ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪಿತಾಮಹರೂ ಮತ್ತು ಹಂಡೆ ವಜೀರರೂ...

Last Updated 26 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ನಮ್ಮ ನೆಲಮೂಲ ಸಂಸ್ಕೃತಿಯ ವಿಷಯವನ್ನು ನಿಸ್ವಾರ್ಥವಾಗಿ ಅಷ್ಟೇ ವಸ್ತುನಿಷ್ಠ ಮತ್ತು ಸತ್ಯನಿಷ್ಠವಾಗಿ ಅಧ್ಯಯನ ಮಾಡುತ್ತ ಹೊರಟರೆ ನೈಜ ಇತಿಹಾಸದ ದರ್ಶನವಾಗುತ್ತದೆ. ಆದರೆ ನಮ್ಮ ದೃಷ್ಟಿಗೆ ಜಾತಿ, ಧರ್ಮಗಳೆಂಬ ಅಹಂಕಾರದ ಕನ್ನಡಿಯನ್ನು ತೊಡಿಸಿ ಹುಡುಕುತ್ತ ಹೋದರೆ, ನಾವು ಕಟ್ಟುವ ಇತಿಹಾಸ ದೇಶದ್ರೋಹದ ಇಡಿಗಂಟಾಗುತ್ತದೆ. ಅಂತಹ ಎರಡು ಉದಾಹರಣೆಗಳನ್ನು ಇಲ್ಲಿ ಚರ್ಚಿಸಬಹುದು.

ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ವಿಭಾಗದವರು ಸಂಘಟಿಸಿದ `ನಡೆದ ಹಾದಿಯ ನೆನಪು~  ಮಾಲಿಕೆಯಲ್ಲಿ `ಮಾಸ್ತಿಯವರ ಕಥೆಗಳಲ್ಲಿ ಆಧುನಿಕತೆ~  ಎಂಬ ವಿಷಯ ಕುರಿತು ಚರ್ಚಿಸುತ್ತ, ಲೇಖಕರಾದ ವಸುಧೇಂದ್ರ ಅವರು `ಕರ್ನಾಟಕ ಸಂಗೀತಕ್ಕೆ ಪುರಂದರ ದಾಸರನ್ನು ಪಿತಾಮಹ ಎಂದು ಕರೆಯುವಂತೆ, ಕನ್ನಡಕ್ಕೆ ಮಾಸ್ತಿಯವರು ಪಿತಾಮಹ ಆಗಿದ್ದಾರೆ~  (ಪ್ರಜಾವಾಣಿ ವರದಿ, ಸೆ. 24) ಎಂದು ಹೇಳಿದ್ದಾರೆ. ವಾಸ್ತವಿಕವಾಗಿ ಇವೆರಡೂ ಸತ್ಯಕ್ಕೆ ದೂರವಾದ ಸಂಗತಿಗಳೇ ಆಗಿವೆ.

`ನಾನು ಕರ್ನಾಟಕ ಸಂಗೀತದ ಪಿತಾಮಹ~ ಎಂದು ಪುರಂದರದಾಸರು ಹೇಳಿಕೊಂಡಿಲ್ಲ. ಇದನ್ನು ಅವರಿಗೆ ಆರೋಪಿಸಿದ್ದು ಸನಾತನವಾದಿ ಕರ್ಮಠರ ಮನಸ್ಥಿತಿಗಳು. ಒಬ್ಬನನ್ನು ವೈಭವೀಕರಿಸುವುದು ಎಂದರೆ ಇನ್ನೋರ್ವರನ್ನು ದಮನೀಕರಿಸುವುದು ಎಂಬ ತತ್ವದ ಹುನ್ನಾರ ಇದಾಗಿದೆ.

ಮೈತುಂಬ ಗಂಧನಾಮ ಪೂಸಿಸಿಕೊಂಡು, ಮೂರ್ಕಾಲ ಹರಿನಾಮ ಜಪಿಸಿದರೂ ಇಂತವರಿಗೆ ಒಲಿಯದ ಕೃಷ್ಣ, ಹರಿದ ಕಂಬಳಿಹೊದ್ದ ದಲಿತನಿಗೆ ಒಲಿದು, ತಿರುಗಿ ನಿಂತಿದ್ದು ಯಾಕೆ? ಕನಕದಾಸರ ನೂರಾರು ಕೀರ್ತನೆಗಳನ್ನು ಕದ್ದು, ಅವುಗಳ ಹೊರಾವರಣವನ್ನು ತಿದ್ದಿ ಪುರಂದರರ ಹೆಸರಿಗೆ ಅರ್ಪಿಸಿದ ಸಾಹಿತ್ಯಚೋರರು ಇದನ್ನು ಅರಿಯಬೇಕಾಗಿದೆ. ಹಾಗೆ `ಮಾಸ್ತಿ ಕನ್ನಡದ ಆಸ್ತಿ~ ಎಂಬುದನ್ನು ಒಪ್ಪೋಣ. ಆದರೆ `ಮಾಸ್ತಿ ಕನ್ನಡದ ಪಿತಾಮಹ ಹಾಗೂ ಕನ್ನಡ ಭಾಷೆಯ ಅಸ್ತಿಭಾರ~  ಎಂಬುದು ಅತಿರಂಜಿತ ಅಭಿಪ್ರಾಯವಾಗುತ್ತದೆ. ಮಾಸ್ತಿ ಕನ್ನಡದ ಪಿತಾಮಹ ಆದರೆ ಕನ್ನಡದ ಸಂಸಾರದಲ್ಲಿ ಪಂಪ, ರನ್ನ ಪೊನ್ನ ಮೊದಲಾದ ರತ್ನತ್ರಯರ, ವಚನಕಾರರ, ದಾಸರ, ಆಧುನಿಕ ಕನ್ನಡದ ರಾಷ್ಟ್ರಕವಿಗಳ   ಸ್ಥಾನ ಯಾವುದು? ಈ ಕುರಿತು ಚಿಂತನೆಗಳು ನಡೆಯಲಿ.

ಅಂತೆಯೇ ಇತ್ತೀಚೆಗೆ ಕುಷ್ಟಗಿಯಲ್ಲಿ ನಡೆದ ಜಾತಿ ಸಮಾವೇಶವೊಂದರಲ್ಲಿ, ಹಂಡೆ ವಜೀರ ಸಮಾಜದ ರಾಜ್ಯಾಧ್ಯಕ್ಷರಾದ ಬಿ.ಎಸ್. ಪಾಟೀಲರು `ತನ್ನದೇ ಆದ ಸಂಸ್ಕೃತಿ, ಪರಂಪರೆ ಹೊಂದಿರುವ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜ ಮೂರು ಶತಮಾನಗಳ ಹಿಂದಿನದು~ ಎಂಬ ಸುಳ್ಳಿನ ನುಡಿಮುತ್ತನ್ನು ಪೋಣಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.(ಪ್ರ.ವಾ. ವರದಿ, ಸೆ.24) ನೈಜ ಇತಿಹಾಸವು ಅವರನ್ನು `ಹಂಡೆ ವಜೀರರು~  ಎಂದು ಎಲ್ಲಿಯೂ ದಾಖಲಿಸಿಲ್ಲ.
 
ವಾಸ್ತವವಾಗಿ ಅವರು `ಹಂಡೆ ಕುರುಬರು~. `ವಜೀರ~ ಎಂಬುದು ಹಂಡೆ ಕುರುಬ ಜನಾಂಗದ ದೊರೆ ಬಾಲದ ಹನುಮಪ್ಪನಾಯಕನಿಗೆ ಬಿಜಾಪುರದ ಸುಲ್ತಾನ ಕೊಟ್ಟ ಬಿರುದಾಗಿದೆ.  ‘The first of the poligars of Bellary was apparently a kuruba named Balada Hanumappa Naika’  ಎಂದು ಬಳ್ಳಾರಿ ಜಿಲ್ಲೆಯ ಗೆಜೆಟಿಯರ್‌ನಲ್ಲಿ 1916 ರಲ್ಲಿ ದಾಖಲಿಸಲಾಗಿದೆ(ಪುಟ 224).
 
ಇವರ ಮೂಲ ಇತಿಹಾಸ ಕ್ರಿ. ಶ. ಎರಡನೆಯ ಶತಮಾನಕ್ಕಿಂತಲೂ ಹಿಂದಕ್ಕೆ ಸರಿಯುತ್ತದೆ. ಈ ಕುರಿತು ಶಂ.ಬಾ.ಜೋಶಿ ಅವರು `ಟಗರು-ಕುರಿಗಳನ್ನು ಸಾಕಿ ಬದುಕುತ್ತಿದ್ದ ಅಂಧಕ-ವೃಷ್ಣಿಗಳೆಂದರೆ ಯಾದವರಾದ ಅಂಡೇ ಕುರುಬರು. ಇವರು ತಮ್ಮನ್ನು ವಜೀರರು ಎಂದು ಕರೆದುಕೊಳ್ಳುತ್ತಾರೆ. ಇವರು ಅಚ್ಚ ಕನ್ನಡಿಗರು, ಶೂರರು, ಅರಸು ಮನೆತನದವರು~  ಎಂದು ಹೇಳುತ್ತಾರೆ(ಶಂ.ಬಾ. ಕೃತಿ ಸಂಪುಟ, ಕರ್ನಾಟಕದ ವೀರ ಕ್ಷತ್ರಿಯರು, ಪುಟ 286).

ಇಷ್ಟೇ ಅಲ್ಲ, The Kurubas formed an important fighting element in the armies of Haider Ali and the Ankusahgiri paligars, and several fiets of military still remain in the possession of Inamdars of Ande caste. Their favourite caste title is ‘Nayak’(Deexithar, Studies of Tamil Literature and History, P.  178179).
ಬಾಲದ ಹನುಮಪ್ಪ ನಾಯಕನ ಆಳ್ವಿಕೆಗೆ ಒಳಪಟ್ಟಿದ್ದ ಬಳ್ಳಾರಿ, ಅನಂತಪುರ, ಕುರುಗೋಡು ಮತ್ತು ಬಂಕಾಪುರದ ಇಂದಿನ ಪ್ರಾದೇಶಿಕ ನೆಲೆಯಲ್ಲಿ, ಕುರುಬ ಜನಾಂಗದವರು ತಾವು ಹಂಡೆ ಕುರುಬರ ವಾರಸುದಾರರೆಂದು ಹೇಳಿಕೊಳ್ಳುತ್ತಾರೆ.
 
ತಮ್ಮ ಪ್ರಮುಖ ದೊರೆಗಳ ಹೆಸರುಗಳಾದ ಪವಾಡಪ್ಪ, ದೊಡ್ಡತಲೆ ರಾಮಪ್ಪ, ಹಿರೇಮಲಕಪ್ಪ(ಮಲ್ಲಪ್ಪ), ಬ್ಯಾಲಪ್ಪ ಮೊದಲಾದ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟಿರುವುದು ಕಂಡುಬರುತ್ತದೆ.

ವಸ್ತುಸ್ಥಿತಿ ಹೀಗಿರುವಾಗ ಅಂಡೆ ಕುರುಬರು ವೀರಶೈವರು, ಲಿಂಗಾಯತರು ಎಂಬ ಸುಳ್ಳು ಅಬ್ಬರದ ಸೃಷ್ಟಿಯೇಕೆ? ಇದೆಲ್ಲ ಏನನ್ನು ಸೂಚಿಸುತ್ತದೆ? ಸುಳ್ಳೊಂದನ್ನು ಸಾವಿರ ಸಲ ನುಡಿದು, ನುಡಿದೂ ಅದನ್ನು ಸತ್ಯವಾಗಿಸುವ ಗುಬೆಲ್‌ನ ಸ್ವಭಾವ ಮತ್ತು ನಾಮಬಲ(?)ದೊಂದಿಗೆ ನಾಲಿಗೆ ತಿರುಚಿ ಇತಿಹಾಸ ಮುಚ್ಚಿಹಾಕುವ ಉಳ್ಳವರ ಹುನ್ನಾರವಿದು ಎಂದು ನಂಬಲೇಬೇಕು. ಇದಷ್ಟೇ ಆಗಿದ್ದರೆ ಸುಮ್ಮನಾಗಬಹುದೇನೋ, ಆದರೆ ಇಂದಿಗೂ ಈ ಜನಾಂಗದವರಲ್ಲಿ ಹಲವರು ತಾವು ವೀರಶೈವರೆಂದು ಹೇಳಿಕೊಳ್ಳುತ್ತ ಮಠಮಾನ್ಯಗಳಿಂದ ಆಶೀರ್ವಾದ-ಅನುಕೂಲಗಳನ್ನೂ, ಕುರುಬರೆಂದು ಜಾತಿಪತ್ರ ಮಾಡಿಸುತ್ತ ಸರಕಾರದ ಸೌಲಭ್ಯಗಳನ್ನೂ ಪಡೆದು, ಅತ್ತೆ ಪಕ್ಷದವರ ಹೋಳಿಗೆಯೂ ಬೇಕು ಸೊಸೆ ಪಕ್ಷದವರ ತುಪ್ಪವೂ ಬೇಕು ಎಂಬ ನೀತಿಯನ್ನು ಅನುಸರಿಸುತ್ತಿದ್ದಾರೆ.

ಕೊನೆಹನಿ : ಕನ್ನಡ ನಾಡಿನ ಹಿರಿಯ ವಿದ್ವಾಂಸರಾದ ಡಾ. ಎಂ.ಎಂ. ಕಲಬುರ್ಗಿ ಅವರು ಒಂದು ಕಡೆ `ಹನ್ನೆರಡನೇ ಶತಮಾನದಲ್ಲಿ ನಡೆದ ಶರಣರ ಸಮಾಜೊಧಾರ್ಮಿಕ ಕ್ರಾಂತಿಯ ಕುದಿಪಾತ್ರೆಯಲ್ಲಿ ಕರ್ನಾಟಕದ ಅನೇಕ ಸಣ್ಣಪುಟ್ಟ ಜಾತಿಗಳು ಕರಗಿ ಹೋದವು  ಎಂದು ದಾಖಲಿಸುತ್ತಾರೆ.
 
ವಿಷಾದವೆಂದರೆ ಅವು ಕರಗದೇ ನಡುಗಡ್ಡೆಯಾಗಿ ಇಂದು ತೇಲುತ್ತಲಿವೆ. ಇವುಗಳಿಗೆ ಉದಾಹರಣೆಯಾಗಿ ಹಂಡೆಕುರುಬ, ಕುರುಬ ಲಾಳಗೊಂಡ, ಕುರುಬ ಕುಂಚಟಿಗ, ಗಾಣಿಗ, ಹೂಗಾರ, ಕುರುವಿನಶೆಟ್ಟಿ, ಹಡಪದ ಮೊದಲಾದ ಹಲವು ಹತ್ತಾರು ಜಾತಿಗಳನ್ನು ಇಂದಿಗೂ ಗುರುತಿಸಬಹುದು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT