ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿ, ಬಾಲನ್ಯಾಯಕ್ಕೆ ಅಡ್ಡಿ

Last Updated 24 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಬಾಲ ನ್ಯಾಯ ಕಾಯ್ದೆಗೆ 15 ವರ್ಷಗಳ ನಂತರ ದೊಡ್ಡಪ್ರಮಾಣದ ತಿದ್ದುಪಡಿಯಾಗಿದ್ದು, ರಾಜ್ಯಸಭೆಯಲ್ಲಿ ಮಂಗಳವಾರ ಮಂಡಿಸ ಲಾದ ಈ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಇನ್ನು ರಾಷ್ಟ್ರಪತಿ ಅಂಕಿತ ಬಿದ್ದರೆ ಈ ಮಸೂದೆ ಕಾಯ್ದೆಯಾಗಿ ಜಾರಿಯಾಗಲಿದೆ. ಹೊಸ ಮಸೂದೆ ಪ್ರಕಾರ 16ರಿಂದ 18 ವರ್ಷದೊಳಗಿನ ಮಕ್ಕಳು ಗಂಭೀರ ಸ್ವರೂಪದ ಅಪರಾಧ ಮಾಡಿದರೆ ಅವರನ್ನು ಸೆಷನ್ಸ್ ನ್ಯಾಯಾಲಯಕ್ಕೆ ಕಳುಹಿಸಿ ವಯಸ್ಕರಂತೆ ವಿಚಾರಣೆ ನಡೆಸುವ ಅವಕಾಶ ಇದೆ. ಪ್ರತಿ ಜಿಲ್ಲೆಯಲ್ಲಿ ಈಗಾಗಲೆ ಕಾರ್ಯನಿರ್ವಹಿಸುತ್ತಿರುವ ಬಾಲನ್ಯಾಯ ಮಂಡಳಿ ಅಂತಹ ಮಕ್ಕಳನ್ನು ಗುರುತಿಸಿ ಸೆಷನ್ಸ್ ನ್ಯಾಯಾಲಯಕ್ಕೆ ಕಳುಹಿಸಬೇಕಾಗುತ್ತದೆ.

ದೆಹಲಿಯಲ್ಲಿ ಮೂರು ವರ್ಷಗಳ ಹಿಂದೆ ಬಸ್ಸೊಂದರಲ್ಲಿ ನಡೆದ ಅತಿಕ್ರೂರವಾದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾರೋಪಿಯು ತನ್ನ ಶಿಕ್ಷೆಯ ಅವಧಿ ಮುಗಿದು ಹೊರಬರುತ್ತಿದ್ದಂತೆ ಈ ಮಸೂದೆ ಜೀವ ತಾಳಿದೆ. ಮೂಲ ಕಾಯ್ದೆಯ ಪ್ರಕಾರ 18 ವರ್ಷದೊಳಗಿನವರೆಲ್ಲರೂ ಮಕ್ಕಳೇ. ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, 16–18 ವರ್ಷ ವಯೋಮಾನದ ಮಕ್ಕಳು ಮಾಡಿದ ಅಪರಾಧಗಳು ಗಂಭೀರ ಸ್ವರೂಪದ್ದಾದರೆ ಅವರನ್ನು ವಯಸ್ಕರ ನ್ಯಾಯಾಲಯಕ್ಕೆ ಕಳುಹಿ ಸುವ ವ್ಯವಸ್ಥೆಯನ್ನು ಕಾಯ್ದೆಯೊಳಗೆ ತರಲಾಗಿದೆ. 

ಬಾಲನ್ಯಾಯ ಮಂಡಳಿ ಮುಂದೆ ಬರುವ ಗಂಭೀರ ಸ್ವರೂಪದ ಎಲ್ಲ ಪ್ರಕರಣಗಳನ್ನೂ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸು ವುದು ಇನ್ನು ಮುಂದೆ ವಾಡಿಕೆಯಾಗಲಿದೆ. ಏಕೆಂದರೆ, ಜಿಲ್ಲೆಯ ಹಿರಿಯ ಮುಖ್ಯ ಸಿವಿಲ್ ನ್ಯಾಯಾಧೀಶರೇ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಉಳಿದಂತೆ, ಇಬ್ಬರು ಸಾಮಾಜಿಕ ಕಾರ್ಯಕರ್ತರು ಮಂಡಳಿಯ ಸದಸ್ಯರಾಗಿರುತ್ತಾರೆ. ಮಂಡಳಿ ಮುಂದೆ ಬರುವ ಪ್ರಕರಣಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಮೂರು ಜನರ ಪೈಕಿ ಇಬ್ಬರ ಒಪ್ಪಿಗೆ ಅನಿವಾರ್ಯ. ಆದರೆ, ಬಾಲ ನ್ಯಾಯ ಮಂಡಳಿಗಳಲ್ಲಿ ಅಧ್ಯಕ್ಷರ ತೀರ್ಮಾನದ ವಿರುದ್ಧ ಯಾವ ಸದಸ್ಯರೂ ದನಿಯೆತ್ತುವುದಿಲ್ಲ.

ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಮಕ್ಕಳ ಮನಃಶಾಸ್ತ್ರದ ಬಗ್ಗೆ ಆಳವಾಗಿ ತಿಳಿದಿರಬೇಕೆಂದು ಕಾಯ್ದೆ ಒತ್ತಾಯಿಸುತ್ತಿದ್ದರೂ ಅದು ನಮ್ಮ ದೇಶದಲ್ಲಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಬಾಲ ನ್ಯಾಯ ಮಂಡಳಿಯ ಕಲಾಪಗಳು ಮಕ್ಕಳಸ್ನೇಹಿ ಆಗಿರಬೇಕೆಂದು ಕಾಯ್ದೆಯು ಪ್ರಸ್ತಾಪಿಸಿದರೂ ಅವು ಸಾಮಾನ್ಯ ನ್ಯಾಯಾಲಯದಂತೆ ಗಂಭೀರವಾಗಿಯೇ ನಡೆಯುತ್ತಿವೆ. ಇಂತಹ ವ್ಯವಸ್ಥೆಯಲ್ಲಿ ಮಂಡಳಿ ಮುಂದೆ ಬರುವ ಗಂಭೀರ ಅಪರಾಧ ಪ್ರಕರಣಗಳನ್ನು ಯಾವುದೇ ಮೌಲ್ಯಮಾಪನ ಮತ್ತು ವಿಶ್ಲೇಷಣೆ ಇಲ್ಲದೆ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸುವುದು ರೂಢಿಯಾಗಲಿದೆ.

16–18 ವರ್ಷದೊಳಗಿನ ಬಾಲಕರ ಅಪರಾಧಗಳು, ಅದರಲ್ಲೂ ಅತ್ಯಾಚಾರಗಳು ದೇಶದಲ್ಲಿ ಹೆಚ್ಚುತ್ತಿವೆ ಎನ್ನುವ ಪ್ರಚಾರವೇ ಈ ತಿದ್ದುಪಡಿಗೆ ಸ್ಫೂರ್ತಿಯಾದದ್ದು. ಆದರೆ, ನೈಜಸ್ಥಿತಿಯೇ ಬೇರೆ. ಬಾಲಕ ಮತ್ತು ಬಾಲಕಿ ಪ್ರೀತಿಸಿ ಓಡಿ ಹೋಗುವ ಪ್ರಕರಣಗಳೆಲ್ಲವೂ ಅತ್ಯಾಚಾರ ಪ್ರಕರಣಗಳಾಗಿ ಪೋಕ್ಸೊ ಕಾಯ್ದೆಯಡಿಯಲ್ಲಿ ದಾಖಲಾಗುತ್ತಿವೆ. ಇದರಿಂದಾಗಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊ ಪ್ರತಿವರ್ಷ ಹೊರತರುವ ದಾಖಲೆಗಳಲ್ಲಿ ಬಾಲಕರ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಾಣಿಸುತ್ತಿದೆ ಎನ್ನುವ ಅಂಶವು ಸಂಸದರು ಚರ್ಚಾ ವೇಳೆಯಲ್ಲಿ ಆಲಿಸಲೇ ಇಲ್ಲ. ಇದಲ್ಲದೆ ಮಕ್ಕಳ ಮೇಲೆ ಸುಳ್ಳು ಪ್ರಕರಣಗಳು ದಾಖಲಾಗುವುದೂ ಉಂಟು.

ಈ ತಿದ್ದುಪಡಿಯು ಮಕ್ಕಳ ಹಕ್ಕುಗಳ ಕ್ಷೇತ್ರಕ್ಕೆ ಬಿದ್ದ ಹೊಡೆತ ಎನ್ನುವುದು ಖಚಿತ. ಪ್ರತಿವರ್ಷ ದೇಶದ ಸುಮಾರು 10 ಸಾವಿರದಷ್ಟು ಮಕ್ಕಳು ಜೈಲು ಸೇರುವುದು ನಿಜವಾಗಲಿದೆ. ಈಗಾಗಲೇ ಕಾಲಿಡಲು ಜಾಗವಿಲ್ಲದ ಕಾರಾಗೃಹಗಳಲ್ಲಿ ಈ ಮಕ್ಕಳೂ ಹೋದರೆ ಅವರ ಭವಿಷ್ಯ ಹೇಗಾಗಬಹುದು? 16–18 ವರ್ಷ  ವಯೋಮಾನದ ಮಕ್ಕಳನ್ನು ಸೂಕ್ತ ಮಾಗದರ್ಶನ ನೀಡಿ ಪುನರ್ವಸತಿಗೊಳಿಸುವ ಪರಿಣಾಮಕಾರಿ ವ್ಯವಸ್ಥೆ ನಮ್ಮ ಜೈಲುಗಳಲ್ಲಿ ಇದೆಯೇ? ಜೈಲಿನಲ್ಲಿರುವ ನೈಜ ಕ್ರಿಮಿನಲ್‌ಗಳ ಸಂಪರ್ಕದಿಂದ ಹೊರಬರುವ ಮಕ್ಕಳು ಪಕ್ಕಾ ಕ್ರಿಮಿನಲ್ ಆಗಿ ಮಾರ್ಪಡುವಂತಹ ಪರಿಸ್ಥಿತಿ ನಮ್ಮ ದೇಶದಲ್ಲಿದೆ.

ಈ ತಿದ್ದುಪಡಿ ಕಾಯ್ದೆ ದೇಶದಲ್ಲಿನ ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚಿಸುತ್ತದೆ ಹೊರತು ಕಡಿತಗೊಳಿಸುವುದಿಲ್ಲ. ಸಮಾಜದಲ್ಲಿ ಮಧ್ಯಮ ಮತ್ತು ಮೇಲ್ವರ್ಗದ ವಿದ್ಯಾವಂತರ ಕೂಗಾಟಕ್ಕೆ ಮಣೆ ಹಾಕಿದ ಕೇಂದ್ರ ಸರ್ಕಾರವು 1999ರ ನಂತರ ಜನಿಸಿದ ಮತ್ತು ಮುಂದೆ ಜನಿಸುವ ಮಕ್ಕಳಿಗೆ ಅನ್ಯಾಯ ಎಸಗಿದೆ ಎನ್ನಬಹುದು. ಈ ಕಾಯ್ದೆಯು ಡೆಮಾಕ್ಲಿಸಿನ ಖಡ್ಗದಂತೆ ಅವರ ತಲೆಯ ಮೇಲೆ ಯಾವಾಗಲೂ ನೇತಾಡುತ್ತಿರುತ್ತದೆ. ಜೈಲಿನಲ್ಲಿರುವ ಬಹುತೇಕ ಮಂದಿ ಬಡವರಾಗಿದ್ದಾರೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಹೆಚ್ಚು. ಬಾಲಾರೋಪಿಗಳಲ್ಲೂ ಇದೇ ವರ್ಗದವರೇ ಹೆಚ್ಚು.

₹25 ಸಾವಿರಕ್ಕಿಂತ ಕಡಿಮೆ ವಾರ್ಷಿಕ ಆದಾಯವಿರುವ ಕುಟುಂಬಗಳೇ ಹೆಚ್ಚು ಎಂದು ಮಂಗಳವಾರ ಸದನದಲ್ಲಿ ಸಚಿವರೇ ಹೇಳಿಕೆ ನೀಡಿದ್ದಾರೆ. ನಮ್ಮ ದೇಶದ ನ್ಯಾಯಿಕ ವ್ಯವಸ್ಥೆ ಈ ವರ್ಗದವರನ್ನೇ ಗುರಿಯಾಗಿಸಿಕೊಂಡಿರುವುದನ್ನು ಎಲ್ಲರೂ ಬಲ್ಲರು. ಮೂಲ ಕಾಯ್ದೆಯಲ್ಲಿ ಮಕ್ಕಳಿಗೆ ಜಾಮೀನು, ಖರ್ಚಿಲ್ಲದೆ ಸುಲಲಿತವಾಗಿ ಪಡೆಯಬಹುದಿತ್ತು. ಆದರೆ, ಹೊಸ ತಿದ್ದುಪಡಿ ಪ್ರಕಾರ ಅವರ ಜಾಮೀನು ಪ್ರಕ್ರಿಯೆ ದುಬಾರಿಯಾಗಲಿದೆ. ಕಠಿಣ ಕಾನೂನಿನಿಂದ ಅಪರಾಧಗಳನ್ನು ತಡೆಹಿಡಿಯಬಹುದೆನ್ನುವುದು ಪೊಳ್ಳು ವಾದ. ನಿರ್ಭಯಾ ಪ್ರಕರಣದ ಬೆನ್ನಲ್ಲೇ 2013ರಲ್ಲಿ ಜಾರಿಯಾದ ಅಪರಾಧ ತಿದ್ದುಪಡಿ ಕಾಯ್ದೆಯ ನಂತರ ಅನೇಕ ಭೀಕರ ಪ್ರಕರಣಗಳು ಘಟಿಸಿರುವುದು ಇದಕ್ಕೆ ಉತ್ತಮ ನಿದರ್ಶನ.

ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಳ್ಳಲು ನಮ್ಮ ಜನಪ್ರತಿನಿಧಿಗಳು ಅಮೆರಿಕ ಮತ್ತು ಸೌದಿ ಅರೇಬಿಯಾದ ನ್ಯಾಯ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಿದ್ದುದು ವಿರೋಧಾಭಾಸ. ಅಮೆರಿಕದ ಹದಗೆಟ್ಟ ನ್ಯಾಯಿಕ ವ್ಯವಸ್ಥೆಯಿಂದ ನಮಗೆ ಕಲಿಯಲು ಏನೂ ಇಲ್ಲ. ಗಗನಕ್ಕೇರಿದ ಅಪರಾಧಗಳ ಸಂಖ್ಯೆ, ಅತಿಕ್ರೂರವಾದ ಶಿಕ್ಷೆ, ಹೆಚ್ಚು ಹಿಂಸಾಕೃತ್ಯಗಳು, ವಿಶ್ವದಲ್ಲೇ ಅತಿಹೆಚ್ಚು ಕೈದಿಗಳನ್ನು ಹೊಂದಿರುವ ಜೈಲುಗಳು, ಭ್ರಷ್ಟಾಚಾರದಿಂದ ತುಂಬಿದ ಜೈಲು ವ್ಯವಸ್ಥೆ ಇವು ಅಮೆರಿಕದ ವಿಶೇಷಗಳು. ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕದ ಒಂದೇ ಒಂದು ದೇಶ ಅಮೆರಿಕ. ಪ್ರತೀಕಾರದಂತೆ ಶಿಕ್ಷೆ ವಿಧಿಸುವ ಚೀನಾ ಮತ್ತು ಸೌದಿ ಅರೇಬಿಯಾದಲ್ಲಿ ಅಪರಾಧಗಳೇನೂ ನಿಂತಿಲ್ಲ. ಬುದ್ಧ ಮತ್ತು ಗಾಂಧಿ ದೇಶ ನಮ್ಮದು.

ಮಕ್ಕಳನ್ನು ಕ್ರಿಮಿನಲ್‌ಗಳಾಗಿ ಬೆಳೆಸುವ ವಾತಾವರಣವಲ್ಲ, ಸಮಾಜದ ಮುಖ್ಯವಾಹಿನಿಗೆ ಮರಳಲು ನೆರವಾಗುವಂತಹ ಕಾರ್ಯಕ್ರಮಗಳನ್ನು ನಾವು ರೂಪಿಸಬೇಕಾಗಿದೆ. ಕ್ರೌರ್ಯ, ಹಿಂಸೆ, ಅತ್ಯಾಚಾರ, ಅನಾರೋಗ್ಯಕರ ಲೈಂಗಿಕತೆ, ಪ್ರತೀಕಾರ, ಮಚ್ಚು, ಲಾಂಗು, ಮಹಿಳೆಯ ಬೆತ್ತಲೆ ದೇಹ ಇತ್ಯಾದಿ ಗಳನ್ನು ಒಳಗೊಂಡ ಚಲನಚಿತ್ರಗಳು ಯಾವುದೇ ನಿಯಂತ್ರಣ ವಿಲ್ಲದೆ ಹೊರಬರುತ್ತಿವೆ. ಅವುಗಳನ್ನು ನೋಡಲು ನಮ್ಮ ಮಕ್ಕಳಿಗೆ ಮುಕ್ತ ಅವಕಾಶವಿದೆ. ಅಂತರ್ಜಾಲದಲ್ಲಿ ಲೈಂಗಿಕ ವಿಡಿಯೊ ದೃಶ್ಯಗಳು ಅನಾಯಾಸವಾಗಿ ನೋಡಬಹುದಾಗಿದೆ.  ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾದ ಮಾರ್ಗದರ್ಶನ, ಆಪ್ತಸಮಾಲೋಚನೆ, ಸಲಹೆ ನೀಡುವಂತಹ ವ್ಯವಸ್ಥೆ ನಮ್ಮ ಮನೆ, ಶಾಲೆ, ಸಮಾಜದಲ್ಲಿ ಎಲ್ಲಿದೆ?

ಇದಲ್ಲದೆ, 1992ರಲ್ಲಿ ನಮ್ಮ ದೇಶ ಅಂಗೀಕರಿಸಿದ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಜಾಗತಿಕ ಒಡಂಬಡಿಕೆಯಲ್ಲಿ ಪ್ರತಿಪಾದಿಸಿರುವಂತಹ 41 ಹಕ್ಕುಗಳನ್ನು ನಮ್ಮ ಮಕ್ಕಳಿಗೆ ನೀಡಲು ಇದುವರೆಗೆ ನಮಗೆ ಸಾಧ್ಯವಾಗಿದೆಯೇ? ನಮ್ಮ ದೇಶದ ಶೇ 42ರಷ್ಟು ಜನಸಂಖ್ಯೆ 18 ವರ್ಷದೊಳಗಿನವರಾಗಿದ್ದು, ಶೇ 25ರಷ್ಟು ಮಕ್ಕಳು ಅಪರಾಧದ ಪರಿಸರದಲ್ಲಿ ಬದುಕುತ್ತಿದ್ದಾರೆನ್ನುವುದು ಕಟುವಾಸ್ತವ. ಮಕ್ಕಳಿಗೆ ಅವರ ಹಕ್ಕುಗಳನ್ನು ಖಚಿಪಡಿಸಬೇಕಾದ ಪ್ರಭುತ್ವವು ಅದರಿಂದ ನುಣಚಿಕೊಳ್ಳುತ್ತಾ ಈಗ ಅವರನ್ನು ಜೈಲಿಗಟ್ಟುವ ಸಾಹಸಕೃತ್ಯಕ್ಕೆ ಕೈಹಾಕಿದೆ. 2000ರಲ್ಲಿ ಬಾಲನ್ಯಾಯ ಕಾಯ್ದೆ ರಚನೆಯಾದರೂ ಅದಕ್ಕೆ ತಕ್ಕ ಸೌಲಭ್ಯಗಳು ಸಿಗಲಿಲ್ಲ. ಈ ವೈಫಲ್ಯವನ್ನು ಮರೆಮಾಚಲು ಈಗ 15 ವರ್ಷದ ನಂತರ ಸರ್ಕಾರ ಇಂತಹದೊಂದು ತಿದ್ದುಪಡಿ ತಂದಿದೆ.

(ಲೇಖಕ :ವಕೀಲ ಮತ್ತು ಮೈಸೂರು ಬಾಲನ್ಯಾಯ ಮಂಡಳಿಯ ಮಾಜಿ ಸದಸ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT