ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಇತ್ಯರ್ಥವಾಗಲಿ ಬಾಕಿ ಪ್ರಕರಣ

ಸಂಗತ
Last Updated 2 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ತಮಿಳುನಾಡಿಗೆ ಇದೇ 1ರಿಂದ 6ರವರೆಗೆ ಪ್ರತಿದಿನ 6,000 ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ಕರ್ನಾಟಕಕ್ಕೆ ಆದೇಶಿಸಿರುವುದು ದುರದೃಷ್ಟಕರ. ನಮ್ಮ ಜಲಾಶಯಗಳಲ್ಲಿ ಈಗಿರುವ ನೀರಿನ ಸಂಗ್ರಹ ಕಾವೇರಿ ಜಲಾನಯನ ಪ್ರದೇಶದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮುಂದಿನ ಆರು ತಿಂಗಳ ಕುಡಿಯುವ ನೀರಿನ ಅವಶ್ಯಕತೆಗೇ ಸಾಕಾಗುವುದಿಲ್ಲ. ಆದರೂ ಕೋರ್ಟ್ ನಮ್ಮ ಮನವಿಯನ್ನು ಪರಿಗಣಿಸದೇ ಇರುವುದರಿಂದ ಮುಂದಿನ ದಿನಗಳಲ್ಲಿ ಅತೀವ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ.

ಈ ವರ್ಷ ನಮ್ಮ ಬೆಳೆಗಳಿಗೆ ನೀರು ಒದಗಿಸದೆ ಇರುವುದರಿಂದ ಬಹುತೇಕ ರೈತರು ತಮ್ಮ ಜಮೀನಲ್ಲಿ ಬೆಳೆ ಹಾಕಿಲ್ಲ. ಆದರೆ ಪ್ರಾರಂಭದಲ್ಲಿ ಬೆಳೆಗೆ ನೀರು ಕೊಡುತ್ತೇವೆಂದು ತಿಳಿಸಿ ನಂತರ ಕಾಲುವೆಗಳಲ್ಲಿ ನೀರು ಬಿಡದೇ ಇರುವುದರಿಂದ ಹಾಕಿದ್ದ ಬೆಳೆಗಳೂ ಒಣಗುತ್ತಿವೆ. ಇದರಿಂದ ಬಿತ್ತನೆ ಬೀಜ, ರಾಸಾಯನಿಕಗಳಿಗೆ ಸಾಲ ಮಾಡಿದ್ದ ರೈತರು, ಸಾಲವನ್ನು ಮರುಪಾವತಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಈ ಸಾಲವನ್ನು ಮನ್ನಾ ಮಾಡುವುದರ ಜೊತೆಗೆ ಬೆಳೆ ನಷ್ಟ ಮತ್ತು ಬೆಳೆಯಿಲ್ಲದೆ ಹಾನಿಗೊಳಗಾದ ರೈತರಿಗೆ ತುರ್ತು ಪರಿಹಾರ ಒದಗಿಸಬೇಕು.

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ  ಕೋರ್ಟ್ ನೀಡಿರುವ ಮತ್ತೊಂದು ಆದೇಶ ಕರ್ನಾಟಕಕ್ಕೆ ಆಘಾತಕಾರಿ. 2007ರ ಫೆಬ್ರುವರಿ 5ರಂದು ಕಾವೇರಿ ನ್ಯಾಯಮಂಡಳಿ ನೀಡಿದ ಅಂತಿಮ ಆದೇಶದಲ್ಲಿ ನಮಗೆ ಹಂಚಿಕೆ ಆಗಿರುವ 270 ಟಿಎಂಸಿ ಅಡಿ ನೀರಿನ ಪ್ರಮಾಣವು ನಮ್ಮ ಎಲ್ಲಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶ, ಪ್ರಗತಿಯಲ್ಲಿರುವ ಯೋಜನೆಗಳು, ಏತ ನೀರಾವರಿ, ಕುಡಿಯುವ ನೀರಿನ ಪೂರೈಕೆಗೆ ಸಾಕಾಗುವುದಿಲ್ಲ.

ಆದ್ದರಿಂದ ನ್ಯಾಯಮಂಡಳಿಯ ಈ ಆದೇಶ ಪ್ರಶ್ನಿಸಿ, ಅದನ್ನು ವಜಾಗೊಳಿಸಲು 2007ರ ಏಪ್ರಿಲ್‌ನಲ್ಲಿ ಕರ್ನಾಟಕವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಇದೇ ರೀತಿ ತಮಿಳುನಾಡು, ಕೇರಳ, ಪುದುಚೇರಿ ಸಹ ಮೇಲ್ಮನವಿ ಸಲ್ಲಿಸಿದ್ದು,  ಸುಮಾರು 9 ವರ್ಷಗಳಿಂದ ಅವು ಇತ್ಯರ್ಥವಾಗಿಲ್ಲ.

ಈ ಅರ್ಜಿಗಳ ವಿಚಾರಣೆಯನ್ನು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಇದೇ 18ಕ್ಕೆ ನಿಗದಿಪಡಿಸಿದೆ. ಆದರೂ ಸುಮಾರು ಒಂದು ತಿಂಗಳಿನಿಂದ ದ್ವಿಸದಸ್ಯ ಪೀಠ ತಮಿಳುನಾಡಿನ ಮನವಿ ಮೇರೆಗೆ ಪದೇ ಪದೇ ನೀರು ಬಿಡಲು ಆದೇಶಿಸುತ್ತಾ ಬಂದಿದೆ. ಇದು ಕರ್ನಾಟಕದ ಪಾಲಿಗೆ ಸಂಕಷ್ಟದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನ್ಯಾಯಾಲಯವು  ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶ ಹಾಗೂ ಜಲಾಶಯಗಳ ವಸ್ತುಸ್ಥಿತಿಯನ್ನು ಪರಿಗಣಿಸದೆ, ಕರ್ನಾಟಕದ ಬೇಡಿಕೆಯಂತೆ ತಾಂತ್ರಿಕ ಅಧ್ಯಯನ ತಂಡವನ್ನೂ ಕಳಿಸದೆ ಈ ರೀತಿ ಪದೇ ಪದೇ ನೀರು ಬಿಡಲು ಆದೇಶಿಸುತ್ತಿರುವುದು ರಾಜ್ಯದ ಪಾಲಿಗೆ ಅತ್ಯಂತ ಸಂಕಷ್ಟಕರ ಪರಿಸ್ಥಿತಿಯನ್ನು ತಂದೊಡ್ಡಿದೆ.

ಇದರ ಜೊತೆಗೆ ನಾವು ಕಷ್ಟಪಟ್ಟು ನಿರ್ಮಿಸಿರುವ ಜಲಾಶಯಗಳಲ್ಲಿ ನೀರು ಸಂಗ್ರಹಿಸುವ ಮತ್ತು ಬಿಡುವ ಸ್ವಾತಂತ್ರ್ಯವನ್ನು ನ್ಯಾಯಮಂಡಳಿ ಆದೇಶದಂತೆ ರಾಜ್ಯದಿಂದ ಕಸಿದುಕೊಂಡು, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಸೂಚನೆ ನೀಡಿರುವುದು ಅತ್ಯಂತ ದುರದೃಷ್ಟಕರ. ಈ ಮಂಡಳಿ ರಚನೆಯಾದ ಕೂಡಲೇ ನಮ್ಮ ರಾಜ್ಯದ ಜಲಾಶಯಗಳಿಂದ ನಮ್ಮ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸುವ ಪ್ರಮಾಣವು ಅದರ ತೀರ್ಮಾನದಂತೆ ಜಾರಿಗೊಳ್ಳುತ್ತದೆ.

ಆಗ ನಮ್ಮ ರೈತರ ಜಮೀನುಗಳಿಗೆ ಅಗತ್ಯ ಪ್ರಮಾಣದಷ್ಟು ನೀರು ಒದಗುವುದು ಕಷ್ಟವಾಗುತ್ತದೆ. ನಮ್ಮ ರೈತರ ಅವಶ್ಯಕತೆಯ ಬಗ್ಗೆ ನಮ್ಮ ರಾಜ್ಯದ ಪ್ರತಿನಿಧಿಯು ಅಗತ್ಯವಾದ ನೀರು ಬಿಡಲು ಮಂಡಳಿಯನ್ನು ಕೋರಬೇಕಾಗುತ್ತದೆ. ಅಗತ್ಯ ಪ್ರಮಾಣದ ಮಳೆ ಬಾರದ ಸಂದರ್ಭದಲ್ಲಿ ಜಲಾಶಯಗಳು ಭರ್ತಿಯಾಗದೆ ಈ ವರ್ಷದಲ್ಲಿ ಆದಂತೆ ನಮ್ಮ ಬೆಳೆಗಳಿಗೆ ನೀರು ಒದಗಿಸದೇ ಇದ್ದರೂ ತಮಿಳುನಾಡಿನ ಬೆಳೆಗೆ ನೀರು ಬಿಡಲಾಗುತ್ತದೆ. ಇದರಿಂದ ನಮ್ಮ ರೈತರು ಇಂತಹ ಸಂದರ್ಭಗಳಲ್ಲಿ ಅತೀವ ಸಂಕಷ್ಟವನ್ನು ಎದರಿಸಬೇಕಾಗುತ್ತದೆ.

ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನಿಂದ ರಾಜ್ಯದ ರೈತರು ಮತ್ತು ನಾಗರಿಕರಿಗೆ ಒದಗುವ ಗಂಭೀರವಾದ ಪರಿಣಾಮಗಳು ಈ ಕೆಳಕಂಡಂತಿವೆ:
ರಾಜ್ಯದ ಈಗಿನ ಬಹುತೇಕ ನೀರಾವರಿ, ಅರೆ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಕೇವಲ ಒಂದು ಬೆಳೆ ಬೆಳೆಯಲು ಸಾಧ್ಯವಾಗಬಹುದು. ನಮ್ಮ ಎಲ್ಲಾ ಅಚ್ಚುಕಟ್ಟು ಪ್ರದೇಶಕ್ಕೆ ಅಗತ್ಯ ಪ್ರಮಾಣದ ನೀರನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಈಗಿನ ಪರಿಸ್ಥಿತಿಯಂತೆ ನಮ್ಮ ಸಂಕಷ್ಟದ ಸಮಯದಲ್ಲೂ ತಮಿಳುನಾಡಿಗೆ ನೀರು ಕೊಡಬೇಕಾಗಿರುವುದರಿಂದ ನಮ್ಮ ಬೆಳೆಗಳಿಗೆ ನೀರು ಸಿಗದೆ ಬೆಳೆ ಒಣಗುವ ಪರಿಸ್ಥಿತಿ ಉದ್ಭವಿಸಬಹುದು.

ಈಗ ನಮ್ಮ ಪರಿಸ್ಥಿತಿಯಲ್ಲಿ ನಾಲೆಯ ಕೊನೆಯ ಭಾಗದ ಪ್ರದೇಶಗಳಿಗೆ ಕಾಲುವೆಗಳ ಮೂಲಕ ನೀರು ಮುಟ್ಟುತ್ತಿಲ್ಲ. ಮುಂದೆ ಈ ಪ್ರದೇಶಗಳು ಒಣಭೂಮಿಗಳಾಗುತ್ತವೆ.ನಮ್ಮ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆ ಉಂಟಾಗಿ ಬಹುತೇಕ ಕೆರೆಗಳು ಬತ್ತಿ ಹೋಗುವುದರಿಂದ ಆ ಪ್ರದೇಶದ ಅಂತರ್ಜಲದ ಪ್ರಮಾಣ ಕುಸಿಯುತ್ತದೆ.

ಕಾವೇರಿ ಜಲಾನಯನ ಪ್ರದೇಶದ ಈಗಿರುವ ಕೆಲವು ಅಚ್ಚುಕಟ್ಟು ಪ್ರದೇಶಗಳಲ್ಲಿ ಕಬ್ಬು ಬೆಳೆಯಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುವುದರ ಜೊತೆಗೆ ಸಕ್ಕರೆ ಕಾರ್ಖಾನೆ ಮತ್ತು ಕಬ್ಬಿನ ಗಾಣಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಕೃಷಿ ಆಧಾರಿತ ಕಾರ್ಖಾನೆಗಳ ಲಕ್ಷಾಂತರ ಜನರು ನಿರುದ್ಯೋಗಿಗಳಾಗುತ್ತಾರೆ.

ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು, ಹಾಸನ ಮುಂತಾದ ನಗರ, ಪಟ್ಟಣ ಮತ್ತು ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಕಷ್ಟವಾಗುತ್ತದೆ. ರಾಜ್ಯದ ಎಲ್ಲ ಏತ ನೀರಾವರಿ ಯೋಜನೆಗಳಿಗೆ ನೀರನ್ನು ಒದಗಿಸುವುದು ಕಷ್ಟವಾಗಿ, ಇದಕ್ಕಾಗಿ  ಸರ್ಕಾರ ಹೂಡಿರುವ ಬಂಡವಾಳ ನಿರರ್ಥಕವಾಗುತ್ತದೆ.

‘ಕಾವೇರಿ ಜಲಾನಯನ ಪ್ರದೇಶದಲ್ಲಿ ಕರ್ನಾಟಕ ಯಾವುದೇ ಹೊಸ ನೀರಾವರಿ ಯೋಜನೆ ಕೈಗೊಳ್ಳಬಾರದು,  ನದಿ ಮತ್ತು ಉಪನದಿಗಳಿಗೆ ಅಡ್ಡಗಟ್ಟೆ  ಕಟ್ಟಬಾರದು, ಕೆರೆಗಳ ಹೂಳು ತೆಗೆಯಬಾರದು, ಶಿವನಸಮುದ್ರ, ಮೇಕೆದಾಟು ಜಲ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳಬಾರದು’ ಇತ್ಯಾದಿ ಬೇಡಿಕೆಗಳನ್ನಿಟ್ಟು ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಮನವಿ ಸಲ್ಲಿಸಿದೆ. ಇದೂ ಇನ್ನೂ ಇತ್ಯರ್ಥವಾಗಿಲ್ಲ.

ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಕಾವೇರಿ ಜಲಾನಯನ ಪ್ರದೇಶದ ನೀರನ್ನು ಸಂಗ್ರಹಿಸಿ ಅಚ್ಚುಕಟ್ಟು ಪ್ರದೇಶಕ್ಕೆ ಉಪಯೋಗಿಸುವ ಅವಕಾಶದಿಂದ ನಾವು ವಂಚಿತರಾಗಿ, ಬಹಳಷ್ಟು ಪ್ರದೇಶಗಳು ಬರಡು ಭೂಮಿಯಾಗುವ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಆದ್ದರಿಂದ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ, ನ್ಯಾಯಮಂಡಳಿಯ ಅಂತಿಮ ಆದೇಶವನ್ನು ಪ್ರಶ್ನಿಸಿರುವ ಮೇಲ್ಮನವಿ ಪ್ರಕರಣಗಳಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಈ ಆದೇಶವನ್ನು ಪುನರ್ ಪರಿಶೀಲನೆಗೆ ಒಳಪಡಿಸುವಂತಹ ಆದೇಶವನ್ನು ಪಡೆಯಬೇಕಾಗಿದೆ.
(ಲೇಖಕ ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT