ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಯಲಾರೆವೇ ಜಲ ಸಂರಕ್ಷಣೆ ಪಾಠ?

Last Updated 8 ಮೇ 2016, 19:44 IST
ಅಕ್ಷರ ಗಾತ್ರ

ಆಶ್‌ಲ್ಯಾಂಡ್ ಎನ್ನುವುದು ಅಮೆರಿಕದಲ್ಲಿನ ಓರೆಗಾಂವ್ ಪ್ರಾಂತ್ಯದ ಒಂದು ಚಿಕ್ಕಪಟ್ಟಣ. ಅಲ್ಲಿನ ಜನಸಂಖ್ಯೆ ಸುಮಾರು 21 ಸಾವಿರ. ಜಲ ಸಂರಕ್ಷಣೆ ಮತ್ತು ಮಿತಬಳಕೆ ಕುರಿತು 1989ರಲ್ಲಿ ಅಲ್ಲಿ ತೆಗೆದುಕೊಂಡ ಒಂದು ಮಹತ್ವದ ನಿರ್ಧಾರ ಇಡೀ ಜಗತ್ತಿನ ಆಡಳಿತಗಾರರು ಮತ್ತು ಜನಸಾಮಾನ್ಯರ ಕಣ್ಣು ತೆರೆಸುವಂತಹುದು.

ನಮ್ಮಲ್ಲಿ ಕರ್ನಾಟಕ ಮತ್ತು ನೆರೆಯ ತಮಿಳುನಾಡಿನ ನಡುವೆ ಕಾವೇರಿ ನೀರಿಗಾಗಿ ನಡೆಯುತ್ತಿರುವಂತಹ ಹೋರಾಟದಂತೆ ಆಶ್‌ಲ್ಯಾಂಡ್ ಮತ್ತು ಅದರ ನೆರೆಯ ಪ್ರಾಂತ್ಯದ ನಡುವೆ ತೊರೆಯೊಂದರ ನೀರಿನ ಹಂಚಿಕೆ ಕುರಿತು ವಿವಾದ ಉಂಟಾಗಿತ್ತು. ಈ ಸಂಬಂಧ ನಡೆದ ನ್ಯಾಯ ತೀರ್ಮಾನದಲ್ಲಿ ಆಶ್‌ಲ್ಯಾಂಡ್‌ನ ಜನ ಮುಂದಿನ 8 ವರ್ಷಗಳಲ್ಲಿ ಆ ತೊರೆಯ ನೀರ ಮೇಲಿನ ಹಕ್ಕನ್ನು ಭಾಗಶಃ ಕಳೆದುಕೊಳ್ಳುವವರಿದ್ದರು.

ಆ ಮೂಲಕ ಭೀಕರ ದಿನಗಳು ಅವರಿಗೆ  ಎದುರಾಗಲಿದ್ದವು. ಆಗ ಸ್ಥಳೀಯ ಆಡಳಿತವು ಒಂದು ಸಲಹಾ ಸಂಸ್ಥೆಯನ್ನು ಸಂಪರ್ಕಿಸಿ ಪರಿಹಾರಕ್ಕಾಗಿ ಮೊರೆಯಿಟ್ಟಿತು. ಅಧ್ಯಯನದ ಬಳಿಕ ಆ ಸಂಸ್ಥೆಯು ಕೊಟ್ಟ ಸಲಹೆ: ತೊರೆಗೆ ಒಂದು ಅಣೆಕಟ್ಟನ್ನು ಕಟ್ಟುವುದು ಮತ್ತು ಅದರಿಂದಾಗಿ ದಿನವೊಂದಕ್ಕೆ ದೊರೆಯುವ ಅಂದಾಜು 20 ಲಕ್ಷ ಲೀಟರ್ ನೀರನ್ನು ಪೂರೈಸುವುದು.

ಆದರೆ ಅದಕ್ಕೆ ತಗಲುವ ಅಂದಾಜು ವೆಚ್ಚ ಸುಮಾರು 1.10 ಕೋಟಿ ಡಾಲರ್‌ (ಅಂದಾಜು ₹ 72.60 ಕೋಟಿ). ಆ ವೆಚ್ಚವು ಪ್ರಾಂತ್ಯದ ನಿವಾಸಿಗಳ ಮೇಲೆ ನೇರವಾಗಿ ತೆರಿಗೆಯ ರೂಪದಲ್ಲಿ ಬೀಳುತ್ತಿತ್ತು. ಅಲ್ಲದೆ ಅಣೆಕಟ್ಟೆ ನಿರ್ಮಾಣದಿಂದಾಗಿ ಒಂದು ಜಾತಿಯ ಚುಕ್ಕೆ ಗೂಬೆ ಸಂತತಿಯ ಅವನತಿ ಮತ್ತು ಸುತ್ತಮುತ್ತಲಿನ ಜೀವ ವೈವಿಧ್ಯಕ್ಕೆ ಧಕ್ಕೆ ನಿಶ್ಚಿತವಾಗಿತ್ತು.

ಆಗ ಅಲ್ಲಿನ ಸರ್ಕಾರ ಬೇರೆ ರೀತಿಯಲ್ಲೇ ಯೋಚಿ ಸಿತು.  ಅದೇನೆಂದರೆ, ಹೇಗೂ ನೀರಿನ ಕೊರತೆಯಾಗು ವುದು ಮುಂದಿನ 8 ವರ್ಷಗಳಲ್ಲಿ. ಆದ್ದರಿಂದ ನಾವು ಈಗಿನಿಂದಲೇ ಜಲ ಸಂರಕ್ಷಣೆಗೆ ಮತ್ತು ಮಿತ ಬಳಕೆಗೆ ಸರಿಯಾದ ಕ್ರಮಗಳನ್ನು ಕೈಗೊಂಡರೆ ಒಳ್ಳೆಯದು ಮತ್ತು ವೆಚ್ಚವೂ ತಗ್ಗಬಹುದು. ಹೀಗೆಂದು ಯೋಚಿಸಿ ಮತ್ತೊಂದು ಸಲಹಾ ಸಂಸ್ಥೆಯನ್ನು ಸಂಪರ್ಕಿಸಿತು.

2ನೇ ಸಂಸ್ಥೆಯು ಪರಿಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಕೆಳಗಿನ ಸಲಹೆಯನ್ನು ಕೊಟ್ಟಿತು: ನೀರು ಸರಬ ರಾಜಿನ ಕೊಳವೆಯ ಸೋರುವಿಕೆಯನ್ನು ಗುರುತಿಸಿ ತಡೆ ಗಟ್ಟುವುದು, ನೀರಿನ ಮಿತ ಹಾಗೂ ಪರಿಣಾಮಕಾರಿ ಬಳಕೆಯ ನಳ, ಷವರ್ ಹೆಡ್‌ಗಳು ಮತ್ತು ಮಿತವ್ಯಯಿ ಶೌಚ ವ್ಯವಸ್ಥೆಯನ್ನು ಆಶ್‌ಲ್ಯಾಂಡ್‌ನ ಪ್ರತಿ ಮನೆಯವರೂ ಅಳವಡಿಸಿಕೊಂಡರೆ ತೊರೆಗೆ ಅಣೆಕಟ್ಟನ್ನು ಕಟ್ಟುವ ಅಗತ್ಯವೇ ಬೀಳದು.

ಅದಕ್ಕಾಗಿ ತಗಲುವ ಒಟ್ಟು ವೆಚ್ಚವು ಮೊದಲಿನ ಅಂದಾಜು ವೆಚ್ಚದ 1/12ರಷ್ಟು ಮಾತ್ರ! ಸಹಜವಾಗಿ ಅವರ ಆಯ್ಕೆ ಏನಾಗಿತ್ತೆಂದು ವಿವರಿಸುವ ಅಗತ್ಯವಿಲ್ಲ ತಾನೇ? ಆದರೆ ನಮ್ಮಲ್ಲಿನ ಪರಿಸ್ಥಿತಿ ತದ್ವಿರುದ್ಧ. ನಮ್ಮ ಡಿ.ಎನ್.ಎ.ದಲ್ಲಿಯೇ ಬಹುಶಃ ನೀರಿನ ಮಿತಬಳಕೆ, ಅದರ ಸದ್ವಿನಿಯೋಗದ ಪರಿವೆಯೇ ಇಲ್ಲವಾಗಿದೆಯೇನೊ? ಉಳ್ಳವರು ಯಥೇಚ್ಛವಾಗಿ ನೀರನ್ನು ಬಳಸಿ ಪೋಲು ಮಾಡಿದರೆ, ಅದರ ಕೊರತೆಯಿರುವ ಪರಿಸರದ ಜನರಲ್ಲಿ ಕೂಡ ನೀರಿನ ಸದ್ವಿನಿಯೋಗದ ವಿಚಾರದಲ್ಲಿ ಕೊಂಚ ತಾತ್ಸಾರವೇ.

ಬಯಲು ಸೀಮೆಯಲ್ಲಿ 3,  5, 7, 10, 15 ದಿನಗಳಿಗೊಮ್ಮೆ ಪ್ರತ್ಯಕ್ಷವಾಗುವ ನೀರು, ಅದನ್ನು ಸಂಗ್ರಹಿಸಲು ಮನೆ-ಅಂಗಳದ ತುಂಬ ಪೇರಿಸಿಟ್ಟ ಕೊಡ, ಕ್ಯಾನ್, ಡ್ರಮ್, ಬೃಹತ್ ಟ್ಯಾಂಕ್‌ಗಳು... ಆದರೆ ನೀರು ಬಂದಾಗ ಮಾತ್ರ ತಮ್ಮ ಸಂಗ್ರಹದಲ್ಲಿ ಉಳಿದ ನೀರನ್ನು ಗಿಡಗಳಿಗೂ ಹಾಕದೆ, ಶೌಚಕ್ಕೂ ಬಳಸದೆ ಹಾಗೇ ರಸ್ತೆಯಲ್ಲೇ ಚೆಲ್ಲುವುದು ಯಾವ ರೀತಿಯ ನಡೆ? ಇನ್ನು ದಿನನಿತ್ಯದ ಸ್ನಾನ, ಬಟ್ಟೆ, ಪಾತ್ರೆಗಳಿಗೆ ಬಸಿದ ತ್ಯಾಜ್ಯ ನೀರನ್ನು ಪುನಃ ಸಂಸ್ಕರಿಸದೆಯೂ ಕೈತೋಟಕ್ಕೆ ಬಳಸಬಹುದು.

ಆಶ್ಚರ್ಯದ ವಿಷಯವೆಂದರೆ ಬಹಳಷ್ಟು ಜನರಿಗೆ ಈ ನಿಟ್ಟಿನ ಸಾಮಾನ್ಯ ತಿಳಿವಳಿಕೆ ಕೂಡ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಅಲ್ಲದೆ ಅವರ ಕೆಲವು ನಂಬಿಕೆಗಳು ಈ ರೀತಿಯಾಗಿವೆ: ಗಲೀಜು ನೀರಿನಲ್ಲಿ ಬೆಳೆಸಿದ ಗಿಡಗಳ ಹೂವುಗಳನ್ನು ನಾವು ಮುಡಿಯುವುದೇ? ದೇವರಿಗೆ ಏರಿಸುವುದೇ? ತರಕಾರಿಗಳನ್ನು ತಿನ್ನುವುದೇ?

ಇನ್ನು ನೀರನ್ನು ಶುದ್ಧೀಕರಿಸಲು ಬಳಸುವ ಆಧುನಿಕ ರಿವರ್ಸ್‌ ಆಸ್ಮಾಸಿಸ್ ಉಪಕರಣದ ಕಥೆಯೇ ಬೇರೆ. ಒಂದು ಲೀಟರ್ ಶುದ್ಧೀಕರಿಸಿದ ನೀರನ್ನು ಪಡೆಯುವಾಗ ಕನಿಷ್ಠ ಮೂರು ಲೀಟರ್ ನೀರು ವ್ಯರ್ಥವಾಗುವ ಬಗ್ಗೆ ಸಾಮಾನ್ಯರಿಗೆ ತಿಳಿದಿರುವುದು ಅನುಮಾನ.

ಮಲೆನಾಡಿನವರೇನೂ ನೀರು ಪೋಲು ಮಾಡುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅಲ್ಲಿಯ ನಗರವಾಸಿಗಳ ಕಥೆಯೂ ಹೆಚ್ಚೂಕಡಿಮೆ ಬಯಲು ಸೀಮೆಯವರಂತೆಯೆ. ಒಂದೇ ವ್ಯತ್ಯಾಸವೆಂದರೆ ನೀರಿಗಾಗಿ ಬಹಳಷ್ಟು ಸಂಗ್ರಾಹಕಗಳು ಅವರಿಗೆ ಸದ್ಯ ಬೇಕಾಗಿಲ್ಲ. ಆದರೆ ಮುಂದಿನದನ್ನು ಬಲ್ಲವರಾರು?

ಬಿರುಬೇಸಿಗೆಯ ಈ ದಿನಗಳು ಎಲ್ಲರಿಗೂ ಒಂದು ಪಾಠ. ಜಗಳೂರಿನ ಗ್ರಾನೈಟ್ ಗಣಿಯಲ್ಲಿ ಉದ್ಭವವಾದ ಸಿಹಿನೀರಿನ ಒರತೆಯನ್ನು ನಮ್ಮ ಆಡಳಿತ ಯಾವ ರೀತಿ ಬಳಸಿಕೊಂಡಿದೆ ಎನ್ನುವುದು ನಮ್ಮ ಪರಿಸರದ ಬಗೆಗಿನ ಕಾಳಜಿಯನ್ನು ಎತ್ತಿ ತೋರಿಸಿದೆ.

ಕೆರೆಯಂಗಳದ ಒತ್ತುವರಿಯಂತೂ ತಡೆಯಿಲ್ಲದೆ ಇಂದೂ ನಡೆಯುತ್ತಿದೆ. ಹಿಂದಿನ ತಲೆಮಾರುಗಳ ಅನಕ್ಷರಸ್ಥರು ಕೆರೆಯ ನೀರಿನ ಬಳಕೆ, ಅದರ ಪುನರುಜ್ಜೀವನಕ್ಕೆ ಹೂಳೆತ್ತುವುದರ ಮೂಲಕ ತೋರುತ್ತಿದ್ದ ಕಾಳಜಿ, ನೀರಿನ ಸಹಜ ಹರಿವಿನ ಇಳಿಜಾರುಗಳಲ್ಲಿ ಅಲ್ಲಲ್ಲಿ ನಿರ್ಮಿಸುತ್ತಿದ್ದ ಕೆರೆಗಳ ಜಾಲ ಮುಂತಾದ ಚಟುವಟಿಕೆಗಳು ಈಗಿನ ಅಕ್ಷರಸ್ಥ ನಾಗರಿಕ ಸಮುದಾಯದವರಿಗೆ ಇಲ್ಲದಿರುವುದು ನಾಚಿಕೆಗೇಡು. ನಮ್ಮಲ್ಲಿನ ರಾಜಕಾರಣಿಗಳು, ಅಧಿಕಾರಿಗಳು ಪ್ರಪಂಚದಾದ್ಯಂತ ಅಧ್ಯಯನಕ್ಕೆಂದು (?) ವರ್ಷ ವರ್ಷ ಪ್ರವಾಸ ಕೈಗೊಳ್ಳುತ್ತಾರಾದರೂ ಅವರು ಅಲ್ಲಿಂದ ಏನನ್ನು ಕಲಿಯುತ್ತಾರೆ ಮತ್ತು ಅದರಿಂದ ಜನರಿಗಾಗಿ ಏನನ್ನು ಮಾಡುತ್ತಾರೆ ಎನ್ನುವುದೇ ಯಕ್ಷಪ್ರಶ್ನೆ.

ಇಸ್ರೇಲ್‌ನಂತಹ ಬರಪೀಡಿತ ದೇಶವೂ ನೀರಿನ ಮಿತವ್ಯಯ ತಂತ್ರಗಳನ್ನು ಅಳವಡಿಸಿಕೊಂಡು, ಕೆಲವೇ ಹನಿಗಳನ್ನು ಬಳಸಿಕೊಂಡು ಹಲವಾರು ದೇಶಗಳಿಗೆ ತರಕಾರಿ, ಹಣ್ಣು ಹಾಗೂ ಶುದ್ಧೀಕರಿಸಿದ ನೀರನ್ನು ರಫ್ತು ಮಾಡುತ್ತಿದೆ. ಆದರೆ ಅದಕ್ಕಿಂತ ಹೆಚ್ಚು ಮಳೆ ಬೀಳುವ ನಮ್ಮ ಕೋಲಾರದಂತಹ ಪ್ರದೇಶಗಳಲ್ಲಿ ನಾವು ನೀರಿಗಾಗಿ ಪರದಾಡುತ್ತಿದ್ದೇವೆ.

ನದಿ ನೀರನ್ನು ತಿರುಗಿಸದೆಯೇ ಹಲವಾರು ಯೋಜನೆಗಳನ್ನು ದಕ್ಷತೆಯಿಂದ ಅಳವಡಿಸಿಕೊಂಡಲ್ಲಿ ಕಡಿಮೆ ವೆಚ್ಚದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಬಹುದು. ಭೀಕರ ಬರದ ಪರಿಸ್ಥಿತಿಯಲ್ಲಿ ನಾವು ನೀರಿನ ಮಿತ ಬಳಕೆಗೆ ಗಮನಕೊಟ್ಟರೆ ಮಾತ್ರ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರದಂತೆ ತಡೆಯಬಹುದೇನೊ?  ಈ ನಿಟ್ಟಿನಲ್ಲಿ ನಾವು ಕೂಡಲೇ ಕಾರ್ಯ ನಿರತರಾಗದೇ ಇದ್ದಲ್ಲಿ ನಮ್ಮ ದೇಶವೂ ವೆನಿಜುವೆಲಾದಂತೆ ಎಷ್ಟೆಲ್ಲ ಪ್ರಾಕೃತಿಕ ಸಂಪನ್ಮೂಲಗಳಿದ್ದರೂ ಬರಡಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಶುರುವಾಗಲಿದೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ಜಲ ಸಂರಕ್ಷಣೆ ಕಾರ್ಯಾರಂಭ ಮಾಡದಿದ್ದರೆ ಮುಂದಿನ ದಿನಗಳು ಶೋಚನೀಯವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT