ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಹಸ್ತಾಂತರವೂ ಮತ್ತು ಮಠ ರಾಜಕಾರಣವೂ. . .

ಕಾಗಿನೆಲೆ ಪೀಠದ ಬೇಡಿಕೆ ಇರುವುದು ಪಶುಪಾಲಕರ ಧಾರ್ಮಿಕ ಸಂಸ್ಕೃತಿಯನ್ನು ಅನುಗಾಲವೂ ನಡೆಸಿಕೊಂಡು ಹೋಗುತ್ತಿರುವ ಒಂದು ದೇವಸ್ಥಾನಕ್ಕಾಗಿ
Last Updated 11 ಮಾರ್ಚ್ 2013, 19:59 IST
ಅಕ್ಷರ ಗಾತ್ರ

`ಕಾಗಿನೆಲೆ ಪೀಠ ವ್ಯಾಪ್ತಿಗೆ ಮೈಲಾರ ಸೇರಲಿ  ಎಂಬ ಕಾಗಿನೆಲೆ ಶ್ರೀಗಳ ಹೇಳಿಕೆ (ಪ್ರ.ವಾ. ಮಾ. 1)ಗೆ ಮಾಜಿ ಶಾಸಕ ಹಾಗೂ ದೇವಸ್ಥಾನ ಸಮಿತಿಯ ಆಜೀವ ಸದಸ್ಯ ಶಂಕರಗೌಡ ಎನ್. ಪಾಟೀಲರು `ಮೈಲಾರ ಪರಂಪರೆ ಬದಲಾಯಿಸುವ ಹುಚ್ಚು ಸಾಹಸವಿದು' ಎಂದು ಆಕ್ಷೇಪ (ಪ್ರ.ವಾ. ಮಾ. 2)ವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಲಿಂಗನಾಯ್ಕನಹಳ್ಳಿ ಜಂಗಮ ಪೀಠದ ಚನ್ನವೀರ ಶಿವಯೋಗಿಗಳು ಕಾಗಿನೆಲೆ ಶ್ರೀಗಳ ಆಶಯವನ್ನು ಖಂಡಿಸಿದ್ದಾರೆ (ಪ್ರ.ವಾ. ಮಾ. 10). ಈ ಕುರಿತು ಒಂದು ಪ್ರತಿಕ್ರಿಯೆ.

ಪ್ರಸ್ತುತ ಸಂದರ್ಭದಲ್ಲಿ  ಶ್ರೀಗಳು ಮೈಲಾರ ದೇವಸ್ಥಾನವನ್ನು ಕಾಗಿನೆಲೆ ಪೀಠಕ್ಕೆ ಹಸ್ತಾಂತರಿಸಲು ಇಟ್ಟ ಬೇಡಿಕೆಯು ಹಲವು ಸಾಂಸ್ಕೃತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೆ ಅದು ಎರಡು ಬಹು ಮುಖ್ಯ ಆಯಾಮಗಳತ್ತ ನಮ್ಮ ಗಮನವನ್ನೂ ಸೆಳೆಯುತ್ತದೆ. ಮೊದಲನೆಯದು ಮೈಲಾರ ಸಂಪ್ರದಾಯದ ಇತಿಹಾಸವಾದರೆ, ಎರಡನೆಯದು ಇಂದಿಗೂ ದೇಗುಲದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಮತ್ತು ಹಾಲುಮತ (ಪಶುಪಾಲಕ) ಜನಾಂಗದ ಬಾಬುದಾರರ ಕುರಿತ ಶೋಷಣೆಯಾಗಿದೆ. 

ಮೈಲಾರಲಿಂಗನ ಸಂಪ್ರದಾಯಕ್ಕೆ ಒಂದು ಸಾವಿರದ ಎಂಟುನೂರು ವರ್ಷಗಳ ದೀರ್ಘ ಇತಿಹಾಸವಿದೆ. ಕ್ರಿ.ಶ. ನಾಲ್ಕನೆಯ ಶತಮಾನದ ಮರಾಠಿ ದಾಖಲೆಗಳಲ್ಲಿ ಮೈಲಾರ ಖಂಡೋಬ ಮತ್ತು ಬೀರೋಬನ ಆರಾಧನೆಯನ್ನು ದಾಖಲಿಸಲಾಗಿದೆ. ಶ್ರೀ ತ್ರ್ಯಂ. ಗಂ. ಧನೇಶ್ವರರು `ವೆಳೂರಚೀ ಲೇಣಿ  ಎಂಬ ಕೃತಿಯಲ್ಲಿ `ಖಂಡೇರಾಯ (ಮೈಲಾರ)ನು ಕ್ರಿ.ಶ. 620 ರಲ್ಲಿ ಆಗಿಹೋದ ಬೌದ್ಧ ವಿರೋಧಿ ಐತಿಹಾಸಿಕ ಧನಗರ (ಕುರುಬ) ವೀರನಿರಬಹುದು  ಎಂದು ದಾಖಲಿಸಿದ್ದಾರೆ.

ಇಂದು ಶಿವಸ್ವರೂಪಿಯಾಗಿರುವ ಖಂಡೋಬನ ಪ್ರಾಚೀನತೆಯು ಹನ್ನೊಂದನೆಯ ಶತಮಾನಕ್ಕಿಂತ ಹಿಂದೆ ಹೋಗುವುದಿಲ್ಲ ಆದರೆ ಪಶುಪಾಲಕರ ಒಬ್ಬ ದೇಶೀದೈವವಾಗಿ ಮೈಲಾರನು ಕ್ರಿ.ಶ. ಎರಡನೆಯ ಶತಮಾನದಿಂದಲೂ ಪೂಜಿಸಲ್ಪಡುತ್ತಿದ್ದಾನೆ. ಮಲ್ಲಯ್ಯ, ಮುದಿಮಲ್ಲಯ್ಯ, ಮಲ್ಲಿಕಾರ್ಜುನ ಇತ್ಯಾದಿ ದೈವಗಳು ಅವನ ವಿವಿಧ ರೂಪಗಳಾಗಿವೆ. ಇವನೊಂದಿಗೆ ಜೊತೆಜೊತೆಯಾಗಿ ಹೆಜ್ಜೆಯಿಟ್ಟು ನಡೆದುಬಂದ ಇತಿಹಾಸವು ಹಾಲುಮತ ಜನಾಂಗಕ್ಕಿದೆ. ಪ್ರಸಿದ್ಧ ವಿದ್ವಾಂಸರಾದ ಡಾ. ರಾಮಚಂದ್ರ ಚಿಂತಾಮಣಿ ಢೇರೆ ಅವರ ಮಾತಿನಲ್ಲಿಯೇ ಹೇಳುವುದಾದರೆ `ಖಂಡೋಬಾನ ಉದಯಕಾಲದಿಂದಲೆ ಕುರುಬ ಸಮುದಾಯದ ಭಕ್ತಿ ಸಂಬಂಧ ಇದೆ. ಅದು ಹೋಳ್ಕರ ಮನೆತನದ ರಾಜರಿಂದ ಉತ್ಕೃಷ್ಟ ವೈಭವವನ್ನೂ ಪಡೆದುಕೊಂಡಿದೆ (ಖಂಡೋಬಾ ಏಕ್ ದೇಸಿ ದೈವ ಕತಿ) ಎಂದಿದ್ದಾರೆ.

ಪಶುಪಾಲಕ ಸಮುದಾಯದ ದೈವವಾಗಿ ಹುಟ್ಟಿ, ಬುಡಕಟ್ಟು-ಆದಿಮ ಜನಾಂಗದವರ ಆಚರಣೆ ಮತ್ತು ಸಂಪ್ರದಾಯದಲ್ಲಿ ಇನ್ನೂ ಜೀವಂತವಾಗಿರುವ ಮೈಲಾರನು ತನ್ನ ಕುಲಸಂಕೇತಗಳ ಮತ್ತು ಆರಾಧನೆಯ ಮುಖ್ಯ ರೂಪಕಗಳ ಮುಖಾಂತರ ಮನುಷ್ಯ ಕುಲದ `ಟಠಿಛಿಞ' ಸಂಸ್ಕೃತಿಯನ್ನು ಹಿಡಿದಿಟ್ಟಿದ್ದಾನೆ. ಈ ದೈವದ ಆಚರಣೆಯಲ್ಲಿ ಕಂಡುಬರುವ ಭಂಡಾರ ಪೂಜೆ, ಕಾರ್ಣಿಕ, ಕಾರ್ಣಿಕದ ನಂತರ ಡೆಂಕನ ಮರಡಿಯಲ್ಲಿ ಮನೆಕಟ್ಟುವ ಆಚರಣೆಗಳು ವಲಸೆಗಾರ ಪಶುಪಾಲಕ ಸಮುದಾಯವೊಂದು ಹಂತಹಂತವಾಗಿ ಕೃಷಿ, ವ್ಯಾಪಾರ ಉದ್ದಿಮೆಯತ್ತ ವಾಲಿಕೊಂಡು ಹಲವಾರು ಜಾತಿ-ಜನಾಂಗವಾಗಿ ವಿಭಜಿಸಿಹೋದದ್ದನ್ನು ಸೂಚಿಸುತ್ತವೆ.

ಇಂತಹ ಜನಾಂಗದ ಧಾರ್ಮಿಕ ಪ್ರತಿನಿಧಿಗಳಾದ ದೇವಸ್ಥಾನದ ಬಾಬುದಾರರು ಅನುಭವಿಸುವ ನೋವು, ಶೋಷಣೆಯನ್ನು ಶ್ರೀಗಳು ಹಿಡಿದೆತ್ತಿ ದೇಗುಲದ ಹಸ್ತಾಂತರದ ಬೇಡಿಕೆಯನ್ನು ಇಟ್ಟಿದ್ದಾರೆ. ಇಂತಹುದೇ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಿದ ಸರ್ಕಾರವು ಹಿಂದೆ ಗೋಕರ್ಣದ ದೇಗುಲವನ್ನು ಒಂದು ವೈದಿಕ ಮಠಕ್ಕೆ ವಹಿಸಿಕೊಟ್ಟ ದೃಷ್ಟಾಂತವು ನಮ್ಮ ಎದುರಿಗಿದೆ.

ಈ ಲೇಖನದ ಉದ್ದೇಶವು  ಒಬ್ಬ ಮಠಾಧೀಶರ ಆಶಯದ ಸಾಧಕ ಭಾದಕಗಳ ಕುರಿತಂತೆ ಬಹುಮುಖಿ ಚರ್ಚೆಯನ್ನು ಹುಟ್ಟುಹಾಕುವುದಲ್ಲದೆ, ಅದನ್ನು ವಿರೋಧಿಸುವವರ ಮನದಲ್ಲಿರುವ ಹುನ್ನಾರವನ್ನು ಸಹ ಗುರುತಿಸುವುದಾಗಿದೆ. ದೇವಸ್ಥಾನವನ್ನು ವಶಕ್ಕೆ ತೆಗೆದುಕೊಂಡು ಅಲ್ಲಿರುವ ಆಚರಣೆ ಸಂಪ್ರದಾಯಗಳನ್ನು ಉನ್ನತೀಕರಿಸುವ (ಕೆಲವರ ದೃಷ್ಟಿಯಲ್ಲಿ ಮತಾಂತರಿಸುವ) ಆಶಯಕ್ಕೆ ಕರ್ನಾಟಕದ ಘನ ಸರ್ಕಾರ ಈಗಾಗಲೇ ಮಾರ್ಗ ಹಾಕಿಕೊಟ್ಟ ನಿದರ್ಶನಗಳು ನಮ್ಮ ಮುಂದಿವೆ.

ಅಷ್ಟಕ್ಕೂ ಕಾಗಿನೆಲೆ ಶ್ರೀಗಳು ವಿನಂತಿಸಿರುವುದು ಕರ್ನಾಟಕ ಸರ್ಕಾರಕ್ಕೆ ವಿನಾ ಮೈಲಾರಲಿಂಗನ ದೇಗುಲದ ಆಡಳಿತ ಟ್ರಸ್ಟ್‌ಗೆ ಅಲ್ಲ. ಉತ್ತರಿಸಬೇಕಾಗಿರುವುದೂ ಕರ್ನಾಟಕ ಸರ್ಕಾರವೇ ವಿನಾ ಇತರರಲ್ಲ. ಸರ್ಕಾರ ಹಸ್ತಾಂತರಿಸಿದರೂ ಕೂಡ ಮೈಲಾರದ ಒಡೆಯರು, ಟ್ರಸ್ಟ್‌ನ ಸದಸ್ಯರಿಗೆ ಆಗುವ ನಷ್ಟವಾದರೂ ಏನು? ಪಾರಂಪರಿಕವಾಗಿ  ಬಂದ ಹುದ್ದೆಗಳಲ್ಲಿ ಅವರು ಮುಂದುವರೆಯುವ ಅವಕಾಶಗಳು ಇದ್ದೇಇವೆ. ಇಲ್ಲಿ ಯಾರನ್ನೂ ಯಾರೂ ಶೋಷಿಸುವ ಪ್ರಮೇಯವೇ ಇರುವುದಿಲ್ಲ.

ಈ ಸಂದರ್ಭದಲ್ಲಿ ಇನ್ನೊಂದು ಪ್ರಮುಖವಾದ ಪ್ರಶ್ನೆಯು ಜನಸಾಮಾನ್ಯರನ್ನು ಕಾಡುವುದು ಸಹಜ. ಕಾಗಿನೆಲೆ ಶ್ರೀಗಳು ಸಾಮಾನ್ಯ ಮಠಾಧಿಪತಿಗಳಲ್ಲ. ಕರ್ನಾಟಕದ ಬಹುಸಂಖ್ಯಾತ ಹಿಂದುಳಿದ ಜನಾಂಗವೊಂದರ ಮಠದ ಪೀಠಾಧಿಪತಿಗಳು. ಈ ನಾಡಿನ ಎರಡು ಪ್ರಬಲ ಕೋಮಿನ ಮಠಾಧೀಶರನ್ನು ಹೊರಗಿಟ್ಟು `ದಲಿತ-ಹಿಂದುಳಿದ ಮಠಗಳ ಒಕ್ಕೂಟ `ವನ್ನು ರಚಿಸಿ, ಅದರ ಅಧ್ಯಕ್ಷರಾಗಿ, ಬಜೆಟ್ಟಿನಲ್ಲಿ ಅಧಿಕಾರಯುತವಾಗಿ ಪಾಲು ಕೇಳಿದವರು. ಈ ವಿರೋಧಿಗಳ ಸೊಲ್ಲಿನಲ್ಲಿ `ಹಿಂದುಳಿದ ಮಠಾಧೀಶರ ಒಕ್ಕೂಟ (ಹನ್ನೆರಡನೆಯ ಶತಮಾನದ ಬಸವಾದಿಗಳನ್ನು ವಿರೋಧಿಸಿದಂತೆ)ವನ್ನು ವಿರೋಧಿಸುವ ವಾಸನೆಯೇನಾದರೂ ಇದೆಯಾ ಎಂಬ ಪ್ರಶ್ನೆ ಕಾಡುತ್ತದೆ.

ಅಲ್ಲದೇ, ದಮನಿತ ಸಮುದಾಯದ ಮಠವೊಂದು ದೇವಸ್ಥಾನದ ಆಡಳಿತದ ಉಸ್ತುವಾರಿಯನ್ನು ಬಯಸಿದಾಗ ಜಾತ್ಯತೀತತೆಯ ಸೋಗಿನಲ್ಲಿ ವಿರೋಧಿಸುವ ಪಟ್ಟಭದ್ರ ಹಿತಾಸಕ್ತಿಗಳು ಸರ್ವ ಜಾತಿ ಜನಾಂಗದವರು ಪೂಜಿಸುವ ಉಡುಪಿಯ ಕೃಷ್ಣ ದೇವಸ್ಥಾನವನ್ನು ಅಷ್ಟಮಠಗಳಿಗೆ ಮತ್ತು ಗೋಕರ್ಣದ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಸರ್ಕಾರ ವಹಿಸಿದಾಗ ಏಕೆ ವಿರೋಧಿಸಲಿಲ್ಲ. ಈಗ ಜಪಿಸುವ ಜಾತ್ಯತೀತತೆಯ ಮಂತ್ರ ಆಗ ನೆನಪಾಗಲಿಲ್ಲವೆ?

ಕರ್ನಾಟಕದ ಇಂದಿನ ಧಾರ್ಮಿಕ ಸಂದರ್ಭದಲ್ಲಿ ಪಶುಪಾಲಕ, ಹಿಂದುಳಿದ, ದಲಿತ-ಆದಿಮ ಜನಾಂಗವನ್ನು ಪ್ರತಿನಿಧಿಸುವ ಮಠವಾಗಿ ಕಾಗಿನೆಲೆ ಗುರುಪೀಠ ಹೊರಹೊಮ್ಮುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಮಠ ನಡೆಸುವ ಕನಕ ಜಯಂತಿ, ಧರ್ಮ ಜಾಗೃತಿ ಸಮಾರಂಭಗಳಲ್ಲಿ ದಲಿತ-ಹಿಂದುಳಿದ ಜನಾಂಗದ ಎಲ್ಲ ಪೀಠಾಧಿಪತಿಗಳು ಸಾನ್ನಿಧ್ಯ ವಹಿಸುವುದನ್ನು ಕಾಣಬಹುದು. ಕಾಗಿನೆಲೆ ಪೀಠದ ಬೇಡಿಕೆ ಇರುವುದು ತನ್ನ ಪಶುಪಾಲಕರ ಧಾರ್ಮಿಕ ಸಂಸ್ಕೃತಿಯನ್ನು ಅನುಗಾಲವೂ ನಡೆಸಿಕೊಂಡು ಹೋಗುತ್ತಿರುವ ಒಂದು ದೇವಸ್ಥಾನಕ್ಕಾಗಿಯೇ ಹೊರತು ಬೇರೆ ಯಾವುದೇ ವೈದಿಕ ಅಥವಾ ಜಂಗಮರ ದೇವಸ್ಥಾನಕ್ಕೆ ಅಲ್ಲ. ಯಾಕೆಂದರೆ ಇತಿಹಾಸದ ಹಿನ್ನೆಲೆ ಇದ್ದವನು ಪ್ರತಿ ಇತಿಹಾಸ ನಿರ್ಮಿಸಬಲ್ಲ ಆದರೆ ಇತಿಹಾಸವೇ ಇಲ್ಲದವನು ಸತ್ಯ ಇತಿಹಾಸದ ನಾಶಕ್ಕೆ ಹುನ್ನಾರ ಹುಡುಕುತ್ತಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT