟೆ­ಗೇರಿಸುತ್ತಾರೆ.

ಆದರೂ ಉತ್ತಮ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರಿಗೇನೂ ಕೊರತೆ­ಯಿಲ್ಲ. ಶೇ 10 ರಷ್ಟು ಕಳಪೆ ಪ್ರಕಾಶಕರು­ಗಳಿಂದಾಗಿ ಇಡೀ ಪ್ರಕಾಶನ ಉದ್ಯಮವೇ ಕಳಂಕವನ್ನು ಹೊರಬೇಕಾದ ದುಃಸ್ಥಿತಿ­ಯಿದೆ. ರಾಜ್ಯ ಸರ್ಕಾರ ತುರ್ತಾಗಿ ಒಂದು ‘ಪುಸ್ತಕ ನೀತಿ’ ಯನ್ನೂ ಪ್ರಕಾಶ­ಕರ ನೋಂದಣಿಯ ಬಿಗಿಯಾದ ಕಾನೂನು­­ಗಳನ್ನು ಜಾರಿಗೆ ತರಬೇಕಾ­ಗಿದೆ. ಕೃತಿ ಚೌರ್ಯ, ನಕಲಿ ಮುದ್ರಣ ಮಾರಾಟವನ್ನು ನಿಯಂತ್ರಿಸಬೇಕಾಗಿದೆ.

ತಜ್ಞತೆಯು ಬೇಡವೇ ಬೇಡವೆಂಬಂತೆ ಮಾಹಿತಿ ಸಂಗ್ರಹಿಸಿ ಪುಸ್ತಕ ರಚಿಸುವ ಯಂತ್ರಗಳಂತೆ ಎಲ್ಲಾ ವಿಷಯಗಳ­ಲ್ಲಿಯೂ ಅವೇ ಅವೇ ಕೃತಿಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಪ್ರಥಮ ಮುದ್ರಣ­ವೆಂದು ನೀಡುವ ಲೇಖಕ, ಪ್ರಕಾಶಕರ ವಿರುದ್ಧ  ಕ್ರಿಮಿನಲ್‌ ಮೊಕದ್ದಮೆ ಹೂಡುವ ಸಾಹಸವನ್ನು ಆಯಾ ಇಲಾ­ಖೆಯ ಮುಖ್ಯಸ್ಥರು, ಸರ್ಕಾರ ಮಾಡ­ಬೇಕಾದ ಜರೂರಿದೆ. ಏಕೆಂದರೆ ಜ್ಞಾನ­ಗಂಗೆ ಮಲಿನವಾಗಬಾರದು.

ಪ್ರೊ. ಹಂಪಣ್ಣ ನೇತೃತ್ವದ ಆಯ್ಕೆ ಸಮಿತಿಯು  ಸಪ್ನ ಬುಕ್‌ ಹೌಸಿನ 47, ಕುವೆಂಪು ಭಾಷಾಭಾರತಿ ಪ್ರಾಧಿ­ಕಾರದ 34, ಅನ್ನಪೂರ್ಣ ಪ್ರಕಾಶನದ 20, ಮಹಿಮಾ ಪ್ರಕಾಶನದ 21, ಬಸವತತ್ವ ಪ್ರಕಾಶನದ 19, ವಸಂತ ಪ್ರಕಾಶನದ 16, ಕಣ್ವ ಪ್ರಕಾಶನದ 14, ತಳುಕಿನ ವೆಂಕಣ್ಣಯ್ಯ ಪ್ರಕಾಶನದ 12 ಪುಸ್ತಕಗಳನ್ನು ಆಯ್ಕೆ ಮಾಡಿದೆ. ಉಳಿದ ಅನೇಕ ಪ್ರಕಾಶಕರ 12 ಕ್ಕಿಂತ ಕಡಿಮೆ ಪುಸ್ತಕಗಳು ಆಯ್ಕೆಯಾಗಿವೆ. ವರ್ಷಕ್ಕೆ ನೂರಿನ್ನೂರು ಪುಸ್ತಕಗಳನ್ನು ಮುದ್ರಿಸುವ ಸಪ್ನದ 47 ಪುಸ್ತಕಗಳ ಆಯ್ಕೆ ಎಂದಿಗೂ ಹೆಚ್ಚು ಎನ್ನಿಸಲಾರದು.

ವೈಚಾರಿಕ, ಪ್ರಗತಿಪರ, ಸುಸಂಸ್ಕೃತ ಪುಸ್ತಕಗಳನ್ನು ಆಯ್ಕೆ ಮಾಡಿಯೂ ಮೈಸೂರಿನ ಹಿ.ಶಿ.ರಾ., ಸಿದ್ಧಾಶ್ರಮ, ಹೊರೆಯಾಲ ದೊರೆಸ್ವಾಮಿಯಂಥವರ ಅನುಮಾನಕ್ಕೆ ಆಹಾರವಾದಂಥ, ಜಾತ್ಯತೀತ­ವಾದಿ­ ಪ್ರೊ.  ಹಂಪಣ್ಣ­ ಅವರನ್ನು ಬಿ.ಜೆ.ಪಿ. ಸರ್ಕಾರ ನೇಮಿಸಿತ್ತು ಎಂಬ ಒಂದೇ ಕಾರಣಕ್ಕೆ ಪೂರ್ವ­ಗ್ರಹ ದಿಂದ ನೋಡುವುದು ಜ್ಞಾನ­­ವೆಂದಾ ಗಲೀ ಸತ್ಯವೆಂದಾಗಲೀ ಅನ್ನಿಸುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT