ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜುಗಳಿಗೆ ಸಲ್ಲದ ಜಾನಪದ ಕನ್ನಡವಲ್ಲವೆ?

Last Updated 15 ಜನವರಿ 2014, 19:30 IST
ಅಕ್ಷರ ಗಾತ್ರ

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ನೇರ ನೇಮಕಾತಿಗಳ ಮೂಲಕ ತುಂಬಲು ಉದ್ದೇ­ಶಿ­ಸ­ಲಾಗಿದೆ. ಈ ನೇಮಕಾತಿ ಗಾಗಿ ಸಿ.ಇ.ಟಿ ಪಠ್ಯ­ಕ್ರಮ ರೂಪಿಸುವ ಸಮಿತಿಯ ಪಟ್ಟಿಯಲ್ಲಿ ಆಯಾ ವಿಷಯ­ಗಳನ್ನು ಕೊಡಲಾಗಿದೆ. ಇದ­ರಲ್ಲಿ ಜಾನಪದ ಮತ್ತು ಜಾನಪದ ಸಾಹಿತ್ಯ ಎಂ.ಎ ಪದವಿಯನ್ನು ಯಾವ ಹುದ್ದೆಗೂ ಪರಿಗಣಿಸಲಾ­ಗಿಲ್ಲ.

ಕರ್ನಾಟಕದಲ್ಲಿ ಮೈಸೂರು ವಿಶ್ವವಿದ್ಯಾ­ಲಯ, ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ವಿಶ್ವ­ವಿದ್ಯಾ­ಲಯ, ಗುಲ್ಬರ್ಗ ವಿಶ್ವವಿದ್ಯಾಲಯ, ಜಾನ­ಪದ ವಿಶ್ವವಿದ್ಯಾಲಯಗಳಲ್ಲಿ ಜಾನಪದ ಎಂ.ಎ ಕಲಿತ ಮತ್ತು ಕಲಿಯುತ್ತಿರುವ ವಿದ್ಯಾರ್ಥಿ­ಗಳಿ­ದ್ದಾರೆ. ಸರಿಸುಮಾರು ಮೂರು ಸಾವಿರ­ದಷ್ಟು ಜಾನ­ಪದ ಎಂ.ಎ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆ ಮಾಡಿದ ಪದವೀಧರರಿದ್ದಾರೆ.

ಇವರುಗಳೆಲ್ಲಾ ಪದವಿ ಕಾಲೇಜುಗಳಿಗೆ ಸಲ್ಲದಿ­ದ್ದರೆ ಬೇರೆ ದಾರಿ ಯಾವುದು? ಹೀಗೆ ಅವಕಾಶ ರಹಿತ ಸ್ನಾತಕೋತ್ತರ ಪದವಿಯನ್ನು ನೀಡುವ ಉದ್ದೇಶವಾದರೂ ಏನು? ಜಾನಪದ ವನ್ನು ಕಲಿಸುತ್ತಿರುವ ವಿ.ವಿಗಳು ಈ ಬಗ್ಗೆ ಆತ್ಮಾವಲೋ­ಕನ ಮಾಡಿಕೊಳ್ಳಬೇಕಾಗಿದೆ. ಇಂತಹ ವಿಶ್ವ­ವಿದ್ಯಾ­ಲಯಗಳ ಮುಂದಿರುವುದು ಎರಡೇ ಆಯ್ಕೆ. ಪದವಿ ಕಾಲೇಜುಗಳಲ್ಲಿ ಜಾನಪದ­ವನ್ನು ಕಲಿಕೆಯ ವಿಷಯವನ್ನಾಗಿ ಸೇರ್ಪಡೆ ಮಾಡು­ವುದು ಅಥವಾ ಕನ್ನಡಕ್ಕೆ ಜಾನಪದ­ವನ್ನು ಸಮಾನಾಂತರ ಗೊಳಿಸುವುದು.

ಇಲ್ಲವೇ ಜಾನಪದ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಗಳನ್ನು ಸ್ಥಗಿತಗೊಳಿಸುವುದು. ಹೀಗಾ­­ದಾ­ಗಲೂ ಪ್ರಸ್ತುತ ಜಾನಪದ ಸ್ನಾತ­ಕೋತ್ತರ ಪದವೀಧರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಸಚಿವಾಲಯ ಯೋಚಿಸಬೇಕಿದೆ. ಇದರ ಭಾಗವಾಗಿಯೇ ಕನ್ನಡ ಪದವಿ ಪ್ರಾಧ್ಯಾಪಕರ ಹುದ್ದೆಗೆ ಜಾನಪದ­ವನ್ನು ಪೂರಕ ಅಥವಾ ಸಮಾನಾಂತರ ವಿಷಯವನ್ನಾಗಿ ಪರಿಗಣಿಸಿ ಸಿ.ಇ.ಟಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕಿದೆ.

ಪದವಿ ತರಗತಿಗಳಲ್ಲಿ ಜಾನಪದ ಎಂಬ ಪ್ರತ್ಯೇಕ ವಿಷಯವಿರುವುದಿಲ್ಲ. ಕನ್ನಡ ವಿಷಯದಲ್ಲಿಯೇ ಜಾನಪದ ವಿಷಯವನ್ನು ಒಂದು ಐಚ್ಛಿಕ ಪತ್ರಿಕೆಯಾಗಿ ಓದುತ್ತಿದ್ದಾರೆ. ಹೈಸ್ಕೂಲಿನಿಂದ ಕಾಲೇಜಿನವರೆಗೂ ಕನ್ನಡ ಭಾಷಾ ಪಠ್ಯಗಳಲ್ಲಿ ಜಾನಪದ ಪಠ್ಯಗಳನ್ನು ಸೇರಿಸಿಕೊಂಡು ಬರಲಾಗಿದೆ. ಅಕಾಡೆಮಿಕ್ ವಲಯದಲ್ಲಿಯೂ ಕನ್ನಡ ಭಾಷೆ ಸಾಹಿತ್ಯದ ಭಾಗವಾಗಿಯೇ ಜಾನಪದ ಮತ್ತು ಜಾನಪದ ಸಾಹಿತ್ಯವನ್ನು ಒಂದಾಗಿಯೇ ನೋಡಲಾಗಿದೆ.

ಕನ್ನಡ ಸಾಹಿತ್ಯವೆಂದು ನಾವು ಪಂಪನಿಂದ ಇಂದಿನ ತನಕ ಓದಿಕೊಂಡು ಬಂದಿರುವ ಪಠ್ಯ­ಗಳಲ್ಲಿ ಜಾನಪದ ಮತ್ತು ದೇಸಿ ಪ್ರೇರಣೆಗಳನ್ನು ಹೊರತೆಗೆದರೆ ಉಳಿಯುವ ಕನ್ನಡ ಪಠ್ಯವಾ­ದರೂ ಯಾವುದು? ಕನ್ನಡ ಎಂ.ಎ ಮಾಡಿದ ಶೇ ೭೦ ರಷ್ಟು ಸಂಶೋಧನಾ ವಿದ್ಯಾರ್ಥಿಗಳು ಜಾನ­ಪದ ವಿಷಯವನ್ನು ಆಯ್ದುಕೊಂಡು ಪಿಎಚ್.ಡಿ ಪಡೆದಿದ್ದಾರೆ. ಇಂತಹ ಸಂಶೋಧನೆ­ಗಳು ಕನ್ನಡವೆಂದೇ ಪರಿಗಣನೆಯಾಗಿ ಪದವಿ ಕನ್ನಡ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹತೆ ಪಡೆದುಕೊಂಡಿವೆ.

ಜಾನಪದ ಪಠ್ಯಗಳು ಕನ್ನಡದ ಚಿಂತನೆಯನ್ನು ಅಗಾಧವಾಗಿ ವಿಸ್ತರಿಸಿವೆ. ವಿದ್ವತ್ ವಲಯ ಕೂಡ ಕನ್ನಡ ಮತ್ತು ಜಾನಪದವನ್ನು ಪರಸ್ಪರ ಪೂರಕ ವಿಷಯಗಳನ್ನಾಗಿಯೇ ಚಿಂತನೆ ಮಾಡಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲೇ ಜಾನಪದ ಕುರಿತಾದ ಸಂಶೋಧನಾ ಅಧ್ಯಯನಗಳನ್ನು ಮಾಡುತ್ತಾ ಬರಲಾಗಿದೆ. ಅಂತೆಯೇ ಜಾನಪದ ಎಂ.ಎ ಪದವಿಯಲ್ಲಿಯೂ ಶೇ ೫೦ ರಷ್ಟು ಕನ್ನಡಕ್ಕೆ ಪೂರಕವಾದ ಪಠ್ಯಕ್ರಮವಿದೆ.

ಹೀಗಿರುವಾಗ ಕರ್ನಾಟಕದ ಸಂದರ್ಭದಲ್ಲಿ ಜಾನಪದ ಮತ್ತು ಕನ್ನಡವನ್ನು ಒಂದಾಗಿಯೇ ಗ್ರಹಿಸಲಾಗಿದೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯು ಪಿ.ಯು ಕಾಲೇಜುಗಳ ಕನ್ನಡ ಉಪನ್ಯಾಸಕರ ಹುದ್ದೆಗೆ ಕನ್ನಡ ವಿಷಯಕ್ಕೆ ಜಾನಪದ ಮತ್ತು ಜಾನಪದ ಸಾಹಿತ್ಯ ಎಂ.ಎ ಪದವೀಧರರನ್ನೂ ಅರ್ಹರನ್ನಾಗಿಸಿದೆ. ಈ ಸಂಗತಿ­ಗಳನ್ನು ಅವಲೋಕಿಸಿದರೆ, ಪದವಿ ಕಾಲೇಜುಗಳ ಕನ್ನಡ ವಿಷಯಕ್ಕೆ ಕೇವಲ ಕನ್ನಡ ಎಂ.ಎ ಪದವೀಧರರನ್ನು ಮಾತ್ರ ಪರಿಗಣಿಸಿ, ಜಾನಪದ ಎಂ.ಎ ಪದವೀಧರರನ್ನು ಕಡೆಗಣಿಸಿರುವುದು ಅವೈಜ್ಞಾನಿಕವಾಗಿದೆ.

ಕಾಲೇಜು ಶಿಕ್ಷಣ ಇಲಾಖೆಯು ಈ ಬಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಪರಸ್ಪರ ಪೂರಕ ಮತ್ತು ಸಮಾನಾಂತರ ವಿಷಯಗಳನ್ನು ಒಂದೇ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹ ವಿಷಯಗಳನ್ನಾಗಿ ಸೇರಿಸಲಾಗಿದೆ. ಸಮಾಜಶಾಸ್ತ್ರ ಉಪನ್ಯಾಸಕರ ಹುದ್ದೆಗೆ, ಸಮಾಜ ಕಾರ್ಯ, ಎಂ.ಎಸ್.ಡಬ್ಲು, ಮಹಿಳಾ ಅಧ್ಯಯನವನ್ನೂ; ಗಣಿತಶಾಸ್ತ್ರ ಹುದ್ದೆಗೆ ಸಂಖ್ಯಾಶಾಸ್ತ್ರವನ್ನೂ; ರಾಜ್ಯಶಾಸ್ತ್ರಕ್ಕೆ ಸಾರ್ವಜನಿಕ ಆಡಳಿತವನ್ನೂ; ವಾಣಿಜ್ಯಶಾಸ್ತ್ರಕ್ಕೆ ಎಂ.ಬಿ.ಎ, ಬಿ.ಬಿ.ಎಮ್, ಎಮ್.ಎಫ್.ಎ, ಎಂ.ಟಿ.ಎ ಪದವಿಗಳನ್ನೂ ಸಮಾನಾಂತರ ವಿಷ­ಯ­ಗಳನ್ನಾಗಿ ಪರಿಗಣಿಸಲಾಗಿದೆ. ಹೀಗೆ ಪರಿ­ಗಣಿಸಿರುವುದು ವೈಜ್ಞಾನಿಕವಾಗಿಯೂ, ಸಾಮಾ­ಜಿಕ ನ್ಯಾಯದ ನೆಲೆಯಲ್ಲಿಯೂ ಸರಿ­ಯಾ­ದುದು ಅಂತಾದರೆ, ಕನ್ನಡ ವಿಷಯಕ್ಕೆ ಜಾನಪದ ಎಂ.ಎ ಸಮಾನಾಂತರ ವಿಷಯ­ವ­ನ್ನಾಗಿ ಪರಿಗಣಿಸುವು­ದರಲ್ಲಿರುವ ತೊಡಕಾದರೂ ಯಾವುದು?

ಸಿ.ಇ.ಟಿ ಮುಖೇನ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಜಾನಪದ ಎಂ.ಎ ಮಾಡಿ­ದವರೂ ಕೂಡ ಕನ್ನಡ ವಿಷಯ ಪಠ್ಯದ ಪರೀಕ್ಷೆಯನ್ನೆ ಪಾಸು ಮಾಡಬೇಕಿದೆ. ಹಾಗಾಗಿ ಕನ್ನಡದ ಬಗೆಗಿನ ತಿಳಿವಳಿಕೆಯ ಪರೀಕ್ಷೆಯ ನಂತ­ರವೇ ಅವರು ಕನ್ನಡ ವಿಷಯಕ್ಕೆ ಪಾಠ ಮಾಡಲು ಅರ್ಹರಾಗುತ್ತಾರೆ. ಈ ಕಾರಣ­ಗಳಿಂದಾಗಿ ಜಾನ­ಪದ ಮತ್ತು ಜನಪದ ಸಾಹಿತ್ಯ ಎಂ.ಎ ಪದ­ವೀಧರರನ್ನು ಕನ್ನಡ ವಿಷಯಕ್ಕೆ ಪೂರಕ ಅಥವಾ ಸಮಾನಾಂತರ ವಿಷಯವನ್ನಾಗಿ ಪರಿ­ಗ­ಣಿ­ಸುವುದು ವೈಜ್ಞಾನಿಕವಾಗಿಯೂ ಸರಿಯಾಗಿದೆ.

ಕರ್ನಾಟಕದಲ್ಲಿ ಸಮಾಜ ಶಾಸ್ತ್ರ ಮತ್ತು ರಾಜ್ಯಶಾಸ್ತ್ರ, ಪದವಿ ಕಾಲೇಜುಗಳಲ್ಲಿ ಕಲಿಕೆಯ ವಿಷಯಗಳಾಗಿವೆ. ಇವುಗಳಿಗೆ ವಿದೇಶಿ ಸಿದ್ಧಾಂತ ಮತ್ತು ಜಾಗತಿಕ ಮತ್ತು ಭಾರತೀಯ ನೆಲೆಯ ಅನುವಾದಿತ ಪಠ್ಯಗಳಿವೆ. ಕರ್ನಾಟಕದ ಸಮಾಜ­ಶಾಸ್ತ್ರ, ಕರ್ನಾಟಕದ ರಾಜ್ಯಶಾಸ್ತ್ರ ಎಂದು ಹೇಳಲು ಅಧಿಕೃತ ಕನ್ನಡ ಪರಿಸರದ ಪಠ್ಯಗಳೇ ರೂಪುಗೊಂಡಿಲ್ಲ. ಇಂತಹ ಪಠ್ಯಗಳಿಂದ ಕರ್ನಾಟಕದ ಸಮಾಜವನ್ನು,  ರಾಜಕೀಯವನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ?   ಹಾಗೆ ನೋಡಿದರೆ ಈತನಕ ಸುಮಾರು ಮೂರು ಸಾವಿರ ಕೃತಿಗಳು ಜಾನಪದ ಶಿಸ್ತಿಗೆ ಸಂಬಂಧ­ಪಟ್ಟಂತೆ ಪ್ರಕಟವಾಗಿವೆ. ಜಾನಪದ ಅಧ್ಯಯನ­ಕ್ಕೆಂದೇ ಪ್ರತ್ಯೇಕ ವಿಶ್ವವಿದ್ಯಾಲಯವಿದೆ. ಪ್ರತಿ ಜಿಲ್ಲೆ ತಾಲ್ಲೂಕು ಕೇಂದ್ರಿತ ಜಾನಪದ ಅಧ್ಯಯನಗಳು ನಮಗೆ ಲಭ್ಯವಿವೆ.

ಇದನ್ನು ನೋಡಿದರೆ ಪದವಿಗೆ ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರಕ್ಕಿಂತ ಜಾನಪದವನ್ನು ಒಂದು ವಿಷಯವನ್ನಾಗಿ ಸೇರಿಸುವುದು ಹೆಚ್ಚು ಪ್ರಸ್ತುತ­ವಾಗಿದೆ. ಹೀಗೆ ಪ್ರತ್ಯೇಕ ಜಾನಪದ ವಿಷಯವನ್ನು ಪದವಿ ತರಗತಿಗೆ ಸೇರಿಸಿದಲ್ಲಿ ಕನ್ನಡದಲ್ಲಿ ಪಾಲು ಕೇಳುವ ಪ್ರಶ್ನೆಯೇ ಉದ್ಭವಿ­ಸುವುದಿಲ್ಲ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವಾಲಯ ಪದವಿ ತರಗತಿಗೆ ಜಾನಪದವನ್ನು ಒಂದು ವಿಷಯವನ್ನಾಗಿ ಸೇರಿಸುವ ಬಗ್ಗೆ ಗಂಭೀರ­ವಾಗಿ ಯೋಚಿಸಬೇಕಾಗಿದೆ. ಭಾರತದಲ್ಲಿಯೇ ಮೊಟ್ಟಮೊದಲ ಜಾನಪದ ವಿಶ್ವವಿದ್ಯಾಲಯ­ವನ್ನು ಸ್ಥಾಪಿಸಿದ ಸರ್ಕಾರಕ್ಕೆ ಪದವಿ ತರಗತಿ­ಗಳಲ್ಲಿ ಜಾನಪದವನ್ನು ಒಂದು ಕಲಿಕೆಯ ವಿಷ­ಯ­­ವನ್ನಾಗಿ ಸೇರಿಸುವುದು ಅಸಾಧ್ಯವಾದು­ದೇನಲ್ಲ.

ಅಂತೆಯೇ ಕರ್ನಾಟಕ ಜಾನಪದ ವಿಶ್ವ­ವಿದ್ಯಾಲಯವು ಈ ವಿಷಯವನ್ನು ತನ್ನ ಪ್ರಥಮ ಆದ್ಯತೆಯ ಹಕ್ಕೊತ್ತಾಯವನ್ನಾಗಿ ಪರಿಗಣಿ­ಸ­ಬೇಕಿದೆ. ಹೀಗೆ ಪದವಿಗೆ ಜಾನಪದವನ್ನು ಒಂದು ವಿಷಯವನ್ನಾಗಿ ಪರಿಗಣಿಸಿದಲ್ಲಿ ಭಾಷಣದ ಆಕರ್ಷಕ ವಿಷಯವಾದ ದೇಸೀಯತೆಗೊಂದು ಪ್ರಾಯೋ­ಗಿಕ ನೆಲೆ ಒದಗಿದಂತಾಗುತ್ತದೆ. ಅಂತೆಯೇ ಗಾಂಧಿ ಕನಸಿನ ಗುಡಿಕೈಗಾರಿಕೆಗಳ ಅಭಿ­ವೃದ್ಧಿಗೆ ಪೂರಕವಾಗಿ ದೇಸಿ ಕಸುಬುಗಳು ಪುನರುಜ್ಜೀವನಗೊಳಿಸುವಂತೆ ಆನ್ವಯಿಕ ಜಾನಪದ ಪಠ್ಯಗಳನ್ನು ರೂಪಿಸುವ ಸಾಧ್ಯತೆಗಳೂ ಇವೆ.

ರಾಷ್ಟ್ರೀಯ ಮಾನವ ಸಂಪನ್ಮೂಲ ಇಲಾಖೆಯು ಸಮುದಾಯ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಂಡಿದೆ. ಭಾರತ­ದಾದ್ಯಂತ ಇಂತಹ ಕಾಲೇಜುಗಳನ್ನು ತೆರೆಯಲಾ­ಗುತ್ತಲೂ ಇದೆ. ಆರಂಭಿಕವಾಗಿ ಬೆಂಗಳೂರಿನ ಕೆಲವು ಕಾಲೇಜುಗಳಲ್ಲಿ ‘ಹೇರ್ ಕಟಿಂಗ್’ ಕೋರ್ಸ್ ಸೇರ್ಪಡೆ ಮಾಡಲಾಗಿದೆ. ಹೀಗೆ ದೇಸಿ ಕಸುಬುಗಳನ್ನು ಆಧರಿಸಿದ ಸಮುದಾಯ ಕಾಲೇಜು­ಗಳಲ್ಲಿ ಬೋಧಿಸಲು ಶೇ ೫೦ ರಷ್ಟು ಆಯಾ ದೇಸಿ ಕಸುಬಿನ ಪರಿಣತ ಹಿರಿಯರು ಮತ್ತು ಶೇ ೫೦ ರಷ್ಟು ಜಾನಪದ ಸ್ನಾತಕೋತ್ತರ ಪದವೀಧರರು ಮಾತ್ರ ಅರ್ಹರಾಗಿದ್ದಾರೆ.

ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯು ಎಮ್.ಎಚ್.ಆರ್.ಡಿಯ ಕಮ್ಯುನಿಟಿ ಕಾಲೇಜು­ಗಳನ್ನು ಆರಂಭಿಸುವ ಮುನ್ನ ಇದರ ಭಾಗವಾ­ಗಿಯೇ ಪದವಿ ಕಾಲೇಜುಗಳಲ್ಲಿ ದೇಸಿಕಸುಬುಗಳ ಕೋರ್ಸುಗಳನ್ನು ತೆರೆಯಬಹುದಾಗಿದೆ.  ಅಥವಾ ಪ್ರತ್ಯೇಕ ಕಮ್ಯುನಿಟಿ ಕಾಲೇಜುಗಳನ್ನು ಆರಂಭಿಸಿದಲ್ಲಿ ಜಾನಪದ ಕಲಿತವರಿಗೆ ಪ್ರಥಮ ಆದ್ಯತೆ ಕೊಡಬೇಕಾಗಿದೆ. ಇಂತಹ ಪ್ರಕ್ರಿಯೆಗಳ ಆರಂಭಿಕ ಭಾಗವಾಗಿ ಪ್ರಸ್ತುತ ಪದವಿ ಕನ್ನಡ ಅಧ್ಯಾಪಕರ ಹುದ್ದೆಗಳಿಗೆ ಜಾನಪದವನ್ನು ಸಮಾ­ನಾಂತರ ವಿಷಯವನ್ನಾಗಿ ಪರಿಗಣಿಸಿ ಸಿಇಟಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT